Site icon Vistara News

BY Vijayendra : ಚತುರ ಸಂಘಟಕ, ಕಾರ್ಯಕರ್ತರ ಆಶಾಕಿರಣ ವಿಜಯೇಂದ್ರ ರಾಜಕೀಯ ಹೆಜ್ಜೆಗಳು ಇಲ್ಲಿವೆ

BS Vijayendra takes charge as BJP State Chief

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರಿಂದ ರಕ್ತಗತವಾಗಿ ಬಂದಿರುವ ನಾಯಕತ್ವ, ತಾನೇ ಬೆಳೆಸಿಕೊಂಡ ವರ್ಚಸ್ಸು ಮತ್ತು ಸಂಘಟಕ ತಾನೆಂಬುದನ್ನು ಸಾಬೀತುಪಡಿಸಿದ ಹೋರಾಟಗಳ ಹಿನ್ನೆಲೆಯೊಂದಿಗೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ (BY Vijayendra) ಅಧಿಕಾರ ಸ್ವೀಕರಿಸಿದ್ದಾರೆ.

ಲೋಕಸಭೆ ಚುನಾವಣೆಗೆ (Lok Sabha Election) ಕೆಲವೇ ತಿಂಗಳು ಬಾಕಿ ಇರುವಾಗ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ವಿಜಯೇಂದ್ರ ಅವರು ತಕ್ಷಣದಿಂದಲೇ ಚುನಾವಣೆ ಸಿದ್ಧತೆಗೆ ಸಜ್ಜಾಗಬೇಕಾಗಿದೆ. ಪಕ್ಷದ ಉಪಾಧ್ಯಕ್ಷರಾಗಿ, ಹಲವು ಬೈ ಎಲೆಕ್ಷನ್ ಮತ್ತು ಚುನಾವಣೆಗಳು ಸೇರಿದಂತೆ ಮಹತ್ವದ ಟಾಸ್ಕ್ ನಿರ್ವಹಿಸಿ ಹೈಕಮಾಂಡ್‌ನಿಂದಲೂ ಭೇಷ್ ಎನಿಸಿಕೊಂಡಿರುವ ಇವರಿಗೆ ಇದೊಂದು ದೊಡ್ಡ ಸವಾಲಲ್ಲ.

ಶಿಕಾರಿಪುರದಿಂದ ಮೊದಲ ಬಾರಿಗೆ ಆಯ್ಕೆ

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ಕ್ಷೇತ್ರಗಳಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರವೂ ಒಂದಾಗಿತ್ತು. ಕಾರಣ, ನಾಲ್ಕೂವರೆ ದಶಕಗಳ ಕಾಲ ಶಿಕಾರಿಪುರ ಕ್ಷೇತ್ರವನ್ನಾಳಿದ ಮಾಜಿ ಸಿಎಂ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಪುತ್ರ ಬಿ.ವೈ ವಿಜಯೇಂದ್ರ ಅವರು ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರಿಂದ ಸಾಕಷ್ಟು ಕುತೂಹಲ ಮೂಡಿಸಿತ್ತು. ಬಿ.ವೈ. ವಿಜಯೇಂದ್ರ ಅವರು ಈ ಕ್ಷೇತ್ರದಿಂದ ಜಯ ಸಾಧಿಸಿದ್ದರು. ಈ ಮೂಲಕ ಬಿಜೆಪಿ ಪಾರುಪತ್ಯ ಈ ಕ್ಷೇತ್ರದಲ್ಲಿ ಮುಂದುವರಿದಿತ್ತು. ಬಿ.ವೈ. ವಿಜಯೇಂದ್ರ ಈ ಬಾರಿ ಸ್ವತಃ ಅಖಾಡಕ್ಕೆ ಇಳಿದಿದ್ದರು. ಅಲ್ಲದೆ, ಭರ್ಜರಿ ಪ್ರಚಾರವನ್ನೂ ಮಾಡಿದ್ದರು.

ಇದನ್ನೂ ಓದಿ : BY Vijayendra : ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅಧಿಕಾರ ಸ್ವೀಕಾರ, ಎಲ್ಲೆಡೆ ಜಯಘೋಷ

ಬಿ ವೈ ವಿಜಯೇಂದ್ರ ಸಾಗಿ ಬಂದ ಹಾದಿ

-1973 ಆಗಸ್ಟ್ 6ರಂದು ವಿಜಯೇಂದ್ರ ಜನಿಸಿದರು. ಅವರಿಗೆ ಈಗ 50 ವರ್ಷ.
-ತಂದೆ ಬಿ ಎಸ್ ಯಡಿಯೂರಪ್ಪ. ಮಾಜಿ ಸಿಎಂ. ಬಿಜೆಪಿಯ ಅಗ್ರಗಣ್ಯ ನಾಯಕ.
-ಸಹೋದರ ಬಿ ವೈ ರಾಘವೇಂದ್ರ ಶಿವಮೊಗ್ಗ ಕ್ಷೇತ್ರದ ಸಂಸದರಾಗಿದ್ದಾರೆ.
-ತಂದೆ 1983ರಿಂದಲೂ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಿಂದಲೇ 2023ರ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ
-ಶಾಸಕರಾಗುವ ಮುಂಚೆ ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
-ಹಲವು ಬೈ ಎಲೆಕ್ಷನ್ ಮತ್ತು ಚುನಾವಣೆಗಳಲ್ಲಿ ಪಕ್ಷವು ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
-ವಿಜೇಯಂದ್ರ ಅವರು ಕಾನೂನು ಪದವಿ ಓದಿದ್ದಾರೆ. ಒಂದಿಷ್ಟು ದಿನಗಳ ಕಾಲ ವಕೀಲಿಕಿ ಕೂಡ ಮಾಡಿದ್ದಾರೆ.
-ಪಕ್ಷದ ಉಪಾಧ್ಯಕ್ಷರಾಗುವ ಮುಂಚೆ ವಿಜಯೇಂದ್ರ ಅವರು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.
-ಕಾಲೇಜು ಅಧ್ಯಯನ ವೇಳೆ ವಿಜಯೇಂದ್ರ ಅವರು ಎಬಿವಿಪಿ ಕಾರ್ಯಕರ್ತರಾಗಿಯೂ ಕೆಲಸ ಮಾಡಿದ್ದಾರೆ.
-ಕಳೆದ ವಿಧಾನಸಭೆ ಚುನಾವಣೆ ವೇಳೆ ವಿಜಯೇಂದ್ರ ಅವರು 25 ಸದಸ್ಯರ ಚುನಾವಣಾ ಪ್ರಚಾರ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
-2020ರಲ್ಲಿ ಕೆ ಆರ್ ಪೇಟೆ ಮತ್ತು ಶಿರಾ ಉಪ ಚುನಾವಣೆಯ ಉಸ್ತುವಾರಿಯನ್ನು ಹೊತ್ತಿದ್ದರು. ಅಲ್ಲದೇ, ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದರು.
-ಈ ಹಿಂದಿನ ಅವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವಲ್ಲಿ ವಿಜಯೇಂದ್ರ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.
-ಉತ್ತಮ ಸಂಘಟಕ, ತಂತ್ರಗಾರ ಎಂಬ ಅಭಿದಾನಗಳು ವಿಜಯೇಂದ್ರ ಅವರಿಗೆ ಸಂದಿವೆ.
-ರಾಜ್ಯದ ಪ್ರಮುಖ ಲಿಂಗಾಯತ ಸಮುದಾಯಕ್ಕೆ ಸೇರಿರುವ ವಿಜಯೇಂದ್ರ ಅವರ ಮೇಲೆ ಈ ಜವಾಬ್ದಾರಿಗಳು ಹೆಚ್ಚಾಗಿವೆ.

Exit mobile version