Site icon Vistara News

Cabinet Meeting : ಸಮವಸ್ತ್ರ ಪೂರೈಸಿದ್ದ ಕೇಂದ್ರೀಯ ಭಂಡಾರದ ವಿರುದ್ಧ ತನಿಖೆ; ಬಿಜೆಪಿ ವಿರುದ್ಧ ಮತ್ತೊಂದು ಅಸ್ತ್ರ

Karnataka Government school uniform

ಬೆಂಗಳೂರು: ಈ ಹಿಂದಿನ ಬಿಜೆಪಿ ಸರ್ಕಾರದ ಮೇಲೆ “40 ಪರ್ಸೆಂಟ್‌” ಆರೋಪ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಈಗ, ಕಳೆದ ಸರ್ಕಾರದ ನಿರ್ಧಾರಗಳ ಮೇಲೆ ಒಂದೊಂದೇ ತನಿಖಾಸ್ತ್ತವನ್ನು ಪ್ರಯೋಗ ಮಾಡುತ್ತಿದೆ. ಗುರುವಾರ (ಸೆಪ್ಟೆಂಬರ್‌ 7) ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಮತ್ತೊಂದು ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಕಳೆದ ಬಾರಿ ಕಳಪೆ ಸಮವಸ್ತ್ರ ಪೂರೈಕೆ ಮಾಡಿದ ಆರೋಪದ ಮೇಲೆ ಕೇಂದ್ರೀಯ ಭಂಡಾರದ ವಿರುದ್ಧ ತನಿಖೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, ಕೇಂದ್ರೀಯ ಭಂಡಾರದಿಂದ ಪೂರೈಸಲಾಗಿದ್ದ ಶೇಕಡಾ 90ರಷ್ಟು ಶಾಲಾ ಸಮವಸ್ತ್ರ ಕಳಪೆ ಆಗಿತ್ತು. ಕಳಪೆ ಸಮವಸ್ತ್ರ ಪೂರೈಸಿದವರಿಗೆ ಹಣ ಕೊಡಲಾಗಿತ್ತು. ಈಗ ಕಳಪೆ ಸಮವಸ್ತ್ರ ಪೂರೈಕೆ ಪ್ರಕರಣವನ್ನು ತನಿಖೆ ಮಾಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಕಳಪೆ ಸಮವಸ್ತ್ರ ಖರೀದಿ ಮಾಡಿದವರು ಹಾಗೂ ಪೂರೈಸಿದವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ. ಈ ಕಳಪೆ ಸಮವಸ್ತ್ರ ಪೂರೈಕೆದಾರರಿಗೆ ಎಷ್ಟು ಹಣ ನೀಡಲಾಗಿದೆ ಎಂಬ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಶೇಕಡಾ 90ರಷ್ಟು ಸಮವಸ್ತ್ರ ಕಳಪೆ

ಈ ಅಕ್ರಮ ಹಿಂದಿನ ಸರ್ಕಾರದಲ್ಲಿ ಆಗಿತ್ತು. ಹಣವೂ ಸಹ ಆ ಸರ್ಕಾರದ ಅವಧಿಯಲ್ಲಿಯೇ ಬಿಡುಗಡೆ ಆಗಿತ್ತು. ಆದರೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಕೆ‌ಎಚ್‌ಡಿಸಿ)ಯಿಂದ ಪೂರೈಸಿದ್ದ ಸಮವಸ್ತ್ರದ ಗುಣಮಟ್ಟ ಚೆನ್ನಾಗಿದೆ. ಕೇಂದ್ರೀಯ ಭಂಡಾರದಿಂದ ಪೂರೈಸಿದ ಸಮವಸ್ತ್ರ ಕಳಪೆಯಾಗಿದೆ. ಶೇಕಡಾ 90ರಷ್ಟು ಬಟ್ಟೆ ಕಳಪೆ ಇತ್ತು. ಈ ಅವ್ಯವಹಾರ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ತನಿಖೆಗೆ ನಿರ್ಣಯ ಕೈಗೊಳ್ಳಲಾಗಿದೆ. ನೇಕಾರರು ತಯಾರು ಮಾಡಿರುವ ಬಟ್ಟೆ ಕಳಪೆ ಇಲ್ಲ ಎಂದು ಇದೇ ವೇಳೆ ಎಚ್‌.ಕೆ. ಪಾಟೀಲ್ ತಿಳಿಸಿದರು.

ಸಮವಸ್ತ್ರಗಳ ಬಾಕಿ ಬಿಲ್ ಬಿಡುಗಡೆ

ಶಾಲಾ ಮಕ್ಕಳಿಗೆ ಒದಗಿಸಿರುವ ಸಮವಸ್ತ್ರಗಳ ಬಾಕಿ ಬಿಲ್ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದೆ. ಸಮವಸ್ತ್ರ ಪೂರೈಸಿದ ಕೆಎಚ್‌ಡಿಸಿ ನೌಕರರಿಗೆ ಈ ಸಂಬಂಧ 14.48 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್‌ ಹೇಳಿದರು.

ಜೆಒಸಿ ಉಪನ್ಯಾಸಕರಿಗೆ ಗುಡ್‌ ನ್ಯೂಸ್

ಜೆಒಸಿ ಉಪನ್ಯಾಸಕರು, ಪಿಯುಸಿಗೆ ಪಾಠ ಮಾಡುತ್ತಿರುವ ಉಪನ್ಯಾಸಕರಿಗೆ ಬಿ.ಇಡಿ ಕಡ್ಡಾಯ ಮಾಡಲಾಗಿದೆ. ಹೀಗಾಗಿ ಜೆಒಸಿಯ ಉಪನ್ಯಾಸಕರಿಗೆ ಬಿಇಡಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು, ಎರಡು ವರ್ಷ ಬಿ.ಇಡಿ ಕೋರ್ಸ್ ಮಾಡಲು ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ 162 ಜೆಒಸಿ ಉಪನ್ಯಾಸಕರು ಇದ್ದಾರೆ. ಕೋರ್ಸ್ ವೇಳೆ ಅವರಿಗೆ ವೇತನ ಕೊಡಲಾಗುತ್ತದೆ ಎಂದು ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದರು.

ಶಕ್ತಿ ಸ್ಮಾರ್ಟ್‌ ಕಾರ್ಡ್‌ಗೆ ಜನರೇ ದುಡ್ಡು ಕೊಡಬೇಕು!

ಶಕ್ತಿ ಯೋಜನೆಯಡಿ ಪ್ರಯಾಣಿಕರಿಗೆ ಸ್ಮಾರ್ಟ್‌ ಕಾರ್ಡ್ ಸೇವಾ ಶುಲ್ಕ 14.15 ರೂ. ನಿಗದಿ ಮಾಡಿ ಅನುಮೋದನೆ ನೀಡಲಾಗಿದೆ. ಆರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಲು ಗಡುವು ವಿಸ್ತರಣೆ ಮಾಡಲಾಗಿದೆ. ಈ ಮೊತ್ತವನ್ನು ಸಾರ್ವಜನಿಕರೇ ಭರಿಸಬೇಕು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್‌ ಹೇಳಿದರು.

ಕೆಎಸ್‌ಆರ್‌ಟಿಸಿ ಬಸ್‌ ಖರೀದಿ

ಕೆಎಸ್‌ಆರ್‌ಟಿಸಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 250 ಹೊಸ ಬಸ್, ವಾಯವ್ಯ ಸಾರಿಗೆಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ 375 ಹೊಸ ಬಸ್, ಬಿಎಂಟಿಸಿಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಎಸಿ ಎಲೆಕ್ಟ್ರಿಕ್‌ ಬಸ್, ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 250 ಹೊಸ ಬಸ್‌ಗಳನ್ನು ಖರೀದಿ ಮಾಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದರು.

ಎಲಿವೇಟೆಡ್‌ ಕಾರಿಡಾರ್‌ನ 307 ಕೋಟಿ ರೂ.ಗೆ ಅನುಮೋದನೆ

ನಗರಾಭಿವೃದ್ಧಿ ಇಲಾಖೆಗೆ ಸಂಬಂಧಪಟ್ಟಂತೆ ಕೋರಮಂಗಲ ಒಳ ವರ್ತುಲ ರಸ್ತೆಯಲ್ಲಿ ನಿರ್ಮಿಸುತ್ತಿರುವ ಎಲಿವೇಟೆಡ್‌ ಕಾರಿಡಾರ್‌ಗೆ 307 ಕೋಟಿ ರೂಪಾಯಿ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಯಿತು. ಕೊಪ್ಪಳದಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ 29.70 ಕೋಟಿ ರೂಪಾಯಿ ಅನುದಾನ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಎಚ್‌.ಕೆ. ಪಾಟೀಲ್ ಹೇಳಿದರು.

ಕೆಪಿಎಸ್‌ಸಿ ಸದಸ್ಯರ ಆಯ್ಕೆ ಜವಾಬ್ದಾರಿ ಸಿಎಂ ಹೆಗಲಿಗೆ

ಸಂಪುಟ ಸಭೆಯಲ್ಲಿ ಒಟ್ಟು 17 ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. ನಗರ ಸ್ಥಳೀಯ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಬಗ್ಗೆ ಚರ್ಚೆ ನಡೆದಿಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕುರಿತ ನ್ಯಾ. ಭಕ್ತವತ್ಸಲ ಸಮಿತಿ ವರದಿ ಬಗ್ಗೆಯೂ ಚರ್ಚೆ ಆಗಿಲ್ಲ. ಆದರೆ, ಕೆಪಿಎಸ್‌ಸಿಯಲ್ಲಿ ಖಾಲಿ ಇರುವ ಎರಡು ಹುದ್ದೆಗಳ ಭರ್ತಿ ಬಗ್ಗೆ ಚರ್ಚೆ ನಡೆದಿದೆ. ಸದಸ್ಯರ ನೇಮಕ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲು ಸಂಪುಟ ಸಭೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ಎಚ್‌.ಕೆ. ಪಾಟೀಲ್ ತಿಳಿಸಿದರು.

ಸಿಎಂಗೆ ಐದನೇ ಹಣಕಾಸು ಆಯೋಗ ರಚನೆ ಹೊಣೆ

ಐದನೇ ಹಣಕಾಸು ಆಯೋಗ ರಚನೆ ಬಗ್ಗೆ ಚರ್ಚೆ ಮಾಡಲಾಗಿದೆ. ಒಬ್ಬರು ಅಧ್ಯಕ್ಷರು, ಇಬ್ಬರು ಸದಸ್ಯರ ನೇಮಕ ಮಾಡುವ ಬಗ್ಗೆ ಸಿಎಂಗೆ ಅಧಿಕಾರ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಉಗ್ರಾಣಗಳ ನಿರ್ಮಾಣಕ್ಕೆ 13 ಕೋಟಿ ರೂಪಾಯಿ ಹೆಚ್ಚುವರಿ ಅನುದಾನಕ್ಕೆ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ, ಕಲಬುರಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 162.80 ಕೋಟಿ ರೂಪಾಯಿ ಅನುದಾನ ಕೊಡಲು ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್‌ ಮಾಹಿತಿ ನೀಡಿದರು.

ವಿಧೇಯಕ ತಿದ್ದುಪಡಿಯಿಂದ ಶಿವಮೊಗ್ಗಕ್ಕೆ ಲಾಭ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ. ಶಿಕಾರಿಪುರ, ಭದ್ರಾವತಿಗಳನ್ನು ಹೊರತುಪಡಿಸಿ ಉಳಿದ ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ತಾಲೂಕುಗಳಿಗೆ ಈ ತಿದ್ದುಪಡಿಯ ಲಾಭ ಸಿಗಲಿದೆ ಎಂದು ಸಚಿವ ಎಚ್.ಕೆ. ಪಾಟೀಲ್‌ ಹೇಳಿದರು.

ಇದನ್ನೂ ಓದಿ: Cabinet Meeting : ಮುಂದಿನ ವಾರ ಕ್ಯಾಬಿನೆಟ್‌ನಲ್ಲಿ ʻಬರ ತಾಲೂಕುʻ ಘೋಷಣೆ

ಕಾವೇರಿ ವಿಷಯ ಚರ್ಚೆ

ಸಚಿವ ಸಂಪುಟ ಸಭೆಯಲ್ಲಿ ಕಾವೇರಿ ವಿಚಾರ ಬಗ್ಗೆ ಚರ್ಚೆ ಆಗಿದೆ. ಜಲ ಸಂಪನ್ಮೂಲ ಸಚಿವರು ಕ್ಯಾಬಿನೆಟ್ ಗಮನಕ್ಕೆ ತಂದಿದ್ದಾರೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಕಾಪಾಡಲು ಏನು ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ವಾತಾವರಣ ಸಹ ಇದೆ. ರಾಜ್ಯಕ್ಕೆ ಯಾವುದೇ ಅನ್ಯಾಯ ಆಗದ ರೀತಿಯಲ್ಲಿ ನಡೆದುಕೊಳ್ಳುತ್ತೇವೆ ಎಂದು ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದರು.

Exit mobile version