ಉಡುಪಿ: ಕರ್ನಾಟಕದಲ್ಲಿ ಉತ್ತರ ಕರ್ನಾಟಕಕ್ಕೆ ಒತ್ತು ಸಿಗಬೇಕು. ಆ ಭಾಗಕ್ಕೆ ಅನ್ಯಾಯ ಆದಾಗ ರಾಜ್ಯ ಒಡೀಬೇಕು ಅಂದವನು ನಾನೇ. ಈಗ ಅಖಂಡ ಕರ್ನಾಟಕದ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ತಾವಿನ್ನೂ ಯುಕರಾಗಿದ್ದು, 75ರವರೆಗೂ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರ ಜತೆಗೆ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ಕತ್ತಿ, ಉತ್ತರ ಕರ್ನಾಟಕವನ್ನು ಪ್ರತ್ಯೇಕ ಮಾಡಬೇಕು, ನಾನೇ ಅದಕ್ಕೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಉಮೇಶ್ ಕತ್ತಿ ಆಗಿಂದಾಗ್ಗೆ ನಾಲಗೆ ಹರಬಿಡುತ್ತಲೇ ಪ್ರಸಿದ್ಧರಾದವರು. ಹಳೆ ಮೈಸೂರು ಪ್ರಾಂತದ ಜತೆಗೆ ಉತ್ತರ ಕರ್ನಾಟಕದಲ್ಲೂ ಅನೇಕರಿಂದ ಇದಕ್ಕಾಗಿ ದೂಷಣೆಗೆ ಒಳಗಾದವರು. ಇದೀಗ ತಮ್ಮ ವರಸೆ ಬದಲಾಯಿಸಿರುವಂತೆ ಕಾಣುತ್ತಿದೆ. ಆದರೂ ಸಂಪೂರ್ಣವಾಗಿ ಪ್ರತ್ಯೇಕ ಹೋರಾಟವನ್ನು ಕೈಬಿಟ್ಟಿಲ್ಲ ಎಂದೂ ಹೇಳಿದ್ದಾರೆ.
ಈಗ ಎರಡೂ ಭಾಗಕ್ಕೆ ಅನ್ಯಾಯವಾಗದೆ ಕೆಲಸ ಆಗುತ್ತಿದೆ. ಈಗ ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ, ಐಕ್ಯತೆಯಿಂದ ಇದ್ದೇನೆ. ಕರ್ನಾಟಕ ವಿಭಜನೆ ಹೋರಾಟ ಕೈಬಿಟ್ಟಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಪ್ರತ್ಯೇಕ ಕೂಗು ಇರುತ್ತದೆ. ನಾನು ಸೀನಿಯರ್ ಎಂಎಲ್ಎ. 10 ಎಲೆಕ್ಷನ್ ಮಾಡಿದ್ದೇನೆ. 9 ಬಾರಿ ಗೆದ್ದು ಎಂಟು ಅವಧಿಗೆ ಅಧಿಕಾರ ಮಾಡಿದ್ದೇನೆ. ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಟ್ಟಿಲ್ಲ ಅದಾಗಿ ಬಂದರೆ ನೋಡೋಣ ಎಂದರು.
ರಾಜ್ಯ ಬಿಜೆಪಿಯಲ್ಲಿ ಹೊಸತನದ ವಿಚಾರ ಹೂಡುತ್ತಿದೆ. ಹಲವಾರು ಜನ ಯುವಕರಿದ್ದಾರೆ, ನಾನು ಕೂಡ ಯುವಕ. ನನಗೆ ಕೇವಲ 61 ವರ್ಷ. ಎಂಎಲ್ಎ ಆದಾಗ ಕೇವಲ 24 ವರ್ಷ. ನಾನು 75 ವರ್ಷದ ತನಕ ಯುವಕನೇ. ಮುಖ್ಯಮಂತ್ರಿ ಆಗುವ ಅವಕಾಶ ಇದೆ, ದೇವರ ದಯೆ ಇದೆ, ರಾಜ್ಯದ ಜನರ, ಎಲ್ಲರ ಆಶೀರ್ವಾದ ಇದ್ದರೆ ನಾನು ಒಂದು ದಿನ ಸಿಎಂ ಆಗುತ್ತೇನೆ. ನಾನು ಸಿಎಂ ಆಗುವ ಅವಸರದಲ್ಲಿ ಇಲ್ಲ. ನಾನು ಮುಖ್ಯಮಂತ್ರಿ ಬೇಕೆ ಬೇಕು ಅಂತ ಕೇಳಲ್ಲ. ಸಿಎಂ ಆಗಿ ರಾಜ್ಯ ನಿಭಾಯಿಸುವ ಕೆಪ್ಯಾಸಿಟಿ ನನಗೆ ಇದೆ.
ಬಸವರಾಜ್ ಬೊಮ್ಮಾಯಿ ನೇತೃತ್ವಲ್ಲಿ ಒಳ್ಳೆಯ ಸರ್ಕಾರ ಅಧಿಕಾರದಲ್ಲಿದೆ. ಮುಂದಿನ ಅವಧಿಗೆ 150 ಸ್ಥಾನ ಗೆಲ್ಲುತ್ತೇವೆ. ರಾಜ್ಯದಲ್ಲಿ 120 ಕ್ಕೆ ಹೆಚ್ಚು ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮುಂದಿನ ಐದು ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆ. ಮೈಸೂರು ಭಾಗದಲ್ಲಿ ಬಹಳ ಪರಿವರ್ತನೆ ಆಗಿದೆ. ಹಳೇ ಮೈಸೂರು ಭಾಗದಲ್ಲಿ ಜನತಾದಳ- ಕಾಂಗ್ರೆಸ್ ಇತ್ತು. ಸುಮಲತಾ ಸಂಸದೆಯಾದನಂತರ ಬಹಳ ಬದಲಾವಣೆ ಆಗುತ್ತಿದೆ ಎಂದರು.
ಸಿಎಂ ಸ್ಥಾನಕ್ಕೆ ಎರಡೂವರೆ ಸಾವಿರ ಕೋಟಿ ರೂಪಾಯಿ ಎಂಬ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕತ್ತಿ, ಮಾರುಕಟ್ಟೆಯಲ್ಲಿ ಆಮಿಷ ಕೊಡುವವರಿದ್ದಾರೆ. ಯತ್ನಾಳ್ ಹಣಕೊಟ್ಟು ಸಿಎಂ ಆಗ್ತಾರೆ ಎಂಬ ಭಾವನೆ ಬೇಡ ಎಂದು ಯತ್ನಾಳ್ ಹೇಳಿದ್ದಾರೆ ಎಂದರು.
ಇದನ್ನೂ ಓದಿ: ರಾಜ್ಯಕ್ಕಿಂದು ಅಮಿತ್ ಷಾ; ಬಿಜೆಪಿಯಲ್ಲಿ ಆತಂಕದ ʼಸಂತೋಷʼ