Site icon Vistara News

CM Siddaramaiah : ನೀವೊಬ್ಬರೇ ಸಿಎಂ ಆಗ್ಬೇಕಾ? ಬೇರೆಯವರೆಲ್ಲ ಸಾಯ್ಬೇಕಾ?; ಸಿದ್ದರಾಮಯ್ಯ ಮೇಲೆ ಪ್ರಣವಾನಂದ ಶ್ರೀ ವಾಗ್ದಾಳಿ

Siddaramaiah Pravananda swameeji

ಬೆಂಗಳೂರು: ʻʻನೀವೊಬ್ಬರೇ ಸಿಎಂ ಆಗಬೇಕಾ..? ಬೇರೆ ಸಮುದಾಯಗಳಿಗೆ ಅವಕಾಶ ಸಿಗಬಾರದಾ? ಅತೀ ಹಿಂದುಳಿದ ಸಮುದಾಯದ ನಾಯಕರು (Backward community leaders) ಇದನ್ನೆಲ್ಲಾ ನೋಡಿಕೊಂಡು ಸಾಯಬೇಕಾ..?ʼʼ- ಹೀಗೆ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ  ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ (Pravananada Swameeji).

ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace grounds) ನಡೆಯುತ್ತಿರುವ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಬಿ.ಕೆ. ಹರಿಪ್ರಸಾದ್‌ (BK Hariprasad) ಅವರಿಗೆ ಮಂತ್ರಿ ಸ್ಥಾನ ನೀಡದೆ ಇರುವ ಆಕ್ರೋಶವನ್ನು ಸ್ಪಷ್ಟವಾಗಿ ತೋರ್ಪಡಿಸಿದರು.

ಅತಿ ಹಿಂದುಳಿದ ಸಮುದಾಯಗಳ ಹಲವು ಮಠಾಧೀಶರು, ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್, ಆಂಧ್ರ ಪ್ರದೇಶ ವಸತಿ ಸಚಿವ ಜೋಗಿ ರಮೇಶ್, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ್, ಮಾಜಿ ಸಚಿವ ಶಿವಮೂರ್ತಿ ನಾಯಕ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ನೆಲ ನರೇಂದ್ರಬಾಬು, ಆಮ್‌ ಆದ್ಮಿ ಪಾರ್ಟಿಯ ಮುಖ್ಯಮಂತ್ರಿ ಚಂದ್ರು ಸೇರಿ ಹಲವು ಗಣ್ಯರು ಸಭೆಯಲ್ಲಿ ಭಾಗಿಯಾಗಿದ್ದಾರೆ.

ಹೈಕಮಾಂಡ್‌ ಮಾತು ಮೀರಿ ಬಂಗಾರಪ್ಪಗೆ ಅರಸು ಮಂತ್ರಿ ಸ್ಥಾನ ಕೊಟ್ಟರು.. ಈಗ!

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಣವಾನಂದ ಸ್ವಾಮೀಜಿ ಹಿಂದುಳಿದ ಸಮುದಾಯಗಳು ಅಧಿಕಾರ ಪಡೆದ ಹಿಂದಿನ ಘಟನಾವಳಿಗಳನ್ನು ನೆನಪು ಮಾಡಿಕೊಂಡರು.

ʻʻಅಹಿಂದ ಹೆಸರಲ್ಲಿ ನಮ್ಮ ಹಕ್ಕು ಪಡೆಯಬೇಕು ಎಂದು ದೊಡ್ಡ ಹೋರಾಟಕ್ಕೆ ಆರ್ಥಿಕ ಶಕ್ತಿ ತುಂಬಿದವರು ಆರ್.ಎಲ್ ಜಾಲಪ್ಪ ಅವರು. ಆದರೆ ರಾಜ್ಯಕ್ಕೆ ಇಷ್ಟೊಂದು ಶಕ್ತಿ ಕೊಟ್ಟ ಹಿಂದುಳಿದ ವರ್ಗಗಳ ನಾಯಕರು ಏನಾಗಿದ್ದಾರೆ? ರಾಜ್ಯದಲ್ಲಿ ಅಧಿಕಾರ ನಡೆಸಿರುವ ಸರ್ಕಾರಗಳು ಹಿಂದುಳಿದ ವರ್ಗಕ್ಕೆ ಏನು ಕೊಟ್ಟಿವೆ?ʼʼ ಎಂದು ಪ್ರಶ್ನಿಸಿದರು.

ʻʻಈಡಿಗ, ಬಿಲ್ಲವ, ನಾಮಧಾರಿ ಸಮುದಾಯ ಭಿಕ್ಷೆ ಬೇಡುವ ಸಮುದಾಯ ಅಲ್ಲ. ಈ ರಾಜ್ಯಕ್ಕೆ ಕೊಡುಗೆ ಕೊಟ್ಟ ಸಮುದಾಯ ಅದು. ಆದರೆ ಆ ಸಮುದಾಯದ ನಾಯಕರನ್ನು ಇಂದು ಷಡ್ಯಂತ್ರದಿಂದ ತುಳಿಯಲಾಗಿದೆ. ದೇವರಾಜು ಅರಸು ಸಿಎಂ ಆದಾಗ ಬಂಗಾರಪ್ಪ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬಾರದು ಅಂತ ದೆಹಲಿಯಿಂದ ಪತ್ರ ಬರುತ್ತದೆ. ಆದರೂ ದೇವರಾಜ್ ಅರಸು ಅವರು ಬಂಗಾರಪ್ಪ ಅವರನ್ನು ಸಂಪುಟಕ್ಕೆ ತೆಗೆದುಕೊಂಡರು. ಆದರೆ ಈಗ ಇಲ್ಲಿಂದ ಲೆಟರ್ ಹೋಗುತ್ತದೆ. ಇಂಥವರಿಗೆ ಸಚಿವ ಸ್ಥಾನ ಕೊಡಬಾರದು ಅಂತ ಇಲ್ಲಿಂದ ದೆಹಲಿಗೆ ಪತ್ರ ಹೋಗುತ್ತದೆ. ಪರಿಸ್ಥಿತಿ ಹೇಗೆ ಬದಲಾಗಿದೆ ನೋಡಿʼʼ ಎಂದು ಬಿ.ಕೆ. ಹರಿಪ್ರಸಾದ್‌ ಅವರ ಹೆಸರನ್ನು ಹೇಳದೆಯೇ ಸ್ವಾಮೀಜಿ ನುಡಿದರು.

ʻʻ22 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯ ಬಲಿಷ್ಠವಾಗಿದೆ ಎನ್ನುವುದನ್ನು ನೆನಪಿಸುತ್ತಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 11 ಸೀಟು ಕೊಡಬೇಕಿತ್ತು. ಗಂಗಾವತಿ, ಮಂಗಳೂರು, ಕುಮಟಾದಲ್ಲಿ ನಮ್ಮ ಸಮುದಾಯಕ್ಕೆ ಅವಕಾಶ ಸಿಗಲಿಲ್ಲʼʼ ಎಂದು ಹೇಳಿದ ಸ್ವಾಮೀಜಿ, ಹಿಂದಿನ ಸರ್ಕಾರ ನಾರಾಯಣ ಗುರು ನಿಗಮಕ್ಕೆ ಹಣ ನೀಡಲಿಲ್ಲ ಎಂದು ನೆನಪಿಸಿದರು.

ಹರಿಪ್ರಸಾದ್‌ಗೆ ಅಧಿಕಾರ ಕೊಡಿ ಎಂದು ಕೇಳಲು ಬಂದಿಲ್ಲ

ʻʻನಾವಿಂದು ಬಿ.ಕೆ. ಹರಿಪ್ರಸಾದ್ ಸ್ಥಾನಮಾನಕ್ಕಾಗಿ ಬೇಡಿಕೆ ಇಡುತ್ತಿಲ್ಲ. ಆದರೆ, ಸಮುದಾಯಕ್ಕೆ ಮಾಡಿರುವ ಮೋಸವನ್ನು ನೆನಪಿಸುತ್ತಿದ್ದೇವೆ. ಹಿಂದುಳಿದ ವರ್ಗಗಳ ಹೆಸರು ಹೇಳಿಕೊಂಡು ಅಧಿಕಾರ ಅನುಭವಿಸುತ್ತಿರುವವರನ್ನು ಪ್ರಶ್ನೆ ಮಾಡುತ್ತಿದ್ದೇವೆʼʼ ಎಂದು ಹೇಳಿದ ಸ್ವಾಮೀಜಿ, ʻಅತಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಒಕ್ಕೂಟ ಇಲ್ಲಿಂದಲೇ ಪ್ರಾರಂಭ ಆಗಲಿದೆ. ಅತೀ ಹಿಂದುಳಿದ ವರ್ಗಗಳ ಸ್ವಾಮೀಜಿಗಳು, ಸೆಕೆಂಡ್ ಲೈನ್ ಲೀಡರ್‌ಶಿಪ್ ಇಲ್ಲಿಂದಲೇ ಆರಂಭ ಆಗಲಿದೆʼʼ ಎಂದು ಘೋಷಿಸಿದರು.

ದಲಿತರು ಯಾಕೆ ಸಿಎಂ ಆಗಬಾರದು?

ಸಮಾರಂಭದಲ್ಲಿ ಮಾತನಾಡಿದ ಜ್ಞಾನ ಪ್ರಕಾಶ ಸ್ವಾಮಿ ಅವರು, ದಲಿತರು ಯಾಕೆ ಸಿಎಂ ಆಗಬಾರದು ಎಂಬ ಗಂಭೀರ ಪ್ರಶ್ನೆಯನ್ನು ಎತ್ತಿದರು.

ʻʻನಮ್ಮನ್ನ ಜಲ್ಲಿ ಬೇರೆ, ಸಿಮೆಂಟ್ ಬೇರೆ, ಮರಳು ಬೇರೆ ಅಂತ ಮಾಡಿದರು. ಆದರೆ, ನಾವು ಒಟ್ಟಾಗಿ ಕಾಂಕ್ರೀಟ್ ಆಗೋಕೆ ಬಂದಿದೀವಿ. ಈ ರಾಜ್ಯದಲ್ಲಿ ಒಂದು ಸಮುದಾಯ 30 ವರ್ಷ ಆಳಿದೆ. ಇನ್ನೊಂದು ಸಮುದಾಯ 20 ವರ್ಷ ಆಳಿದೆ. ಮತ್ತೊಂದು ಸಮುದಾಯ 10 ವರ್ಷ ಆಳಿದೆ. ಹೀಗೆ ಆಳಿ ಅವರ ಮಠಗಳಿಗೆ ಸಾವಿರಾರು ಕೋಟಿ ಮೌಲ್ಯದ ಆಸ್ತಿ, ಭೂಮಿ ಕೊಟ್ಟಿದೆʼʼ ಎಂದ ನೆನಪಿಸಿದರು.

ʻʻಇಂದು ಗ್ರಾಮ ಪಂಚಾಯಿತಿ ಗೆಲ್ಲೋಕಾಗದ ಸಮುದಾಯದವರು 127 ಜನ ಎಂಪಿಗಳಾಗಿದ್ದಾರೆ. ಇಂದು ಎಲ್ಲಾ ಸಮುದಾಯದ ಎಲ್ಲರೂ ಮುಖ್ಯಮಂತ್ರಿಗಳಾಗಿದ್ದಾರೆ. ನಮ್ಮ ಸಮುದಾಯದವರು ಯಾಕಾಗಿಲ್ಲ?ʼʼ ಎಂದು ಪ್ರಶ್ನಿಸಿದ ಜ್ಞಾನ ಪ್ರಕಾಶ ಸ್ವಾಮೀಜಿ, ʻʻದಲಿತರು ಯಾಕೆ ಸಿಎಂ ಆಗಬಾರದು..? ಅತೀ ಹಿಂದುಳಿದ ವರ್ಗಗಳ ಸಮುದಾಯವರು ಯಾಕೆ ಸಿಎಂ ಆಗಬಾರದು..?ʼʼ ಎಂದು ಕೇಳಿದರು.

ಸಾಮಾಜಿಕ ನ್ಯಾಯ ಭಾಷಣ ಮಾಡಿದ್ರೆ ಆಗಲ್ಲ. ದೇವರಾಜ್ ಅರಸು ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿದ್ದರು. ಆ ಕೆಲಸ ಈಗಲೂ ಆಗಬೇಕು ಎಂದರು.

ರಾಜಕೀಯವಾಗಿ ಪ್ರಬಲ ಆಗಬೇಕು ಎಂದ ಆಂಧ್ರದ ಸಚಿವ

ಕಾರ್ಯಕ್ರಮದಲ್ಲಿ ಆಂದ್ರಪ್ರದೇಶದ ವಸತಿ ಸಚಿವ ಜೋಗಿ ರಮೇಶ್ ಅವರು, ಕರ್ನಾಟಕದಲ್ಲಿ ಅತೀ ಹಿಂದುಳಿದ ವರ್ಗಗಳ ಒಗ್ಗಟ್ಟಾಗಿರಬೇಕು ಎಂಬುದು ಸಭೆ ಉದ್ದೇಶ. ಒಗ್ಗಟ್ಟಿನ ಬಗ್ಗೆ ಪ್ರತಿ ಗ್ರಾಮದಲ್ಲಿ ಹೇಳಬೇಕು. ಸುಮಾರು 50 ಲಕ್ಷ ಜನ ಇರುವ ನಾವು ಕರ್ನಾಟಕ ರಾಜ್ಯದಲ್ಲಿ ರಾಜಕೀಯವಾಗಿ ಪ್ರಬಲವಾಗುವ ಆಲೋಚನೆ ಇರಬೇಕಾಗಿತ್ತು ಎಂದರು.

ʻʻಅತೀ ಹಿಂದುಳಿದ ವರ್ಗಗಳ ಸಮುದಾಯಗಳನ್ನು ಮೇಲೆ ತೆಗೆದುಕೊಂಡು ಹೋಗುವ ಜವಬ್ದಾರಿ ಇರಬೇಕು. ನಮಗೀಗ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಉನ್ನತಿ ಪಡೆಯುವ ಅವಕಾಶ ಇದೆ. ಅದನ್ನು ಬಳಸಿಕೊಳ್ಳಬೇಕುʼʼ ಎಂದು ಹೇಳಿದರು.

ಹರಿಪ್ರಸಾದ್‌ ಪರ ವಕಾಲತ್ತು ಮಾಡಿದ ಮುಖ್ಯಮಂತ್ರಿ ಚಂದ್ರು

ʻʻಮೂವತ್ತು, ನಾಲವತ್ತು ವರ್ಷಗಳ ಕಾಲ ರಾಜಕೀಯ ಮಾಡಿದ ಬಿಕೆ ಹರಿಪ್ರಸಾದ್ ಶೋಷಣೆಗೆ ಒಳಗಾಗಿದ್ದಾರೆ. ನಾನು ಕಾಯಂ ಮುಖ್ಯಮಂತ್ರಿ ಆಗಿದ್ದೇನೆ. ನನಗೆ ಮುಖ್ಯಮಂತ್ರಿ ಆಗಿ ಸಾಕಾಗಿದೆ. ಬಿಕೆ ಹರಿಪ್ರಸಾದ್ ಅವರನ್ನ ಸಿಎಂ ಮಾಡೋದಾದರೆ ನಾವು ಒಗ್ಗಟ್ಟು ಆಗೋಣʼʼ ಎಂದು ಹೊಸ ತಂತ್ರ ಹುಟ್ಟುಹಾಕಿದರು ಆಮ್‌ ಆದ್ಮಿ ಪಕ್ಷದ ನಾಯಕ ಮುಖ್ಯಮಂತ್ರಿ ಚಂದ್ರು. ʻʻಈಡಿಗ ಸಮುದಾಯದ ಡಾ. ರಾಜಕುಮಾರ ಅವರ ಜೊತೆ ನಾವು ಪಾತ್ರ ಮಾಡಿದ್ದೇನೆʼʼ ಎಂದೂ ನೆನಪಿಸಿದರು.

ʻʻಅತಿ ಹಿಂದುಳಿದ 70 ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ.. ಸಿಎಂ ಸಿದ್ದರಾಮಯ್ಯ ಅವರು ಸಹ ಸಂಪೂರ್ಣವಾಗಿ ಮಾಡಿಲ್ಲ. ಹಿಂದುಳಿದ ವರ್ಗಗಳಲ್ಲಿ ಒಳ ವರ್ಗೀಕರಣ ಮಾಡಬೇಕು. ಒಳ‌‌ ಮೀಸಲಾತಿ ಆಗಬೇಕು. ಜನಗಣತಿ ಮೇಲೆ ಮೀಸಲಾತಿ ಸಿಕ್ಕಿದೆ. ಅದು ವೈಜ್ಞಾನಿಕವಾಗಿಲ್ಲ, ಜಾತಿಗಣತಿ ಆಧಾರಿತವಾಗಿ ಮೀಸಲಾತಿ ಆಗಬೇಕು. ಕಾಂತರಾಜ್ ವರದಿ ಜಾರಿ ಆದರೆ ಸಣ್ಣ ಸಣ್ಣ ಸಮುದಾಯಕ್ಕೆ ನ್ಯಾಯ ಸಿಗಲಿದೆ. ಕಾಂತರಾಜ್ ಅವರು ವರದಿ ಕೊಡೋಕೆ ರೆಡಿ ಇದ್ದರೂ ಸಿದ್ದರಾಮಯ್ಯ ಸ್ವೀಕರಿಸಿಲ್ಲʼʼ ಎಂದು ನುಡಿದರು.

ಇದನ್ನೂ ಓದಿ : BK Hariprasad : ಸಣ್ಣ ಸಮುದಾಯದವರ ಅವಕಾಶಕ್ಕಾಗಿ ಬೀದಿಗಿಳಿಯುವೆ: ಸಿಎಂ ವಿರುದ್ಧ ಹರಿಪ್ರಸಾದ್‌ ಮತ್ತೆ ಗುಡುಗು

ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸಿಡಿದೇಳುವ ಹರಿಪ್ರಸಾದ್‌ ಎಂದ ಕೋಟ

ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ʻʻರಾಜ್ಯದಲ್ಲಿ ನಾನು ಸಭಾನಾಯಕ ಆಗಿದ್ದಾಗ, ಹರಿಪ್ರಸಾದ್ ವಿಪಕ್ಷ ನಾಯಕ ಆಗಿದ್ದರು. ನಾನು ವಿಪಕ್ಷ ನಾಯಕ ಆಗಿದ್ದವನು ಸರ್ಕಾರದ ಬಂದ ಮೇಲೆ ಸಭಾನಾಯಕ ಆಗಿ, ಮಂತ್ರಿ ಆಗಿದ್ದೆ. ವಿಪಕ್ಷ ನಾಯಕ ಆಗಿದ್ದ ಬಿಕೆ ಹರಿಪ್ರಸಾದ್ ಮಂತ್ರಿ ಆಗಿ ಸಭಾನಾಯಕ ಆಗುತ್ತಾರೆ ಎಂದು ಭಾವಿಸಿದ್ದೆ. ಮುಂದಿನದ್ದು ನನ್ನ ವ್ಯಾಪ್ತಿಯಲ್ಲಿ ಇಲ್ಲʼʼ ಎಂದರು.

ʻʻಸ್ವಾಭಿಮಾನಕ್ಕೆ ದಕ್ಕೆಯಾದಾಗ ಸಿಡಿದೇಳುವ ಹರಿಪ್ರಸಾದ್ ಅವರ ಗುಣ ನನಗೆ ಇಷ್ಟʼʼ ಎನ್ನುವ ಮೂಲಕ ಹರಿಪ್ರಸಾದ್‌ಗೆ ಕಾಂಗ್ರೆಸ್ ಸರ್ಕಾರ ಮಂತ್ರಿ ಸ್ಥಾನ ಕೊಟ್ಟಿಲ್ಲ ಎಂದು ಕುಟುಕಿದರು ಕೋಟಾ ಶ್ರೀನಿವಾಸ್ ಪೂಜಾರಿ.

Exit mobile version