ಬೆಂಗಳೂರು: ವನ್ಯಜೀವಿ-ಮಾನವ ಸಂಘರ್ಷ (Wildlife and human conflict) ತಗ್ಗಿಸುವ ನಿಟ್ಟಿನಲ್ಲಿ ಕಾಡಿನಂಚಿನ ಗ್ರಾಮಗಳಿಗೆ ರಾತ್ರಿಯ ವೇಳೆಗೆ ಬದಲಾಗಿ ಹಗಲು ಹೊತ್ತಿನಲ್ಲಿ 3 ಫೇಸ್ ವಿದ್ಯುತ್ (Three phase power) ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Minister Ishwar Khandre) ಮನವಿ ಮಾಡಿದ್ದಾರೆ.
ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಈಶ್ವರ ಖಂಡ್ರೆ, ರಾಜ್ಯಾದ್ಯಂತ ಕಾಡಿನಂಚಿನಲ್ಲಿರುವ ಪ್ರದೇಶಗಳಿಗೆ ಆನೆ, ಹುಲಿ, ಚಿರತೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಾಣ ಹಾನಿ ಆಗುತ್ತಿದೆ. ರಾತ್ರಿಯ ವೇಳೆ 3 ಫೇಸ್ ವಿದ್ಯುತ್ ಪೂರೈಕೆ ಮಾಡಿದರೆ ರೈತರು ಪಂಪ್ ಸೆಟ್ ಆನ್ ಮಾಡಲು ಮತ್ತು ಆಫ್ ಮಾಡಲು ರಾತ್ರಿಯ ವೇಳೆ ಸಂಚರಿಸುವ ಕಾರಣ ಸಂಘರ್ಷಗಳು ಹೆಚ್ಚುತ್ತವೆ. ಹೀಗಾಗಿ ಬೆಳಗಿನ ಹೊತ್ತು 3 ಫೇಸ್ ವಿದ್ಯುತ್ ಪೂರೈಸುವುದು ಸೂಕ್ತ ಎಂಬುದು ತಜ್ಞರ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕಾಡಂಚಿನ ಗ್ರಾಮಗಳಿಗೆ ರಾತ್ರಿಯ ವೇಳೆ 3 ಫೇಸ್ ವಿದ್ಯುತ್ ಪೂರೈಸದೆ, ಬೆಳಗ್ಗೆ ಹೊತ್ತಿನಲ್ಲಿಯೇ ನಿಗದಿತ ಸಮಯಕ್ಕನುಸಾರವಾಗಿ 3 ಫೇಸ್ ವಿದ್ಯುತ್ ನೀಡುವಂತೆ ಇಂಧನ ಇಲಾಖೆಗೆ ನಿರ್ದೇಶನ ನೀಡುವಂತೆ ಈಶ್ವರ ಖಂಡ್ರೆ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಕೋರಿದ್ದಾರೆ.
ಪ್ರತಿ ದಿನ ಏಳು ತಾಸು ವಿದ್ಯುತ್ ಪೂರೈಸಲು ಸರ್ಕಾರ ನಿರ್ಧಾರ
ರಾಜ್ಯದಲ್ಲಿ ನೀರಾವರಿ ಪಂಪ್ಸೆಟ್ಗಳಿಗೆ 7 ಗಂಟೆಗಳ ವಿದ್ಯುತ್ ಸರಬರಾಜು ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಈಚೆಗೆ ತಿಳಿಸಿದ್ದರು. ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ವಿದ್ಯುತ್ ಕೊರತೆಯಿದೆ ಎಂದು ನೀರಾವರಿ ಪಂಪ್ಸೆಟ್ಗಳಿಗೆ ಏಳು ಗಂಟೆಗಳ ಕಾಲ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ನೀಡಲು ಮೊದಲೇ ಘೋಷಣೆ ಮಾಡಿದ್ದೆವು. ಕೆಲವು ಜನ ಸತತವಾಗಿ ಮೂರು ಫೇಸ್ನಲ್ಲಿ 5 ಗಂಟೆ ವಿದ್ಯುತ್ ನೀಡಿದರೆ ಸಾಕು ಎಂದಿದ್ದರು. ಅದಕ್ಕಾಗಿ 5 ಗಂಟೆಗಳ ಕಾಲ 3 ಫೇಸ್ನಲ್ಲಿ ವಿದ್ಯುತ್ ನೀಡುವಂತೆ ಸೂಚನೆ ನೀಡಲಾಗಿತ್ತು. ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ರೈತರು ಭೇಟಿ ಮಾಡಿ ಭತ್ತ ಬೆಳೆಯುವುದರಿಂದ 5 ಗಂಟೆಗಳ ಕಾಲ ವಿದ್ಯುತ್ ನೀಡುವುದು ಸಾಕಾಗುವುದಿಲ್ಲ, 7 ಗಂಟೆಗಳ ಕಾಲ ನೀಡಬೇಕೆಂದು ಎಂದು ಮನವಿ ಮಾಡಿದ್ದರು. ಕಬ್ಬು ಹಾಗೂ ಭತ್ತ ಕಟಾವಿಗೆ ಬಂದಿರುವುದರಿಂದ ಈ ಭಾಗದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡುವಣತೆ ಸೂಚನೆ ನೀಡಲಾಗಿದೆ. ಉಳಿದ ಭಾಗಗಳಿಗೆ ನೀಡುತ್ತಿದ್ದ 5 ಗಂಟೆಗಳ ವಿದ್ಯುತ್ ಅನ್ನು ಸಹ 7 ಗಂಟೆಗಳ ಕಾಲ ನೀಡುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: Health Scheme : ಮನೆ ಮನೆಯತ್ತ ಡಾಕ್ಟರ್ – ಔಷಧ ಕಿಟ್; ಜಾರಿಯಾಗಲಿದೆ ಗೃಹ ಆರೋಗ್ಯ ಯೋಜನೆ
ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಳ
ರಾಯಚೂರು, ಬಳ್ಳಾರಿಯಲ್ಲಿ ಥರ್ಮಲ್ ಘಟಕಗಳಿದ್ದು, ರಾಜ್ಯದಲ್ಲಿ ಥರ್ಮಲ್, ಜಲವಿದ್ಯುತ್, ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸುತ್ತಿದ್ದು. ಥರ್ಮಲ್ ಘಟಕವು 1000 ಮೆಗಾ ವ್ಯಾಟ್ ಉತ್ಪಾದಿಸುತ್ತಿದೆ. ಸುಮಾರು 2400 ರಿಂದ 3200 ಮೆ.ವ್ಯಾ, ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಕಬ್ಬು ಅರೆಯುವುದು ಪ್ರಾರಮಭವಾಗಿ ಕೋ-ಜನರೇಷನ್ ಆಗಿರುವುದರಿಂದ 450 ಮೆ.ವ್ಯಾಟ್ ಉತ್ಪಾದನೆಯಾಗಿದೆ. ಕೂಡ್ಲಗಿಯಲ್ಲಿ 150 ಮೆ.ವ್ಯಾ ಕರ್ನಾಟಕಕ್ಕೆ ಉಳಿತಾಯವಾಗಲಿದೆ ಹಾಗೂ ಖರೀದಿ ಮಾಡುತ್ತಿರುವುದರಿಂದ ಹೆಚ್ಚು ವಿದ್ಯುತ್ ದೊರೆಯಲಿದೆ. ಹಾಗಾಗಿ ಇಂದಿನಿಂದ 7 ತಾಸು ವಿದ್ಯುತ್ನ್ನು ಪಂಪ್ಸೆಟ್ಗಳಿಗೆ ನೀಡುತ್ತಿದ್ದೇವೆ. ಕೈಗಾರಿಕೆಗಳಿಗೆ, ಗೃಹ ಬಳಕೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿಲ್ಲ. ಪಂಪ್ಸೆಟ್ಗಳಿಗೆ ನೀಡುವ ವಿದ್ಯುತ್ ಸಹಾಯಧನವನ್ನು ಸರ್ಕಾರವೇ ನೀಡಿದೆ. 13100 ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಒದಗಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.