Site icon Vistara News

J.P. Nadda: ಮೋದಿ ಸರ್ಕಾರ ಉಚಿತ ಘೋಷಣೆ ಮಾಡಲಿಲ್ಲ; ಅದಕ್ಕೇ ದೇಶ ಉತ್ತಮ ಸ್ಥಿತಿಯಲ್ಲಿದೆ: ಕಾಂಗ್ರೆಸ್‌ ಕುರಿತು ಜೆ.ಪಿ. ನಡ್ಡಾ ಟೀಕೆ

j-p-nadda-critisizes-freebie-politics-of-congress

ಚಿಕ್ಕಮಗಳೂರು: ಕೊರೊನಾ ಕಾಲದಲ್ಲಿ ವಿವಿಧ ದೇಶಗಳು ತಮ್ಮ ನಾಗರಿಕರನ್ನು ಖುಷಿಪಡಿಸಲು ಉಚಿತ ಯೋಜನೆಗಳನ್ನು ಘೋಷಣೆ ಮಾಡಿದವು, ಅದಕ್ಕಾಗಿ ಇಂದು ಸಂಕಷ್ಟದಲ್ಲಿವೆ. ಆದರೆ ಮೋದಿ ಸರ್ಕಾರ ದೇಶದ ಅಭಿವೃದ್ಧಿಯ ಕುರಿತು ಗಮನ ಹರಿಸಿದ್ದರಿಂದ ಅತ್ಯಂತ ಸದೃಢವಾಗಿದ್ದೇವೆ ಎಂದು ರಾಜ್ಯ ಕಾಂಗ್ರೆಸ್‌ ವಿರುದ್ಧ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ(J.P. Nadda) ಟೀಕೆ ಮಾಡಿದರು.

ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಪ್ರಬುದ್ಧರು, ವೃತ್ತಿಪರರು ಹಾಗೂ ಚಿಂತಕರ ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ವಕೀಲರು, ವೈದ್ಯರು, ಇಂಜಿನಿಯರ್, ಬಿಜೆಪಿ ಪ್ರಮುಖರು ಭಾಗಿಯಾಗಿದ್ದರು.

ನರೇಂದ್ರ ಮೋದಿ ಆಡಳಿತಕ್ಕೂ, ಬೇರೆ ಆಡಳಿತಕ್ಕೂ ವ್ಯತ್ಯಾಸವನ್ನು ನೋಡಬೇಕು. 9 ವರ್ಷದ ಹಿಂದೆ ನೀತಿಗಳ ಅಂಗವೈಕಲ್ಯವನ್ನು ದೇಶ ಹೊಂದಿತ್ತು, ದೇಶವು ಅತ್ಯಂತ ಭ್ರಷ್ಟ ದೇಶ ಎಂಬ ಹಣೆಪಟ್ಟಿ ಹೊತ್ತಿತ್ತು. ಇಂದು ಭಾರತವು ಅತ್ಯಂತ ದೃಢವಾದ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳಬಹುದು ಎಂಬುದನ್ನು ತೋರಿಸಿದೆ, ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದೆ.

ಸತ್ಯದ ಅನೇಕ ಅಂಶಗಳು ಮುಚ್ಚಿಹೋಗುತ್ತವೆ. ವಿಶ್ವದ ಅನೇಕ ಆರ್ಥಿಕತೆಗಳು ಕೋವಿಡ್‌ ನಂತರ ತರಗುಟ್ಟಿವೆ. ಉಕ್ರೇನ್‌-ರಷ್ಯಾ ಯುದ್ಧದ ನಂತರವಂತೂ ಸಾಗಣೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇನ್ನೂ ಅನೇಕ ಆರ್ಥಿಕತೆಗಳು ಚೇತರಿಸಿಕೊಳ್ಳಲಾಗಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅತ್ಯಂತ ಸದೃಢವಾಗಿ ಮುನ್ನಡೆದಿದೆ. ಭಾರತದ ಬೆಳವಣಿಗೆ ದರವು 7.4% ಇದ್ದರೆ ಅಮೆರಿಕ 2.4%, ಚೀನಾ ೩.೩% ಇದೆ. ಅಭಿವೃದ್ಧಿ ಹೊಂದಿದ ದೇಶದ ಆರ್ಥಿಕತೆಗಳು 2.5% ಇದ್ದರೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಆರ್ಥಿಕತೆ 3.4% ಇದೆ. ಇಡೀ ವಿಶ್ವದ ಅಭಿವೃದ್ಧಿ ದರ ಎಷ್ಟು, ಭಾರತದ ಅಭಿವೃದ್ಧಿ ದರ ಎಷ್ಟು ಎನ್ನುವುದು ಇದರಿಂದಲೇ ತಿಳಿಯುತ್ತದೆ.

ಏಕೆಂದರೆ, ಕೊರೋನಾ ಸಮಯದಲ್ಲಿ ತಮ್ಮ ಜನರನ್ನು ಖುಷಿಪಡಿಸಲು ಉಚಿತ ಘೋಷಣೆ ಮಾಡಿದರು. ವ್ಯಕ್ತಿಗಳನ್ನು ಖುಷಿಪಡಿಸಲು ಒತ್ತು ನೀಡಿದರು. ಆದರೆ ಮೋದಿಯವರು ದೇಶದ ಆರ್ಥಿಕ ಸದೃಢತೆಯನ್ನು ಮುಂದಾಗಿಸಿಕೊಂಡರು. ಇದರ ಕಾರಣಕ್ಕೆ 20 ಸಾವಿರ ಕೋಟಿ ರೂ. ಎಂಎಸ್‌ಎಂಇ ಕ್ಷೇತ್ರಕ್ಕೆ, ಕೃಷಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ರೂ. ಪ್ಯಾಕೇಜ್‌ ನೀಡಿದರು. ಯಾರು ಕೂಲಿ ಕಾರ್ಮಿಕರಾಗಿದ್ದರು ಅಂಥವರಿಗೆ ಉಚಿತ ಆಹಾರ ವಿತರಿಸಿದರು. ಇದರ ಪರಿಣಾಮ ಎಂದರೆ, ಅಂತಾರಾಷ್ಟ್ರೀಯ ಹಣಕಾಸು ನಿಧಿಯು ತಿಳಿಸುವಂತೆ ಅತ್ಯಂತ ಕಡುಬಡತನವು 1%ಕ್ಕಿಂತಲೂ ಕಡಿಮೆಯಾಗಿದೆ. ಭಾರತದಲ್ಲಿ ಹಸಿವಿನ ಕಾರಣಕ್ಕೆ ಯಾರೂ ಸಾಯುವುದಿಲ್ಲ, ಏಕೆಂದರೆ ಅವರ ಮನೆಯಲ್ಲಿ ಧವಸ ಧಾನ್ಯಗಳಿವೆ.

ದೇಶಿ ಹೂಡಿಕೆ ಮೇಲೆ ಪ್ರಧಾನಿ ಗಮನ ನೀಡಿದರು, ಬೇರೆ ಬೇರೆ ದೇಶಗಳೊಂದಿಗೆ ಸಹಕಾರಿ ಹೂಡಿಕೆಗೆ ಉತ್ತೇಜನ ನೀಡಿದರು. 19-20 ಲಕ್ಷ ಕೋಟಿ ರೂ., ಪ್ರತಿ ತ್ರೈಮಾಸಿಕದಲ್ಲಿ ಹೂಡಿಕೆ ಆಗಿದೆ. ಯೋಜನಾಬದ್ಧವಾಗಿ ಹೂಡಿಕೆ ಮಾಡಲಾಯಿತು. ಈ ಅವಧಿಯಲ್ಲಿ ಹೈವೇ, ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ ಅಭಿವೃದ್ಧಿ, ರೈಲ್ವೆ ನಿಲ್ದಾಣ ಅಭಿವೃದ್ಧಿ, ರೈಲ್ವೆ ವಿದ್ಯುದೀಕರಣ ನಿಲ್ಲಲಿಲ್ಲ. ಇಂತಹ ದೂರಗಾಮಿ ಆಲೋಚನೆಗಳ ಕಾರಣಕ್ಕೆ ಭಾರತ ಉತ್ತಮ ಸ್ಥಿತಿಯಲ್ಲಿದೆ. 2014ರಲ್ಲಿ 92% ಮೊಬೈಲ್‌ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ 97% ಮೊಬೈಲ್‌ಗಳು ಭಾರತದಲ್ಲೇ ನಿರ್ಮಾಣವಾಗುತ್ತಿವೆ. ಈಗ ಹೊಸ ಆಪಲ್‌ ಫೋನ್‌ಗಳಲ್ಲಿ ಮೇಡ್‌ ಇನ್‌ ಇಂಡಿಯಾ ಎಂದು ಬರೆದಿರುತ್ತವೆ. ನಾವು ಸಂಪೂರ್ಣ ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುವುದಿಲ್ಲ. ಆದರೆ ನಾವು ಸರಿಯಾದ ದಿಕ್ಕಿನಲ್ಲಿ ಸಾಗಿದ್ದೇವೆ. ಅದರಲ್ಲಿ ನಾವು ಪ್ರಾಮಾಣಿಕರಾಗಿದ್ದೇವೆ ಎಂದರು.

ಇದನ್ನೂ ಓದಿ: ವಿಸ್ತಾರ TOP 10 NEWS : ರೂಪಾ- ರೋಹಿಣಿ ಗಲಾಟೆಗೆ ಸಿಎಂ ಗರಂ, ಸಂತರ ಜತೆ ಜೆ.ಪಿ ನಡ್ಡಾ ಮಾತುಕತೆ ಮತ್ತಿತರ ದಿನದ ಪ್ರಮುಖ ಸುದ್ದಿಗಳಿವು

ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ರಾಜಕಾರಣ ಇರುವುದು ಸಮಾಜ ಕಟ್ಟುವುದಕ್ಕೆ, ಸಮಾಜ ಕೆಡಿಸುವುದಕ್ಕೆ ಅಲ್ಲ. ನಾನು ಸೌಹಾರ್ದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಚಿಕ್ಕಮಗಳೂರಿನ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇವೆ. ನಾನು ಮಾಡಿರುವ ಕೆಲಸ ನಿಮಗೆ ಖುಷಿ ತಂದಿದೆ ಎಂದು ಅಂದುಕೊಳ್ಳುತ್ತೇನೆ. ಚಿಕ್ಕಮಗಳೂರಿನಲ್ಲಿ ಬಿಜೆಪಿ ಬರುವುದಕ್ಕೆ ಕಾರಣವಾಗಿದ್ದೀರಿ. ನಿಮ್ಮ ಪ್ರೀತಿ, ಆರ್ಶೀವಾದ ನನ್ನ ಮೇಲೆ ಇರಲಿ. ಒಳ್ಳೆಯ ಕೆಲಸಕ್ಕೆ ಮಾರ್ಕ್ಸ್ ಕೊಡ್ತೀರಾ ಅಂದುಕೊಂಡಿದ್ದೇನೆ ಎಂದರು.

ಕಾಂಗ್ರೆಸ್ ಸೇರಿದ ತಮ್ಮಯ್ಯಾಗೆ ಸಿ.ಟಿ.ರವಿ ವೇದಿಕೆಯಲ್ಲೇ ತಿರುಗೇಟು ನೀಡಿದರು. ರಾಣಿ ಚೆನ್ನಮ್ಮಳಿಗೆ ಮಲ್ಲಪ್ಪಶೆಟ್ಟಿ ಮೋಸ ಮಾಡಿದಂತೆ, ರಾಜಕೀಯದಲ್ಲಿ ಮೋಸ ಮಾಡಬೇಕು ಎಂಬ ಜನ ಇರುತ್ತಾರೆ. ಎಲ್ಲವನ್ನೂ ಅನುಭವಿಸಿ ಉಂಡ ಮನೆಗೆ ದ್ರೋಹ ಬಗೆಯುವವರು ಇರುತ್ತಾರೆ. ಎಲ್ಲಿವರೆಗೆ ಜನರ ಪ್ರೀತಿಯ ರಕ್ಷಾಕವಚ ರಕ್ಷಾಕವಚ ಇರುತ್ತದೆಯೋ ಅಲ್ಲಿವರೆಗೆ ಯಾರೂ ಏನೂ ಮಾಡಲಾಗದು ಎಂದರು.

Exit mobile version