Site icon Vistara News

Jagadish Shetter: ಜಗದೀಶ್‌ ಶೆಟ್ಟರ್ ಬಿಜೆಪಿ ಸೇರ್ಪಡೆ; ನವ ದೆಹಲಿಯಲ್ಲಿ ಅಧಿಕೃತ ಘೋಷಣೆ

Jagadish Shettar Joins BJP

ನವ ದೆಹಲಿ: ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ (Jagadish Shetter) ಘರ್‌ ವಾಪ್ಸಿ (Ghar Wapsi) ಆಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಭೇಟಿಯಾಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಪಕ್ಷ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಸಿಎಂ, ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್.‌ ಯಡಿಯೂರಪ್ಪ ಅವರು ಪಕ್ಷದ ಶಾಲನ್ನು ಹೊದಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.

ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಸಾಕಷ್ಟು ಕಾರ್ಯತಂತ್ರವನ್ನು ಹೆಣೆಯುತ್ತಿರುವ ಬಿಜೆಪಿ ಈಗ ಪಕ್ಷ ತೊರೆದ ನಾಯಕರತ್ತ ಕಣ್ಣಿಟ್ಟಿದೆ. ಈ ಸಂಬಂಧ ದೆಹಲಿಗೆ ಭೇಟಿ ನೀಡಿರುವ ಜಗದೀಶ್‌ ಶೆಟ್ಟರ್‌‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಅದಾದ ಕೂಡಲೇ ನವ ದೆಹಲಿಯ ಬಿಜೆಪಿ ಕಚೇರಿಗೆ ಆಗಮಿಸಿ ಅಧಿಕೃತವಾಗಿ ಪಕ್ಷ ಸೇರ್ಪಡೆಗೊಂಡರು.

Jagadish Shettar Joins BJP

ಶೆಟ್ಟರ್‌ಗೆ ಗಾಳ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದ ಜಗದೀಶ್‌ ಶೆಟ್ಟರ್‌, ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಮಹೇಶ್‌ ಟೆಂಗಿನಕಾಯಿ ವಿರುದ್ಧ ಸೋಲು ಕಂಡಿದ್ದರು. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಲಿಂಗಾಯತ ಮತಗಳನ್ನು ತರುವಲ್ಲಿ ಶೆಟ್ಟರ್‌ ಯಶಸ್ವಿಯಾಗಿದ್ದರು. ಈಗ ಲೋಕಸಭೆ ಚುನಾವಣೆ ಇರುವುದರಿಂದ ಅವರನ್ನು ಪಕ್ಷಕ್ಕೆ ಮರಳಿ ತಂದರೆ ಬಿಜೆಪಿ ಲಿಂಗಾಯತ ಮುಖಂಡರನ್ನು ಕಡೆಗಣಿಸಿಲ್ಲ ಎಂಬ ಸಂದೇಶವನ್ನು ನೀಡದಂತೆ ಆಗುತ್ತದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: BJP Karnataka: ಘರ್‌ ವಾಪ್ಸಿಗೆ ಬಿಜೆಪಿ ತಯಾರಿ‌, ಮಾಜಿ ಸಿಎಂಗೆ ಗಾಳ; ಸುಳಿವು ನೀಡಿದ ಸುನಿಲ್‌ ಕುಮಾರ್

ಶೆಟ್ಟರ್‌ ಲೋಕಸಭೆಗಾ? ರಾಜ್ಯಸಭೆಗಾ?

ಈಗಾಗಲೇ ಕಾಂಗ್ರೆಸ್‌ ಸೇರಿ 9 ತಿಂಗಳು ಕಳೆದಿದ್ದರೂ ಅಲ್ಲಿ ಜಗದೀಶ್‌ ಶೆಟ್ಟರ್‌ಗೆ ಸೂಕ್ತ ಸ್ಥಾನಮಾನವನ್ನು ನೀಡಲಾಗಿಲ್ಲ. ಅಲ್ಲಿ ಅವರನ್ನು ಕಾಂಗ್ರೆಸ್‌ ನಾಯಕರು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಈ ಎಲ್ಲ ಬೇಸರಗಳಿಂದ ಶೆಟ್ಟರ್‌ ಮರಳಿ ಗೂಡಿಗೆ ಸೇರಿದ್ದಾರೆ. ಹೀಗಾಗಿ ಅಮಿತ್‌ ಶಾ ಜತೆಗೆ ಮಾತುಕತೆ ಮಾಡಿದ್ದು, ಉನ್ನತ ಸ್ಥಾನಮಾನ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಅಲ್ಲದೆ, ರಾಜ್ಯಸಭೆಗೆ ಆಯ್ಕೆ ಅಥವಾ ಲೋಕಸಭಾ ಚುನಾವಣೆಗೆ ಟಿಕೆಟ್‌ ನೀಡುವ ಆಫರ್‌ ನೀಡಲಾಗಿದೆ ಎನ್ನಲಾಗಿದೆ. ಹೀಗಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಈ ಇಬ್ಬರು ನಾಯಕರ ಘರ್‌ ವಾಪ್ಸಿ ಪಕ್ಕಾನಾ?

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಳಿಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಘರ್ ವಾಪ್ಸಿ ಪಕ್ಕಾ ಆಗುತ್ತಿವೆಯೇ ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ. ಇತ್ತ ರೆಡ್ಡಿ ಜತೆ ಮಾತನಾಡುವುದಕ್ಕೆ ಬಳ್ಳಾರಿ ಭಾಗದ ನಾಯಕರು ಉತ್ಸಾಹ ತೋರಿದ್ದಾರೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸದೃಢಗೊಳಿಸಲು ಬಿಜೆಪಿ ಪ್ಲಾನ್ ಮಾಡಿದೆ. ಹೀಗಾಗಿ ರೆಡ್ಡಿ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಲು ಆಫರ್‌ ನೀಡಲಾಗಿದೆ. ಆದರೆ, ರೆಡ್ಡಿ ಕಡೆಯಿಂದ ಕಂಡಿಷನ್ ಇದೆ. ಹೀಗಾಗಿ ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.

Exit mobile version