ಹುಬ್ಬಳ್ಳಿ: ರಾಜ್ಯದಲ್ಲಿ ಹಿಂದೂ ವಿರೋಧಿ ಘಟನೆಗಳಿಗೆ ಕಾಂಗ್ರೆಸ್‌ನ ಪರಮೋಚ್ಚ ನಾಯಕ ರಾಹುಲ್ ಗಾಂಧಿಯೇ (Rahul Gandhi) ಕಾರಣ. ಬೆಂಗಳೂರಲ್ಲಿ ಜೈಶ್ರೀರಾಮ್ ಘೋಷಣೆ (Jai Shree Ram slogan) ಕೂಗಿದ್ದಕ್ಕೆ ಹಲ್ಲೆ ಮಾಡಲಾದ ಪ್ರಕರಣವೂ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಆಗಿರುವುದು ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಲ್ಹಾದ್ ಜೋಶಿ, ಜೈ ಶ್ರೀರಾಮ್ ಘೋಷಣೆ ಕೂಗಿದವರ ಮೇಲಿನ ಹಲ್ಲೆ ಪ್ರಕರಣವನ್ನು ಕಟುವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ಇದೆಲ್ಲ ಆಗುತ್ತಿದೆ ಎಂದು ಹರಿಹಾಯ್ದಿದ್ದಾರೆ.
ರಾಹುಲ್ ಮುಸ್ಲಿಂ ಲೀಗ್ ಧ್ವಜ ಹಿಡಿದಿದ್ದೇ ಕಾರಣ
ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ವಯನಾಡಲ್ಲಿ ತಮ್ಮ ಪಕ್ಷದ ಧ್ವಜ ಬಿಟ್ಟು, ಮುಸ್ಲಿಂ ಲೀಗ್ ಧ್ವಜ ಹಿಡಿದು ನಾಮಪತ್ರ ಸಲ್ಲಿಸಿ ಬಂದಿದ್ದಾರೆ. ಕಾಂಗ್ರೆಸ್‌ನವರ ಇಂಥ ನಡೆ ದೇಶ ವಿದ್ರೋಹಿ ಕೃತ್ಯಗಳಿಗೆ ಕುಮ್ಮಕ್ಕು ಕೊಟ್ಟಿದೆ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದರು.
ಈ ಹಿಂದೆ ಹಿಂದೂಗಳ ಹತ್ಯೆ, ಹಿಂದೂ ಮಹಿಳೆಯರ ಅತ್ಯಾಚಾರಕ್ಕೆ ಮುಸ್ಲಿಂ ಲೀಗ್ ಕರೆ ಕೊಟ್ಟಿತ್ತು. ಇಂಥ ಒಂದು ವಿದ್ರೋಹಿ ಕೃತ್ಯಗಳ ಪರ ಇರುವ ಮುಸ್ಲಿಂ ಲೀಗ್ ಧ್ವಜ ಹಿಡಿದು ಚುನಾವಣೆಗೆ ಇಳಿದಿದ್ದಾರೆ ರಾಹುಲ್ ಗಾಂಧಿ ಎಂದು ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಿಂದೂ ವಿರೋಧಿ ಪಕ್ಷ
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಹಲ್ಲೆ, ಈಗ ಜೈ ಶ್ರೀರಾಮ್ ಘೋಷಣೆ ಕೂಗಿದವರ ಮೇಲೆ ಹಲ್ಲೆ… ಇದೆಲ್ಲದ್ದಕ್ಕೂ ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಮುಸ್ಲಿಂ ಓಲೈಕೆಯಲ್ಲಿ ತೊಡಗಿರುವುದೇ ಕಾರಣ. ಈ ಘಟನೆಗಳು ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವುದನ್ನು ಸ್ಪಷ್ಟಪಡಿಸುತ್ತಿವೆ ಎಂದು ಸಚಿವ ಜೋಶಿ ಹೇಳಿದರು.
ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಉಗ್ರವಾದಿ ಕೃತ್ಯ, ಭಯೋತ್ಪಾದನೆಗೆ ಪ್ರೋತ್ಸಾಹ ಸಿಗುತ್ತಿದೆ. ಜನ ಜಾಗೃತರಾಗಬೇಕು ಎಂದು ಸಚಿವ ಪ್ರಲ್ಹಾದ್ ಜೋಶಿ ಜೋಶಿ ಕರೆ ನೀಡಿದರು.
ಕಾರು ಅಡ್ಡಗಟ್ಟಿ ಮುಸ್ಲಿಂ ಯುವಕರ ಪುಂಡಾಟ!
ಶ್ರೀ ರಾಮನವಮಿ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಹಿಂದು ಯುವಕರು ತೆರಳುತ್ತಿದ್ದಾಗ, ಜೈ ಶ್ರೀರಾಮ್ ಎಂದು ಕೂಗಿದ್ದಾರೆ. ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ಮುಸ್ಲಿಂ ಯುವಕರು, “ಜೈ ಶ್ರೀರಾಮ್ ಹೇಳಬಾರದು, ಅಲ್ಲಾಹ್ ಅಂತ ಹೇಳಬೇಕು” ಎಂದು ಹಿಂದು ಯುವಕರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಬುಧವಾರವೇ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬೈಕ್‌ನಲ್ಲಿ ಬಂದ ಯುವಕರು, ಜೈ ಶ್ರೀ ರಾಮ್ ಇಲ್ಲಾ… ಓನ್ಲೀ ಅಲ್ಲಾ ಹು ಅಕ್ಬರ್ ಎಂದು ಹೇಳಿದ್ದಾರೆ. ಇದಲ್ಲದೆ ಕಾರಿನಲ್ಲಿ ಇದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇದೇ ವೇಳೆ ನಾವು ನಿಮ್ಮ ಹಬ್ಬದಲ್ಲಿ ಹೀಗೆ ಮಾಡುತ್ತೇವಾ ಎಂದು ಹಿಂದು ಯುವಕರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಗಲಾಟೆ ನಡೆದಿದೆ.
ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲು
ಹಿಂದು ಯುವಕರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಡಿ. ಪವನ್ ಕುಮಾರ್ ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ನೇಹಿತರಾದ ವಿನಾಯಕ ಮತ್ತು ರಾಹುಲ್ ಜತೆ ಚಿಕ್ಕಬೆಟ್ಟಹಳ್ಳಿ ರಸ್ತೆಯಲ್ಲಿ ಮಧ್ಯಾಹ್ನ ಕಾರಿನಲ್ಲಿ ಹೋಗುತ್ತಿದ್ದೆ. ಕಾರಿನ ಮುಂದೆ ಶ್ರೀರಾಮನ ಧ್ವಜ ಕಟ್ಟಿದ್ದನ್ನು ನೋಡಿದ ಇಬ್ಬರು ಮುಸ್ಲಿಂ ಯುವಕರು, ನಮ್ಮ ಬಳಿ ಬಂದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಅಲ್ಲಾ ಹು ಅಕ್ಬರ್” ಎಂದು ಕೂಗಬೇಕು ಎಂದು ಒತ್ತಾಯಿಸಿದರು. ನಾವು ಹಾಗೆ ಕೂಗುವುದಿಲ್ಲವೆಂದು ಹೇಳಿದಾಗ, ನಮ್ಮ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದು, ರಾಹುಲ್ ತಲೆಗೆ ಪೆಟ್ಟು ಬಿದ್ದು ಮೂಗಿನಿಂದ ರಕ್ತಸ್ರಾವವಾಗಿದೆ. ಹೇಗೋ ನಾವು ಅಲ್ಲಿಂದ ತಪ್ಪಿಸಿಕೊಂಡು ಬಂದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ನಾಲ್ವರ ಬಂಧನ
ಹಲ್ಲೆ ಪ್ರಕರಣಕ್ಕೆ (Assault Case) ಸಂಬಂಧಿಸಿ ನಾಲ್ಕು ಮಂದಿ ಆರೋಪಿಗಳನ್ನು (Culprits) ಪೊಲೀಸರು ಬಂಧಿಸಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಿಂದು ಯುವಕರ (Hindu youth) ಮೇಲೆ ಬುಧವಾರ ಸಂಜೆ ಹಲ್ಲೆ ಮಾಡಿದ್ದವರ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಎ1 ಫರ್ಮಾನ್, ಎ2 ಸಮೀರ್ ಹಾಗೂ ಮತ್ತಿಬ್ಬರನ್ನು ಬಂಧಿಸಲಾಗಿದೆ. ಒಟ್ಟು ನಾಲ್ವರು ಆರೋಪಿಗಳ ಪೈಕಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ಸದ್ಯ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.
“ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ಕೂಡ ಮಾಡಲಾಗಿದೆ. ಘಟನೆಯಲ್ಲಿ ನಾಲ್ವರು ಭಾಗಿಯಾಗಿರೋದು ಗೊತ್ತಾಗಿದೆ. ನಾಲ್ವರಲ್ಲಿ ಇಬ್ಬರು ಅಪ್ರಾಪ್ತರಿದ್ದಾರೆ. ಪ್ರಮುಖ ಆರೋಪಿ ಫರ್ಮಾನ್. ತನಿಖೆ ಮುಂದುವರೆದಿದೆ. ಮತ್ತೆ ಯಾರಾದರೂ ಭಾಗಿಯಾಗಿದ್ದಾರಾ ಎಂದು ಪರಿಶೀಲಿಸಲಾಗುತ್ತಿದೆ” ಎಂದು ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿಪ್ರಸಾದ್ ಹೇಳಿಕೆ ನೀಡಿದ್ದಾರೆ.
“ಆರೋಪಿಗಳು ಬೈಕ್‌ನಲ್ಲಿ ಹೋಗುತ್ತಿರಬೇಕಾದರೆ ಕಾರನ್ನ ಗಮನಿಸಿದ್ದಾರೆ. ಕಾರಲ್ಲಿ ಬಾವುಟ ಹಿಡಿದು ಹೋಗ್ತಿರೋದು ನೋಡಿ ವಾಪಸ್ಸು ಬಂದಿದ್ದಾರೆ. ಕಾರನ್ನು ಅಡ್ಡ ಹಾಕಿ ಗಲಾಟೆ ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.
ಗಾಂಜಾ ನಶೆಯಲ್ಲಿ ಹಲ್ಲೆ ಮಾಡಿದ್ರಾ ಯುವಕರು?
ಗಾಂಜಾ ನಶೆಯಲ್ಲಿ ಕಾರು ಅಡ್ಡ ಹಾಕಿ ಯುವಕರು ಗಲಾಟೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಯುವಕರು ಗಾಂಜಾ ಸೇವನೆ ಮಾಡಿದ್ದರೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದಕ್ಕಾಗಿ ಆರೋಪಿಗಳಿಗೆ ಮೆಡಿಕಲ್ ಟೆಸ್ಟ್ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ.