Site icon Vistara News

BS Yediyurappa: ರೆಡ್ಡಿ, ಆಯನೂರು ಸೇರಿ ಪಕ್ಷ ಬಿಟ್ಟವರು ವಾಪಸ್‌ ಬರ್ತಾರೆ: ಬಿ.ಎಸ್.‌ ಯಡಿಯೂರಪ್ಪ

BS Yediyurappa

ಬೆಂಗಳೂರು: ಸಾಕಷ್ಟು ಜನ ಬಿಜೆಪಿಗೆ (BJP Karnataka) ಮತ್ತೆ ವಾಪಸ್‌ ಬರುತ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಯಾರು ಪಕ್ಷವನ್ನು ಬಿಟ್ಟು ಹೋಗಿದ್ದಾರೋ ಅವರು ಮತ್ತೆ ಪಕ್ಷ ಸೇರ್ಪಡೆಯಾಗುತ್ತಾರೆ. ಬಿಜೆಪಿಗೆ ಹೊಸಬರು ಕೂಡ ಬರುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಹೇಳಿದರು.

ಮತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪಕ್ಷ ತೊರೆದವರನ್ನು ಬರಳಿ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Gali Janardhana Reddy), ವಿಧಾನ ಪರಿಷತ್‌ ಮಾಜಿ ಸದಸ್ಯ ಆಯನೂರು ಮಂಜುನಾಥ್ (Ayanur Manjunath) ಬಿಜೆಪಿಗೆ ವಾಪಸ್‌ ಆಗುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.

ಮೈತ್ರಿ ಸೀಟು ಹಂಚಿಕೆ ಹೈಕಮಾಂಡ್‌ಗೆ ಬಿಟ್ಟಿದ್ದು

ಮೈತ್ರಿ ಸೀಟು ಹಂಚಿಕೆ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿ.ಎಸ್‌. ಯಡಿಯೂರಪ್ಪ, ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಲೋಕಸಭಾ ಚುನಾವಣೆ ತಯಾರಿ ಸಹ ಭರದಿಂದ ಸಾಗುತ್ತಿದೆ. ಎಲ್ಲರೂ ಈಗಾಗಲೇ ಪ್ರವಾಸ ಮಾಡುತ್ತಾ ಇದ್ದಾರೆ. ನಾನು ಕೂಡ ಪ್ರವಾಸ ಮಾಡುತ್ತೇನೆ. ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷ ಆದ ಮೇಲೆ ಪಕ್ಷದಲ್ಲಿ ಬಹಳ ಉತ್ಸಾಹದ ವಾತಾವರಣ ಬಂದಿದೆ. ಪಕ್ಷ ಬಿಟ್ಟು ಹೋದವರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ಪಕ್ಷಕ್ಕೆ ಮತ್ತಷ್ಟು ಬಲ ನೀಡಲಿದ್ದು, ಬಿಜೆಪಿಗೆ ಲಾಭ ಆಗುತ್ತದೆ ಎಂದು ಹೇಳಿದರು.

ಮೋದಿಗೆ ಒಳ್ಳೆಯದಾಗಲಿ

ಮತ್ತೂರಿನಲ್ಲಿ ಯಾಗದಲ್ಲಿ ಭಾಗವಹಿಸಿ, ಎಲ್ಲರ ಆಶೀರ್ವಾದ ಪಡೆಯುವ ಸೌಭಾಗ್ಯ ದೊರೆತಿದೆ. ಇಲ್ಲಿ ನಿರಂತರ ಯಜ್ಞ, ಯಾಗ ನಡೆಯುತ್ತಿರುವುದು ಒಳ್ಳೆಯದು. ನಾಡಿಗೆ, ದೇಶಕ್ಕೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಯಾಗ ನಡೆಯುತ್ತಿದೆ. ಇಂತಹ ಸಂದರ್ಭಗಳಲ್ಲಿ ಭಾಗಿಯಾಗಿರುವುದು ನನ್ನ ಸೌಭಾಗ್ಯ. ಹಿರಿಯರಿಗೆ, ಬಂಧುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನರೇಂದ್ರ ಮೋದಿ ಅವರು ಇವರೆಲ್ಲರ ಆಶೀರ್ವಾದದಿಂದ ಮತ್ತೊಮ್ಮೆ ದೊಡ್ಡ ಅಂತರದಲ್ಲಿ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಅದಕ್ಕೆ ಎಲ್ಲರ ಆಶೀರ್ವಾದ ಬೇಕು, ಅದಕ್ಕಾಗಿ ಎಲ್ಲರೂ ಆಶೀರ್ವಾದ ಮಾಡಿದ್ದಾರೆ. ದೇಶದ ಒಳಿತಿಗಾಗಿ ಪ್ರಧಾನಿ ಮೋದಿಯವರಿಗೆ ಆರೋಗ್ಯ ಸಿಕ್ಕಿ ಒಳ್ಳೆಯ ಕೆಲಸ ಮಾಡುವಂತಾಗಲಿ ಎಂದು ಹೇಳಿದರು.

ಇದನ್ನೂ ಓದಿ: Narendra Modi: ಮೋದಿ ಮತ್ತೊಮ್ಮೆ ಪ್ರಧಾನಿ; ಅತಿರುದ್ರ ಮಹಾಯಾಗದಲ್ಲಿ ಯಡಿಯೂರಪ್ಪ ಭಾಗಿ

ಮೋದಿಯವರ ನೇತೃತ್ವದಲ್ಲಿ ಎಲ್ಲರೂ ಒಗ್ಗೂಡುತ್ತಿದ್ದಾರೆ

ಐಎನ್‌ಡಿಐಎ (I.N.D.I.A) ಒಕ್ಕೂಟದಲ್ಲಿ ಬಿರುಕು ಮೂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ಎಸ್.‌ ಯಡಿಯೂರಪ್ಪ, ಎಲ್ಲ ಪಕ್ಷಗಳು ಛಿದ್ರ, ಛಿದ್ರವಾಗುತ್ತಿವೆ. ಮೋದಿಯವರ ನೇತೃತ್ವದಲ್ಲಿ ಎಲ್ಲರೂ ಒಗ್ಗೂಡುತ್ತಿದ್ದಾರೆ. ಇದನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಒಟ್ಟಾಗಿ ಮೋದಿ ವಿರೋಧಿಸಲು ಹೊರಟರು ಅದು ಈಗ ವಿಫಲವಾಗಿದೆ. ನಿಶ್ಚಿತವಾಗಿ ಹೇಳಬೇಕೆಂದರೆ ನರೇಂದ್ರ ಮೋದಿಯವರಿಗೆ ವಿರೋಧಿಗಳೇ ಇರಬಾರದು. ಮೋದಿಯಂತಹ ಒಳ್ಳೆಯ ಪ್ರಧಾನಿ ದೇಶದ ಪ್ರಗತಿಗೆ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

Exit mobile version