Site icon Vistara News

Janatha Darshan : ಸಿಎಂ ತಲೆಗೆ ಕೈ ಇಟ್ಟು ಆಶೀರ್ವದಿಸಿದ ಅಜ್ಜಿ; ಹೆಗಲುಮುಟ್ಟಿ ಸಿಎಂ ಸಾಂತ್ವನ

CM Janatha darshana

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಎರಡನೇ ಸಿಎಂ ಅವಧಿಯ ಮೊದಲ ಜನತಾ ದರ್ಶನ (Janatha Darshan) ಸೋಮವಾರ ಆರಂಭಗೊಂಡಿದ್ದು, ಆಶೀರ್ವಾದ, ಸಾಂತ್ವನ, ಭರವಸೆಗಳ ನಡುವೆ ಹೊಸ ಆಶಾವಾದವನ್ನು ಸೃಷ್ಟಿಸಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿಯಾದ (CM Home office) ಕೃಷ್ಣಾದಲ್ಲಿ ಆರಂಭಗೊಂಡ ಈ ಜನತಾ ದರ್ಶನದಲ್ಲಿ ಸಾವಿರಾರು ಮಂದಿ ತಮ್ಮ ಅಹವಾಲು ಹಿಡಿದುಕೊಂಡು ಸಿಎಂ ಅವರನ್ನು ಭೇಟಿಯಾಗಿಯಾಗಿದ್ದಾರೆ. ರಾಜ್ಯದ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರು ಸ್ಥಳದಲ್ಲೇ ಹಾಜರಿದ್ದು ಕುಂದುಕೊರತೆ ಅಹವಾಲುಗಳ ಮೇಲೆ ಕ್ರಮವಹಿಸಲು ಸೌಲಭ್ಯ ಕಲ್ಪಿಸಲಾಗಿದೆ.

ಹಿರಿಯ ಮಹಿಳೆಯ ಗಲ್ಲ ಮುಟ್ಟಿ ಸಾಂತ್ವನ ಹೇಳಿದ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಅವರು ಅತ್ಯಂತ ಜತನದಿಂದ ಜನರ ಅಹವಾಲುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ. ಈ ರೀತಿ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ಹಂತದಲ್ಲಿ ಹಿರಿಯ ಮಹಿಳೆಯೊಬ್ಬರು ಸಿದ್ದರಾಮಯ್ಯ ಅವರ ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದರು.

ಹೆಗಲು ತಟ್ಟಿ ಸಾಂತ್ವನ ಹೇಳಿದ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರು ಎಲ್ಲ ಅಹವಾಲುಗಳು, ಅವರು ನೀಡುತ್ತಿರುವ ಅರ್ಜಿಗಳನ್ನು ಅತ್ಯಂತ ಕಾಳಜಿಯಿಂದ ಗಮನಿಸುತ್ತಿದ್ದು, ಹೆಚ್ಚಿನವುಗಳಿಗೆ ಸ್ಥಳದಲ್ಲೇ ಪರಿಹಾರ ನೀಡುತ್ತಿದ್ದರೆ, ಕೆಲವು ಸಂಗತಿಗಳನ್ನು ಅಧಿಕಾರಿಗಳಿಗೆ ತಿಳಿಸಿ ತಕ್ಷಣ ಮುಂದಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸುತ್ತಿದ್ದಾರೆ.

ಅದರಲ್ಲೂ ಕಷ್ಟ ಹೇಳಿಕೊಂಡು ಬಂದವರ ಜತೆ ಉತ್ತಮ ರೀತಿಯ ಸಂವಹನ ನಡೆಸಿ, ಅವರಿಗೆ ಬೆನ್ನು ತಟ್ಟಿ ಭರವಸೆ ನೀಡುವ, ತಲೆಗೆ ಕೈ ಇಟ್ಟು ಅವರ ನೋವಿನ ಭಾರ ಕಡಿಮೆ ಮಾಡುವ ಪ್ರಯತ್ನವನ್ನು ಸಿಎಂ ನಡೆಸುತ್ತಿದ್ದಾರೆ. ಕೆಲವರ ಭುಜ ನೇವರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮಾರ್ಗಗಳನ್ನು ತೋರಿಸುತ್ತಿದ್ದಾರೆ.

96 ವರ್ಷದ ಹಿರಿಯರ ಜೀವನೋತ್ಸಾಹಕ್ಕೆ ಸಿಎಂ ಫುಲ್‌ ಖುಷ್‌

ಮಂಡ್ಯ ಜಿಲ್ಲೆಯ 96 ವರ್ಷದ ಪರಂಧಾಮಯ್ಯ ಅವರು ನಾಗಮಂಗಲದಿಂದ ತಾಳವಾಡಿಯ ಮಾರ್ಗ ಮಧ್ಯೆಯ ಜಮೀನು ಹೊಂದಿದ್ದು, ವ್ಯವಸಾಯ ಮಾಡುವ ಜಮೀನನ್ನು ಬೈಪಾಸಿಗೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ದೂರು ನೀಡಿದರು. ಕೂಡಲೇ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಆನ್ ಲೈನ್ ಮೂಲಕ ಮಾತನಾಡಿದ ಮುಖ್ಯಮಂತ್ರಿಗಳು ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು. 96 ವರ್ಷದ ಪರಂದಾಮಯ್ಯ ಜೀವನೋತ್ಸಾಹಕ್ಕೆ ಮುಖ್ಯಮಂತ್ರಿಗಳು ಮೆಚ್ಚುಗೆ ಸೂಚಿಸಿ ಇನ್ನಷ್ಟು ಕಾಲ ಹೀಗೇ ಆರೋಗ್ಯವಾಗಿ ಗಟ್ಟಿಯಾಗಿರಿ ಎಂದು ಶುಭ ಕೋರಿದರು.

ರಾಜಮ್ಮ ಅವರು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿರುವುದು.

ವೃದ್ಧೆ ಜಮೀನು ಒತ್ತುವರಿ ಬಿಡಿಸಿಕೊಡಿ: ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಮನಗರ ಜಿಲ್ಲೆಯ ರಾಜಮ್ಮ ಎಂಬ ವೃದ್ಧೆ ತಮ್ಮ ಜಮೀನನ್ನು ಮೈದುನ ಒತ್ತುವರಿ ಮಾಡಿಕೊಂಡಿದ್ದು, ಬಾವಿಯನ್ನೂ ಮುಚ್ಚಿರುತ್ತಾರೆ. ತಮಗೆ ಗಂಡು ಮಕ್ಕಳಿಲ್ಲ; ಹೆಣ್ಣು ಮಕ್ಕಳು ಮದುವೆಯಾಗಿ, ಗಂಡನ ಮನೆಯಲ್ಲಿದ್ದಾರೆ. ಒಬ್ಬರೇ ಇರುವ ತನಗೆ ಜಮೀನು ಬಿಡಿಸಿಕೊಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.
ರಾಮನಗರ ಜಿಲ್ಲಾಧಿಕಾರಿಗಳಿಗೆ ಆನ್ ಲೈನ್ ಮೂಲಕ ಸಂಪರ್ಕಿಸಿದ ಸಿಎಂ ಸ್ಥಳ ಪರಿಶೀಲಿಸಿ, ರಾಜಮ್ಮ ಅವರ ಜಮೀನು ಬಿಡಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಇದನ್ನೂ ಓದಿ : Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

Exit mobile version