Site icon Vistara News

JDS Karnataka : ನಕಲಿ ಸ್ವಾಮಿ ಎಂದ ಡಿಕೆಶಿಗೆ ಜೆಡಿಎಸ್‌ ತಿರುಗೇಟು; ರಕ್ತ ಹೀರುವ ವ್ಯಕ್ತಿ ಎಂದು ಆಕ್ರೋಶ

HDKumaraswamy DK Shivakumar

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರನ್ನು ನಕಲಿ ಸ್ವಾಮಿ ಎಂದು ಕರೆದಿದ್ದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ವಿರುದ್ಧ ಜೆಡಿಎಸ್ ಪಕ್ಷ (JDS Karnataka) ತೀವ್ರ ಟೀಕಾಪ್ರಹಾರ ನಡೆಸಿದೆ. ಈ ವ್ಯಕ್ತಿ ರಾಜ್ಯದ ಉಪ ಮುಖ್ಯಮಂತ್ರಿ. ಅದೇ ಕನ್ನಡಿಗರ ಪಾಲಿನ ದೌರ್ಭಾಗ್ಯ ಎಂದು ಜೆಡಿಎಸ್ ಎಕ್ಸ್ ಜಾಲತಾಣದಲ್ಲಿ ಕಿಡಿಕಾರಿದೆ.

ಐಟಿ ದಾಳಿಯಲ್ಲಿ ಪತ್ತೆಯಾದ ಹಣ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ಗೆ ಸೇರಿದ್ದು, SST, YST ಕಲೆಕ್ಷನ್‌ ಎಂದು ಬಿಜೆಪಿ ಮತ್ತು ಕುಮಾರಸ್ವಾಮಿ ಅವರು ಸೋಮವಾರ ವಾಗ್ದಾಳಿ ನಡೆಸಿದ್ದರು. ಅದರ ಬೆನ್ನಿಗೇ ಡಿ.ಕೆ. ಶಿವಕುಮಾರ್‌ ಅವರು ನಕಲಿ ಸ್ವಾಮಿ, ಲೂಟಿ ರವಿ, ಹೀಗೆ ಎಲ್ಲ ಬಣ್ಣ ಬಯಲು ಮಾಡುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಬಾಣ ಬಿಟ್ಟಿದೆ ಜೆಡಿಎಸ್‌.

ಮೂರ್ಖ ಶಿಖಾಮಣಿ ಉಪಮುಖ್ಯಮಂತ್ರಿ!

ಅವರು ರಾಜ್ಯಕ್ಕೆ ಉಪ ಮುಖ್ಯಮಂತ್ರಿ. ಅವರನ್ನು ‘ಮೂರ್ಖ ಶಿಖಾಮಣಿ ‘ ಎನ್ನುವುದು ತರವಲ್ಲ. ಅಸಲಿಗೆ, ಹಾಗೆಂದು ಹೇಳಲು ನಮಗೂ ಇಷ್ಟವಿಲ್ಲ ಬಿಡಿ. ಲೂಟಿಯನ್ನೇ ನಿತ್ಯಕಾಯಕ, ದಂಧೆಯನ್ನೇ ದಿನವಹಿ ಧನಾರ್ಜನೆಗೆ ರಹದಾರಿ ಮಾಡಿಕೊಂಡಿರುವ, ಕಂಡ ಕಂಡವರ ಜಮೀನುಗಳಿಗೆ ಬೇಲಿ ಬಿಗಿದು ಅವರ ರಕ್ತ ಹಿರುತ್ತಿರುವ ವ್ಯಕ್ತಿ ರಾಜ್ಯಕ್ಕೆ ಉಪ ಮುಖ್ಯಮಂತ್ರಿ!! ಇದಲ್ಲವೇ ಕನ್ನಡಿಗರ ದೌರ್ಭಾಗ್ಯ ಎಂದು ಡಿ.ಕೆ. ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದೆ ಜೆಡಿಎಸ್.

ಅವರ ‘ಅಂತ್ಯವಿಲ್ಲದ ಹೈ ಕಮಾಂಡ್ ಕೃಪಾಪೋಷಿತ ಅಕ್ರಮ’ಗಳಿಗೆ ಕೊನೆ ಎಂಬುದಿಲ್ಲವೇ? ಎಂದು ಜನ ಕೇಳುತ್ತಿದ್ದಾರೆ. ಕೊನೆ ಇದೆ, ಇದ್ದೇ ಇರುತ್ತದೆ.. ಕಾಯಬೇಕಷ್ಟೇ. ವಾಕ್ಯ ಎಂದ ಮೇಲೆ ಪುಲ್ ಸ್ಟಾಪ್ ಇರಲೇಬೇಕು ಎಂದು ಜೆಡಿಎಸ್ ಮಾರ್ಮಿಕವಾಗಿ ಹೇಳಿದೆ.

ಕತ್ತಲಾಗುತ್ತಿದ್ದಂತೆಯೇ ಪರ್ಸಂಟೇಜ್‌ ಪಟಾಲಂ ಪ್ರತ್ಯಕ್ಷ

ಸೂರ್ಯ ಪಶ್ಚಿಮಕ್ಕೆ ವಾಲಿದೊಡನೆ ಕಂಡವರ ಪಕ್ಷಗಳವರ ಮನೆ ಬಾಗಿಲ ಮುಂದೆ ಪರ್ಸಂಟೇಜ್ ಪಟಾಲಂ ಪ್ರತ್ಯಕ್ಷ! ಇಂಥಾ ಕಲುಷಿತ ರಾಜಕಾರಣ ಶೋಭೆಯೇ? ನುಡಿದಂತೆ ನಡೆಯುತ್ತೇವೆ ಎಂದರೆ ಇದೇನಾ? ಜನರ ದುಡ್ಡು, ಇವರದ್ದು ಜಾತ್ರೆ. ಇದೇ ಇವತ್ತಿನ ಕರ್ನಾಟಕದ ಚಿತ್ರಣ. ರಾಜ್ಯದ ಜನರಿಗೆ ಇವರ ಭಂಡಾರವೆಲ್ಲ ಗೊತ್ತಾಗಿದೆ. ಆ ಭಂಡಾರ ಬಿಚ್ಚಿಕೊಂಡ ಕೂಡಲೇ ಬಾಲಸುಟ್ಟ ಬೆಕ್ಕಿನಂತೆ ವಿಲವಿಲನೆ ಒದ್ದಾಡಿದರೆ ಹೇಗೆ? ಅವರ ಫಸಲು, ಅವರವರ ಫಲ ಎಂದು ಡಿಸಿಎಂ ಮೇಲೆ ಜೆಡಿಎಸ್ ಚಾಟಿ ಬೀಸಿದೆ.

ಬದುಕೆಲ್ಲ ಬ್ರೋಕರೇಜ್‌ ಮಾಡಿಕೊಂಡೇ ಕೊಳ್ಳೆ ಹೊಡೆದರು!

ಕರ್ನಾಟಕವನ್ನು ಹೈ ಕಮಾಂಡ್ ಗೆ ಒತ್ತೆ ಇಟ್ಟ ಭೂಪತಿ, ಆಧುನಿಕ ಈಸ್ಟ್ ಇಂಡಿಯಾ ಕಂಪನಿಗಳ ಪೊಲಿಟಿಕಲ್ ಏಜೆಂಟ್, ಕರುನಾಡಿನ ಕರೋಡ್ ಪತಿ, ಬದುಕೆಲ್ಲ ಬ್ರೋಕರೇಜ್ ಮಾಡಿಕೊಂಡೇ ಕೊಳ್ಳೆ ಹೊಡೆದ ವ್ಯಕ್ತಿ, ಈಗ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡುವುದೇ? ಅರೆರೆ.. ಇವರ SST, YST ಅಬ್ಬರ ಕಂಡು GSTಯೇ ಬೆಚ್ಚಿದೆ. ಇದೇ ನೋಡಿ ಕರ್ನಾಟಕದ ಮಾದರಿ! ಎಂದು ಜೆಡಿಎಸ್ ಕಿಡಿಕಾರಿದೆ.

ಇಲಾಖೆಗೊಂದು ಹಿಟಾಚಿ, 24*7 ಬಾಚುವುದೊಂದೇ ಕೆಲಸ!

ಕಾಂಗ್ರೆಸ್ ಪಕ್ಷವೇ ಪರ್ಸಂಟೇಜ್ ಪಟಾಲಂ. ಕಮೀಷನ್ ಕೈಂಕರ್ಯವೇ ಅದರ ರಾಜಧರ್ಮ. ಲೂಟಿ, ದಂಧೆ, ಅಕ್ರಮವೇ ಅದರ ಗ್ಯಾರಂಟಿ. ಅನ್ಯರಾಜ್ಯಗಳ ಚುನಾವಣೆ ಇವರಿಗೆ ಚಿನ್ನದ ಗಣಿ. ಹೈಕಮಾಂಡ್ ಆಸರೆಯೇ ಅಕ್ಷಯ ಪಾತ್ರೆ.. ಇಂಥವರಿಗೆ ಕುಮಾರಸ್ವಾಮಿಯವರ ಕೂಗು ಕೇಳುವುದೇ? ಇಲಾಖೆಗೊಂದು ಹಿಟಾಚಿ ಇಟ್ಟುಕೊಂಡು 24X7 ಬಾಚುತ್ತಿದ್ದಾರೆ ಎಂದು ಜೆಡಿಎಸ್ ಕೈ ಪಕ್ಷದ ವಿರುದ್ಧ ಆರೋಪ ಮಾಡಿದೆ.

ಇದನ್ನೂ ಓದಿ: HD Kumaraswamy : ಐಟಿ ದಾಳಿಯಲ್ಲಿ ಸಿಕ್ಕಿದ್ದು SST, YST TAX ಹಣ ಎಂದ HDK, ಅವರು ಹೇಳಿದ ವಾಸ್ತುಶಿಲ್ಪಿ ಯಾರು?

ಕರ್ನಾಟಕವನ್ನು ಪಾಪರ್‌ ಮಾಡುವುದೇ ಏಕೈಕ ಗುರಿ!

ಸ್ವತಃ ತಾನೇ ಕೊಳೆತು ನಾರುತ್ತಿದೆ. ಆದರೆ, ಪಕ್ಕದ ಮನೆ ಕಂಪೌಂಡಿನ ಮೇಲೆ ಮರದೆಲೆ ಬಿದ್ದಿದೆ ಎಂದು ಕಾಂಗ್ರೆಸ್ ಅಂಗೈ ಪರಚಿಕೊಳ್ಳುತ್ತಿದೆ. ಪರಚಿಕೊಳ್ಳುವುದರ ಜತೆಗೆ, ಕರ್ನಾಟಕವನ್ನೇ ಪಾಪರ್ ಮಾಡುವುದೇ ಪರ್ಸಂಟೇಜ್ ಪಟಾಲಂ ಹಾಕಿಕೊಂಡಿರುವ ಏಕೈಕ ಗುರಿ. ಅದರ ಪಾಲಿಗೆ ಹೈ ಕಮಾಂಡ್ ಸೇವೆಯೇ ಆನಂದದಾಯಕ ಸೇವೆ! ಕಾಲಕ್ಕೆ ತಕ್ಕ ಕಾಂಗ್ರೆಸ್!! ಎಂದು ಆ ಪಕ್ಷದ ಕಾಲೆಳೆದಿದೆ ಜೆಡಿಎಸ್.

Exit mobile version