ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಮತ್ತೆ ಆಕ್ಟಿವ್ ಆಗಿದ್ದಾರೆ. ಕೆಲವು ದಿನಗಳ ಹಿಂದೆ ಮೆದುಳಿನ ಸ್ಟ್ರೋಕ್‌ಗೆ ಒಳಗಾಗಿ ಮೂರು ದಿನ ಆಸ್ಪತ್ರೆಯಲ್ಲಿದ್ದು ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅವರು ಬುಧವಾರ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ (HD Devegowda) ಸಾರಥ್ಯದಲ್ಲಿ ಪಕ್ಷದ ಮಹತ್ವದ ಸಭೆ (JDS Meeting) ನಡೆಸಿದರು. ಇದರಲ್ಲಿ ರಾಜ್ಯದ ಜನರು ಎದುರಿಸುತ್ತಿರುವ ಸಮಸ್ಯೆಗಳು, ಸಂಘಟನೆ ಹಾಗೂ ಮುಂಬರುವ ಲೋಕಸಭೆ ಚುನಾವಣೆ (Parliament Election 2024) ಬಗ್ಗೆ ಮಹತ್ವದ ಸಮಾಲೋಚನೆ ನಡೆಯಿತು. ಇದರ ಭಾಗವಾಗಿ ಸೆಪ್ಟೆಂಬರ್ 10ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ (Mega convention in Bangalore on Sep 10) ನಡೆಸಲು ತೀರ್ಮಾನಿಸಲಾಗಿದೆ.
ಕುಮಾರಸ್ವಾಮಿ ಅವರ ಜೆ.ಪಿ. ನಗರದ ನಿವಾಸದಲ್ಲಿ ಈ ಸಭೆ ನಡೆದಿದ್ದು, ಮಾಜಿ ಪ್ರಧಾನಿ ದೇವೇಗೌಡರು ಇದರಲ್ಲಿ ಪಾಲ್ಗೊಳ್ಳಲು ಪದ್ಮನಾಭ ನಗರದ ನಿವಾಸದಿಂದ ಬಂದಿದ್ದರು. ಸುದೀರ್ಘ ಸಭೆಯಲ್ಲಿ ಕುಮಾರಸ್ವಾಮಿ ಅವರು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿ, ಮುಖಂಡರಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.
ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು, ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಬಂಡೆಪ್ಪ ಕಾಶೆಂಪೂರ, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲಾ ಹಾಲಿ ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು ಹಾಗೂ ಜಿಲ್ಲಾ ಅಧ್ಯಕ್ಷರು ಹಾಜರಿದ್ದ ಈ ಸಭೆಯಲ್ಲಿ ಉಭಯ ನಾಯಕರು ಸಭೆಯಲ್ಲಿ ಕೆಲವಾರು ಗಂಭೀರ ವಿಷಯಗಳನ್ನು ಹಂಚಿಕೊಂಡರು.
ಅಲ್ಲದೆ, ಕಾವೇರಿ ಜಲ ಸಂಕಷ್ಟ, ಬರಗಾಲ ಹಾಗೂ ಅಘೋಷಿತ ಲೋಡ್ ಶೆಡ್ಡಿಂಗ್ ಬಗ್ಗೆಯೂ ಕೂಡ ಸುದೀರ್ಘ ಚರ್ಚೆ ನಡೆಯಿತಲ್ಲದೆ, ಜನಪರ ವಿಷಯಗಳನ್ನು ಇಟ್ಟುಕೊಂಡು ಸರಕಾರದ ವಿರುದ್ಧ ಹೋರಾಟ ರೂಪಿಸಬೇಕು ಎಂದು ಇಬ್ಬರೂ ನಾಯಕರು ಪಕ್ಷದ ಮುಖಂಡರಿಗೆ ಹೋರಾಟದ ದಿಕ್ಸೂಚಿ ನಿಗದಿ ಮಾಡಿದರು.
ಪಕ್ಷ ಉಳಿಸಿಕೊಳ್ಳಲು ಅವಿರತ ಹೋರಾಟ ಎಂದ ದೇವೇಗೌಡರು
ಪಕ್ಷ ಬಲಿಷ್ಠವಾಗಿದೆ. ಅದನ್ನು ದುರ್ಬಲಗೊಳಿಸುವ ದುಷ್ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ. ನಾನು ಬದುಕುವುದರ ಒಳಗಾಗಿ ಈ ಪಕ್ಷ ಅಧಿಕಾರಕ್ಕೆ ಬರುತ್ತದೆ. ಅದನ್ನು ನೋಡಿಯೇ ನೋಡುತ್ತೇನೆ. ಈ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಲು ಅವಿರತವಾಗಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿಗಳು ಶಪಥ ಮಾಡಿದರು.
ಸೆ.10ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ
ಮುಂಬರುವ ಲೋಕಸಭೆ, ಬಿಬಿಎಂಪಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಇದೇ ತಿಂಗಳು 10ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಜೆಡಿಎಸ್ ಪಕ್ಷದ ಬೃಹತ್ ಸಂಘಟನಾ ಸಮಾವೇಶದ ಬಗ್ಗೆ ಚರ್ಚೆ ನಡೆಸಿದ ಮಾಜಿ ಪ್ರಧಾನಿಗಳು, ಸೋತೆವು ಎಂದು ಸುಮ್ಮನಿದ್ದರೆ ಆಗುವುದಿಲ್ಲ. ಛಲದಿಂದ ಕೆಲಸ ಮಾಡಿದರೆ ಜನರು ಮೆಚ್ಚಿಕೊಳ್ಳುತ್ತಾರೆ.ಎಲ್ಲರೂ ಸೇರಿ ಪಕ್ಷವನ್ನು ಕಟ್ಟೋಣ ಎಂದು ಮುಖಂಡರಿಗೆ ಹುರಿದುಂಬಿಸಿದರು. ಈ ವಯಸ್ಸಿನಲ್ಲಿಯೂ ನಾನು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಲು ತಯಾರಿದ್ದೇನೆ. ಎಲ್ಲಿಗೆ ಬೇಕಾದರೂ ಬರಲು ಸಿದ್ಧನಿದ್ದೇನೆ. ಜನರ ಪರವಾಗಿ ಹೋರಾಟ ಮಾಡೋಣ ಎಂದರು ಅವರು.
ದೊಡ್ಡ ಪ್ರಮಾಣದಲ್ಲಿ ಕಾವೇರಿ ಹೋರಾಟ
ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ, ಜಿಟಿ ದೇವೇಗೌಡರು ಹಾಗೂ ಬಂಡೆಪ್ಪ ಕಾಷೆಂಪೂರ ಮತ್ತು ಟಿ.ಎ.ಶರವಣ ಅವರು, ಸಭೆಯಲ್ಲಿ ಕಾವೇರಿ ವಿಚಾರ ಕೂಡ ಚರ್ಚೆಯಾಯಿತು. ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಈಗಾಗಲೇ ಹೋರಾಟ ನಡೆಸಲಾಗಿದೆ. ಮಂಡ್ಯ ಜಿಲ್ಲೆಯ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ರಾಜ್ಯ ಮಟ್ಟಕ್ಕೆ ಈ ಹೋರಾಟವನ್ನು ವಿಸ್ತರಣೆ ಮಾಡಲಾಗುವುದು. ಈ ಸರಕಾರದಿಂದ ರಾಜ್ಯದ ಕಾವೇರಿ ಹಿತ ಕಾಯಲು ಸಾಧ್ಯವಿಲ್ಲ ಎಂದರು.
ದೇವೇಗೌಡರು, ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಎಲ್ಲಾ ಶಾಸಕರು, ಜಿಲ್ಲಾ ಮುಖಂಡರು ಸಭೆ ಸೇರಿದ್ದೆವು. ಪಕ್ಷ ಸಂಘಟನೆ ಮಾಡಿ ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಲು ನಿರ್ಧಾರ ಮಾಡಲಾಯಿತು. ಸೆಪ್ಟೆಂಬರ್ 10ರಂದು ಪ್ರಮುಖ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಸಭೆ ಯಶಸ್ವಿ ಮಾಡುವ ಬಗ್ಗೆ ಹಿರಿಯ ನಾಯಕರು ಸೂಚನೆಗಳನ್ನು ನೀಡಿದರು. ನಂತರ ಜಿಟಿಡಿ ನೇತೃತ್ವದಲ್ಲಿ ಮಾಡಿರೋ ಕೋರ್ ಕಮಿಟಿ ರಾಜ್ಯ ಪ್ರವಾಸ ಮಾಡಬೇಕು. ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೆ ತೆರಳಿ ಪ್ರಮುಖರ ಅಭಿಪ್ರಾಯ ಪಡೆಯಲಾಗುವುದು. ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಿದೆ. ಮುಂದಿನ ತಿಂಗಳು ಅವರೂ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ ಎಂದರು.