Site icon Vistara News

JDS Politics : ಮೈತ್ರಿ ಬಗ್ಗೆ ಜೆಡಿಎಸ್‌ನ 19 ಶಾಸಕರಲ್ಲಿ ಅಸಮಾಧಾನ; ಗಾಂಧೀಜಿ ಎಲೆಕ್ಷನ್‌ಗೆ ನಿಂತರೂ 20 ಕೋಟಿ ರೂ ಬೇಕು!

CM Ibrahim

ಬೆಂಗಳೂರು: ಬಿಜೆಪಿ – ಜೆಡಿಎಸ್‌ ಮೈತ್ರಿಗೆ ಪಕ್ಷದ 19 ಮಂದಿ ಶಾಸಕರು ಸಮಾಧಾನವಾಗಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ (JDS state president CM Ibrahim) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೆ, ತಾವು ಇನ್ನು ಮುಂದೆ ಎಲೆಕ್ಷನ್‌ಗೆ ಸ್ಪರ್ಧೆ ಮಾಡುವುದಿಲ್ಲ. ಈಗ ಮಹಾತ್ಮ ಗಾಂಧಿ ಬಂದು ಸ್ಪರ್ಧೆ ಮಾಡಿದರೂ 20 ಕೋಟಿ ರೂಪಾಯಿ ಬೇಕು ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿ – ಜೆಡಿಎಸ್‌ ಮೈತ್ರಿ ಬಗ್ಗೆ ಜೆಡಿಎಸ್‌ ಒಳ ರಾಜಕೀಯ (JDS Politics) ಮತ್ತೊಮ್ಮೆ ಬೀದಿಗೆ ಬಂದಿದೆ.

ಸುದ್ದಿಗೋಷ್ಠಿ ನಡೆಸಿದ ಸಿ.ಎಂ. ಇಬ್ರಾಹಿಂ, ಪಕ್ಷದೊಳಗೆ ಹಲವಾರು ಮಂದಿ ಅಸಮಾಧಾನಗೊಂಡಿದ್ದಾರೆ. ಹಲವಾರು ಮಂದಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸಂಖ್ಯೆ ಎಷ್ಟು ಎಂದು ಕೇಳಬೇಡಿ‌ ಎಂದು ಹೇಳುವ ಮೂಲಕ ಜೆಡಿಎಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ.

ನನಗೆ ಬಿಹಾರ ಸಿಎಂ ನಿತೀಶ್‌ ಕುಮಾರ್ ಕರೆದಿದ್ದಾರೆ. ಆಪ್‌ನಿಂದ ಕರೆದಿದ್ದಾರೆ. ಮೊದಲು ಪ್ರಾದೇಶಿಕ ಪಕ್ಷ ಉಳಿಯಬೇಕು ಎಂಬುದೇ ನನ್ನ ನಿಲುವು ಎಂದು ಸಹ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಇದನ್ನೂ ಓದಿ: karnataka weather forecast : ರಾಜ್ಯದ ಬಹುತೇಕ ಕಡೆ ಬಿಸಿಲೇ ಹೆಚ್ಚು; ಸದ್ಯ ಮಳೆ ಸುರಿದರೂ ಬೊಗಸೆಯಷ್ಟು!

ಗಾಂಧಿ ಎಲೆಕ್ಷನ್‌ಗೆ ನಿಂತರೂ 20 ಕೋಟಿ ರೂ. ಬೇಕು!

ಕಾಂಗ್ರೆಸ್ ಸೇರುವ ಬಗ್ಗೆ ನನ್ನ ಮನಸ್ಸಿನಲ್ಲಿ ಯಾವುದೇ ಚಿಂತನೆ ಇಲ್ಲ. ನಾನು ಎಲೆಕ್ಷನ್‌ಗೆ ನಿಲ್ಲಲ್ಲ ಎಂದಿದ್ದೇನೆ. ಮಹಾತ್ಮ ಗಾಂಧಿ ಎಲೆಕ್ಷನ್ ನಿಂತರೂ, ಗಾಂಧಿ ನಿಂತಿದ್ದಾರೆ ಎನ್ನುವುದಕ್ಕೆ 20 ಕೋಟಿ ರೂಪಾಯಿ ಬೇಕು ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.

ಸೋತರೆ ಬಿಜೆಪಿಯವರು ಜೆಡಿಎಸ್‌ ಅನ್ನೇ ತೆಗಳುತ್ತಾರೆ

ನಾನು ನೇರವಾಗಿ ಬಿಜೆಪಿಗೆ ಹೋಗಬಹುದಿತ್ತು. ಅಲ್ಲಿಯೂ ಸ್ಥಾನ‌ ಖಾಲಿ ಇದೆ. ನಾನು ಹೋಗಿಲ್ಲ. ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಆದ ಸ್ಥಿತಿ ಇಲ್ಲಿಯೂ ಆಗಬಹುದು ಎಂದು ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಜನರ ಒಲವು ಯಾವ ಕಡೆ ಇರುತ್ತದೆ ಎಂಬುದು ಬಹಳ ಮುಖ್ಯ. ಕೇಂದ್ರದ ಚುನಾವಣೆಯಲ್ಲಿ ಯಾರನ್ನು ಬಿಂಬಿಸುತ್ತೀರಿ? ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿಗೆ ಯಾರನ್ನು ಬಿಂಬಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಮೋದಿಗೆ ಬಂದಿರುವುದೇ ಶೇಕಡಾ 30ರಷ್ಟು ಮತ. ಶೇಕಡಾ 70ರಷ್ಟು ಮತಗಳು ಹರಿದು ಹಂಚಿ ಹೋಗಿವೆ. ಇಂಡಿಯಾ ಬಗ್ಗೆ ನಾನು ತಿರುಗಿ ನೋಡಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಎಷ್ಟು ಸೀಟು ಬರಬಹುದು? ಎಂಬುದನ್ನು ಕಾದು ನೋಡಬೇಕು. ಮುಂದೆ ಬಿಜೆಪಿಗೆ ಕಡಿಮೆ ಸ್ಥಾನ ಬಂದರೆ, ಜೆಡಿಎಸ್‌‌ ಜತೆಗೆ ಹೋಗಿದ್ದಕ್ಕೆ ಇಷ್ಟೆಲ್ಲ ಆಯಿತು ಎಂದು ಬಿಜೆಪಿ ಹೇಳುತ್ತಾರೆ. ಈ ಮೈತ್ರಿಯಿಂದ ಲೋಕಸಭಾ ಚುನಾವಣೆಗಿಂತ ವಿಧಾನಸಭಾ ಚುನಾವಣೆಯ ಮೇಲೆ ಹೆಚ್ಚಿನ ಹೊಡೆತ ಬೀಳಲಿದೆ. 19 ಮಂದಿಗಿಂತ ಕಡಿಮೆ ಸ್ಥಾನ ಜೆಡಿಎಸ್‌ಗೆ ಬರುತ್ತದೆ ಎಂದ ಸಿ.ಎಂ. ಇಬ್ರಾಹಿಂ ಹೇಳಿದರು.

ಮೈತ್ರಿ ವಾಪಸ್‌ ಪಡೆಯುವ ನಿರೀಕ್ಷೆ ಇದೆ

ಈಗಲೂ ದೇವೇಗೌಡರು ಮತ್ತು ಕುಮಾರಸ್ವಾಮಿ ಮೇಲೆ ವಿಶ್ವಾಸ ಇದೆ. ಮೈತ್ರಿಯನ್ನು ಅವರು ವಾಪಸ್ ತೆಗೆದುಕೊಳ್ಳಬಹುದು. ಮೈತ್ರಿ ಬಳಿಕ ಬಿಜೆಪಿಯ ಹಲವಾರು ನಾಯಕರು ನನ್ನ ಜತೆಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ ನಾಯಕರು ಮಾತನಾಡಿದ್ದಾರೆ‌. ಆದರೆ, ರಾಜ್ಯ ನಾಯಕರು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಜಂಗಮರ ಬಗ್ಗೆಯೂ ಶಾಮನೂರು ಮಾತನಾಡಲಿ

ಶಾಸಕ ಶಾಮನೂರು ಶಿವಶಂಕರಪ್ಪ ಅವರು ಯಾರ ಬಂಡವಾಳದ ಮೇಲೆ ಎಲೆಕ್ಷನ್‌ನಲ್ಲಿ ಸ್ಪರ್ಧೆ ಮಾಡಿದ್ದಾರೆ. ಅಲ್ಪಸಂಖ್ಯಾತ ಮತಗಳ ಮೇಲೆ ಗೆದ್ದಿದ್ದಾರೆ. ಅವರಿಗೆ 90 ವರ್ಷವಾಗಿದೆ. ಅವರ ವಯಸ್ಸಿಗೆ ಗೌರವ ಕೊಡಬೇಕು. ಲಿಂಗಾಯತರು 74 ಮಂದಿ ಇದ್ದಾರೆ ಅಂತಾರೆ. ಸಮುದಾಯದ ಬಗ್ಗೆ ಅನ್ಯಾಯ ಅಂದರೆ ಆಯಿತು. ಅದನ್ನು ಬಿಟ್ಟು ಬೇರೆ ಮಾತನಾಡಿದರೆ ಹೇಗೆ? ಸರ್ಕಾರಕ್ಕೇನೂ ಕಷ್ಟವಿಲ್ಲ. ಶಾಮನೂರು ಶಿವಶಂಕರಪ್ಪ ಅವರು ಜಂಗಮರ ಬಗ್ಗೆಯೂ ಮಾತನಾಡಲಿ. ಸರ್ಕಾರ ಬಂದು 5 ತಿಂಗಳಾಯಿತು. ಬಿಜೆಪಿಗೆ ಈ ಬಾರಿ ಲಿಂಗಾಯತರ ಒಲವು ಬರಲ್ಲ. ಲಿಂಗಾಯತ ಮತಗಳು ಬಿಟ್ಟು ಹೋಗಿದ್ದರಿಂದ ಅಮಿತ್ ಶಾ ಮೈತ್ರಿಗೆ ಬಂದಿದ್ದಾರೆ ಎಂದು ಇಬ್ರಾಹಿಂ ಹೇಳಿದರು.

ಜಾತಿಗಣತಿಯನ್ನು ಬಿಡುಗಡೆ ಮಾಡಿ

ರಾಜ್ಯ ಸರ್ಕಾರ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಬೇಕು. ಈಗಾಗಲೇ ಬೇರೆ ರಾಜ್ಯಗಳಲ್ಲಿ ಜಾತಿಗಣತಿ ಬಿಡುಗಡೆಯಾಗಿದೆ. ಇಲ್ಲಿಯೂ ಬಿಡುಗಡೆ ಮಾಡಬೇಕು. ನಾನು ಸಿದ್ದರಾಮಯ್ಯರನ್ನು ಒತ್ತಾಯಿಸುತ್ತೇನೆ. ಮೊದಲು ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಸಿ.ಎಂ. ಇಬ್ರಾಹಿಂ ಆಗ್ರಹಿಸಿದರು.

ದೇವೇಗೌಡ, ಕುಮಾರಸ್ವಾಮಿ ವಿರುದ್ಧ ನೇರ ಅಸಮಾಧಾನ

ಈಚೆಗೆ ರಾಮನಗರದಲ್ಲಿ ಸಮಾವೇಶ ನಡೆಸಿ ಜೆಡಿಎಸ್‌ ಶಾಸಕರು, ಮುಖಂಡರು ಸೇರಿದಂತೆ ಎಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದರೂ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ (JDS state president CM Ibrahim) ಈಗ ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (JDS supremo and former Prime Minister HD DeveGowda) ಮತ್ತು ಮಾಜಿ ಸಿಎಂ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ (Former Chief Minister and JDS Legislature Party leader HD Kumaraswamy) ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ತಮಗೆ ಮೈತ್ರಿ ಬಗ್ಗೆ ಈವರೆಗೂ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಾವು ಪಕ್ಷ ಬಿಡುವ ಬಗ್ಗೆ ಇದೇ ಅಕ್ಟೋಬರ್ 16ರಂದು ನಿರ್ಧಾರವನ್ನು ಪ್ರಕಟ ಮಾಡುತ್ತೇನೆ. ಅದಕ್ಕೂ ಮುಂಚೆ ದೇವೇಗೌಡರ ಬಳಿ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಸಿ.ಎಂ. ಇಬ್ರಾಹಿಂ, ಬಿಜೆಪಿ-ಜೆಡಿಎಸ್ ಮೈತ್ರಿ ಆಗಿದೆ. ನಾನು ನನ್ನ ಪಕ್ಷದ ಕೆಲಸ ಮಾಡುತ್ತಿದ್ದೇನೆ. ನಾನು‌ ಪಕ್ಷದ ಚಟುವಟಿಕೆಯಲ್ಲಿ ಇಲ್ಲ ಎಂದಲ್ಲ. ಮೈತ್ರಿ ಬಗ್ಗೆ ಈವರೆಗೂ ನನಗೆ ಯಾರೂ ಹೇಳಲಿಲ್ಲ. ಮೈತ್ರಿ ಜೆಡಿಎಸ್‌‌‌ಗೆ ಬೇಕಾಗಿತ್ತಾ? ಬಿಜೆಪಿಗೆ ಬೇಕಾಗಿತ್ತಾ? ಜೆಡಿಎಸ್‌‌ ಸಿದ್ಧಾಂತಕ್ಕೆ ಬಿಜೆಪಿ ಒಪ್ಪಿದೆಯೋ? ಬಿಜೆಪಿ ಸಿದ್ಧಾಂತಕ್ಕೆ ಜೆಡಿಎಸ್‌‌ ಒಪ್ಪಿದೆಯೋ? ಇದಕ್ಕೆ ಉತ್ತರ ಸಿಕ್ಕಿಲ್ಲ. ಸೆಪ್ಟೆಂಬರ್‌ 16ನೇ ತಾರೀಖಿನಂದು ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Hubballi Riots : ಹುಬ್ಬಳ್ಳಿ ಗಲಭೆ ಕೈಬಿಡುವಂತೆ ಡಿಕೆಶಿ ಪತ್ರ ಬರೆದಿದ್ದರಲ್ಲಿ ಏನು ತಪ್ಪಿದೆ? ಗೃಹ ಸಚಿವ ಪರಮೇಶ್ವರ್‌

ಅಕ್ಟೋಬರ್‌ 16ಕ್ಕೆ ಸಭೆ ನಡೆಸಲಿದ್ದು, ಅಲ್ಲಿ ಚರ್ಚೆ ಆದ ಮೇಲೆ ಅಭಿಪ್ರಾಯ ಪಡೆದು ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡ ಅವರಿಗೆ ತಿಳಿಸುತ್ತೇನೆ. ಅವರು ಏನು ತೀರ್ಮಾನ ಮಾಡುತ್ತಾರೆ ಎಂದು ಕಾದು ನೋಡಬೇಕು ಎಂದು ಪಕ್ಷ ತೊರೆಯುವ ಬಗ್ಗೆ ಸಿ.ಎಂ. ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕಾಂಗ ಪಕ್ಷದ ನಾಯಕರೇ ನಿರ್ಧಾರ ತೆಗೆದುಕೊಳ್ಳುತ್ತಾರೆ

ಬಿಜೆಪಿಯವರ ಉದ್ದೇಶ ಜೆಡಿಎಸ್‌‌‌ ಅನ್ನು ಮುಗಿಸುವುದು. ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ಮಾಡಿದಾಗ ಜೆಡಿಎಸ್‌‌ ಅನ್ನು ನಿರ್ನಾಮ ಮಾಡಲು ಹೇಳಿದ್ದರು. ಈಗ ಅದೇ ಆಗಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಜತೆಗೆ ಹೋಗುವುದು ಎಷ್ಟರಮಟ್ಟಿಗೆ ಸರಿ? ಮದುವೆ ಬಹಿರಂಗವಾಗಿ ಆಗಿಲ್ಲ. ಮದುವೆಯನ್ನು ನಾಲ್ಕು ಜನ ಹೋಗಿ ಮಾಡಿಕೊಂಡಿದ್ದಾರೆ. ದೇವೇಗೌಡರು ನಮ್ಮ ನಾಯಕರು ಎಂದು ಅವರು ಒಪ್ಪಿಕೊಳ್ಳುತ್ತಾರಾ? ಅದನ್ನೆಲ್ಲಾ ಒಪ್ಪಿದರೆ ಮುಂದೆ ಪಕ್ಷದ ವೇದಿಕೆಯಲ್ಲಿ ಕುಳಿತು ಮಾತನಾಡುತ್ತೇವೆ. ನನಗೆ ಜನರ ಹೃದಯದಲ್ಲಿ ಸ್ಥಾನ ಇದೆ. ನನಗಿಂತ ಕಿರಿಯರಿಲ್ಲ. ಹಿರಿಯರಿಗಿಂತ ನಾನು ಹಿರಿಯನಲ್ಲ. ನನ್ನ ಮನೆಗೆ ಎಚ್.ಡಿ. ಕುಮಾರಸ್ವಾಮಿ ಅವರು ಎಷ್ಟು ಬಾರಿ ಬಂದು ಹೋಗಿದ್ದಾರೆ? ನೀವೇ ಕ್ಯಾಮೆರಾ ಹಿಡಿದಿದ್ದೀರಿ. ನಾನು ಒಂದೇ ಒಂದು ಬಾರಿ ಕುಮಾರಸ್ವಾಮಿ ಅವರ ನಿವಾಸಕ್ಕೆ ಹೋಗಿದ್ದು. ಪಕ್ಷದಲ್ಲಿ ನಿಲುವು ತೆಗೆದುಕೊಳ್ಳಬೇಕು ಅಂದರೆ ರಾಜ್ಯಾಧ್ಯಕ್ಷ ಮುಖ್ಯ ಅಲ್ಲವೇ? ಶಾಸಕಾಂಗ ಪಕ್ಷದ ನಾಯಕರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದು ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.

ಮದುವೆ ಆಗಿಬಿಟ್ಟಿದ್ದೀರಿ. ಹೆಣ್ಣನ್ನು ಮನೆ ಒಳಗೆ ಕರೆಸಬೇಕಾ? ಹೊರಗೆ ಕಳುಹಿಸಬೇಕಾ? ಎಂಬುದನ್ನು ನಿರ್ಧಾರ ಮಾಡಬೇಕಿದೆ. ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮುಸ್ಲಿಂ ಮತಗಳು ಬಂದಿವೆ. 18 ಸಾವಿರ ಮತಗಳು ಬಂದಿವೆ. ಮುಸ್ಲಿಂ ಮತಗಳು ಜೆಡಿಎಸ್‌‌‌ಗೆ ಬಂದಿದೆ. ನಾನು ಇಂದು ಕೂಡ ವಿಷಕಂಠ ಆಗಿದ್ದೇನೆ. ಜೆಡಿಎಸ್‌‌‌ನಲ್ಲಿ ಇಂತಹ ಪರಿಸ್ಥಿತಿ ಇದೆ. ಮತಗಳು ಬರದೇ ಇರುವುದಕ್ಕೆ ಕಾರಣ ಏನು? ಎಂಬುದನ್ನು ಹುಡುಕಬೇಕು? ನನ್ನನ್ನು ರಾಜ್ಯಾಧ್ಯಕ್ಷ ಮಾಡಿ ಸಂಪಾದಿಸಿದ್ದೇನು ಎಂದು ಹೇಳಿದರೆ? ಅವರು ಕಳೆದುಕೊಂಡಿದ್ದು ಏನು? ಮಂಡ್ಯ, ಹಾಸನದಲ್ಲಿ ಜೆಡಿಎಸ್‌‌‌ಗೆ ಮತಗಳು ಏಕೆ ಕಡಿಮೆ ಬಂತು? ಒಕ್ಕಲಿಗ ಮತಗಳನ್ನು ನಾನು ಸಂಪಾದಿಸಿದ್ದಾ? ರೈತರ ಮತಗಳನ್ನು ನಾನು ಸಂಪಾದನೆ ಮಾಡಿದ್ದಾ? ಎಂದು ಮಾಜಿ ಸಿಎಂ ಎಚ್‌ಡಿಕೆ ಮೇಲೆ ಹರಿಹಾಯ್ದಿದ್ದಾರೆ.

Exit mobile version