ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ದೃಷ್ಟಿಯಿಂದ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್ (JDS Politics) ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಕಾರ್ಯತಂತ್ರವನ್ನು ಹೆಣೆಯುತ್ತಿದೆ. ಆಂತರಿಕ ಸಂಘರ್ಷಗಳನ್ನು ಬದಿಗೊತ್ತಿ ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತಿದೆ. ಈ ನಡುವೆ ಬಿಜೆಪಿ – ಜೆಡಿಎಸ್ ಮೈತ್ರಿಯನ್ನು ಸಹ ಮಾಡಿಕೊಳ್ಳಲಾಗಿದ್ದು, ಕಾಂಗ್ರೆಸ್ ಅನ್ನು ಕಟ್ಟಿಹಾಕಲು ಮುಂದಾಗಿದೆ. ಹೀಗಾಗಿ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಈ ಎಲ್ಲದರ ನಡುವೆ ಪಕ್ಷ ಸಂಘಟನೆಗೆ ಜೆಡಿಎಸ್ ಒತ್ತು ಕೊಟ್ಟಿದ್ದು, ಪ್ರಾದೇಶಿಕವಾರು ಪ್ರವಾಸವನ್ನು (Regional Tour) ಕೈಗೊಳ್ಳಲಾಗಿದೆ. ಮಾಜಿ ಸಚಿವ ಜಿ.ಟಿ. ದೇವೇಗೌಡ (GT Deveg ನೇತೃತ್ವದಲ್ಲಿ ಕೋರ್ ಕಮಿಟಿಯನ್ನು ರಚನೆ ಮಾಡಿದ್ದು, ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ (Kalyana Karnataka Part) ಪ್ರವಾಸ ಹಾಗೂ ಸಭೆಯನ್ನು ನಡೆಸಲಾಗಿದೆ. ಈಗ “ಕಿತ್ತೂರು ಕರ್ನಾಟಕದ ಕಡೆ” ಮುಂದಿನ ನಡೆಯನ್ನು ಇಟ್ಟಿದ್ದಾರೆ.
ಈ ಸಂಬಂಧ ಜೆಪಿ ಭವನದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವರಾದ ಜಿ.ಟಿ. ದೇವೇಗೌಡ, ಸಿ.ಎಸ್. ಪುಟ್ಟರಾಜು ಮತ್ತು ಮಾಜಿ ಶಾಸಕ ವೈಎಸ್ವಿ ದತ್ತ ತಮ್ಮ ಮುಂದಿನ ನಡೆ ಬಗ್ಗೆ ವಿವರಣೆ ನೀಡಿದ್ದಾರೆ. ಜತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ಇದನ್ನೂ ಓದಿ: Power Point with HPK : ಜನ ನಮಗೆ ಅಧಿಕಾರ ಕೊಟ್ಟಿದ್ದೇ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು!
ಈ ವೇಳೆ ಮಾತನಾಡಿದ ವೈ.ಎಸ್.ವಿ. ದತ್ತ, ಜಿಟಿ ದೇವೇಗೌಡ ನೇತೃತ್ವದಲ್ಲಿ 21 ಜನರ ಕೋರ್ ಕಮಿಟಿ ನೇಮಕ ಆಗಿತ್ತು. ಈ ಕಮಿಟಿ ಬಹಳ ಉತ್ಸಾಹದಿಂದ ಪಕ್ಷದ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಕಲಬುರಗಿ, ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಸಭೆ ನಡೆಸಿತ್ತು. ಸಭೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮುಂದಿನ ಕಾರ್ಯಚಟುವಟಿಕೆ ಹೇಗಿರಬೇಕು? ಬೆಂಬಲ, ಸಂಘಟನೆ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದೆ ನಾವು ಕಿತ್ತೂರು ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸಭೆ ನಡೆಸಲಿದ್ದೇವೆ. ಅಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.
ಗ್ಯಾರಂಟಿ ಎಂಬುದೇ ಸುಳ್ಳು
ಜಿ.ಟಿ. ದೇವೇಗೌಡ ಮಾತನಾಡಿ, ಸರ್ಕಾರ ಬಂದು ಮೂರ್ನಾಲ್ಕು ತಿಂಗಳಾಯ್ತು. ಐದು ಗ್ಯಾರಂಟಿ ತರುವುದು ನಮ್ಮ ಗುರಿ ಎಂದು ಹೇಳಿದ್ದರು. ರಾಜ್ಯ ಸರ್ಕಾರ ಬಂದು ಐದು ತಿಂಗಳಾಗಿದೆ. ಬಿಟ್ಟಿ ಭಾಗ್ಯಗಳಲ್ಲಿ ಎಷ್ಟು ಸತ್ಯ? ಅನ್ನಭಾಗ್ಯವೇ ನಿಜವಾದ ಭಾಗ್ಯ. ವಿಧಾನಸಭೆಯಲ್ಲಿ ಇದನ್ನು ಅಭಿನಂದಿಸಿದ್ದೇನೆ. ಆದರೆ, ಅಕ್ಕಿಯನ್ನು ಎಲ್ಲಿ ಕೊಟ್ಟಿದ್ದಿರಾ? ಪ್ರಧಾನಿ ನರೇಂದ್ರ ಮೋದಿಯವರು 5 ಕೆಜಿ ಅಕ್ಕಿ ಕೊಟ್ಟಿದ್ದಾರೆ. ನೀವು ಒಂದೇ ಒಂದು ಕಾಳನ್ನು ಕೊಟ್ಟಿಲ್ಲ. 170 ರೂಪಾಯಿ ಕೊಟ್ಟಿದ್ದಿರ. ಅನ್ನಭಾಗ್ಯ ಎಂಬುದು ಸುಳ್ಳಾಗಿದೆ. ಕೇಂದ್ರ ಸರ್ಕಾರ ಕೊಟ್ಟಿರುವ ಅಕ್ಕಿಯನ್ನು ದೇಶಾದ್ಯಂತ 80 ಕೋಟಿ ಜನರು ಊಟ ಮಾಡುತ್ತಿದ್ದಾರೆ. ಒಂದು ಕಾಳು ಅಕ್ಕಿ ಕೊಟ್ಟಿಲ್ಲ ನೀವು. ಗೃಹಜ್ಯೋತಿ 200 ಯುನಿಟ್ ಎಂದು ಘೋಷಣೆ ಮಾಡಿದರು. ಸರಾಸರಿ 53 + 5 ಯುನಿಟ್ ಜಾರಿಗೆ ತಂದಿದ್ದೀರ. ಎಲ್ಲಿ ಹೋಯ್ತು 200 ಯುನಿಟ್? 200 ಯುನಿಟ್ ಸುಳ್ಳು ,ಸುಳ್ಳು, ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಮೈಸೂರಿನಲ್ಲಿ ಬಸವ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅವರು ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಕೃಷಿಯಲ್ಲಿ ಬೆಳವಣಿಗೆಯಾಗದೆ ಭಾರತದ ಅಭಿವೃದ್ಧಿಯಾಗುವುದಿಲ್ಲ ಅಂತಾ ಹೇಳಿದ್ದಾರೆ. ಸರ್ಕಾರದ ಪ್ರಕಾರ 40 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. 4 ಸಾವಿರ ಕೋಟಿ ನಷ್ಟ ಆಗಿದೆ. ಶೇ. 50ಕ್ಕಿಂತ ಹೆಚ್ಚು ಬರಗಾಲಪೀಡೀತ ತಾಲೂಕುಗಳು ರಾಜ್ಯದಲ್ಲಿವೆ. ಒಟ್ಟು 161 ತಾಲೂಕುಗಳ ಸಹಿತ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಎಲ್ಲದರ ನಡುವೆ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದು ಜಿ.ಟಿ. ದೇವೇಗೌಡ ಕಿಡಿಕಾರಿದರು.
ಕೇಂದ್ರ ಸರ್ಕಾರದಿಂದ ಕೊಡಲಾಗುತ್ತಿರುವ ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ 6 ಸಾವಿರ ರೂಪಾಯಿ ಸಿಗುತ್ತಿತ್ತು. ಅದಕ್ಕೆ ಬಿ.ಎಸ್. ಯಡಿಯೂರಪ್ಪ ಅವರ ಕಾಲದಿಂದ 4 ಸಾವಿರ ರೂಪಾಯಿ ಸೇರಿಸಿ 10 ಸಾವಿರ ರೂಪಾಯಿಯನ್ನು ಕೊಡುತ್ತಿದ್ದರು. ಅದನ್ನು ನೀವು ನಿಲ್ಲಿಸಿದ್ದೀರಲ್ಲವೇ? ಈಗ ರೈತರ ಬಗ್ಗೆ ಮಾತನಾಡುತ್ತೀರಾ? ಎನ್‌ಡಿಆರ್‌ಎಫ್‌ನಿಂದ ಅನುದಾನ ಕೇಳುವುದು ರೂಢಿ. ಆದರೆ, ಒಂದು ರೂಪಾಯಿ ಖರ್ಚು ಮಾಡಿಲ್ಲ. ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಸಿದ್ದರಾಮಯ್ಯ ಅವರೇ ನೀವೇ ಈಗ ಸಿಎಂ ಇದ್ದೀರ, ಪಂಪ್‌ಸೆಟ್‌ಗಳಿಗೆ ಕರೆಂಟ್ ಎಷ್ಟು ಗಂಟೆ ಕೊಟ್ಟಿದ್ದೀರಾ? ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ 7 ಗಂಟೆ ಕರೆಂಟ್ ಕೊಡುತ್ತಿದ್ದರು ಎಂದು ಜಿ.ಟಿ. ದೇವೇಗೌಡ ಹೇಳಿದರು.
ರೈತರು ದುಡ್ಡು ಎಲ್ಲಿಂದ ತರುತ್ತಾರೆ?
10 ಸಾವಿರ ರೂಪಾಯಿ ಕಟ್ಟಿದರೆ ಕಂಬ, ಲೈನ್ ಎಲ್ಲವೂ ಬರುತ್ತಿತ್ತು. ನೀವು ಅದನ್ನು ನಿಲ್ಲಿಸಿದ್ದೀರಿ. ಪಂಪ್‌ಸೆಟ್ ಅಳವಡಿಕೆಗೆ 5 ಲಕ್ಷ ರೂಪಾಯಿ ಖರ್ಚಾಗುತ್ತದೆ. ರೈತರು ಎಲ್ಲಿಂದ ತರುತ್ತಾರೆ. ಇಂತಹ ಕೆಲಸವನ್ನು ಯಾರೂ ಮಾಡಿರಲಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕ ರಾಜು ಕಾಗೆ ಅವರೇ ಹೇಳುತ್ತಾರೆ. ನಿರಂತರ ಜ್ಯೋತಿ ನಿಲ್ಲಿಸಲಾಗಿದೆ. ಸ್ವಂತ ಜಮೀನಿನಲ್ಲಿ ಮನೆ ಕಟ್ಟಿಕೊಂಡರೆ ಕರೆಂಟ್ ಇಲ್ಲ. ಗ್ರಾಮ ಠಾಣಾ ಈಗ ಉಳಿದಿಲ್ಲ. ಇಂತಹ ಪರಿಸ್ಥಿತಿಯ ಸರ್ಕಾರ ಇರಬೇಕಾ? ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ ಎಂದು ಜಿ.ಟಿ. ದೇವೇಗೌಡ ಪ್ರಶ್ನಿಸಿದರು.
ಐದು ಗ್ಯಾರಂಟಿ ಕೊಡಿ ಅಂತ ಕೇಳಿದ್ದೆವಾ? ಆಸ್ಪತ್ರೆ, ರಸ್ತೆ ಇಲ್ಲ. ಬಾರ್‌ಗಳನ್ನು ಆರಂಭಿಸುವುದಾಗಿ ಹೇಳುತ್ತಿದ್ದಾರೆ. ಲೈಟ್ ಕಂಬ ಹಾಕಿಸೋಕೆ ಕೆ.ಜೆ. ಜಾರ್ಜ್ ಮನೆ ಮುಂದೆ ಹೋಗಬೇಕು ಅಂತ ಕಂಪ್ಲಿ ಗಣೇಶ್ ಹೇಳುತ್ತಾರೆ. ಆದರೆ, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ 28 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಇಷ್ಟಾದರೂ ಯಾವುದೇ ಯೋಜನೆಗಳನ್ನು ನಿಲ್ಲಿಸಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಜಿ.ಟಿ. ದೇವೇಗೌಡ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Power Point with HPK : ಶಿವಮೊಗ್ಗದಲ್ಲಿ 10 ಮನೆಗಳಿಗೆ ಕಲ್ಲು ಬಿದ್ದಿದೆ; ಅದು ಕೋಮು ಗಲಭೆ ಅಲ್ಲ!
ಅತ್ತಿಬೆಲೆ ದುರಂತದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ
ಅತ್ತಿಬೆಲೆ ದುರಂತ ನನಗೆ ಬಹಳ ನೋವು ತಂದಿದೆ. ಆ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ದೇವರು ಕೊಡಲಿ. ಮೃತ ಹೊಂದಿದ ಕುಟುಂಬಕ್ಕೆ ಸರ್ಕಾರದ ಸೂಕ್ತ ಪರಿಹಾರ ಕೊಡಬೇಕು. ಘಟನೆ ಕುರಿತು ತನಿಖೆ ಆಗಬೇಕು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಜಿ.ಟಿ. ದೇವೇಗೌಡ ಆಗ್ರಹಿಸಿದರು.
ಮೈಸೂರಿನಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯಿತು. ಅದರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೃಷಿ ಕ್ಷೇತ್ರ ಅಭಿವೃದ್ಧಿ ಆಗದೇ ದೇಶ ಉದ್ದಾರ ಆಗಲ್ಲ. ಈ ಮೂಲಕ ರೈತರು ಉದ್ದಾರ ಆಗಬೇಕು. ನೀವು ಬಂದು ಐದು ತಿಂಗಳಾಗಿದೆ. ಸರ್ಕಾರದ ವರದಿ ಪ್ರಕಾರ 4 ಸಾವಿರ ಕೋಟಿ ಬೆಳೆ ನಷ್ಟವಾಗಿದೆ ಅಂತ ಇದೆ. 40 ಲಕ್ಷ ಹೆಕ್ಟೇರ್ ನಷ್ಟು ಬೆಳೆ ಒಣಗಿ ಹೋಗಿದೆ ಎಂದು ವರದಿ ಕೊಟ್ಟಿದ್ದಾರೆ. ಆದರೆ, ಸರ್ಕಾರದವರು ಏನು ಮಾಡುತ್ತಿದ್ದೀರಿ? ಎಂದು ಶಾಸಕ ಜಿ.ಟಿ. ದೇವೇಗೌಡ ಪ್ರಶ್ನೆ ಮಾಡಿದ್ದಾರೆ.