Site icon Vistara News

JDS Vs Congress : ಲೋಕ ಚುನಾವಣೆಯಲ್ಲಿ ಕಾಂಗ್ರೆಸ್‌ ಅಂತ್ಯ ಸಂಸ್ಕಾರ; ಜೆಡಿಎಸ್‌ ತೀವ್ರ ಪ್ರತಿದಾಳಿ

BJP JDS verbal fight

ಬೆಂಗಳೂರು: ತೆನೆ ಹೊತ್ತ ಮಹಿಳೆ ಬಿಜೆಪಿ ಜತೆಗಿನ ಮೈತ್ರಿಯ (BJP-JDS Alliance) ಕೋಮು-ಕುಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದೂ ಸೇರಿದಂತೆ ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಮತ್ತು ಎಚ್.ಡಿ ಕುಮಾರಸ್ವಾಮಿ (HD Kumaraswamy) ಮೇಲೆ ಮಾಡಿದ ವಾಕ್‌ ಪ್ರಹಾರಕ್ಕೆ ಜಾತ್ಯತೀತ ಜನತಾದಳ (JDS party) ಭೀಕರ ಪ್ರತಿದಾಳಿ (JDS Vs Congress) ನಡೆಸಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ (DK Shivakumar) ಮೇಲೆ ಮುಗಿಬಿದ್ದಿರುವ ಪಕ್ಷ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ (Congress Party) ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಹೇಳಿದೆ.

ಕಾಂಗ್ರೆಸ್‌ ಪಕ್ಷ ಒಕ್ಕಲಿಗರನ್ನು ಎತ್ತಿ ಕಟ್ಟುವ ನೀಚ ಕೃತ್ಯಕ್ಕೆ ಇಳಿದಿದೆ, ಆದಿಚುಂಚನಗಿರಿ ಮಠವನ್ನು ಎಳೆದುತಂದಿದೆ ಎಂದು ಸಿಟ್ಟುಗೊಂಡಿರುವ ಜೆಡಿಎಸ್‌, ಒಕ್ಕಲಿಗರನ್ನು ಸಂಸ್ಕೃತಿಹೀನರೆಂದು ಬಿಂಬಿಸುವುದು ಕಾಂಗ್ರೆಸ್‌ನ ಟೂಲ್‌ ಕಿಟ್‌ ಕಾರ್ಯಾಚರಣೆ ಎಂದು ಆಕ್ಷೇಪಿಸಿದೆ.

ಕಾಂಗ್ರೆಸ್‌ಗೆ ಜೆಡಿಎಸ್‌-ಬಿಜೆಪಿ ಫೋಬಿಯಾ ಶುರುವಾಗಿದೆ

ಜಿನ್ನಾ ಜೀನ್ಸಿನ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಜೆಡಿಎಸ್‌-ಬಿಜೆಪಿ ಫೋಬಿಯಾ ಶುರುವಾಗಿದೆ. ಅದಕ್ಕೆ ಹೊಸ ಟೂಲ್ ಕಿಟ್ ಗಳ ಆವಿಷ್ಕಾರದಲ್ಲಿ ತೊಡಗಿದೆ. ತುಷ್ಟೀಕರಣ ಮಾಡುತ್ತಲೇ ಕಾಶ್ಮೀರಕ್ಕೆ ಮರಣಶಾಸನ ಬರೆದಿದ್ದ ಹೇಯ ಪಕ್ಷವು ಈಗ ಆತ್ಮಗೌರವ ಎಂದು ಹಲುಬುತ್ತಿದೆ. ಸರ್ದಾರ್ ವಲ್ಲಭ ಭಾಯಿ ಪಟೇಲ್, ನೇತಾಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ಪಿ.ವಿ.ನರಂಹರಾವ್ ಸೇರಿ ಅನೇಕ ಮಹಾಪುರುಷರ ಕೀರ್ತಿಗೆ ಗ್ರಹಣ ಹಿಡಿಸಿ ಆತ್ಮರತಿ ಮಾಡಿಕೊಂಡ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಅಂತ್ಯ ಸಂಸ್ಕಾರ ಆಗಲಿದೆ.

ತೂರಾಡಿಕೊಂಡು ಓಡಾಡುವವರು ಯಾರು ಎನ್ನುವುದು ಎಲ್ಲರಿಗೂ ಗೊತ್ತು

ಅಂಗಿ ಹರಿದುಕೊಂಡು, ರಾತ್ರಿ ವೇಳೆ ತೂರಾಡಿಕೊಂಡು ಯಾರು ಓಡಾಡುತ್ತಿದ್ದಾರೆ ಎನ್ನುವುದನ್ನು ಮಾಧ್ಯಮಗಳೇ ತೋರಿಸಿವೆ. ಕೆಲ ದಿನ ಕಾಯಿರಿ, ಅಂಗಿ ಹರಿದುಕೊಳ್ಳುವ ಸ್ಥಿತಿ ಯಾರಿಗೆ ಕಾದಿದೆಯೋ ನೋಡೋಣ. 135 ಶಾಸಕರಿದ್ದಾರೆ ಎಂದು ಬೀಗಿದ್ದೇ ಬಂತು. ಈಗ ಒಂದು ಪಾರ್ಟಿ, ಹತ್ತಾರು ಬಣ ಎನ್ನುವ ಕಾಂಗ್ರೆಸ್ ನ ಬುಡವೇ ಬಿದ್ದುಹೋಗುವ ಪರಿಸ್ಥಿತಿ ಸೃಷ್ಟಿ ಆಗುತ್ತಿದೆ. ಹತಾಶೆ, ಮತಿಭ್ರಮಣೆ ಯಾರಿಗೆ..? ಅರ್ಥವಾಗದಷ್ಟು ಅಜ್ಞಾನವೇ ನಿಮಗೆ?

ಇದು ಒಕ್ಕಲಿಗರನ್ನು ಕೆಣಕುವ ದುಷ್ಟ ಹುನ್ನಾರ

ಜಾತ್ಯತೀತ ಎನ್ನುತ್ತ ಒಕ್ಕಲಿಗರನ್ನು ಎತ್ತಿಕಟ್ಟುವ ನೀಚ ಪ್ರಯತ್ನಕ್ಕೂ ಕೈ ಹಾಕಿದೆ ಕಾಂಗ್ರೆಸ್. ಒಕ್ಕಲಿಗರು ಹೀನ ಸಂಸ್ಕೃತಿಯುಳ್ಳವರು, ಸಂಸ್ಕೃತಿಹೀನರು ಎನ್ನುವ ಕೊಳಕು ಹೇಳಿಕೆ ಹಿಂದೆ ಇದೇ ಕಾಂಗ್ರೆಸ್ಸಿನ ಟೂಲ್ ಕಿಟ್ ಷಡ್ಯಂತ್ರ ಅಡಗಿದೆ. ಆ ಭಾಗವಾಗಿ ಒಕ್ಕಲಿಗರ ಕುಲದೈವ ಶ್ರೀ ಭೈರವೇಶ್ವರ ದೇವರನ್ನು, ಪರಮಪೂಜ್ಯ ಶ್ರೀಗಳನ್ನು ಎಳೆದು ತಂದಿರುವುದು ಅಕ್ಷಮ್ಯ ಹಾಗೂ ಒಕ್ಕಲಿಗರನ್ನು ಕೆಣಕುವ ದುಷ್ಟ ಹುನ್ನಾರವಲ್ಲದೆ ಬೇರೇನೂ ಅಲ್ಲ.

ಕಾಂಗ್ರೆಸ್‌ ಕೊಳಕುಮಂಡಲದಂತೆ ಕೆನ್ನಾಲಿಗೆ ಚಾಚಿದೆ

ಅಲ್ಪಸಂಖ್ಯಾತರನ್ನು ತನ್ನ ರಾಜಕೀಯ ಲಾಭಕ್ಕಾಗಿ ಎತ್ತಿಕಟ್ಟುತ್ತಾ ಬಹುಸಂಖ್ಯಾತರ ವಿರುದ್ಧ ಛೂ ಬಿಡುತ್ತಿರುವುದು ಕೂಡ ಕಾಂಗ್ರೆಸ್ ಕಿಡಿಗೇಡಿ ಟೂಲ್ ಕಿಟ್ ನ ಒಳಸಂಚು. ಅವರನ್ನು ತನ್ನ ಸ್ವಾರ್ಥಕ್ಕಾಗಿ ಸಮಾಜದಿಂದಲೇ ಪ್ರತ್ಯೇಕಿಸುವ ಕೀಳು ರಾಜಕೀಯ ಮಾಡುತ್ತಿದೆ. ಆರೋಗ್ಯಕರ ಸಮಾಜಕ್ಕೆ ಕೊಳಕುಮಂಡಲದಂತೆ ತನ್ನ ಕೆನ್ನಾಲಿಗೆ ಮೂಲಕ ವಿಷಪ್ರಾಶನ ಮಾಡುತ್ತಿದೆ.

ಹಾಗಿದ್ದರೆ ಮುಸ್ಲಿಮರು ಧರಿಸೋದು ಮಕ್ಮಲ್‌ ಟೋಪಿಯೇ?

ಕುಮಾರಸ್ವಾಮಿ ಅವರು ಟೋಪಿ ಧರಿಸಿದರು, ಮಸೀದಿಗೆ ಹೋದರು, ಬಿರಿಯಾನಿ ತಿಂದರು. ಇದೇನೋ ಸರಿ. ಆದರೆ, ತುರ್ತು ಪರಿಸ್ಥಿತಿ ವೇಳೆ ಸಂಜಯಗಾಂಧಿ ಮಾಡಿದ್ದನ್ನು ಕುಮಾರಸ್ವಾಮಿ ಅವರು ಮಾಡಿದ್ದಾರೆಯೇ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂ ಲೀಗ್ ಅನ್ನು ಎತ್ತಿಕಟ್ಟಿ ದೇಶ ಒಡೆದ ದೇಶದ್ರೋಹವನ್ನು ಅವರು ಎಸಗಿದ್ದಾರೆಯೇ? ಹಾಗಾದರೆ, ನಿಮ್ಮ ಅರ್ಥದಲ್ಲಿ ಶಿರದ ಮೇಲೆ ಮುಸ್ಲಿಮರು ಧರಿಸುವ ಟೋಪಿ ಮಕ್ಮಲ್ ಟೋಪಿಯೇ? ಮುಸ್ಲಿಮರ ಟೋಪಿಗೂ ಅಪಮಾನ ಮಾಡಿದೆ ಕಾಂಗ್ರೆಸ್!!

ಜೈಲು ಹಕ್ಕಿಯನ್ನೇ ಅಧ್ಯಕ್ಷ ಎಂದು ಒಪ್ಪಿಕೊಳ್ಳುವಷ್ಟು ಗತಿಗೇಡು

ತಿಹಾರ್ ಜೈಲುಹಕ್ಕಿಯನ್ನೇ ಅಧ್ಯಕ್ಷ ಎಂದು ಒಪ್ಪಿಕೊಂಡಿರುವ ಗತಿಗೆಟ್ಟ, ನೀತಿಗೆಟ್ಟ ಕಾಂಗ್ರೆಸ್, ಮೈತ್ರಿ ಬಗ್ಗೆ ಭಸ್ಮಾಸುರ ಕಥೆ ಹೇಳುತ್ತಿದೆ. ಇವತ್ತು ಅಕ್ಕಪಕ್ಕ ಕೂರಿಸಿಕೊಂಡಿರುವ ಮೈತ್ರಿಪಕ್ಷಗಳ ನಾಯಕರಿಗೆ ಕೊಟ್ಟಿದ್ದ ಕಿರುಕುಳ ಜಗದ್ವಿಖ್ಯಾತಿ. ಕರುಣಾನಿಧಿ ಅವರ ಸರಕಾರವನ್ನೇ ವಜಾ ಮಾಡಿ, ಈಗ ಅವರ ಮಗ ಸ್ಟಾಲಿನ್ ಜತೆಯೂ ಲಜ್ಜೆ ಇಲ್ಲದೆ ಅಡ್ಜಸ್ಟ್ ಮಾಡಿಕೊಂಡು, ಅವರಿಗೆ ಕಾವೇರಿ ಹಿತವನ್ನು ಅಡವಿಟ್ಟ ಕಾಂಗ್ರೆಸ್ ಬಗ್ಗೆ ಬೀದಿ ಬೀದಿಯಲ್ಲಿ ಜನ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ : Congress Vs HDK : ಕುಮಾರಸ್ವಾಮಿ ಮಂಥರೆ, ಶಕುನಿ, ಭಸ್ಮಾಸುರ; ಕಾಂಗ್ರೆಸ್‌ ಹಿಗ್ಗಾಮಗ್ಗಾ ದಾಳಿ

ಪ್ರಾದೇಶಿಕ ಪಕ್ಷಗಳನ್ನು ಆಪೋಷನ ತೆಗೆದುಕೊಂಡ ಕಾಂಗ್ರೆಸ್‌

ನಿಯತ್ತಿನ ಬಗ್ಗೆ ಹೇಳುವುದಾದರೆ, ಕಾಂಗ್ರೆಸ್ ಪಕ್ಷಕ್ಕೆ ಇರುವ ವಿರುದ್ಧ ಪದಗಳಲ್ಲಿ ನಿಯತ್ತು ಕೂಡ ಒಂದು. ನೀತಿ, ನಿಯತ್ತು ಎಂದರೆ ಅದಕ್ಕೆ ಗಾವುದ ದೂರ. ಚರಿತ್ರೆ ಬಿಚ್ಚಿಟ್ಟರೆ ಕಾಂಗ್ರೆಸ್ ಮುಖವೇ ಕೊಳಕುಮಂಡಲದಂತೆ ಮುದುಡಿಕೊಳ್ಳುತ್ತಿದೆ. ಎಷ್ಟೋ ಪ್ರಾದೇಶಿಕ ಪಕ್ಷಗಳನ್ನು ಹಸ್ತಪಕ್ಷ ಆಪೋಶನ ತೆಗುಕೊಂಡಿದ್ದೇ ಒಂದು ಅಮರಚಿತ್ರ ಕಥೆ. ಪರಕೀಯ ವಿಚಾರಧಾರೆ ಮೂಲಕ ಈಗಲೂ ಬ್ರಿಟಿಷ್ ಗುಲಾಮಿ ಮನಃಸ್ಥಿತಿಯಲ್ಲಿದೆ ಕಾಂಗ್ರೆಸ್. ದುರಂತಕ್ಕೆ ಈಗ ಇನ್ನೊಬ್ಬರ ಆತ್ಮಸಾಕ್ಷಿ ಬಗ್ಗೆ ಅಲವತ್ತುಕೊಳ್ಳುತ್ತಿದೆ.

Exit mobile version