ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸುತ್ತಿರುವ ಎಮ್‌ಎನ್‌ಸಿ (ಬಹುರಾಷ್ಟ್ರೀಯ) ಕಂಪನಿಗಳು (MNC Companies) ಉದ್ಯೋಗ ನೀಡಿರುವ ಕನ್ನಡಿಗರ ಸಂಖ್ಯೆಯನ್ನು (ಡೇಟಾ) ತಮ್ಮ ಕಚೇರಿಯ ಆವರಣದ ನೋಟಿಸ್ ಬೋರ್ಡ್‌ನಲ್ಲಿ (Job for Kannadigas) ಕಡ್ಡಾಯವಾಗಿ ಪ್ರದರ್ಶಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಎರಡು ದಿನಗಳ ಹಿಂದಷ್ಟೇ ಸದನದಲ್ಲಿ ಉತ್ತರಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ (Shivaraj Thangadagi) ಈ ನಿಟ್ಟಿನಲ್ಲಿ ಕ್ರಮ ವಹಿಸಿದ್ದಾರೆ. ಈಗ ಶಿವರಾಜ ತಂಗಡಗಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಿದ್ದಾರೆ.
ವಾಣಿಜ್ಯ ಸಂಸ್ಥೆಗಳು, ಉದ್ದಿಮೆಗಳು, ಕೈಗಾರಿಕೆಗಳ ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಭಾಷೆಯಲ್ಲಿ ಇರಬೇಕು ಎಂಬುದು ಸೇರಿದಂತೆ ಕನ್ನಡಿಗರ ಉದ್ಯೋಗದ ಬಗ್ಗೆ ಖಾತ್ರಿಪಡಿಸಲು ತರಲಾದ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆ–2024’ ಕುರಿತು ವಿಧಾನ ಪರಿಷತ್ತಿನಲ್ಲಿ ಚರ್ಚೆ ನಡೆದಿತ್ತು. ಈಗ ಈ ನಿಟ್ಟಿನಲ್ಲಿ ಕ್ರಮವಹಿಸಲು ಸರ್ಕಾರ ಮುಂದಾಗಿದೆ.
ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ಉದ್ದಿಮೆಗಳು ನೇಮಿಸಿಕೊಂಡಿರುವ ಕನ್ನಡಿಗರ ದತ್ತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವ ಬಗ್ಗೆ ಚರ್ಚೆಗಳು ನಡೆದಿದ್ದು, ಈಗ ರೂಪುಗೊಂಡಿರುವ ಸಮಿತಿಯು ಇದಕ್ಕೊಂದು ರೂಪುರೇಷೆಯನ್ನು ಸಿದ್ಧಪಡಿಸಲಿದೆ ಎನ್ನಲಾಗಿದೆ.
ಈ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯೆ ನೀಡಿದ್ದು, ಎಂಎನ್‌ಸಿ ಕಂಪನಿಗಳಲ್ಲಿ ನೇಮಕಗೊಂಡ ಕನ್ನಡಿಗ ಉದ್ಯೋಗಿಗಳ ದತ್ತಾಂಶವನ್ನು ಆಯಾ ಕಂಪನಿಗಳ ಆವರಣದಲ್ಲಿ ಬೋರ್ಡ್ ಮೂಲಕ ಪ್ರದರ್ಶನ ಮಾಡಬೇಕು ಎಂಬ ನಿಟ್ಟಿನಲ್ಲಿ ಶೀಘ್ರ ಕ್ರಮ ವಹಿಸಲಾಗುವುದು. ಈ ನಿಟ್ಟಿನಲ್ಲಿ ನಮ್ಮ ಕಾರ್ಯವಿಧಾನ ಹೇಗಿರಬೇಕು? ಎಂಬ ಬಗ್ಗೆ ಈಗಾಗಲೇ ಸಮಿತಿಯನ್ನು ರಚನೆ ಮಾಡಿದ್ದು, ಅನೇಕ ಇಲಾಖೆಗಳ ಕಾರ್ಯದರ್ಶಿಗಳ ಸಲಹೆಯನ್ನು ಪಡೆಯಲಾಗುತ್ತಿದೆ. ಈ ಬಗ್ಗೆ ನಿಯಮಗಳನ್ನು ರೂಪಿಸಿ ಕೈಗಾರಿಕೆಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.
ಏನಿದರ ಕಾನೂನು ಉದ್ದೇಶ?
ಕರ್ನಾಟಕದಲ್ಲಿರುವ ಕೈಗಾರಿಕೆಗಳು ಉದ್ದಿಮೆ ಸಂಸ್ಥೆಗಳಲ್ಲಿ ಉದ್ಯೋಗಿಗಳ ಭಾಷಿಕ ವಿವರವನ್ನು ಡ್ಯಾಷ್‌ಬೋರ್ಡ್‌ನಲ್ಲಿ ಪ್ರಕಟಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಇದರಿಂದ ಉದ್ದಿಮೆ ಆರಂಭಿಸಿದವರು ಯಾವ ಯಾವ ಭಾಷೆಯವರಿಗೆ ಉದ್ಯೋಗ ನೀಡಿದ್ದಾರೆ. ಅದರಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು ಎಂಬುದನ್ನು ಎಲ್ಲರಿಗೂ ಗೊತ್ತಾಗುವ ರೀತಿಯಲ್ಲಿ ಡ್ಯಾಷ್ ಬೋರ್ಡ್‌ನಲ್ಲಿ ಪ್ರಕಟಿಸುವಂತೆ ಕ್ರಮ ಕೈಗೊಳ್ಳುವುದು ಇದರ ಹಿಂದಿರುವ ಉದ್ದೇಶವಾಗಿದೆ.
ಕನ್ನಡ ನಾಮಫಲಕ ಕಡ್ಡಾಯಕ್ಕೆ ತಗಾದೆ ತೆಗೆದ ಮಹಾರಾಷ್ಟ್ರ, ಕೇಸ್ ಹಾಕಲು ಚಿಂತನೆ
ಕನ್ನಡದ ವಿಚಾರದಲ್ಲಿ ರಾಜ್ಯದೊಂದಿಗೆ ಮಹಾರಾಷ್ಟ್ರ ಸರ್ಕಾರ (Maharashtra Government) ಹೊಸದೊಂದು ತಗಾದೆ ತೆಗೆಯುತ್ತಿದೆ. ರಾಜ್ಯದ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ (60% Kannada in signboards mandatory) ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರದ (Karnataka Government) ನಡೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ (Supreme court) ಪ್ರಶ್ನೆ ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.
ಕರ್ನಾಟಕ ವಿಧಾನ ಪರಿಷತ್ತು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ- 2024 ಅನ್ನು ಅಂಗೀಕರಿಸಿದ ಒಂದು ದಿನದ ನಂತರ, ಮಹಾರಾಷ್ಟ್ರ ಸರ್ಕಾರವು ಅದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.
ರಾಜ್ಯದ ಎಲ್ಲ ಫಲಕಗಳು, ಸೈನ್‌ಬೋರ್ಡ್‌ಗಳಲ್ಲಿ 60 ಪ್ರತಿಶತ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವ ವಿಧೇಯಕದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಏಕನಾಥ್ ಶಿಂಧೆ (Eknath Shinde) ನೇತೃತ್ವದ ಮಹಾರಾಷ್ಟ್ರ ಸರ್ಕಾರ ಸಜ್ಜಾಗಿದ್ದು, ಫೆಬ್ರವರಿ 21ರಂದು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರು ನಡೆಸಿದ ಸಭೆಯಲ್ಲಿ ಈ ನಿರ್ಣಯಕ್ಕೆ ಬಂದಿದ್ದಾರೆ. ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ಸರ್ಕಾರದ ನಡೆ ವಿರುದ್ಧ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಆಕ್ಷೇಪ ವ್ಯಕ್ತಪಡಿಸಿತ್ತು.
ಕರ್ನಾಟಕ- ಮಹಾರಾಷ್ಟ್ರ ಅಂತಾರಾಜ್ಯ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಬಾಕಿ ಇರುವ ಹಿನ್ನೆಲೆಯಲ್ಲಿ ಈ ಚಿಂತನೆ ನಡೆದಿದೆ. ಅಂತಾರಾಜ್ಯ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಕರ್ನಾಟಕ ಸರ್ಕಾರ ವಿವಾದಿತ ಪ್ರದೇಶಗಳಲ್ಲಿ, ಮುಖ್ಯವಾಗಿ ಕರ್ನಾಟಕದ ನಾಲ್ಕು ಗಡಿ ಜಿಲ್ಲೆಗಳಲ್ಲಿ ಈ ಕಾಯಿದೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂಬುದು ಮಹಾರಾಷ್ಟ್ರ ಸರ್ಕಾರ ಮತ್ತು ಎಂಇಎಸ್‌ನ ವಾದವಾಗಿದೆ.
ಬೆಳಗಾವಿಯಲ್ಲಿನ ಎಂಇಎಸ್ ನಿಯೋಗ ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಕೊಲ್ಲಾಪುರದಲ್ಲಿ ಭೇಟಿ ಮಾಡಿದೆ. “ಕರ್ನಾಟಕದಲ್ಲಿ ಮರಾಠಿಗರು ಎದುರಿಸುತ್ತಿರುವ ಮಾನಸಿಕ ಕಿರುಕುಳದ ಬಗ್ಗೆ ನಾವು ಸಿಎಂಗೆ ತಿಳಿಸಿದ್ದೇವೆ. ಬೆಳಗಾವಿಯಲ್ಲಿ ವ್ಯಾಪಾರದ ನಾಮಫಲಕಗಳಲ್ಲಿ 60% ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವುದು ಇತ್ಯಾದಿ ನಿಯಮಗಳು ಮರಾಠಿ ನಾಗರಿಕರಿಗೆ ಅವರ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಿದಂತೆʼʼ ಎಂದು ಎಂಇಎಸ್ ವಕ್ತಾರ ವಿಕಾಸ ಕಲಘಟಗಿ ಹೇಳಿದ್ದಾರೆ.
“ಮುಖ್ಯಮಂತ್ರಿಯವರು ವ್ಯಾಪಾರ ನಾಮ ಫಲಕಗಳಲ್ಲಿ ಕನ್ನಡ ಭಾಷೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲು ಬದ್ಧರಾಗಿದ್ದಾರೆ” ಎಂದು ಕಲಘಟಗಿ ಹೇಳಿದರು.
ಕನ್ನಡ ನಾಮಫಲಕ ಅಳವಡಿಕೆಗೆ ಫೆ.28 ಕೊನೆಯ ದಿನ
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ ಅನ್ವಯ ಬೆಂಗಳೂರು ಹಾಗೂ ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳು, ಕಂಪನಿಗಳು, ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ರೀತಿಯ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯ ಮಾಡಲಾಗಿದ್ದು, ಇದನ್ನು ಅಳವಡಿಸಲು ಫೆ.28 ಕೊನೆಯ ದಿನವಾಗಿದೆ.
“ಈ ಆದೇಶ ಪಾಲನೆ ಮಾಡದವರ ಪರವಾನಗಿ ರದ್ದು ಮಾಡುವುದು ಅನಿವಾರ್ಯವಾಗಲಿದೆ. ಕನ್ನಡ ನಾಮಫಲಕ ಅಳವಡಿಸಿದವರಿಗೆ ಬಿಬಿಎಂಪಿ ವತಿಯಿಂದ ಅಭಿನಂದನಾ ಪತ್ರ ನೀಡಲಾಗುವುದು” ಎಂದು ಬಿಬಿಎಂಪಿ ಪ್ರಕಟಣೆ ನೀಡಿದೆ.
ಇದನ್ನೂ ಓದಿ: ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆ ವಾಪಸ್; ರಾಜ್ಯಪಾಲರು ಮರುಪರಿಶೀಲಿಸಲಿ ಎಂದ ಡಿಕೆಶಿ
ಗಡಿ ವಿವಾದ ಸಭೆ
ಈ ನಡುವೆ, ಮಹಾರಾಷ್ಟ್ರ ಸರ್ಕಾರ ಅಂತಾರಾಜ್ಯ ಗಡಿ ವಿವಾದದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿರುವ ಮೊಕದ್ದಮೆಯನ್ನು ಬಲಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ, ಕರ್ನಾಟಕ ಸರ್ಕಾರ 20 ಮೇ 2023ರಂದು ಅಧಿಕಾರ ವಹಿಸಿಕೊಂಡಾಗಿನಿಂದ ಅಂತಾರಾಜ್ಯ ಗಡಿ ವಿವಾದದ ಬಗ್ಗೆ ಒಂದೇ ಒಂದು ಸಭೆ ನಡೆಸಿಲ್ಲ. ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಈ ಬೆಳವಣಿಗೆಗಳ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ತಾಕೀತು ಮಾಡಿದ್ದು, ತ್ವರಿತವಾಗಿ ಕಾರ್ಯನಿರ್ವಹಿಸುವಂತೆ ಒತ್ತಾಯಿಸಿದ್ದಾರೆ.