Site icon Vistara News

K Annamalai: ಕೆ ಅಣ್ಣಾಮಲೈ ಯುಕೆ ಫೆಲೋಶಿಪ್‌ಗೆ ಆಯ್ಕೆ; ಬಿಜೆಪಿ ರಾಜ್ಯಾಧ್ಯಕ್ಷತೆಗೆ ರಾಜೀನಾಮೆ?

K Annamalai

ಲೋಕಸಭಾ ಚುನಾವಣೆಯಲ್ಲಿ (Lok sabha election) ಬಿಜೆಪಿಯಿಂದ (bjp) ತಮಿಳುನಾಡಿನಲ್ಲಿ (tamilnadu) ಸ್ಪರ್ಧಿಸಿ ಸೋತಿದ್ದ ಒಂದು ತಿಂಗಳ ಬಳಿಕ ಕೆ. ಅಣ್ಣಾಮಲೈ ( K Annamalai) ಅವರಿಗೆ ಯುಕೆ (UK) ಫೆಲೋಶಿಪ್‌ ದೊರೆತಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷರೂ ಆಗಿರುವ ಕೆ ಅಣ್ಣಾಮಲೈ ಅವರು ಸದ್ಯದಲ್ಲೇ ಲಂಡನ್‌ಗೆ ತೆರಳಲಿದ್ದಾರೆ. ಯುಕೆ ವಿದೇಶಾಂಗ ಕಚೇರಿಯ ಚೆವೆನಿಂಗ್ ಗುರುಕುಲ ಫೆಲೋಶಿಪ್ ಫಾರ್ ಲೀಡರ್‌ಶಿಪ್ ಮತ್ತು ಎಕ್ಸಲೆನ್ಸ್ ಕಾರ್ಯಕ್ರಮಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಮೂರು ತಿಂಗಳ ಕಾಲ ಅವರು ಅಲ್ಲಿ ನೆಲೆಸಲಿದ್ದಾರೆ.

ಫೆಲೋಶಿಪ್ ಕಾರ್ಯಕ್ರಮವು ಸೆಪ್ಟೆಂಬರ್ ಮಧ್ಯದಲ್ಲಿ ಪ್ರಾರಂಭವಾಗಲಿದ್ದು, ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಮೂಲಗಳ ಪ್ರಕಾರ ಅಣ್ಣಾಮಲೈ ಅವರು 2024ರ ಲೋಕಸಭೆ ಚುನಾವಣೆಗೆ ಮುನ್ನ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು ಮತ್ತು ಮೇ ತಿಂಗಳಲ್ಲಿ ದೆಹಲಿಯಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದರು. ಬ್ರಿಟನ್‌ನಲ್ಲಿ ಕೋರ್ಸ್ ಮುಗಿಯುವವರೆಗೆ ತಮ್ಮನ್ನು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಬಿಜೆಪಿ ಹೈಕಮಾಂಡ್‌ಗೆ ಅಣ್ಣಾಮಲೈ ಅವರು ಮನವಿ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಅಣ್ಣಾಮಲೈ ಅವರು ನಾಗರಿಕ ಸೇವೆಯನ್ನು ತೊರೆದ ಅನಂತರ ಅವರು ಪ್ರಾರಂಭಿಸಿದ ಎನ್‌ಜಿಒ ‘ವೀ ದಿ ಲೀಡರ್ಸ್’ ಪ್ರತಿಷ್ಠಾನದ ಸಂಸ್ಥಾಪಕರಾಗಿ ಚೆವೆನಿಂಗ್ ಗುರುಕುಲ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. ಕಾರ್ಯಕ್ರಮವನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದಲ್ಲಿ ಆಯೋಜಿಸಿದೆ ಎಂದು ಚೆವೆನಿಂಗ್ ವೆಬ್‌ಸೈಟ್ ತಿಳಿಸಿದೆ.

ಯುಕೆ ವಿದೇಶಾಂಗ ಕಚೇರಿಯು 20 ವರ್ಷಗಳಿಗೂ ಹೆಚ್ಚು ಕಾಲ ಫೆಲೋಶಿಪ್ ಕಾರ್ಯಕ್ರಮವನ್ನು ನಡೆಸುತ್ತಿದೆ. ಯುವ ಸಾಧಕರು ಮತ್ತು ಮಧ್ಯಮ ವೃತ್ತಿಪರರು ಹಾಗೂ ವಿವಿಧ ಹಿನ್ನೆಲೆಯ ವೃತ್ತಿಪರರು ಇಲ್ಲಿ ತಮ್ಮ ನಾಯಕತ್ವ ಸಾಮರ್ಥ್ಯವನ್ನು ಪ್ರದರ್ಶಿಸಬಹುದು ಎಂದು ವೆಬ್‌ಸೈಟ್ ಹೇಳಿದೆ. ಈ ಕುರಿತು ಜುಲೈ 26ರಂದು ಬ್ರಿಟಿಷ್ ಹೈ ಕಮಿಷನ್ ಘೋಷಣೆ ಮಾಡಲಿದ್ದು, ಅಣ್ಣಾಮಲೈ ಸೇರಿ ಸುಮಾರು ಹತ್ತು ವೃತ್ತಿಪರರು ಈ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಚೆವೆನಿಂಗ್ ಗುರುಕುಲ ಫೆಲೋಶಿಪ್ 12 ವಾರಗಳ ಕಾರ್ಯಕ್ರಮವಾಗಿದ್ದು, ಇದಕ್ಕಾಗಿ ಪ್ರತಿ ವರ್ಷ 12 ಅಭ್ಯರ್ಥಿಗಳನ್ನು ಭಾರತದಿಂದ ಗುರುಕುಲ ಫೆಲೋಗಳಾಗಿ ಆಯ್ಕೆ ಮಾಡಲಾಗುತ್ತದೆ. 12 ವಾರಗಳ ವಸತಿ ಕೋರ್ಸ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದಲ್ಲಿ ನಡೆಯಲಿದೆ.

ಫೆಲೋಶಿಪ್‌ಗೆ ಸಂಬಂಧಿಸಿದ ಒಂದೆರಡು ಪೂರ್ವ-ಉದ್ದೇಶಿತ ಕಾರ್ಯಕ್ರಮಗಳಿಗೆ ಅಣ್ಣಾಮಲೈ ಈಗಾಗಲೇ ಹಾಜರಾಗಿದ್ದಾರೆ ಮತ್ತು ಸೆಪ್ಟೆಂಬರ್‌ನಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಬಿಜೆಪಿ ಹೈಕಮಾಂಡ್ ರಾಜ್ಯಕ್ಕೆ ಹಂಗಾಮಿ ಅಧ್ಯಕ್ಷರನ್ನು ನೇಮಿಸುವ ನಿರೀಕ್ಷೆಯಿದೆ ಮತ್ತು ಸ್ಥಾನಕ್ಕೆ ಹೆಚ್ಚಿನ ಆಕಾಂಕ್ಷಿಗಳು ಇರುವುದರಿಂದ ತೀವ್ರ ಚರ್ಚೆಗಳು ನಡೆಯುತ್ತಿವೆ.

ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ 2020ರ ಆಗಸ್ಟ್ ನಲ್ಲಿ ಬಿಜೆಪಿ ಸೇರಿದ್ದರು. ‘ಪಕ್ಷದ ನಿಷ್ಠಾವಂತ ಸೈನಿಕ’ ಎಂದು ಗುರುತಿಸಿಕೊಂಡಿರುವ ಅವರು ಪಕ್ಷಕ್ಕೆ ಸೇರಿದಾಗಿನಿಂದ ರಾಜ್ಯದಲ್ಲಿ ಹಲವಾರು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದರ ಜತೆಗೆ ವಿವಾದಗಳಿಗೂ ಕೇಂದ್ರವಾಗಿದ್ದಾರೆ.

ಇದನ್ನೂ ಓದಿ: Narendra Modi: ನೀಟ್‌ ಅಕ್ರಮ ಕುರಿತು ಸಂಸತ್‌ನಲ್ಲಿ ಮೋದಿ ಪ್ರಸ್ತಾಪ; ವಿದ್ಯಾರ್ಥಿಗಳಿಗೆ ಅವರು ಹೇಳಿದ್ದಿಷ್ಟು

2023ರಲ್ಲಿ ಅಣ್ಣಾಮಲೈ ಅವರು ನಾಲ್ಕು ಆಡಿಯೋ ಟೇಪ್‌ಗಳ ಸರಣಿಯನ್ನು ಬಿಡುಗಡೆ ಮಾಡಿದರು. ಅದರ ಮೂಲಕ ಅವರು ಡಿಎಂಕೆ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು. ‘ಡಿಎಂಕೆ ಫೈಲ್‌ಗಳು’ ಎಂಬ ಶೀರ್ಷಿಕೆಯಡಿ, ಆಡಿಯೋ ಟೇಪ್‌ಗಳ ಭಾಗ ಒಂದರಲ್ಲಿ ಪಟ್ಟಿ ಮಾಡಲಾದ ಆಸ್ತಿಗಳು 1.34 ಲಕ್ಷ ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇದು ಸ್ಟಾಲಿನ್ ಅವರ ಕುಟುಂಬ ಸದಸ್ಯರು ಮತ್ತು ಇತರ ಹಿರಿಯ ನಾಯಕರು ಸೇರಿದಂತೆ 12 ವ್ಯಕ್ತಿಗಳ ಒಡೆತನದಲ್ಲಿದೆ ಎಂದು ಅವರು ಆರೋಪಿಸಿದ್ದರು. ಅಣ್ಣಾಮಲೈ ಈ ಬಾರಿ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಅವರ ನಾಯಕತ್ವದಲ್ಲ ಪಕ್ಷ ತಮಿಳುನಾಡಿನಲ್ಲಿ ಶೇಕಡಾವಾರು ಮತ ಗಳಿಕೆಯಲ್ಲಿ ಭಾರಿ ಸಾಧನೆ ಮಾಡಿದೆ.

Exit mobile version