ಬೆಂಗಳೂರು: ರಾಮನಗರದಲ್ಲಿ ರಾಮ ಎನ್ನುವ ಪದ ಇದೆ. ಅದಕ್ಕಾಗಿ ಏನಾದರೂ ಡಿಸಿಎಂ ಡಿ.ಕೆ. ಶಿವಕುಮಾರ್ (Deputy CM DK Shivakumar) ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ಇದು ಸರಿಯಲ್ಲ. ಶಿವಕುಮಾರ್ ಅವರಿಗೆ ರಿಯಲ್ ಎಸ್ಟೇಟ್ ದಾಹ ಇದೆ. ಅವರಿಗೆ ಆ ದಾಹ ಇನ್ನೂ ನೀಗಿಲ್ಲ ಅನ್ನಿಸುತ್ತಿದೆ. ಡಿಕೆಶಿ ಸ್ವಲ್ಪ ವೈಲ್ಡ್ ಆಗುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (Former minister CP Yogeshwar) ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಕನಕಪುರ ಸೇರಿದಂತೆ ರಾಮನಗರವನ್ನು (Kanakapura Row) ಬೆಂಗಳೂರಿಗೆ ಸೇರ್ಪಡೆಗೊಳಿಸುವ ವಿಚಾರವು ರಾಜ್ಯ ರಾಜಕೀಯವಾಗಿ (Karnataka Politics) ಮತ್ತಷ್ಟು ರಂಗು ಪಡೆದುಕೊಂಡಿದೆ.
ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ವಿಚಾರದ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಯ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್, ನನಗೆ ಗೊತ್ತಿರುವ ಪ್ರಕಾರ ಇದು ಸರಿಯಲ್ಲ. ರಾಮನ ರೀತಿಯಲ್ಲಿ ಆಡಳಿತ ಮಾಡಬೇಕು. ಆದರೆ, ಬೆಂಗಳೂರಿನ ಕಸ ತಂದು ಸುರಿಯಲು ಈಗಾಗಲೇ ಅಲ್ಲಿ ವಿರೋಧ ಇದೆ. ಬೆಂಗಳೂರು ಆಡಳಿತವನ್ನು ಸುಧಾರಣೆ ಮಾಡಲಿ. ಬೆಂಗಳೂರು ಇವರು ಅಧಿಕಾರಕ್ಕೆ ಬಂದ ಬಳಿಕ ಐದು ತಿಂಗಳಲ್ಲಿ ಏನೂ ಬದಲಾವಣೆ ಕಾಣಲಿಲ್ಲ ಎಂದು ಹೇಳಿದರು.
ಹೌದು ನಾವೆಲ್ಲರೂ ಬೆಂಗಳೂರಿನವರೇ. ನಾವೆಲ್ಲ ಬೆಂಗಳೂರು ತಾಲೂಕಿಗೆ ಸೇರಿದ್ದೆವು. ಬೆಂಗಳೂರು ಬೆಳೆಯುತ್ತಾ ಹೋಗಿದೆ. ಬೆಂಗಳೂರಿನ ಒತ್ತಡ ಕಡಿಮೆ ಮಾಡಲು ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಅಸ್ತಿತ್ವಕ್ಕೆ ಬಂತು. ಒಂದು ಇಡೀ ದಿನ ಬೆಂಗಳೂರಿಗೆ ಬಂದು ಹೋಗಬೇಕಿತ್ತು. ಈಗ ಆ ಪರಿಸ್ಥಿತಿ ತಪ್ಪಿದೆ. ಡಿಕೆಶಿ ಯಾಕೆ ಹೀಗೆ ಹೇಳಿಕೆ ಕೊಟ್ಟರೂ ಗೊತ್ತಿಲ್ಲ ಎಂದು ಸಿ.ಪಿ. ಯೋಗೇಶ್ವರ್ ಹೇಳಿದರು.
ಬೆಂಗಳೂರು ಒಕ್ಕಲಿಗ ಹತೋಟಿಯಲ್ಲಿರುವ ಪ್ರದೇಶವಾಗಿದೆ. ನಾವೂ ಬೆಂಗಳೂರಿಗೆ ಸೇರಬೇಕು ಅನ್ನೋದು ಅವರ ಬಯಕೆ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ಇದು ಸರಿಯಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆ ಮಾಡಿದ್ದಾರೆ ಅನ್ನೋದು ಮುಖ್ಯವಲ್ಲ. ಆದರೆ, ಡಿ.ಕೆ. ಶಿವಕುಮಾರ್ ಯಾಕೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಸಿ.ಪಿ. ಯೋಗೇಶ್ವರ್ ಹೇಳಿದರು.
ಬೆಂಗಳೂರಿನಿಂದ ರಾಜೀವ್ ಗಾಂಧಿ ಯೂನಿವರ್ಸಿಟಿ ಬರುತ್ತಿದೆ. ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಮಾಡಿದರು. ಇದಕ್ಕೆ ವಿರೋಧ ವ್ಯಕ್ತವಾಗಿ ಪ್ರತಿಭಟನೆಗಳು ನಡೆಯಿತು. ಜನರೂ ಕೂಡ ವಿರೋಧ ಮಾಡುತ್ತಿದ್ದಾರೆ ಎಂದು ಸಿ.ಪಿ. ಯೋಗೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗೋದು ಕಷ್ಟವಿದೆ. ಡಿ.ಕೆ. ಶಿವಕುಮಾರ್ ಅವರಿಗೆ ರಿಯಲ್ ಎಸ್ಟೇಟ್ ದಾಹ ಇದೆ. ಅವರಿಗೆ ಆ ದಾಹ ಇನ್ನೂ ನೀಗಿಲ್ಲ ಅನ್ನಿಸುತ್ತಿದೆ. ಅಧಿಕಾರಕ್ಕೆ ಅಣ್ಣ ತಮ್ಮಂದಿರಂತೆ ಕೈ ಎತ್ತಿದರು. ಕೊನೆಗೆ ಕೈ ಕೊಟ್ಟರು. ಈಗ ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆ ಆಗಿದೆ. ಕಾರ್ಯಕರ್ತರು ಎಲ್ಲರೂ ಒಟ್ಟಾಗಿ ಹೋಗಬೇಕಿದೆ ಎಂದು ಸಿ.ಪಿ. ಯೋಗೇಶ್ವರ್ ಹೇಳಿದರು.
ಬೆಳಗಾವಿ ರಾಜಕಾರಣ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಪಿ. ಯೋಗೇಶ್ವರ್, ಡಿ.ಕೆ. ಶಿವಕುಮಾರ್ ಅವರು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಅವರನ್ನು ಏನೂ ಇಲ್ಲದಾಗಿಂದ ನೋಡುತ್ತಿದ್ದೇನೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ವಿಧಾನಸೌಧದಲ್ಲಿ ಹೊರಗೆ ಕರೆದುಕೊಂಡು ಹೋಗೋದನ್ನು ನಾನು ನೋಡಿದ್ದೇನೆ. ಇದು ರಾಜಕಾರಣ. ನಾವೂ ದೊಡ್ಡವರಾಗಬೇಕು ಅನ್ನೋದು ಇದೆ. ಶಿವಕುಮಾರ್ ಹೆಚ್ಚು ಒಲವು ತೋರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಸಿ.ಪಿ. ಯೋಗೇಶ್ವರ್ ಹೇಳಿದರು.
ಸರ್ಕಾರ ನಿಮ್ಮ ತಪ್ಪಿಂದ ಬಿದ್ದರೆ ನಮ್ಮನ್ನು ದೂಷಿಸಬೇಡಿ
ಡಿ.ಕೆ. ಶಿವಕುಮಾರ್‌ಗೆ ಟೈಮ್ ಕೆಟ್ಟಿದೆ. ಹಾಗಾಗಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಮಾಡೋದರಲ್ಲಿ ಬ್ಯುಸಿಯಾಗಿದ್ದಾರೆ. ನಾನು ಮಾತನಾಡಬಾರದು ಅಂತ ಸುಮ್ಮನಿದ್ದೇನೆ. ಅವರು ಬಾಲಕೃಷ್ಣ ಕಡೆ ಮಾತನಾಡಿಸುತ್ತಾರೆ. ಅಭಿವೃದ್ಧಿ ಪರ ಕೆಲಸ ಮಾಡಿ. ರೈತ ಸಂಕಷ್ಟದಲ್ಲಿ ಇದ್ದಾನೆ. ಸಂಕ್ರಾಂತಿ ಕಳೆದ ಬಳಿಕ ವಿದ್ಯುತ್ ಇರೋದಿಲ್ಲ. ಪಂಚ ಯೋಜನೆ ಯಾವುದೂ ತಲುಪುತ್ತಿಲ್ಲ. ಸರ್ಕಾರ ನಿಮ್ಮ ತಪ್ಪಿಂದ ಬಿದ್ದರೆ ನಮ್ಮನ್ನು ದೂಷಿಸಬೇಡಿ. ವಿಧಾನಸಭೆಯಲ್ಲಿ ನಾವು ಸೋತಿದ್ದೇವೆ. ಮುಂದೆ ಲೋಕಸಭಾ ಚುನಾವಣೆ ಬರುತ್ತಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಕಾಂಗ್ರೆಸ್‌ಗೆ ಯಾರೂ ಕೂಡ ಮತ ಕೊಡಲ್ಲ. ನಾನು ಅಭ್ಯರ್ಥಿ ಆಗೋದರ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ ಎಂದು ಸಿ.ಪಿ. ಯೋಗೇಶ್ವರ್ ಹೇಳಿದರು.
ಸಿದ್ದರಾಮಯ್ಯ ಅವರಿಗೆ ಗೋಲ್ಡನ್ ಅಪಾರ್ಚುನಿಟಿ ಸಿಕ್ಕಿತ್ತು. ಆದರೆ, ಅವರು ಡಿ.ಕೆ. ಶಿವಕುಮಾರ್ ಕಂಡೊಡನೆ ಹಾಗೇ ಸುಮ್ಮನಾಗಿಬಿಡುತ್ತಾರೆ. ಹಿಂದಿನ ಸಿದ್ದರಾಮಯ್ಯ ತರ ಅವರು ಈಗಿಲ್ಲ. ಡಿಕೆಶಿ ತಾವು ಸಿಎಂ ಆಗಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ನೋವಿನಲ್ಲಿದ್ದಾರೆ
ಸಿಎಂ ಸಿದ್ದರಾಮಯ್ಯ ಅವರು ಈಗ ನೋವಿನಲ್ಲಿ ಆಡಳಿತ ನಡೆಸುತ್ತಿದ್ದಾರೆ. ನನಗೆ ಸರಿಸಮಾನವಾಗಿ ಬೇರೆಯವರನ್ನು ತಂದು ಕೂರಿಸಿದ್ದಾರೆ ಎಂಬ ನೋವು ಅವರಿಗೆ ಕಾಡುತ್ತಿದೆ. ಅವರ ಶಾಸಕರೂ ಬೇಸರದಲ್ಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಸೀಟ್ ಗೆದ್ದುಬಂದರೂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲಿಲ್ಲ. ನಾವೂ ಒಮ್ಮೆ ಆಗಲಿ ಬಿಡು ಅಂತ ಸುಮ್ಮನಿದ್ದೆವು. ಇಷ್ಟಾದರೂ ಆಗಲಿಲ್ಲ ಅಂದರೆ ಮತ್ತೆ ಸಿಎಂ ಆಗುವುದು ಕಷ್ಟವಿದೆ ಎಂದು ಸಿ.ಪಿ. ಯೋಗೇಶ್ವರ್ ಹೇಳಿದರು.
ಇದನ್ನೂ ಓದಿ: Bangalore Weather : 10 ವರ್ಷದಲ್ಲೇ ಬೆಂಗಳೂರಲ್ಲಿ ಕನಿಷ್ಠ ತಾಪಮಾನ; ದಿಢೀರ್ ಚಳಿಯಾಗಲು ಬಿಸಿಲೇ ಕಾರಣ!
ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ನಮ್ಮನ್ನು ಬೇರೆ ರೀತಿ ನೋಡುತ್ತಿದ್ದಾರೆ. ಈಗ ಬೆಂಗಳೂರು ಗ್ರಾಮಾಂತರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಬೆಂಗಳೂರು ಉತ್ತರಕ್ಕೆ ಬಂದು ಸ್ಪರ್ಧೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ರಾಜಕಾರಣ ಸಾಕು, ನಿಲ್ಲೋದಿಲ್ಲ ಅಂತಾರೆ. ಮೇಕೆದಾಟು ಕಟ್ಟುತ್ತೇನೆ ಎಂದು ಹೇಳುತ್ತಾರೆ. ಈಗ ಏನು ಮಾಡಬೇಕು ಅಂತ ಜನ ಕಾಯುತ್ತಿದ್ದಾರೆ. ಅಧಿಕಾರ ಕೊಟ್ಟು ಬಿಟ್ಟಿದ್ದಾರೆ. ಕಾಲ ಬರಲಿ ಅಂತ ಕಾಯುತ್ತಿದ್ದಾರೆ ಎಂದು ಸಿ.ಪಿ. ಯೋಗೇಶ್ವರ್ ಕಿಡಿಕಾರಿದರು.