Site icon Vistara News

Kannada signboard rules: ಶೇ.60 ಕನ್ನಡ ಬಳಕೆ: ಮಾ. 12ಕ್ಕೆ ಎಲ್ಲ ಜಿಲ್ಲಾಧಿಕಾರಿಗಳಿಂದ ಅನುಷ್ಠಾನ ವರದಿ ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ಕನ್ನಡ ನಾಮಫಲಕ ಅಳವಡಿಕೆ (Kannada signboard rules) ಸಂಬಂಧ ಖುದ್ದು ಜಿಲ್ಲಾಧಿಕಾರಿಗಳು ವಿಧಾನಸಭಾ ಕ್ಷೇತ್ರವಾರು ಭೇಟಿ ನೀಡಿ, ನಾಮಫಲಕ ಅಳವಡಿಕೆ ಪ್ರಗತಿ ಕುರಿತು ಮಾ.12ರಂದು ವರದಿ ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್‌. ತಂಗಡಗಿ (Shivaraj Tangadagi) ಸೂಚನೆ ನೀಡಿದ್ದಾರೆ.

ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024ಕ್ಕೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಚಿವ ಶಿವರಾಜ್ ತಂಗಡಗಿ ವಿಕಾಸಸೌಧದಲ್ಲಿ ಗುರುವಾರ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಈ ವೇಳೆ ವಿಧೇಯಕದಲ್ಲಿನ ಅಂಶಗಳ ಕಟ್ಟುನಿಟ್ಟಿನ ಅನುಷ್ಠಾನ ಕುರಿತಂತೆ ಹಲವು ನಿರ್ದೇಶನಗಳನ್ನು ನೀಡಿದ್ದಾರೆ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡಲು ಸೂಚನೆ

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024ದ ಅನ್ವಯ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಭಾಷೆ ಇರಲೇಬೇಕು. ಅದಕ್ಕೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆಗಳಲ್ಲಿನ ಪ್ರಗತಿ ಕುರಿತಂತೆ ಖುದ್ದು ಜಿಲ್ಲಾಧಿಕಾರಿಗಳೇ ಪರಿಶೀಲನೆ ನಡೆಸಬೇಕು. ನಿಮ್ಮ ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಪ್ರಗತಿಯನ್ನು ಅವಲೋಕಿಸಬೇಕು. ಮಾ. 12ರೊಳಗೆ ಪರಿಶೀಲನೆ ನಡೆಸಿ, ವಿಧೇಯಕ ಅನುಷ್ಠಾನದ ಕುರಿತು ವರದಿ ನೀಡಬೇಕು ಎಂದು‌ ಶಿವರಾಜ್ ತಂಗಡಗಿ ಹೇಳಿದರು.‌

ಈವರೆಗಿನ ಪ್ರಗತಿ ವರದಿ ನೀಡಿ

ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಅಳವಡಿಕೆಯ ಗಡುವು ಮಾ. 15ರವರೆಗೆ ಮುಂದೂಡಲಾಗಿದ್ದರೂ, ಈವರೆಗಿನ ಪ್ರಗತಿಯ ವರದಿ ನೀಡಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ‌ ನೇತೃತ್ವದಲ್ಲಿ ಜಿಲ್ಲಾ ಸಮಿತಿ ಹಾಗೂ ತಾಲೂಕು ಮಟ್ಟದಲ್ಲಿ‌ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು. ಯಾವುದೇ ಕೆಲಸ ಇದ್ದರೂ ಕಾರಣಗಳನ್ನು ‌ಕೇಳುವುದಿಲ್ಲ. ಖುದ್ದು ಜಿಲ್ಲಾಧಿಕಾರಿಗಳು ತಮ್ಮ ಅಧ್ಯಕ್ಷತೆಯ ಸಭೆ ನಡೆಸಬೇಕು ಎಂದು ಶಿವರಾಜ್ ತಂಗಡಗಿ ಸೂಚನೆ‌ ನೀಡಿದರು.

ಈ ಎಲ್ಲ ಕಡೆ ವಿಶೇಷ ಗಮನ ಹರಿಸಿ

ಗಡಿ ಜಿಲ್ಲೆಗಳಾದ ಬೆಳಗಾವಿ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು, ದಕ್ಷಿಣ ಕನ್ನಡಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಆ ಜಿಲ್ಲೆಗಳಲ್ಲಿ ಕನ್ನಡಪರ ಸಂಘಟನೆಗಳು ಹೆಚ್ಚಾಗಿ ಪ್ರತಿಭಟನೆ ನಡೆಸುತ್ತಿದ್ದು, ಅದನ್ನು ನಿಯಂತ್ರಿಸಲು ಕನ್ನಡ ನಾಮಫಲಕ ಅಳವಡಿಕೆ ಶೇ. 100ರಷ್ಟು ಆಗಬೇಕು. ಖಾನಾಪುರ, ನಿಪ್ಪಾಣಿ, ಚಿಕ್ಕೋಡಿಯಂತಹ ತಾಲೂಕುಗಳಲ್ಲಿ ಮರಾಠಿ ನಾಮಫಲಕ ಅಳವಡಿಕೆಯ ದೂರುಗಳಿದ್ದು, ಅವುಗಳನ್ನು ತೆರವುಗೊಳಿಸಿ ಕನ್ನಡ ನಾಮಫಲಕ ಅಳವಡಿಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಿವರಾಜ್ ತಂಗಡಗಿ ತಾಕೀತು ಮಾಡಿದರು.

ಲೈಸೆನ್ಸ್‌ ರದ್ದು, ದಂಡ ಹಾಕುವ ಎಚ್ಚರಿಕೆ ನೀಡಿ

ಕನ್ನಡ ನಾಮಫಲಕ ಅಳವಡಿಕೆ ಕುರಿತಂತೆ ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ನಾಮಫಲಕ ಅಳವಡಿಸದವರಿಗೆ ನೋಟಿಸ್‌ ನೀಡಬೇಕು. ಕನ್ನಡ ನಾಮಫಲಕ ಅಳವಡಿಸದಿದ್ದರೆ ಉದ್ದಿಮೆ ಪರವಾನಗಿ ರದ್ದು ಸೇರಿದಂತೆ ದುಬಾರಿ ದಂಡ ವಿಧಿಸಲಾಗುವುದು ಎಂಬ ಎಚ್ಚರಿಕೆಯನ್ನು ಉದ್ದಿಮೆದಾರರಿಗೆ ನೀಡಬೇಕು ಎಂದು ಶಿವರಾಜ್ ತಂಗಡಗಿ ಸೂಚಿಸಿದರು.

ಇದನ್ನೂ ಓದಿ: Kannada signboard rules: ಕರ್ನಾಟಕದಲ್ಲಿ ಕನ್ನಡ ಬೋರ್ಡ್‌ ಕಡ್ಡಾಯ; 2 ವಾರ ಗಡುವು ವಿಸ್ತರಿಸಿದ ಡಿಕೆಶಿ

ಯಾವುದೇ ಕೆಲಸ ಇದ್ದರೂ ಸರ್ಕಾರ ತಂದಿರುವ ಈ ಕಾನೂನನ್ನು ಜಾರಿಗೆ ತರಬೇಕು. ಕೆಲ ಜಿಲ್ಲೆಗಳಿಗೆ ನಾನೇ ಖುದ್ದು ಭೇಟಿ ನೀಡಿ ಪರಿಶೀಲನೆ‌ ನಡೆಸುತ್ತೇನೆ. ಅನುಷ್ಠಾನ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ ಎಂದು ತಿಳಿಸಿದರು‌.
ಈ ಸಂದರ್ಭದಲ್ಲಿ ‌ಇಲಾಖೆ‌ ಕಾರ್ಯದರ್ಶಿ ಅಜಯ್ ನಾಗಭೂಷಣ್, ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಇದ್ದರು.

Exit mobile version