Site icon Vistara News

Caste Census : ಜಾತಿ ಗಣತಿ ವರದಿ ಅವೈಜ್ಞಾನಿಕ ಅನ್ನೋದು ತಪ್ಪೆಂದ ಕಾಂತರಾಜು! ಬಿಜೆಪಿ ಮೇಲೆ ಕೆಂಡ

H Kantharaju on Caste Census report

ಬೆಂಗಳೂರು: ತಮ್ಮ ನೇತೃತ್ವದ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015’ ವರದಿ (ಜಾತಿ ಗಣತಿ – Caste Census) ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.‌ ಕಾಂತರಾಜು ಕೊನೆಗೂ ಮೌನ ಮುರಿದಿದ್ದಾರೆ. ನಾನು ಕೊಟ್ಟ ವರದಿ ನೈಜವಾಗಿ ಹಾಗೂ ವೈಜ್ಞಾನಿಕವಾಗಿ ಇದೆ. ವರದಿಯನ್ನು ನೋಡದೇ ವರದಿ ಅವೈಜ್ಞಾನಿಕ ಅನ್ನೋದು ಸರಿಯಲ್ಲ. 40 ದಿನ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಲಾಗಿದೆ. ವರದಿಯಲ್ಲಿ ತುಂಬಾ ವಾಲ್ಯೂಮ್‌ಗಳು ಇವೆ. ಆದರೆ ಒಂದು ವಾಲ್ಯೂಮ್‌ಗೆ ಕಾರ್ಯದರ್ಶಿ ಸಹಿ ಹಾಕಿಲ್ಲ ಅಷ್ಟೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೆ, ಬಿಜೆಪಿ ರಾಜಕೀಯಕ್ಕಾಗಿ ಮಾತನಾಡುತ್ತಿದೆ ಎಂದು ದೂರಿದ್ದಾರೆ.

ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.‌ ಕಾಂತರಾಜು ಅವರು, ಪ್ರತಿಯೊಬ್ಬರಿಗೂ ಜಾತಿ, ಲಿಂಗ, ಧರ್ಮ, ಆಸ್ತಿ-ಪಾಸ್ತಿ ಎಲ್ಲವೂ ಸೇರಿ ‌ಗಣತಿ ವೇಳೆ 55 ಪ್ರಶ್ನೆಗಳನ್ನು ಕೇಳಿದ್ದೇವೆ. 40 ದಿನ ಸಮೀಕ್ಷೆ ಆದ ಮೇಲೆ ಕೂಲಂಕಷವಾಗಿ ಅಂಕಿ- ಅಂಶಗಳ ಸಮೇತ ವರದಿಯನ್ನು ಸಿದ್ಧ ಮಾಡಲಾಗಿದೆ. ವರದಿ ಈಗ ಸರ್ಕಾರದ ಆಸ್ತಿ. ಸರ್ಕಾರ ವರದಿ ನೋಡಿದ ಬಳಿಕ ಮುಂದಿನ ತೀರ್ಮಾನ ಮಾಡಲಿ ಎಂದು ಹೇಳಿದರು.

ಇದನ್ನೂ ಓದಿ: Caste Census : ನಾಟಕ ಮಾಡ್ತೀರಾ? ಜಾತಿ ಗಣತಿ ಹಗರಣ ಸಿಬಿಐ ತನಿಖೆಯಾಗಲಿ : ಸುನಿಲ್ ಕುಮಾರ್

ಕಾರ್ಯದರ್ಶಿ ಸಹಿ ಇಲ್ಲ ಅನ್ನೋದು ಸರಿಯಲ್ಲ

ಒಕ್ಕಲಿಗರು – ಲಿಂಗಾಯತರು ವಿರೋಧ ಮಾಡಬಹುದು‌. ಆದರೆ, ವರದಿಯನ್ನು ಮೊದಲು ನೋಡಲಿ ಆಮೇಲೆ ಅದು ಸರಿಯಿಲ್ಲ ಎಂದರೆ ವಿರೋಧ ಮಾಡಲಿ. ವರದಿ ನೋಡಿ ಅದರಲ್ಲಿ ತಪ್ಪು ಹುಡುಕಿ ಹೇಳಿದರೆ ನಾನು ಒಪ್ಪಿಕೊಳ್ಳುತ್ತೇನೆ. ಆಯೋಗದಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಕಾರ್ಯದರ್ಶಿ ಸಹಿ ಇಲ್ಲ ಅನ್ನೋದು ಸರಿಯಲ್ಲ. ವರದಿಯಲ್ಲಿ ತುಂಬಾ ವಾಲ್ಯೂಮ್‌ಗಳು ಇವೆ. ಆದರೆ, ಒಂದು ವಾಲ್ಯೂಮ್‌ಗೆ ಕಾರ್ಯದರ್ಶಿ ಸಹಿ ಹಾಕಿಲ್ಲ ಅಷ್ಟೇ ಎಂದು ಎಚ್.‌ ಕಾಂತರಾಜು ಹೇಳಿದರು.

ಮೂಲ ಪ್ರತಿ ಕಾಣೆಯಾಗಿದೆ ಅನ್ನೋದು ನನಗೆ ಗೊತ್ತಿಲ್ಲ. ನಾನು ವರದಿ ಕೊಟ್ಟಿದ್ದು 2019. ನಾನು ಕೊಟ್ಟಾಗ ಮೂಲ ಪ್ರತಿ ಇತ್ತು. ಈಗ ಇಲ್ಲ ಅನ್ನೋದು ನನಗೆ ಗೊತ್ತಿಲ್ಲ. ಈಗ ನಾನು ಹೊರಗೆ ಇದ್ದು ಮಾತನಾಡುವುದು‌ ಸರಿಯಲ್ಲ. ಇದು ಜಾತಿಗಣತಿ ಅಲ್ಲ. ಇದು ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯಾಗಿದೆ ಎಂದು ಎಚ್.‌ ಕಾಂತರಾಜು ಸ್ಪಷ್ಟನೆ ನೀಡಿದರು.

ಬಿಜೆಪಿಯರವರು ರಾಜಕೀಕ್ಕಾಗಿ ಹಾಗೆ ಹೇಳುತ್ತಿದ್ದಾರೆ

21 ಸಚಿವರು ವರದಿಯನ್ನು ರಿಜೆಕ್ಟ್ ಮಾಡಬೇಕು ಎಂಬ ಪತ್ರಕ್ಕೆ ಸಹಿ ಹಾಕಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಚ್.‌ ಕಾಂತರಾಜು, ನಾನು ವರದಿ ಕೊಟ್ಟಿದ್ದೇನೆ. ಯಾರು ಬೇಕಾದರೂ ಅಭಿಪ್ರಾಯ ಹೇಳಬಹುದು. ರಿಜೆಕ್ಟ್ ಮಾಡಿ ಅಂತ ಹೇಳಬಹುದು. ಆದರೆ, ಮೊದಲು ವರದಿ ನೋಡಲಿ ಆಮೇಲೆ ಯಾರು ಏನು ಬೇಕಾದರೂ ಹೇಳಲಿ. ವರದಿ ನೋಡದೇ ಸರಿಯಿಲ್ಲ ಅನ್ನೋದು‌ ಸರಿಯಲ್ಲ. ಬಿಜೆಪಿಯವರು ರಾಜಕೀಯಕ್ಕಾಗಿ ಹಾಗೆ ಹೇಳುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Caste Census : ಜಾತಿ ಗಣತಿ ವರದಿ ಬರೆಸಿದರೇ ಸಿಎಂ? ತನಿಖೆ ನಡೆಸಲು ಆರ್.‌ ಅಶೋಕ್‌ ಸವಾಲು

ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರದ ಅವಧಿಯಲ್ಲಿ ವರದಿ ಸ್ವೀಕಾರ ಮಾಡಿಲಿಲ್ಲವಾ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಚ್.‌ ಕಾಂತರಾಜು, ಕುಮಾರಸ್ವಾಮಿ ಅವರಿಗೆ ಅಪಾಯಿಂಟ್ಮೆಂಟ್‌ ಕೇಳಿದ್ದೆವು. ಆದರೆ, ಅವರು ಸಮಯ ಕೊಡಲಿಲ್ಲ ಎಂದು ಹೇಳಿದರು.

Exit mobile version