ಬೆಂಗಳೂರು: ವಿಧಾನ ಮಂಡಲದ ಉಭಯ ಸದನಗಳ ಕಲಾಪ (Karnataka Assembly Session) ಆರಂಭಗೊಂಡಿದೆ. ಇದೀಗ ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ (UT Khader) ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ನೀಡಿದ್ದು, ಮೂಡಾ ಹಗರಣದ ಚರ್ಚೆಗೆ ಬಿಜೆಪಿ ಆಗ್ರಹಿಸಿದೆ.
ಮೂಡಾ ಹಗರಣವನ್ನು ನಿಲುವಳಿಯಡಿ ಚರ್ಚೆ ನಡೆಸಲು ಅವಕಾಶ ಒದಗಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ. ʼʼನಿಯಮಾವಳಿಯಂತೆ ಸದನ ನಡೆಸಬೇಕು. ನೀವು ಹೇಳಿದ ತಕ್ಷಣ ಅವಕಾಶ ನೋಡಲು ಸಾಧ್ಯವಿಲ್ಲʼʼ ಎಂದು ಬಿಜೆಪಿ ಶಾಸಕರ ಆಗ್ರಹಕ್ಕೆ ಸ್ಪೀಕರ್ ತಿರುಗೇಟು ನೀಡಿದರು. ʼʼಪ್ರಶ್ನೋತ್ತರ ಬದಿಗೊತ್ತಿ ಚರ್ಚೆಗೆ ಅವಕಾಶ ಕೊಡಿ. ಒಂದು ತಿಂಗಳಿನಿಂದ ಇದು ಚರ್ಚೆಯಾಗುತ್ತಿದೆʼʼ ಎಂದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಚರ್ಚೆಗೆ ಆಗ್ರಹಿಸಿದರು.
ʼʼಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಆರೋಪವಿದೆ. ಹಾಗಾಗಿ ಇದರ ಚರ್ಚೆಯ ಅಗತ್ಯವಿದೆ. ನೀವು ಅವಕಾಶ ಕೊಡಿʼʼ ಎಂದ ಬಿಜೆಪಿಯ ಅಶ್ವಥ್ ನಾರಾಯಣ್ ಕೂಡ ಆಗ್ರಹಿಸಿರು. ಆಡಳಿತ ಪಕ್ಷದ ಶಾಸಕರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಚರ್ಚೆಗೆ ಅವಕಾಶ ಕೊಡಿ ಎಂದ ಬಸನಗೌಡ ಯತ್ನಾಳ್
ʼʼಮೂಡಾ ಹಗರಣದಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ ಎಂಬ ಮಾತಿದೆ. ಎಲ್ಲ ಪಾರ್ಟಿಯವರು ಶಾಮೀಲಾಗಿದ್ದಾರೆಂಬ ಶಂಕೆ ಇರುವ ಹಿನ್ನಲೆಯಲ್ಲಿ ಚರ್ಚೆಗೆ ಅವಕಾಶ ಕೊಡಿ. ಎಲ್ಲವೂ ಹೊರಬರಲಿʼʼ ಎಂದಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರೂ ಸ್ಪೀಕರ್ ಬಳಿ ಮನವಿ ಮಾಡಿದರು. ʼʼಈ ವೇಳೆ ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಡಿ. ಆಮೇಲೆ ಬೇಕಾದರೆ ಚರ್ಚೆಗೆ ಅವಕಾಶ ಕೊಡಿʼʼ ಎಂದು ಎಚ್.ಕೆ.ಪಾಟೀಲ್ ಸೂಚಿಸಿದರು.
ದಾಖಲೆ ತೋರಿಸಿದ ಸಚಿವ ಸುರೇಶ್
ಮೂಡಾ ಹಗರಣದ ಚರ್ಚೆಗೆ ಬಿಜೆಪಿ ಒತ್ತಾಯಿಸುತ್ತಿದ್ದಂತೆ ದಾಖಲೆ ತೋರಿಸಿದ ಸಚಿವ ಭೈರತಿ ಸುರೇಶ್ ಅವರು, ʼʼಬಿಜೆಪಿಯವರು ಮಾಡಿರುವ ಅನಾಚಾರದ ಸಾಕ್ಷಿ ಇಲ್ಲಿದೆ. ಒಂದು ಬಂಡಿಯಷ್ಟು ಭ್ರಷ್ಟಾಚಾರ ಇವೆ. ಅದೆಲ್ಲವನ್ನೂ ನಾವು ಬಿಚ್ಚಿಡ್ತೇವೆʼʼ ಎಂದು ಹೇಳಿದರು. ಆಗ ಬಸನಗೌಡ ಯತ್ನಾಳ್ ಮಾತನಾಡಿ, ʼʼಯಾರೆಲ್ಲ ಲೂಟಿ ಮಾಡಿದ್ದಾರೆ ಎನ್ನುವ ಸತ್ಯ ಹೊರಗೆ ಬರಲಿ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಯಾರೇ ಇರಲಿ, ಪಕ್ಷಾತೀತವಾಗಿ ಭ್ರಷ್ಟಾಚಾರ ಹೊರಗೆ ಬರಬೇಕು. ಯಾರು ತಪ್ಪು ಮಾಡಿದ್ದಾರೆ ಅವರನ್ನು ಮುಂದಿನ ಸಾರಿ ಮನೆಗೆ ಕಳಿಸಿ, ಪ್ರಾಮಾಣಿಕರನ್ನ ಇಲ್ಲಿ ಉಳಿಸೋಣʼʼ ಎಂದು ತಿಳಿಸಿದರು. ʼʼಬಿಜೆಪಿಯವರು ನಕಲಿ ದಾಖಲೆ ಕೊಟ್ಟು ಎಕರೆಗಟ್ಟಲೆ ತೆಗೆದುಕೊಂಡಿದ್ದಾರೆ. ಅದೆಲ್ಲವನ್ನೂ ನಾವು ಬಿಚ್ಚಿಡುತ್ತೇವೆʼʼ ಎಂದು ಬಿಜೆಪಿ ಶಾಸಕರಿಗೆ ಸಚಿವ ಭೈರತಿ ತಿರುಗೇಟು ನೀಡಿದರು.
ಇದನ್ನೂ ಓದಿ: NEET: ನೀಟ್ ಪರೀಕ್ಷೆಗೆ ವಿರೋಧ, ಬೆಂಗಳೂರು ವಿಭಜನೆಗೆ ಅಸ್ತು; ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯಕರಾಗಿ ಛಲವಾದಿ ನಾರಾಯಣ ಸ್ವಾಮಿ ನೇಮಕವಾಗಿದ್ದು, ಸಭಾಪತಿ ಬಸವರಾಜ ಹೊರಟ್ಟಿ ಅಧಿಕೃತವಾಗಿ ಘೋಷಿಸಿದರು. ಸಚಿವ ಕೃಷ್ಣಭೈರೇಗೌಡ ಮಾತನಾಡಿ, ʼʼಛಲವಾದಿ ನಾರಾಯಣ ಸ್ವಾಮಿ ಅವರು ಪರಿಷತ್ ವಿಪಕ್ಷ ನಾಯಕರಾಗಿ ನೇಮಕ ಆಗಿದ್ದಾರೆ. ಅವರು ತಮ್ಮ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಲಿ. ಒಂದು ಸರ್ಕಾರದಲ್ಲಿ ಸಮರ್ಥವಾದ ವಿಪಕ್ಷ ಇರಬೇಕು. ಆಗ ಜನಪರ ಕೆಲಸ ಮಾಡಲು ಸಾಧ್ಯವಾಗಲಿದೆ. ರಚನಾತ್ಮಕ ವಿಪಕ್ಷವಾಗಿ, ಸಕಾರಾತ್ಮಕವಾಗಿ ಟೀಕೆ ಟಿಪ್ಪಣಿ ಮಾಡಲಿ, ಈ ಜವಾಬ್ದಾರಿಯಿಂದ ನಿಮಗೂ ಶ್ರೇಯಸ್ಸು ಸಿಗಲಿ. ವಿಪಕ್ಷ ನಾಯಕರಿಗೆ ಅಭಿನಂದನೆ ತಿಳಿಸುತ್ತೇನೆʼʼ ಎಂದು ಹೇಳಿದರು.