Site icon Vistara News

Karnataka Assembly Session: ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣದ ಚರ್ಚೆಗೆ ಪ್ರತಿಪಕ್ಷಗಳ ಬಿಗಿ ಪಟ್ಟು: ಅಧಿವೇಶನ Live ಆಗಿ ನೋಡಿ

Karnataka Assembly Session

Karnataka Assembly Session

ಬೆಂಗಳೂರು: ವಿಧಾನ ಮಂಡಲದ ಉಭಯ ಸದನಗಳ ಮಳೆಗಾಲದ ಅಧಿವೇಶನದಲ್ಲಿ (Karnataka Assembly Session) ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತು ಮುಡಾ ಹಗರಣ ಸದ್ದು ಮಾಡುತ್ತಿದೆ. ಈ ವಿಚಾರದಲ್ಲಿ ಚರ್ಚೆ ನಡೆಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್‌ ಶಾಸಕರು ಪಟ್ಟು ಹಿಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಮುಡಾ ಹಗರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌ (R Ashok) ಈಗಾಗಲೇ ಘೋಷಿಸಿದ್ದು ಇಂದೂ ಉಭಯ ಸದನಗಳಲ್ಲಿ ಕೋಲಾಹಲ ಉಂಟಾಗುವ ಸಾಧ್ಯತೆ ಇದೆ.

ಈ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಬುಧವಾರ ರಾತ್ರಿ ವಿಧಾನಸೌಧದಲ್ಲೇ ಕಳೆದರು. ಸದನದ ಬಾವಿಯೊಳಗೇ ಹಾಡು, ಭಜನೆಯ ಮಾಡಿದ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು, ಸ್ವಂತ ಖರ್ಚಿನಲ್ಲಿಯೇ ಊಟ ತರಿಸಿಕೊಂಡು ಊಟ ಮಾಡಿದರು. ಬಳಿಕ ಸೋಫಾ, ನೆಲದ ಮೇಲೆ ಮಲಗಿದರು.

ವಿಧಾನಸೌಧದಲ್ಲಿ ಸ್ಪೀಕರ್‌ ಊಟೋಪಚಾರವನ್ನು ತಿರಸ್ಕರಿಸಿದ ಪ್ರತಿಪಕ್ಷ ನಾಯಕರು, ಸ್ವಂತ ಖರ್ಚಿನಲ್ಲೇ ವಿಧಾನಸೌಧಕ್ಕೆ ಊಟ ತರಿಸಿಕೊಂಡು ಊಟ ಮಾಡಿದ್ದು, ಭ್ರಷ್ಟಾಚಾರದ ಹಣದಲ್ಲಿ ನಾವು ಊಟ ಮಾಡುವುದಿಲ್ಲ ಎಂದು ಅವರು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಶಾಸಕರಾದ ಸುರೇಶ್‌ ಕುಮಾರ್‌, ಬಸನಗೌಡ ಪಾಟೀಲ್‌ ಯತ್ನಾಳ್‌ ಸೇರಿ ಹಲವು ನಾಯಕರು ಅಹೋರಾತ್ರಿ ಧರಣಿ ನಡೆಸಿದರು. ʼʼತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಧರಣಿ ನಿಲ್ಲುವುದಿಲ್ಲʼʼ ಎಂದು ಆರ್.‌ಅಶೋಕ್‌ ತಿಳಿಸಿದರು.

ಶಾಸಕ ಅರವಿಂದ್ ಬೆಲ್ಲದ್ ಪ್ರತಿಕ್ರಿಯಿಸಿ, ʼʼಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ಕಲ್ಪಿಸಬೇಕು. ಈ ವಿಚಾರವಾಗಿ ಸೋಮವಾರ ನಾವು ಬೆಂಗಳೂರಿನಿಂದ ಮೈಸೂರು ಮುಡಾವರೆಗೂ ಪಾದಯಾತ್ರೆ ಮಾಡುತ್ತೇವೆ. ಇದು ಬೃಹತ್ ಹಗರಣ, ಇದರ ಚರ್ಚೆ ಆಗಬೇಕುʼʼ ಎಂದು ಹೇಳಿದರು.

ಧರಣಿ ಮುಂದುವರಿಕೆಯ ಎಚ್ಚರಿಕೆ

ಎಂಎಎಲ್‌ಸಿ ರವಿಕುಮಾರ್ ಮಾತನಾಡಿ, ʼʼಸಿಎಂ ಸಿದ್ದರಾಮಯ್ಯ ಪ್ರಾಮಾಣಿಕರಲ್ಲ. ಎಸ್‌ಸಿ ವ್ಯಕ್ತಿಯ ಭೂಮಿ ಕಬಳಿಸಿದ್ದಾರೆ. ಇದರಲ್ಲಿ ಬೃಹತ್ ಹಗರಣ ನಡೆದಿದೆ. ನಿನ್ನೆ ಭಯಬಿದ್ದು ರಾಜಪಾಲರನ್ನ ಭೇಟಿಯಾಗಿದ್ದಾರೆ. ಇವತ್ತು ಕೂಡಾ ಚರ್ಚೆಗೆ ಅವಕಾಶ ಕೇಳ್ತೇವೆ. ನೀಡಲಿಲ್ಲ ಅಂದ್ರೆ ಧರಣಿ ಮುಂದುವರಿಸುತ್ತೇವೆʼʼ ಎಂದು ಸವಾಲು ಹಾಕಿದರು.

ಇದನ್ನೂ ಓದಿ: R Ashok: ಹಗರಣಕೋರರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ; ಆರ್. ಅಶೋಕ್‌ ಘೋಷಣೆ

ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದೇನು?

ಬಿಜೆಪಿ ಆರೋಪದ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ್ದ ಸ್ಪೀಕರ್ ಯು.ಟಿ.ಖಾದರ್ ಅವರು, ʼʼಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಹಕ್ಕಿದೆ. ಅವರಲ್ಲಿ ನಾನು ಮನವಿ ಮಾಡಿದ್ದೇನೆ. ಆದರೂ ಧರಣಿಯನ್ನ ಮುಂದುವರಿಸಿದ್ದಾರೆ. ಅವರಿಗೆ ಬೇಕಾದ ವ್ಯವಸ್ಥೆ ಮಾಡಲಾಗುವುದು. ಬೆಡ್, ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ನೆಮ್ಮದಿಯಿಂದ ಧರಣಿ ಮಾಡಲಿʼʼ ಎಂದಿದ್ದರು. ಮೂಡಾ ಹಗರಣವನ್ನು ನಿಲುವಳಿಯಡಿ ಚರ್ಚೆ ನಡೆಸಲು ಅವಕಾಶ ಒದಗಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಾಗ, ʼʼನಿಯಮಾವಳಿಯಂತೆ ಸದನ ನಡೆಸಬೇಕು. ನೀವು ಹೇಳಿದ ತಕ್ಷಣ ಅವಕಾಶ ನೋಡಲು ಸಾಧ್ಯವಿಲ್ಲʼʼ ಎಂದು ಸ್ಪೀಕರ್ ತಿರುಗೇಟು ನೀಡಿದ್ದರು. ಒಟ್ಟಿನಲ್ಲಿ ಪ್ರತಿಪಕ್ಷಗಳು ಇಂದು ಕೂಡ ಈ ಬಗ್ಗೆ ಚರ್ಚೆ ನಡೆಸಲು ಪಟ್ಟು ಹಿಡಿಯುವುದು ಸ್ಪಷ್ಟವಾಗಿದ್ದು, ಸರ್ಕಾರದ ನಡೆ ಕುತೂಹಲ ಮೂಡಿಸಿದೆ.

Exit mobile version