ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery water Dispute) ಸಂಬಂಧಪಟ್ಟಂತೆ ರಾಜ್ಯಾದ್ಯಂತ ಜನರ ಆಕ್ರೋಶ ಭುಗಿಲೆದ್ದಿದೆ. ಕರ್ನಾಟಕ ಬಂದ್ (Karnataka Bandh) ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನೆ ಮಾಡಿ ರಾಜ್ಯದ ಎಲ್ಲ ಕಡೆ ಜನರು ಬೀದಿಗೆ ಇಳಿದಿದ್ದಾರೆ. ಈ ನಡುವೆ ಪ್ರತಿಪಕ್ಷ ಬಿಜೆಪಿ ಸಹ ರಾಜ್ಯ ಸರ್ಕಾರದ (State Government of Karnataka) ಮೇಲೆ ಮುಗಿಬಿದ್ದಿದೆ. ರಾಜ್ಯದ ಜನತೆಯ ಪರವಾಗಿ ನ್ಯಾಯ ಕೇಳಿದೆ. ಕಾವೇರಿ ವಿವಾದವನ್ನು ನಿರ್ವಹಣೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಂಸದರಾದ ತೇಜಸ್ವಿ ಸೂರ್ಯ (MP Tejasvi Surya), ಪಿ.ಸಿ. ಮೋಹನ್, ಶಾಸಕರಾದ ಸಿ.ಕೆ. ರಾಮಮೂರ್ತಿ, ಎಸ್. ರಘು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ರಾಜ್ಯದಲ್ಲಿ ರೈತಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಬಂದ್‌ಗೆ ಕರೆ ಕೊಟ್ಟಿವೆ. ರೈತರ ಈ ಹೋರಾಟದ ಪರ ಬಿಜೆಪಿಯು ಸಂಪೂರ್ಣವಾಗಿ ನಿಂತಿದೆ. ಇವತ್ತಿನ ಬಂದ್ ಅನ್ನು ಬೆಂಬಲಿಸಿದ್ದೇವೆ. ನಮ್ಮಲ್ಲೇ ಕೊರತೆ ಇದ್ದಾಗಿಯೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಸಿಡಬ್ಲ್ಯೂಆರ್‌ಸಿ, ಸಿಡಬ್ಲ್ಯೂಎಂಎಗಳ ಮುಂದೆ ರಾಜ್ಯದ ಸಂಕಷ್ಟ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.
ನೀರಿನ ವಿಚಾರದಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ. ಬೇರೆಯವರ ಮೇಲೆ ಗೂಬೆ ಕೂರಿಸಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುತ್ತಿದೆ. ನಾಡು, ನುಡಿ, ಜಲಕ್ಕಾಗಿ ಬಿಜೆಪಿ, ಜೆಡಿಎಸ್ ಒಂದಾಗಿ ಹೋರಾಟ ನಡೆಸುತ್ತಿದೆ. ಈ ವರ್ಷ ಅತಿ ಕಡಿಮೆ ಮಳೆ ಬಂದಿದೆ. ಶೇಕಡಾ 60ರಷ್ಟು ಮಳೆ ಕೊರತೆ ಆಗಿದೆ. ಕಾವೇರಿ ಕೊಳ್ಳದ 34 ತಾಲೂಕುಗಳ ಪೈಕಿ 32 ತಾಲೂಕುಗಳಲ್ಲಿ ಗಂಭೀರ ಬರ ಇದೆ. ಇಷ್ಟಾದರೂ ರಾಜ್ಯ ಸರ್ಕಾರ ಎಚ್ಚೆತ್ತಿಲ್ಲ ಎಂದು ತೇಜಸ್ವಿ ಸೂರ್ಯ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕೆಆರ್‌ಎಸ್‌ನಲ್ಲಿ ಕೇವಲ 50 ಟಿಎಂಸಿ ಅಡಿ ನೀರು ಇದೆ. ಮುಂಗಾರು ಮಳೆ ಕೈಕೊಟ್ಟಿದೆ. ಮತ್ತೆ ಮಳೆ ಬರುವ ಮುನ್ಸೂಚನೆ ಇಲ್ಲ. ತಮಿಳುನಾಡಿನಲ್ಲಿ ಮುಂಗಾರು, ಹಿಂಗಾರುಗಳಲ್ಲಿ ಮಳೆ ಬಂದಿದೆ. ಇವತ್ತು ನಾವು ನೀರು ಬಿಟ್ಟು ನಂತರ ತಮಿಳುನಾಡಿನಲ್ಲಿ ಮಳೆ ಬಂದರೆ, ವಾಪಸ್ ನೀರುನ್ನು ನಮಗೆ ಪಂಪ್ ಮಾಡಿ ಅಂತ ಸಿಡಬ್ಲ್ಯೂಆರ್‌ಸಿ ಆದೇಶ ಮಾಡುತ್ತಾ? ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದರು.
ಸ್ಟಾಲಿನ್ ಜತೆ ಸಿಎಂ ಮಾತನಾಡಲಿ
ರಾಜ್ಯದ ಸಂಸದರು ಏನ್ ಮಾಡುತ್ತಿದಾರೆ ಅಂತ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡುತ್ತಿದ್ದಾರೆ. ನಾವು ಬಿಜೆಪಿ ಸಂಸದರು ಯಾವತ್ತೂ ಕಾವೇರಿ ಪರ, ರಾಜ್ಯದ ಹಿತ ಪರ ಇದ್ದೇವೆ. ಕಾಂಗ್ರೆಸ್ ರಾಜಕೀಯ ಮಾಡಬಾರದು. ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರಲ್ಲೂ ಸ್ಪಷ್ಟತೆ ಇಲ್ಲ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಜತೆ ನಮ್ಮ ಸಿಎಂ ಸಿದ್ದರಾಮಯ್ಯ ಮಾತಾಡಲಿ. ಈ ಮೂಲಕ ಸಮಸ್ಯೆಗೆ ಪರಿಹಾರ ಹುಡುಕಲಿ. ಮೇಕೆದಾಟು ಯೋಜನೆಗೂ ಒಪ್ಪಿಗೆ ಸಿಗುವ ಲಕ್ಷಣ ಇದೆ. ಮೇಕೆದಾಟು ಯೋಜನೆಯಾದರೆ ಕಾವೇರಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಸ್ಟಾಲಿನ್ ಅವರು ನಮ್ಮ ಲೆಹರ್ ಸಿಂಗ್ ಭೇಟಿಗೆ ಅವಕಾಶ ಕೊಡಲಿಲ್ಲ. ಕಾಂಗ್ರೆಸ್ ಮತ್ತು ಡಿಎಂಕೆ ಇಂಡಿಯಾ ಒಕ್ಕೂಟದಲ್ಲಿವೆ. ಹೀಗಾಗಿ ಸಿದ್ದರಾಮಯ್ಯ ಅವರು ಹೋದರೆ ಸ್ಟಾಲಿನ್ ಮಾತನಾಡುತ್ತಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಸಿಡಬ್ಲ್ಯೂಆರ್‌ಸಿ ತಜ್ಞರನ್ನು ರಾಜ್ಯಕ್ಕೆ ಕಳುಹಿಸಲಿ. ಸಿಡಬ್ಲ್ಯೂಆರ್‌ಸಿ ಎಸಿ ರೂಮ್‌ನಲ್ಲಿ ಕುಳಿತು ಆದೇಶ ಮಾಡುತ್ತಿದೆ. ವಾಸ್ತವ ಸ್ಥಿತಿ ಅರಿಯಲು ತಜ್ಞರನ್ನು ನಮ್ಮ ರಾಜ್ಯಕ್ಕೆ ಕಳುಹಿಸಲಿ ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದರು.
ಸಿಡಬ್ಲ್ಯೂಎಂಎ ಅರೆ ನ್ಯಾಯಿಕ ಸಂಸ್ಥೆಯಾಗಿದೆ. ಅದರ ಎದುರು ರಾಜ್ಯದ ವಾದ ಸರಿ ಇದೆಯಾ ಇಲ್ವಾ ಅಂತ ಪುಷ್ಟಿ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತದೆ. ಸೆ. 25, 26ನೇ ಸಿಡಬ್ಲ್ಯೂಎಂಎ ಸಭೆಗಳಲ್ಲಿ ರಾಜ್ಯದ ಪರ ವಾದಕ್ಕೆ ಕೇಂದ್ರ ಧನಿಗೂಡಿಸಿದೆ. ಕೇಂದ್ರ ಸರ್ಕಾರ ಇದಕ್ಕಿಂತ ಇನ್ನೇನು ಮಾಡಲು ಆಗುತ್ತದೆ ಎಂದು ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದರು.
ಸಂಕಷ್ಟ ಸೂತ್ರ ಬಗೆಹರಿಸಲು ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ ಅಥವಾ ಸಿಡಬ್ಲ್ಯುಆರ್‌ಸಿ ಬಳಿ ಅಧಿಕಾರಿಗಳಿದ್ದಾರೆ. ಉಭಯ ರಾಜ್ಯಗಳ ಅಧಿಕಾರಿಗಳಿದ್ದಾರೆ. ಇದನ್ನು ಮಾಡಬೇಕಿರುವುದು ನಮ್ಮ ರಾಜ್ಯ ಸರ್ಕಾರ. ಆದರೆ, ತಮ್ಮ ಮೈತ್ರಿ ಪಕ್ಷದವರಾದ ತಮಿಳುನಾಡಿವರು ಎಲ್ಲಿ ಬೇಸರ ಮಾಡಿಕೊಳ್ಳುತ್ತಾರೋ ಎಂಬ ಆತಂಕದಲ್ಲಿ ಕಾಂಗ್ರೆಸ್ ಇದೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಕೋಲಾರ ಸರ್ಕಲ್‌ನಲ್ಲಿ ತಲ್ವಾರ್; ಖಂಡನೆ
ಕೋಲಾರ ಸರ್ಕಲ್‌ನಲ್ಲಿ ತಲ್ವಾರ್ ಹಾಕಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ತೇಜಸ್ವಿ ಸೂರ್ಯ, 75 ವರ್ಷದಿಂದ ಕೋಲಾರದಲ್ಲಿ ಕ್ಲಾಕ್ ಟವರ್ ಇತ್ತು. ಸ್ವಾತಂತ್ರ್ಯೋತ್ಸವದ ವಿಜಯೋತ್ಸವ ವಿಜೃಂಬಿಸಲು ಅದು ಇತ್ತು. ಆದರೆ, ಆ ಕ್ಲಾಕ್ ಟವರ್ ಕೆಲವು ಸಮಾಜ ಬಾಹಿರ ಕೃತ್ಯ ನಡೆಸುವವರ ಕೈಯಲ್ಲಿತ್ತು. ತ್ರಿವರ್ಣ ಧ್ವಜ ಹಾರಿಸೋದು ಬಿಟ್ಟು. ಹಸಿರು ಬಟ್ಟೆ, ಅರ್ಧ ಚಂದ್ರ ಹಾಕಲಾಗಿತ್ತು. ಸಂಸದ ಮುನಿಸ್ವಾಮಿ ಅವರ ಶ್ರಮದಿಂದ ಅಲ್ಲಿ ತ್ರಿವರ್ಣ ಧ್ವಜ ಹಾರಿಸಲಾಯಿತು. ದುರಾದೃಷ್ಟವಶಾತ್ ನಮ್ಮ ಸರ್ಕಾರ ಹೋದ ಬಳಿಕ ಶಂಕಿತ ಪಿಎಫ್‌ಐ ಸಂಘಟನೆ ಬೆಂಬಲಿತ ಕೆಲ ಸಂಘಟನೆಗಳು. ತಲವಾರ್ ಹಾಕಿ ಶಾಂತಿ – ಸೌಹಾರ್ದತೆಯನ್ನು ಕದಡುವ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Karnataka Bandh : ಚಿತ್ರರಂಗವನ್ನು ದೂರಬೇಡಿ, ನಾವಿಲ್ಲಿ ನಿಂತರೆ ಸಮಸ್ಯೆ ಬಗೆಹರಿಯುತ್ತಾ? ಶಿವರಾಜಕುಮಾರ್
ತಲ್ವಾರ್ ವಿಷಯವಾಗಿ ನಾನು ಕೋಲಾರ ಜಿಲ್ಲಾಧಿಕಾರಿ, ಎಸ್‌ಪಿ ಅವರಿಗೆ ಪ್ರಶ್ನೆ ಮಾಡುತ್ತೇನೆ. ಈ ರೀತಿ ದೊಡ್ಡ ತಲ್ವಾರ್ ಅನ್ನು ನೇತುಹಾಕಿ ಎದರಿಸುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಹಾಕುವವರೆಗೂ ನೀವು ಏನು ಮಾಡುತ್ತಿದ್ದೀರಿ? ಇಂಥವರನ್ನ ಪೋಷಿಸುವ ಕೆಲಸವನ್ನು ಮಾಡುತ್ತಿದ್ದೀರಾ? ಅದಕ್ಕೆ ಕುಮ್ಮಕ್ಕು ಕೊಡುತ್ತಿದ್ದೀರಾ? ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ, ಎಸ್‌ಪಿ ಇದಕ್ಕೆ ಉತ್ತರ ಕೊಡಬೇಕು. ಔರಂಗಾಜೇಬ್, ಟಿಪ್ಪು ಸುಲ್ತಾನ್ ಕಾಲ ಹೋಯ್ತು. ನಿಮ್ಮ ತಲವಾರ್ ನೋಡಿ ಹೆದರುವ ಕಾಲ ಹೋಯ್ತು. ಈ ತಲ್ವಾರ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದರು.