Site icon Vistara News

Karnataka Bandh : ಕೆಪಿಸಿಸಿ ಕಚೇರಿಯಲ್ಲಿ ಸಚಿವ ಜಮೀರ್‌ ಭೇಟಿಯಾದ ಕರವೇ ನಾರಾಯಣ ಗೌಡ; ನೆಟ್ಟಿಗರ ಟೀಕೆ!

Karave narayana gowda

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery water Dispute) ಸಂಬಂಧಪಟ್ಟಂತೆ ರಾಜ್ಯಾದ್ಯಂತ ಜನರ ಆಕ್ರೋಶ ಭುಗಿಲೆದ್ದಿದೆ. ಕರ್ನಾಟಕ ಬಂದ್‌ (Karnataka Bandh) ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹುತೇಕ ಕರ್ನಾಟಕ ಸ್ತಬ್ಧವಾಗಿದೆ. ಕನ್ನಡ ಪರ ಹೋರಾಟಗಾರರು, ಸಂಘಟನೆಗಳು, ರೈತರು, ನಾಗರಿಕರು ಬೀದಿಗಿಳಿದು ಕಾವೇರಿ ನೀರಿಗಾಗಿ ಹಕ್ಕನ್ನು ಮಂಡನೆ ಮಾಡುತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆದರೆ, ಈ ಬಾರಿ ಕರ್ನಾಟಕ ಬಂದ್‌ಗೆ ಕರವೇ ಅಧ್ಯಕ್ಷ ಕೆ. ನಾರಾಯಣ ಗೌಡ (Karve President K Narayana Gowda) ಬೆಂಬಲ ವ್ಯಕ್ತಪಡಿಸಿಲ್ಲ. ಶುಕ್ರವಾರ ಎಲ್ಲ ಕಡೆ ಜನರು ಬೀದಿಗೆ ಇಳಿದಿದ್ದರೆ ನಾರಾಯಣ ಗೌಡ ಅವರು ಕೆಪಿಸಿಸಿ ಕಚೇರಿಗೆ (KPCC Office) ಭೇಟಿ ನೀಡಿದ್ದಾರೆ. ಅಲ್ಲಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ (Minister Zameer Ahmed Khan) ಅವರನ್ನು ಭೇಟಿ ಮಾಡಿದ್ದಾರೆ.

ಕಾವೇರಿ ನೀರಿಗಾಗಿ ಕನ್ನಡ ಪರ ಸಂಘಟನೆಗಳಿಂದ ಕರ್ನಾಟಕ ಬಂದ್ ಮಾಡಲಾಗುತ್ತಿದ್ದರೂ ಕರವೇ ನಾರಾಯಣ ಗೌಡಗೆ ಮಾತ್ರ ಕಾಂಗ್ರೆಸ್ ಸಚಿವರ ಭೇಟಿ ಮಾಡಿರುವುದು ಕುತುಹೂಲಕ್ಕೆ ಕಾರಣವಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ಸಚಿವ ಜಮೀರ್ ಅಹ್ಮದ್‌ ಖಾನ್‌ ಅವರನ್ನು ಭೇಟಿಯಾಗಿ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: Karnataka Bandh : ಕನ್ನಡ ಹೋರಾಟಗಾರರ ಬಂಧನಕ್ಕೆ ಎಚ್‌ಡಿಕೆ ಆಕ್ಷೇಪ, ತಕ್ಷಣ ಬಿಡುಗಡೆಗೆ ಆಗ್ರಹ

ಕಾವೇರಿ ವಿಚಾರದಲ್ಲಿ ನಾರಾಯಣಗೌಡ ಅವರ ಮೌನದ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ, ಅವರ ಬೆಂಬಲ ಕೊಡಬೇಕಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಪೋಸ್ಟ್‌ ಮಾಡಲಾಗುತ್ತಿದೆ. ನಾರಾಯಣಗೌಡ ಅವರ ನಡೆಯನ್ನು ಟೀಕಿಸಲಾಗುತ್ತಿದೆ.

ಕಾಂಗ್ರೆಸ್‌ ರಕ್ಷಣಾ ವೇದಿಕೆಯೇ ಎಂದು ಟೀಕೆ

ಸೋಷಿಯಲ್‌ ಮೀಡಿಯಾದಲ್ಲಿ ನಾರಾಯಣ ಗೌಡ ಅವರ ನಡೆಯನ್ನು ಪ್ರಶ್ನೆ ಮಾಡಿರುವ ಕೆಲವರು, ಕರ್ನಾಟಕ ಬಂದ್‌ಗೆ ಏಕೆ ಬೆಂಬಲ ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಅವರದ್ದು ಕರ್ನಾಟಕ ರಕ್ಷಣಾ ವೇದಿಕೆ ಅಲ್ಲ, ಕಾಂಗ್ರೆಸ್ ರಕ್ಷಣಾ ವೇದಿಕೆ ಎಂದು ಹಲವರು ಟೀಕೆ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ಕೆಪಿಸಿಸಿ ಕಚೇರಿಗೆ ನಾರಾಯಣ ಗೌಡ ಆಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಚಿವ ಜಮೀರ್‌ ಜತೆ ಚರ್ಚೆ

ಕೆಪಿಸಿಸಿ ಕಚೇರಿಗೆ ಆಗಮಿಸಿದ ನಾರಾಯಣ ಗೌಡ ಅವರು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ಕೊಠಡಿಗೆ ಹೋಗಿದ್ದಾರೆ. ಅಲ್ಲಿ ಅವರು ಒಳ ಹೋಗುತ್ತಿದ್ದಂತೆ ಕೊಠಡಿಯ ಬಾಗಿಲನ್ನು ಹಾಕಿಕೊಳ್ಳಲಾಗಿದೆ. ಇದಾದ ಬಳಿಕ ಸಚಿವ ಜಮೀರ್‌ ಹಾಗೂ ನಾರಾಯಣ ಗೌಡ ಅವರು ಕೆಲ ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ. ಅವರು ಯಾವ ವಿಚಾರವನ್ನು ಚರ್ಚೆ ಮಾಡಿದ್ದಾರೆ ಎಂಬುದು ಮಾತ್ರ ಬಹಿರಂಗವಾಗಿಲ್ಲ.

ಕಾವೇರಿ ವಿಚಾರ ಬಂದಾಗ ನನ್ನಷ್ಟು ಹೋರಾಟವನ್ನು ಯಾರೂ ಮಾಡಿಲ್ಲ. ಸರ್ಕಾರವನ್ನು ನನ್ನಷ್ಟು ಯಾರೂ ಪ್ರಶ್ನೆ ಮಾಡಿಲ್ಲ. ರಾಜ್ಯದ 31 ಜಿಲ್ಲೆಗಳಲ್ಲಿಯೂ ನಾವು ಪ್ರತಿಭಟನೆಯನ್ನು ಮಾಡಿದ್ದೇವೆ. ಗುರುವಾರ (ಸೆ. 28) ಕರವೇ ಮಹಿಳಾ ಘಟಕದ ಕಾರ್ಯಕರ್ತೆಯರು ರಾಜ್ಯದ 28 ಸಂಸದರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಬೃಹತ್‌ ರ‍್ಯಾಲಿ ನಡೆಸಿದೆ. ಶುಕ್ರವಾರ ಸಹ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂದು ಕರವೇ ನಾರಾಯಣಗೌಡ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Karnataka Bandh : ಮಂಡ್ಯದಲ್ಲಿ ದಶಪಥ ಹೆದ್ದಾರಿ ಬಂದ್‌ಗೆ ತಯಾರಿ, ತಡೆಯಲು ಪೊಲೀಸರು ರೆಡಿ

ನಮ್ಮಂತೆ ಯಾರಿಂದಲೂ ಹೋರಾಟ ಸಾಧ್ಯವಿಲ್ಲ

ಅಕ್ಟೋಬರ್‌ 10ರಂದು ಕರವೇ ವತಿಯಿಂದ 10 ಸಾವಿರ ಜನ ನವ ದೆಹಲಿಗೆ ಹೋಗುತ್ತಿದ್ದೇವೆ. ಭಾನುವಾರ ಒಂದು ಲಕ್ಷ ಜನ ಕಾರ್ಯಕರ್ತರು ಸೇರಿ ಪ್ರಧಾನಿ ನರೇಂದ್ರ ಮೋದಿಗೆ ರಕ್ತದಲ್ಲಿ ಪತ್ರ ಬರೆಯುತ್ತಿದ್ದೇವೆ. ನಮ್ಮಂತೆ ಯಾರೂ ಸಹ ಹೋರಾಟವನ್ನು ಮಾಡಿಲ್ಲ. ಮಾಡಲು ಸಾಧ್ಯವೂ ಇಲ್ಲ ಎಂದು ಕರವೇ ನಾರಾಯಣ ಗೌಡ ಹೇಳಿದರು.

Exit mobile version