ಬೆಂಗಳೂರು: ರಾಜ್ಯದ ಜನರನ್ನು ಚುನಾವಣೆಗೂ ಮುನ್ನ ಸಂತೃಪ್ತಿಪಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಘೋಷಣೆ ಮಾಡಿದ್ದಾರೆ. ಬಹುತೇಕ ಸಮುದಾಯಗಳು ಹಾಗೂ ವಲಯಗಳನ್ನು ಒಳಗೊಳ್ಳುವ ʼಸಬ್ ಕಾ ಸಾಥ್ʼ ಬಜೆಟ್ ಮಾಡುವ ಪ್ರಯತ್ನ ನಡೆಸಿದ್ದಾರೆ.
ಆದರೆ ಈ ನಿರೀಕ್ಷೆಯನ್ನು ಈಡೇರಿಸಿಕೊಳ್ಳಲು ರಾಝ್ಯದ ಸ್ವಂತ ತೆರಿಗೆ ಆದಾಯದಲ್ಲಿ ವಿಪರೀತ ಗುರಿ ಹೆಚ್ಚಳವನ್ನು ಮಾಡಿದ್ದಾರೆ. ಬಜೆಟ್ ಜತೆಗೆ ಪ್ರಕಟಿಸಲಾಗಿರುವ ಮಧ್ಯಮಾವಧಿ ವಿತ್ತೀಯ ಯೋಜನೆ ವರದಿಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ.
ರಾಜ್ಯದ ಸ್ವಂತ ತೆರಿಗೆಗಳಿಂದ ಮುಂದಿನ ಹಣಕಾಸು ವರ್ಷದಲ್ಲಿ 1,64,653 ಕೋಟಿ ರೂ. ನಿರೀಕ್ಷೆ ಮಾಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯದ ಸ್ವಂತ ತೆರಿಗೆಯಿಂದ 1,31, 883 ಕೋಟಿ ರೂ. ಸಂಗ್ರಹವಾಗಿದೆ. ಅಂದರೆ ಕಳೆದ ವರ್ಷದ ಹೋಲಿಕೆಯಲ್ಲಿ ಬರೊಬ್ಬರಿ ಶೇ.24 ಹೆಚ್ಚಳ ನಿರೀಕೆ ಮಾಡಲಾಗಿದೆ.
ಇದರಲ್ಲಿ ವಾಣಿಜ್ಯ ತೆರಿಗೆಯಿಂದ ಶೇ.26, ಅಬಕಾರಿ ತೆರಿಗೆಯಿಂದ ಶೇ.20.7, ಮೋಟಾರು ವಾಹನ ತೆರಿಗೆಯಿಂದ ಶೇ. 31.1, ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ಶೇ. 26.7, ಇತರೆ ತೆರಿಗೆಗಳಿಂದ ಕಳೆದ ವರ್ಷದ ಹೋಲಿಕೆಯಲ್ಲಿ ಶೇ.10 ಹೆಚ್ಚಳ ನಿರೀಕ್ಷೆ ಮಾಡಲಾಗಿದೆ. ರಾಜ್ಯದ ಸ್ವಂತ ತೆರಿಗೆ ಪ್ರಮಾಣವು 2019-20ರಲ್ಲಿ ಶೇ.8.6, 2020-21ರಲ್ಲಿ -5.1, 2021-22ರಲ್ಲಿ ಶೇ.17 ಬೆಳವಣಿಗೆ ಕಂಡಿತ್ತು. 2022-23ರಲ್ಲಿ ಕೇವಲ ಶೇ.1.7 ಬೆಳವಣಿಗೆ ಕಂಡಿದೆ. ಕಳೆದ ನಾಲ್ಕು ವರ್ಷದಲ್ಲಿ ರಾಜ್ಯದ ಸ್ವಂತ ಆದಾಯ ಹೆಚ್ಚಳ ಕಂಡಿರುವುದು ಗರಿಷ್ಠ ಶೇ.17(2021-22)ಮಾತ್ರ. ಇದೀಗ ಇದ್ದಕ್ಕಿದ್ದಂತೆ ಶೇ.24.8 ಏರಿಕೆ ನಿರೀಕ್ಷಿಸುವುದು ಬಹಳ ಮಹತ್ವಾಕಾಂಕ್ಷೆ ಎನ್ನಲಾಗುತ್ತಿದೆ.
ಈ ಗುರಿಯನ್ನು ತಲುಪಲು ವಿಶೇಷ ಪ್ರಯತ್ನಗಳನ್ನು ಏನು ಮಾಡಲಾಗುತ್ತದೆ? ಮುಂದಿನ ವರ್ಷ ಲೋಕಸಭೆ ಚುನಾವಣೆಗಳೂ ಇರುವುದರಿಂದ ವಾಣಿಜ್ಯ ತೆರಿಗೆ, ಮೋಟಾರು ವಾಹನ ತೆರಿಗೆಗಳನ್ನು ವಿಪರೀತ ಹೆಚ್ಚಿಸಲೂ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರ ನಿರೀಕ್ಷೆಯನ್ನು ಮೀರಲು ಯಾವ ಪ್ರಯತ್ನ ನಡೆಸುತ್ತಾರೆ ಎಂಬ ಕುತೂಹಲವಿದೆ.