ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶುಕ್ರವಾರ 2024-25ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ (Karnataka Budget 2024) ಮಂಡಿಸಿದ್ದಾರೆ. ಆದರೆ, ಬಜೆಟ್ ಮಂಡನೆ ವೇಳೆ ಬಾಯ್ಕಾಟ್ ಮಾಡಿದ್ದ ವಿಪಕ್ಷಗಳು ಈಗ ಸರ್ಕಾರದ ಮೈಮೇಲೆ ಬೀಳಲು ರೆಡಿಯಾಗಿ ಕುಳಿತಿವೆ. ಇತ್ತ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತಿರುಗೇಟು ಕೊಡಲು ಕಾಂಗ್ರೆಸ್ ಸಹ ಪ್ಲ್ಯಾನ್ ಮಾಡಿಕೊಂಡಿದೆ. ಸೋಮವಾರದಿಂದ ಬಜೆಟ್ ಮೇಲೆ ಚರ್ಚೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ವಿಧಾನಸಭಾ ಕಲಾಪವು ರಂಗೇರಲಿದೆ.
ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳ ಪಟ್ಟಿಯನ್ನೇ ತೆರೆದಿಟ್ಟರು. ಇದರಿಂದ ಕುಪಿತಗೊಂಡಿದ್ದ ವಿಪಕ್ಷ ನಾಯಕರು ಬಜೆಟ್ ಮಂಡನೆ ಸಮಯದಲ್ಲಿ ಬಾಯ್ಕಾಟ್ ಮಾಡಿದ್ದರು. “ಏನಿಲ್ಲ.. ಏನಿಲ್ಲ.. ಈ ಬಜೆಟ್‌ನಲ್ಲಿ ಏನಿಲ್ಲ” ಎಂಬ ಪ್ಲೇಕಾರ್ಡ್ ಪ್ರದರ್ಶಿಸಿ ಪ್ರತಿಭಟನೆಯನ್ನೂ ಮಾಡಿದ್ದರು. ಇಷ್ಟಾದರೂ ಸಿಎಂ ಸಿದ್ದರಾಮಯ್ಯ ಅವರು ಬರೋಬ್ಬರಿ 3.15 ಗಂಟೆಗಳ ಕಾಲ ಬಜೆಟ್ ಮಂಡನೆ ಮಾಡಿದ್ದರು.
ಈಗ ಸೋಮವಾರದಿಂದ ನಡೆಯುವ ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆ ಪ್ರಾರಂಭವಾಗಲಿದೆ. ಮೊದಲೇ ಈ ಬಜೆಟ್ ಬಗ್ಗೆ ಕೆಂಡಕಾರಿರುವ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈಗ ಸರ್ಕಾರದ ವಿರುದ್ಧ ಸಮರಕ್ಕೆ ಸಜ್ಜಾಗಿದ್ದಾರೆ. ಸರ್ಕಾರದ ವಿರುದ್ಧ ಅಸ್ತ್ರ ಪ್ರಯೋಗಿಸಲು ಮುಂದಾದ ವಿಪಕ್ಷಗಳು, ಬಜೆಟ್‌ನಲ್ಲಿ ಇರುವ ಲೋಪದೋಷಗಳ ಬಗ್ಗೆ ಪ್ರಸ್ತಾಪ ಮಾಡಲು ಸಿದ್ಧತೆ ನಡೆಸಲಾಗಿದೆ.
ಸಾಲ ಹೆಚ್ಚಳದ ಪ್ರಸ್ತಾಪ
2024-25ನೇ ಸಾಲಿನ ಕರ್ನಾಟಕ ಬಜೆಟ್‌ನ (Karnataka Budget 2024) ಒಟ್ಟು ಗಾತ್ರವು (Budget layout) 3,71,383 ಕೋಟಿ ರೂ. ಆಗಿದೆ. ಅಂದರೆ 2023-24ನೇ ಸಾಲಿನಲ್ಲಿ ಸಿದ್ದರಾಮಯ್ಯ ಅವರೇ ಮಂಡಿಸಿದ ಬಜೆಟ್ (ಗಾತ್ರ 3.27 ಲಕ್ಷ ಕೋಟಿ ರೂ.)ಗಿಂತ ಇದು 44 ಸಾವಿರ ಕೋಟಿ ರೂ. ಹೆಚ್ಚಾಗಿದೆ. ಇಷ್ಟೊಂದು ದೊಡ್ಡ ಗಾತ್ರದ ಬಜೆಟ್ ಮಂಡನೆ ಮಾಡಲು ಸಿದ್ದರಾಮಯ್ಯ ಅವರು ಪಡೆಯಲು ಉದ್ದೇಶಿಸಿದ ಸಾಲದ ಮೊತ್ತ 1,05,246 ಕೋಟಿ ರೂಪಾಯಿ ಆಗಿದೆ. ಸಿದ್ದರಾಮಯ್ಯ ಅವರ ಈ ಬಜೆಟ್‌ನ ಬಳಿಕ ರಾಜ್ಯ ಸರ್ಕಾರದ ಮೇಲಿನ ಸಾಲದ ಹೊರೆಯ (Loan Responsibility) ಪ್ರಮಾಣ 6,65,095 ಕೋಟಿ ರೂ.ಗಳಿಗೆ ಏರಲಿದೆ. ಅಂದರೆ ರಾಜ್ಯದಲ್ಲಿನ ಪ್ರತಿಯೊಬ್ಬ ನಾಗರಿಕನ ತಲೆಯ ಮೇಲೆ ಒಂದು ಲಕ್ಷ ರೂ. ಸಾಲದ ಹೊರೆ ಇರುವಂತಾಗಿದೆ. ಇದೇ ಈಗ ಪ್ರತಿಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ.
ಸಾಲ ಹೆಚ್ಚು ಮಾಡಿದ್ದರ ಬಗ್ಗೆ ಪ್ರಸ್ತಾಪ ಮಾಡಲು ಮುಂದಾಗಿರುವ ಬಿಜೆಪಿ, ಅಲ್ಪಸಂಖ್ಯಾತರಿಗೆ ಬಂಪರ್-ಬಹುಸಂಖ್ಯಾತರಿಗೆ ಏನಿಲ್ಲ ಎಂಬುದರ ಬಗ್ಗೆ ಧ್ವನಿ ಎತ್ತಲು ಮುಂದಾಗಿದೆ. ಅಲ್ಲದೆ, ಇದು ಎಲೆಕ್ಷನ್‌ಗೆ ಸೀಮಿತವಾದ ಬಜೆಟ್ ಎಂದು ಹೇಳಲು ಹೊರಟಿದೆ.
ತಿರುಗೇಟು ಕೊಡಲು ಕಾಂಗ್ರೆಸ್ ಪ್ಲ್ಯಾನ್!
ಇನ್ನು ಬಿಜೆಪಿ ತಂತ್ರಗಾರಿಕೆಗೆ ತಿರುಗೇಟು ನೀಡಲು ರಾಜ್ಯ ಸರ್ಕಾರವೂ ಸಜ್ಜಾಗಿದೆ. ಕೇಂದ್ರ ಸರ್ಕಾರ ಅನುದಾನ ತಾರತಮ್ಯ ಮಾಡಿದೆ ಎಂದು ಆರೋಪಿಸಿ ಈಗಾಗಲೇ ಪ್ರತಿಭಟನೆ ಮಾಡಿರುವ ರಾಜ್ಯ ಸರ್ಕಾರವು, ಈಗ ಇದೇ ವಿಷಯವನ್ನು ಕಲಾಪದಲ್ಲಿ ಪ್ರಸ್ತಾಪ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.
ಇದನ್ನೂ ಓದಿ: BY Vijayendra: ʼವಿಜಯʼ ಸಾರಥ್ಯಕ್ಕೆ 100 ದಿನ; ಕಾರ್ಯಕರ್ತರ ಮನಗೆದ್ದ ವಿಜಯೇಂದ್ರಗೆ ಈಗ ಲೋಕಸಭೆಯೇ ಟಾರ್ಗೆಟ್!
ರಾಜ್ಯಕ್ಕೆ ಜಿಎಸ್‌ಟಿ ಅನ್ಯಾಯವಾಗಿ ಎಂಬ ಬಗ್ಗೆ ಪ್ರಸ್ತಾಪ ಮಾಡಲಿರುವ ಕಾಂಗ್ರೆಸ್ ನಾಯಕರು, ಬಜೆಟ್ ಮಂಡನೆ ಮಾಡುವಾಗ ವಿಪಕ್ಷ ಸದಸ್ಯರು ಸದನದಲ್ಲಿ ಕುಳಿತಿಲ್ಲ. ಹೀಗಾಗಿ ಚರ್ಚೆ ಹೇಗೆ ಮಾಡ್ತೀರಾ ಎಂದು ಪ್ರಶ್ನೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.