ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಕರ್ನಾಟಕದಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿ (Moral Policing) ಬಗ್ಗೆ ಬಿಜೆಪಿ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ವಿಧಾನಸಭೆ ಕಲಾಪದ ವೇಳೆ ಪ್ರಶ್ನೆ ಮಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok), ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆ ಬfgfge ಪ್ರಸ್ತಾಪ ಮಾಡಿದರು.
ವಿಧಾನಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ನಡೆಯುತ್ತಿದೆ. ಹಾವೇರಿಯಲ್ಲಿ ಏನಾಯಿತು? ಮುಸ್ಲಿಂ ಸಮುದಾಯದ ಮಹಿಳೆಯನ್ನು ಆಟೋದಲ್ಲಿ ಹತ್ತಿಸಿಕೊಂಡು ಹೋಗಿ ಏಳು ಮಂದಿ ಸಾಮೂಹಿಕ ಬಲಾತ್ಕಾರ ಮಾಡಲಾಯಿತು. ಆಕೆಯ ಜತೆಗಿದ್ದ ಪುರುಷನನ್ನು ಥಳಿಸಿದ್ದಾರೆ. ಪ್ರಕರಣ ಅಷ್ಟು ಬೆಳೆದಿದ್ದರೂ ಪೊಲೀಸರಿಗೆ ಮಾಹಿತಿ ಇಲ್ಲ. ಪೊಲೀಸರು ಇದನ್ನು ರಾಜಿ ಸಂಧಾನ ಮಾಡಲು ಹೋಗಿದ್ದಾರೆ. ಕೇವಲ 500 ರೂಪಾಯಿಗೆ ಒಂದು ಗ್ಯಾಂಗ್ ರೇಪ್ ಕೇಸ್ ಅನ್ನು ಮುಚ್ಚಿ ಹಾಕಲು ಹೋದರು ಎಂದು ಕಿಡಿಕಾರಿದರು.
ಇದಾದ ಬಳಿಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಧ್ವನಿ ಎತ್ತಿದರು. ಅದಾದ ಬಳಿಕ ಮತ್ತೆ ಪೊಲೀಸರು ಎಂಟ್ರಿ ಆದರು. ಈ ವೇಳೆ ಸಂತ್ರಸ್ತೆಯ ಪತಿ ಮಾತನಾಡಿದರು. ಇದೆಲ್ಲ ಮಾಧ್ಯಮಗಳಲ್ಲಿ ಸುದ್ದಿ ಬಂತು. ಬಿಜೆಪಿ ಕಾಲದಲ್ಲಿ ನೈತಿಕ ಪೊಲೀಸ್‌ಗಿರಿ ಅಂತಿದ್ದಿರಿ. ಈಗ ನಿಮ್ಮ ಕಾಲದಲ್ಲಿ ಆಗಿದ್ದು ಏನು? ನಂದಿ ಬೆಟ್ಟಕ್ಕೆ ಜೋಡಿಗಳು ಹೋಗುತ್ತಾರೆ. ನೀಲಗಿರಿ ತೋಪು ಅಲ್ಲಿದ್ದು, ಅಲ್ಲಿಗೆ ಹೋಗಿ ಏನ್ ಮಾಡ್ತಾರೆ? ಎಲ್ಲ ರೆಕಾರ್ಡ್ ಮಾಡಿಕೊಂಡು ಜೀವನ ಪೂರ್ತಿ ಅವರನ್ನು ಪೀಡಿಸುತ್ತಾರೆ. ನಾನು ಇದ್ದಾಗ ಇದಕ್ಕೆಲ್ಲ ಬ್ರೇಕ್ ಹಾಕುವ ಪ್ರಯತ್ನ ಮಾಡಿದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಮಾಡಬೇಕಿದೆ ಎಂದು ಆರ್. ಅಶೋಕ್ ಹೇಳಿದರು.
ಹಾವೇರಿಯ ಸಿಸ್ಟರ್ ಕಥೆ ಏನು?
ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆದಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದ್ದರ ಬಗ್ಗೆ ನಾನಿಲ್ಲಿ ಹೇಳಬೇಕು. “ಅವರೆಲ್ಲ ನಮ್ಮ ಸಹೋದರರು” (There are my brothers) ಅಂತ ಡಿ.ಕೆ. ಶಿವಕುಮಾರ್ ಹೇಳಿದ್ದರು. ಈಗ ಹಾವೇರಿ ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ. ಹಾವೇರಿಯಲ್ಲಿ ನಿಮ್ಮ ಸಿಸ್ಟರ್ ಕಥೆಯೇನು? ಅದಕ್ಕೆ ಡಿ.ಕೆ. ಶಿವಕುಮಾರ್ ಮುಂದೆ ಹೇಳುತ್ತಿದ್ದೇನೆ ಎಂದು ಆರ್. ಅಶೋಕ್ ಹೇಳಿದರು.
ಮೈಸೂರಿನಲ್ಲಿ ತನ್ವೀರ್ ಸೇಠ್ ಮೇಲೆ ಹಲ್ಲೆ ಆಯಿತು. ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಲಾಯಿತು. ಯಾರ ಮೇಲೂ ಕ್ರಮ ತೆಗೆದುಕೊಳ್ಳಲಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಷ್ಟು ಹಾಳಾಗಿದೆ ಎಂದು ಆರ್. ಅಶೋಕ್ ಕಿಡಿಕಾರಿದರು.
ಇದನ್ನೂ ಓದಿ: HSRP Number Plate ಅವಧಿ ಮತ್ತೆ 3 ತಿಂಗಳು ವಿಸ್ತರಣೆ; ವಿಧಾನ ಪರಿಷತ್‌ನಲ್ಲಿ ಸರ್ಕಾರ ಘೋಷಣೆ
ನನಗೇ ನೋಟಿಸ್ ಕೊಟ್ಟಿದ್ದಿರಿ: ಪ್ರಿಯಾಂಕ್ ಖರ್ಗೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಸರ್ಕಾರ ಇದ್ದಾಗ ನಾನು ನೈತಿಕ ಪೊಲೀಸ್‌ಗಿರಿ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದೆ. ಆಗ ನನಗೆ ಮೂರು ನೋಟಿಸ್ ಅನ್ನು ಕೊಟ್ಟಿದ್ದೀರಿ ಎಂದು ಆರಗ ಜ್ಞಾನೇಂದ್ರ ಅವರನ್ನು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, ನಿಮ್ಮ ಬಳಿ ಮಾಹಿತಿ ಇತ್ತು ಅಂತ ನೋಟಿಸ್ ಕೊಟ್ಟಿದ್ದೆವು ಎಂದು ಹೇಳಿದರು.