Site icon Vistara News

Karnataka Budget Session 2024: ಬಿಜೆಪಿಗೆ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ: ಎಚ್‌.ಕೆ. ಪಾಟೀಲ್

HK Patil

ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನ (Karnataka Budget Session 2024) ಆರಂಭವಾಗಿದ್ದು, ಪ್ರತಿಪಕ್ಷ ಬಿಜೆಪಿ ನಾಯಕರು ಕೇಸರಿ ಶಾಲು ಧರಿಸಿ ಬರುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿರುವುದನ್ನು ಸಚಿವ ಎಚ್.ಕೆ ಪಾಟೀಲ್ ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ ನಾಯಕರಿಗೆ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ಎಲ್ಲ ಕಡೆ ರಾಜಕೀಯ ಮಾಡಲು ಹೊರಡುತ್ತಾರೆ. ಇವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಜಂಟಿ ಸದನವನ್ನುದ್ದೇಶಿಸಿ ಮಾಡಿದ ಭಾಷಣದ ತುರವಾಯ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್‌, ಬಿಜೆಪಿಯವರಿಗೆ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯೇ ಇಲ್ಲ. ಇವರು ಎಲ್ಲ ಕಡೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.

ರಾಜ್ಯಪಾಲರು ಉಭಯ ಸದನದಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಭಾಷಣ ಉದ್ದಕ್ಕೂ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ತಿಳಿಸಿದ್ದಾರೆ. ಎಂಟು ತಿಂಗಳ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಹೇಳಿದ್ದಾರೆ. ಬಡತನ ರೇಖೆಯಿಂದ ಬಡವರನ್ನು ಮೇಲೆತ್ತುವ ಗ್ಯಾರಂಟಿಗಳ ಬಗ್ಗೆ ಮಾತಾಡಿದ್ದಾರೆ. ಮಾನವ ಹಕ್ಕುಗಳ ರೀತಿಯಲ್ಲಿ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುತ್ತಿದ್ದೇವೆ. ಅಂಕಿ – ಅಂಶಗಳ ಸಮೇತ ರಾಜ್ಯಪಾಲರು ಹೇಳಿದ್ದಾರೆ. ಕಾನೂ‌ನು ಸುವ್ಯವಸ್ಥೆ, ಜನಪರ ಯೋಜನೆಗಳ ವಿವರಣೆಯನ್ನು ಭಾಷಣದಲ್ಲಿ ತಿಳಿಸಿದ್ದಾರೆ. ಸರ್ಕಾರದ ಸಾಧನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕೇಂದ್ರ ಸರ್ಕಾರ ನಮಗೆ ಬಿಡುಗಡೆ ಮಾಡಬೇಕಾದ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯಪಾಲರ ಭಾಷಣವು ಸರ್ಕಾರದ ಕನ್ನಡಿಯಾಗಿದೆ ಎಂದು ಹೇಳಿದರು.

ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯಕ್ಕೆ ನಾಮಕರಣವಾಗಿ ಐವತ್ತು ವರ್ಷಗಳಾಗಿವೆ. ಶೈಕ್ಷಣಿಕ ಇಲಾಖೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಕಡತಗಳ ವಿಲೇವಾರಿ ವೇಗವಾಗಿದೆ ಎಂದು ಎಚ್‌.ಕೆ. ಪಾಟೀಲ್‌ ಹೇಳಿದರು.

ಇದನ್ನೂ ಓದಿ: Karnataka Budget Session 2024: ಕೇಸರಿ ಶಾಲು ಧರಿಸಿ ಬಂದ ಬಿಜೆಪಿ ಶಾಸಕರು; ಎಡವಿದ ಎಸ್‌.ಟಿ. ಸೋಮಶೇಖರ್

ರಾಜ್ಯಪಾಲರಿಂದ ಸುಳ್ಳು ಹೇಳಿಸಿದ್ದಾರೆ ಎಂಬ ಬಿಜೆಪಿ ಮಾಡಿದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಚ್.ಕೆ ಪಾಟೀಲ್, ಬಿಜೆಪಿಗರ ಪಾಲು ಏನಿದೆ? ಗ್ಯಾರಂಟಿಗಳಲ್ಲಿ ಅವರ ಪಾಲು ಇದೆಯಾ? ಕೇಂದ್ರ ಸರ್ಕಾರ ಏನು‌ ಸಹ ಮಾಡಿಲ್ಲ ಎಂದು ನಾವು ಹೇಳಿದ್ದೇವೆ. ಅದೇ ಅವರಿಗೆ ನೋವು ತಂದಿರಬಹುದು. ಅಸೂಯೆಯಿಂದ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಯಾವ ಅಂಕಿ ಅಂಶಗಳು ತಪ್ಪು ಇದ್ದಾವೆ ಎಂದು ಚರ್ಚೆ ಸಂದರ್ಭದಲ್ಲಿ ಹೇಳಲಿ ಸರ್ಕಾರ ಉತ್ತರ ಕೊಡಲಿದೆ ಎಂದು ಎಚ್.ಕೆ. ಪಾಟೀಲ್ ಹೇಳಿದರು.

Exit mobile version