ಬೆಂಗಳೂರು: ಇಂದಿನಿಂದ ವಿಧಾನಮಂಡಲ ಜಂಟಿ ಅಧಿವೇಶನ (Karnataka Budget Session 2024) ಆರಂಭವಾಗಿದ್ದು, ಪ್ರತಿಪಕ್ಷ ಬಿಜೆಪಿ ನಾಯಕರು ಕೇಸರಿ ಶಾಲು ಧರಿಸಿ ಬರುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಹನುಮಧ್ವಜ, ಭಗವಾಧ್ವಜ, ಕೇಸರಿ ಧ್ವಜಗಳ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಈಗ ಕೇಸರಿ ಶಾಲನ್ನು (saffron shawls) ಧರಿಸಿ ಆಗಮಿಸಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ (R Ashok), ರಾಜ್ಯ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ (V Sunil Kumar), ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಎಲ್ಲ ಬಿಜೆಪಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಕೇಶರಿ ಶಾಲನ್ನು ಧರಿಸಿ ಬಂದಿದ್ದರು. ಆದರೆ, ರೆಬೆಲ್ ಶಾಸಕ ಎಂದು ಗುರುತಿಸಿಕೊಂಡಿರುವ ಮಾಜಿ ಸಚಿವ ಹಾಗೂ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ (ST Somashekar) ಮಾತ್ರ ಕೇಸರಿ ಶಾಲನ್ನು ಧರಿಸಿ ಬಂದಿರಲಿಲ್ಲ.
ಎಸ್.ಟಿ. ಸೋಮಶೇಖರ್ ಹೊರತುಪಡಿಸಿ ಉಳಿದ ಶಾಸಕರು ಕೇಸರಿ ಶಾಲನ್ನು ಧರಿಸಿ ಬಂದಿರುವುದು ಕುತೂಹಲಕ್ಕೆ ಕಾರಣವಾಗಿತ್ತು. ಅವರು ಬಹುಪಾಲು ಕಾಂಗ್ರೆಸ್ ಜತೆಗೆ ಸಾಗುತ್ತಿರುವ ಬಗ್ಗೆ ಈಗಾಗಲೇ ಹಲವು ರೀತಿಯ ನಿದರ್ಶನಗಳು ಸಿಕ್ಕಿವೆ. ಹೀಗಾಗಿ ಅವರನ್ನು ಮಾಧ್ಯಮಗಳು ಈ ವೇಳೆ ಪ್ರಶ್ನೆ ಮಾಡಿದ್ದು, ಅವರ ಉತ್ತರ ಸಹ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಇತ್ತು. ಇನ್ನೂ ಬಿಜೆಪಿಯಲ್ಲಿಯೇ ಇದ್ದೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ಎಸ್.ಟಿ. ಸೋಮಶೇಖರ್, ಕೆಲ ಕಾಲ ಆಲೋಚಿಸಿದರು. ಬಳಿಕ ಎರಡೂ ಕಡೆ ಇದ್ದೇನೆ ಎಂಬರ್ಥದಲ್ಲಿ ಬೆರಳು ತೋರಿಸಿ ಹೊರಟು ಹೋದರು. ಈ ವೇಳೆ ಅವರು ಮೆಟ್ಟಿಲುಗಳ ಮೇಲೆ ಎಡವಿದರು. ಬಳಿಕ ಸಾವರಿಸಿಕೊಂಡು ವಿಧಾನಸೌಧದ ಒಳಗೆ ಹೊರಟರು.
ಜೈ ಶ್ರೀರಾಮ್ ಘೋಷಣೆ ಕೂಗಿದ ಬಿಜೆಪಿ ನಾಯಕರು
ಜೈ ಶ್ರೀರಾಮ ಘೋಷಣೆ ಮೂಲಕ ವಿಧಾನಸಭೆ ಮೊಗಸಾಲೆಯನ್ನು ಬಿಜೆಪಿ ನಾಯಕರು ಪ್ರವೇಶ ಮಾಡಿದರು. ಈ ವೇಳೆ ಸ್ಥಳಕ್ಕೆ ಬಂದ ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ ಅವರಿಗೆ ಬಿಜೆಪಿ ಶಾಸಕ ಮುನಿರತ್ನ ಅವರು ಕೇಸರಿ ಶಾಲು ಹಾಕಿದರು. ಆದರೆ, ಈ ವೇಳೆ ಅದಕ್ಕೆ ವಿರೋಧ ಮಾಡದ ರವಿ ಗಣಿಗ ಅವರು, ಕೇಸರಿ ಶಾಲು ಹಾಕಿಕೊಂಡೇ ವಿಧಾನಸೌಧದ ಮೊಗಸಾಲೆಗೆ ತೆರಳಿದರು.
ಇದಕ್ಕೂ ಮೊದಲು ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ರಾಮಮಂದಿರ ಆಗಬೇಕು ಎಂದು ಲಕ್ಷಾಂತರ ಮಂದಿ ಬಲಿದಾನ ಮಾಡಿದ್ದಾರೆ. ರಾಮರಾಜ್ಯ ಸೃಷ್ಟಿಯಾಗಬೇಕು. ಆ ದೃಷ್ಟಿಯಿಂದ ನಾವು ಕೇಸರಿ ಶಾಲು ಧರಿಸಿ ಅಧಿವೇಶನದಲ್ಲಿ ಭಾಗಿಯಾಗುತ್ತಿದ್ದೇವೆ. ರಾಮ ಶಿಲ್ಪಿ ಕೆತ್ತಿದ್ದವರು ಕರ್ನಾಟಕದವರು. ಹನುಮಂತ ಸಹ ಕರ್ನಾಟಕದವರು ಎಂದು ಹೇಳಿದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕಳಂಕವನ್ನು ಹೊಂದಿದೆ. ಈ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಬಂದಿದೆ. ಕೆಂಪಣ್ಣ ಅವರನ್ನು ಸತ್ಯ ಹರಿಶ್ಚಂದ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಇದೀಗ ಅದೇ ಸತ್ಯ ಹರಿಶ್ಚಂದ್ರ ಕಾಂಗ್ರೆಸ್ ಬಾಗಿಲಿಗೆ ನಿಂತು 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. ಕುಡಿಯುವ ನೀರು, ಮೇವಿಗೆ ಹಾಹಾಕಾರವಿದೆ. ಸಿದ್ದರಾಮಯ್ಯ ಬಂದ ಮೇಲೆ ಬರಗಾಲವಿದೆ. ಗೃಹ ಸಚಿವ ಅಮಿತ್ ಶಾ ಖಾಲಿ ಕೈಯಲ್ಲಿ ಬಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಅಮಿತ್ ಶಾ ಅವರು ಹಣ ಹಿಡಿದು ಬಂದರೆ ಅದರಲ್ಲೂ ಕೂಡ 40 ಪರ್ಸೆಂಟ್ ಕಮಿಷನ್ ಅನ್ನು ನೀವು ಕೇಳುತ್ತೀರಿ ಎಂದೇ ಅವರು ಹಣ ಹಿಡಿದು ಬಂದಿಲ್ಲ ಎಂದು ಆರ್. ಅಶೋಕ್ ಕಾಲೆಳೆದರು.
ಇದನ್ನೂ ಓದಿ: Assembly Session: ಇಂದಿನಿಂದ ಜಂಟಿ ಅಧಿವೇಶನ ಕದನ; 40 ಪರ್ಸೆಂಟ್ ಕಮಿಷನ್ ವರ್ಸಸ್ ಅನುದಾನ ತಾರತಮ್ಯ
ಈಗ ಕಾಂಗ್ರೆಸ್ 40 ಪರ್ಸೆಂಟ್ ಕಮಿಷನ್ ಸರ್ಕಾರ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸ್ವತಃ ಕೆಂಪಣ್ಣ ಅವರೇ ಆರೋಪ ಮಾಡಿರುವುದರಿಂದ ಕಾಂಗ್ರೆಸ್ ಸರ್ಕಾರದ ಮೇಲೆ ಸಿಬಿಐ ತನಿಖೆ ಆಗಬೇಕು. ಇನ್ನು ನಾವು ಈ ಕಮಿಷನ್ ದರೋಡೆಕೋರ ಸರ್ಕಾರ ತೊಲಗುವವರೆಗೂ ಹೋರಾಟ ಮಾಡುತ್ತೇವೆ. ಕಾಂಗ್ರೆಸ್‌ನವರು ಸತ್ಯ ಹರಿಶ್ಚಂದ್ರರು ಎಂದು ಸಾಬೀತು ಆಗಬೇಕೆಂದರೆ ಸಿಬಿಐ ತನಿಖೆ ಆಗಬೇಕು ಎಂದು ಕಿಡಿಕಾರಿದರು.