ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ 15ನೇ ಬಜೆಟ್ (Karnataka Budget Session 2024) ಅನ್ನು ಮಂಡಿಸಿದ್ದು, ನಗರಾಭಿವೃದ್ಧಿ ಯೋಜನೆಗೆ ಹಲವು ರೀತಿಯ ಒತ್ತನ್ನು ನೀಡಿದ್ದಾರೆ. ಇದೇ ವೇಳೆ ತೆರಿಗೆ ಸಂಗ್ರಹಕ್ಕೂ ಒತ್ತು ನೀಡಲಾಗಿದ್ದು, ಬೆಂಗಳೂರು ಹಾಗೂ 10 ಮಹಾನಗರ ಪಾಲಿಕೆಗಳಲ್ಲಿ ವಾಣಿಜ್ಯ ಮತ್ತು ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಗುಡ್ ನ್ಯೂಸ್ ಒಂದನ್ನು ರಾಜ್ಯ ಸರ್ಕಾರ ನೀಡಿದೆ. ಇಲ್ಲಿಯವರೆಗೆ ಇದ್ದ ರಾತ್ರಿ ವೇಳೆಯ ವ್ಯಾಪಾರ ಅವಧಿ (Night time trading period) ನಿರ್ಬಂಧವನ್ನು ವಿಸ್ತರಣೆ ಮಾಡಲಾಗಿದೆ.
ಬೆಂಗಳೂರು ಹಾಗೂ 10 ಮಹಾನಗರ ಪಾಲಿಕೆಗಳಲ್ಲಿ ವಾಣಿಜ್ಯ ಮತ್ತು ವ್ಯಾಪಾರದ ದೃಷ್ಟಿಯಿಂದ ರಾತ್ರಿಯ ವೇಳೆ ವ್ಯಾಪಾರ-ವಹಿವಾಟಿನ ಮೇಲಿನ ನಿರ್ಬಂಧವನ್ನು ಬೆಳಗಿನ ಜಾವ ಒಂದು ಗಂಟೆಯವರೆಗೆ (1:೦೦ am) ವಿಸ್ತರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಇದಲ್ಲದೆ, ಬಿ.ಬಿ.ಎಂ.ಪಿಯಲ್ಲಿ ತೆರಿಗೆ ಮತ್ತು ತೆರಿಗೆಯೇತರ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಸರ್ಕಾರವು ಹಲವು ಉಪಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ, ಯಾವ ರೀತಿ ಮಾಡಲಾಗುವುದು ಎಂಬ ಅಂಶವನ್ನು ತೆರೆದಿಟ್ಟಿದ್ದಾರೆ.
• 2023-24ನೇ ಸಾಲಿನಲ್ಲಿ 4,300 ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ಮುಖಾಂತರ ದಾಖಲೆಯ ತೆರಿಗೆ ಸಂಗ್ರಹ ಮಾಡುವತ್ತ ಮುನ್ನಡೆದಿದೆ. ಇದು 2022-23ನೇ ಸಾಲಿಗಿಂತ 1,000 ಕೋಟಿ ರೂ. ಗಳಷ್ಟು ಹೆಚ್ಚಾಗಿದೆ. 2024-25ರಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸೋರಿಕೆ ತಡೆಗಟ್ಟುವ ಮೂಲಕ 6,000 ಕೋಟಿ ರೂ.ಗಳಷ್ಟು ತೆರಿಗೆ ಸಂಗ್ರಹದ ನಿರೀಕ್ಷೆ ಇದೆ.
• ಪ್ರಸಕ್ತ ಸಾಲಿನಿಂದ ಪರಿಷ್ಕೃತ ಜಾಹೀರಾತು ನೀತಿ ಮತ್ತು Premium FAR ನೀತಿಯನ್ನು ಜಾರಿಗೆ ತರುವ ಮೂಲಕ ಹೆಚ್ಚುವರಿಯಾಗಿ 2,000 ಕೋಟಿ ರೂ.ಗಳಷ್ಟು ತೆರಿಗೆಯೇತರ ಸಂಪನ್ಮೂಲ ಸಂಗ್ರಹಿಸುವ ಗುರಿ ಹೊಂದಲಾಗಿದೆ.
• ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 20 ಲಕ್ಷ ಆಸ್ತಿಗಳ ಆಸ್ತಿ ತೆರಿಗೆ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ 2024-25ನೇ ಸಾಲಿನಿಂದ ಮಾಲೀಕರಿಗೆ ಡಿಜಿಟಲ್ ಇ-ಖಾತಾ ಮತ್ತು ಆಸ್ತಿ ತೆರಿಗೆ ಪಾವತಿ ವಿವರಗಳನ್ನು ದೊರಕಿಸಲಾಗುವುದು.
ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕ್ರಮ
ಮೇಲೆ ವಿವರಿಸಿರುವಂತೆ ಸಂಗ್ರಹವಾಗುವ ಹೆಚ್ಚುವರಿ ಸಂಪನ್ಮೂಲಗಳಿಂದ ಆದ್ಯತೆಯ ಮೇಲೆ ಬೆಂಗಳೂರಿನ ಸಂಚಾರ ದಟ್ಟಣೆಯ ಸಮಸ್ಯೆಯನ್ನು ನಿವಾರಿಸಲು ಸರ್ಕಾರವು ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ.
• ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಗರದ ಪ್ರಮುಖ ರಸ್ತೆಗಳಲ್ಲಿ 147 ಕಿ.ಮೀ ಉದ್ದದ ವೈಟ್ ಟಾಪಿಂಗ್ ಕಾಮಗಾರಿಗಳನ್ನು 1,700 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಮಂಜೂರಾತಿ ನೀಡಲಾಗಿದೆ. ಈ ಕಾಮಗಾರಿಗಳನ್ನು ಡಿಸೆಂಬರ್ 2025 ರೊಳಗೆ ಪೂರ್ಣಗೊಳಿಸಲಾಗುವುದು.
• ಭೂಮಿಯ ಅಲಭ್ಯತೆ ಮತ್ತು ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ತೊಡಕುಗಳ ಕಾರಣ ಅಸ್ತಿತ್ವದಲ್ಲಿರುವ ರಸ್ತೆಗಳ ವಿಸ್ತರಣೆಯು ಅತ್ಯಂತ ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸುರಂಗ ಮಾರ್ಗ (Tunnel) ನಿರ್ಮಿಸುವ ಮೂಲಕ ನಗರದಲ್ಲಿ ಸಂಚಾರ ದಟ್ಟಣೆಯನ್ನು ಬಗೆಹರಿಸಲು ನಿರ್ಧರಿಸಿದೆ. ಈ ವರ್ಷ ಸಂಚಾರ ದಟ್ಟಣೆ ಅತ್ಯಂತ ತೀವ್ರವಾಗಿರುವ ಹೆಬ್ಬಾಳ ಜಂಕ್ಷನ್‌ನಲ್ಲಿ ಪ್ರಾಯೋಗಿಕವಾಗಿ ಟನೆಲ್ ಅನ್ನು ನಿರ್ಮಿಸಲಾಗುವುದು.
• ನಾಲಾ ಬಫರ್ ವಲಯದೊಳಗೆ ನಾಲಾ ಬಫರ್ ಅನ್ನು ಬಳಸಿಕೊಂಡು ಸರ್ವಋತು ರಸ್ತೆಗಳನ್ನು ನಿರ್ಮಿಸುವ
ಹೊಸ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯಡಿ ಈಗಾಗಲೇ 200 ಕೋಟಿ ರೂ. ಅಂದಾಜು ವೆಚ್ಚದಲ್ಲಿ 100 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ 100 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು.
• ಸುಗಮ ಸಂಚಾರ-ಬ್ರಾಂಡ್ ಬೆಂಗಳೂರು ಯೋಜನೆಯಡಿ ಅಂತಾರಾಷ್ಟ್ರೀಯ ಮಟ್ಟದ ತಜ್ಞ ಸಂಸ್ಥೆಯನ್ನು ನೇಮಿಸಿಕೊಳ್ಳಲಾಗಿದೆ. ಈ ಸಂಸ್ಥೆಯು ನೀಡುವ ವರದಿಯನ್ನು ಆಧರಿಸಿ, ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು.
• ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದರ ಜತೆಗೆ ಬೆಂಗಳೂರಿನ ಆರ್ಥಿಕ ಚಟುವಟಿಕೆಯನ್ನು ದೊಡ್ಡ ಪ್ರಮಾಣದಲ್ಲಿ ವೃದ್ಧಿಸಲು ಸಹಕಾರಿಯಾಗುವಂತೆ ಪೆರಿಫೆರಲ್ ರಿಂಗ್ ರೋಡ್ ಅನ್ನು ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂಬ ಹೊಸ ಪರಿಕಲ್ಪನೆಯಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ.
• ಈ ಯೋಜನೆಯಡಿ 73 ಕಿ.ಮೀ. ಉದ್ದದ ರಸ್ತೆಯನ್ನು 27,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡಲು ಆರ್‌ಇಪಿ (RFP) ಕರೆಯಲಾಗಿದೆ. ಈ ಯೋಜನೆಯನ್ನು ಇದೇ ಸಾಲಿನಲ್ಲಿ ಪ್ರಾರಂಭ ಮಾಡಲು ಉದ್ದೇಶಿಸಿದೆ.
ಇದನ್ನೂ ಓದಿ: Karnataka Budget 2024: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮೇಲ್ದರ್ಜೆಗೆ, ಕಾಲೇಜುಗಳಿಗೆ 400 ಕೋಟಿ ಅನುದಾನ
• ಬೆಂಗಳೂರು ನಗರದಲ್ಲಿ 250 ಮೀಟರ್ ಎತ್ತರದ ಸ್ಕೈ-ಡೆಕ್ (Sky-Deck) ನಿರ್ಮಾಣಕ್ಕಾಗಿ ನೂತನ ಪರಿಕಲ್ಪನೆ ಒದಗಿಸುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ವಾಸ್ತುವಿನ್ಯಾಸಗಾರರನ್ನು ಆಹ್ವಾನಿಸಿದೆ. ಇದರಿಂದ ನಗರದ ಒಳಗೆ ಆಕರ್ಷಕವಾದ ಪ್ರವಾಸಿ ತಾಣವನ್ನು ಸೃಜಿಸಿದಂತಾಗುತ್ತದೆ.