ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶುಕ್ರವಾರ (ಫೆ. 16) ಬೆಳಗ್ಗೆ 10.15ಕ್ಕೆ ಬಜೆಟ್ ಮಂಡನೆ (Karnataka Budget Session 2024) ಮಾಡಲಿದ್ದಾರೆ. ಲೋಕಸಭಾ ಚುನಾವಣೆಯ (Lok Sabha Election 2024) ಹಿನ್ನೆಲೆಯಲ್ಲಿ ಈ ಬಜೆಟ್ ಮೇಲೆ ಸಹಜವಾಗಿ ನಿರೀಕ್ಷೆಗಳು ಹೆಚ್ಚಾಗಿವೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಜನಪರ ಬಜೆಟ್ ಮಂಡಿಸಬಹುದು ಎಂಬ ಚರ್ಚೆ ಜೋರಾಗಿದೆ.
ಕಳೆದ ವರ್ಷ 3.27 ಲಕ್ಷ ಕೋಟಿ ರೂಪಾಯಿಯ ಬೃಹತ್ ಗಾತ್ರದ ಕೊರತೆ ಬಜೆಟ್ ಮಂಡಿಸಿದ್ದ ಸಿಎಂ ಸಿದ್ದರಾಮಯ್ಯ, ಈ ಬಾರಿ 3.4 ಲಕ್ಷ ಕೋಟಿ ರೂಪಾಯಿಯನ್ನು ಮೀರಿದ ಬಜೆಟ್ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗ್ಯಾರಂಟಿಗೆ ಗ್ಯಾರಂಟಿ ಕೊಡಲಿರುವ ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳನ್ನು ಮುಂದುವರಿಕೆ ಮಾಡಲು ಶೇಕಡಾ 40ರಷ್ಟು ಹಣವನ್ನು ಮೀಸಲು ಇಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಈ ಮೂಲಕ ಗ್ಯಾರಂಟಿಗಳನ್ನು ನಿಲ್ಲಿಸಲ್ಲ ಎಂದು ಸಂದೇಶವನ್ನು ರವಾನೆ ಮಾಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಹೀಗಾಗಿ ಇದರ ಜತೆಗೆ ಲೋಕಸಭಾ ವೋಟ್ ಬ್ಯಾಂಕ್ ಅನ್ನು ಸಹ ಗ್ಯಾರಂಟಿ ಮಾಡಿಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ.
ಜನಪರ ಬಜೆಟ್ ಮಂಡನೆಗೆ ಸಿದ್ಧತೆ?
ಗ್ಯಾರಂಟಿ ಅಷ್ಟೇ ಅಲ್ಲದೆ ಅಭಿವೃದ್ಧಿಯ ಜಪ ಮಾಡಲೂ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಜನಪರ ಬಜೆಟ್ ಎಂದು ಹೆಸರು ಪಡೆದು ಚುನಾವಣೆಯಲ್ಲಿ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ತಯಾರಿ ಮಾಡಿಕೊಂಡಿದ್ದಾರೆ.
ಅಹಿಂದ ಜಪ ಕಾಯಂ
ಈ ಬಾರಿ ಬಜೆಟ್‌ನಲ್ಲಿಯೂ ಅಹಿಂದ ವರ್ಗಕ್ಕೆ ಬಂಪರ್ ಕೊಡುಗೆಯನ್ನು ನೀಡಲು ಸಿಎಂ ಸಿದ್ದರಾಮಯ್ಯ ಯೋಜಿಸಿದ್ದು, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳಿಗೆ ಭಾರಿ ಕೊಡುಗೆಯನ್ನು ನೀಡಲಿದ್ದಾರೆ ಎನ್ನಲಾಗಿದೆ. ಇರುವ ಎಲ್ಲ ಯೋಜನೆಗಳ ಮುಂದುವರಿಕೆ ಮಾಡಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಈ ವರ್ಗ ಹಿಡಿದಿಟ್ಟುಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ತೆರಿಗೆ ಸಂಗ್ರಹ ಟಾರ್ಗೆಟ್ ಅನ್ನು ದುಪ್ಪಟ್ಟು ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ಭಾರಿ ಟಾರ್ಗೆಟ್ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಯಾವ ಇಲಾಖೆಗೆ ಎಷ್ಟು ಟಾರ್ಗೆಟ್?
- ಅಬಕಾರಿ: 40 ಸಾವಿರ ಕೋಟಿ ರೂಪಾಯಿ ಗುರಿ ಸಾಧ್ಯತೆ
- ವಾಣಿಜ್ಯ ತೆರಿಗೆ: 1.21 ಲಕ್ಷ ಸಾವಿರ ಕೋಟಿ ರೂ. ಟಾರ್ಗೆಟ್ ಸಾಧ್ಯತೆ
- ನೋಂದಣಿ ಮತ್ತು ಮುದ್ರಾಂಕ: 35 ಸಾವಿರ ಕೋಟಿ ರೂ. ಕೊಡುವ ಸಾಧ್ಯತೆ
- ಸಾರಿಗೆ: 20 ಸಾವಿರ ಕೋಟಿ ಕೊಡುವ ಸಾಧ್ಯತೆ
ಒಟ್ಟಾರೆ 2.25 ಲಕ್ಷ ಕೋಟಿ ಈ ನಾಲ್ಕು ಇಲಾಖೆಗಳಿಂದ ಸಂಗ್ರಹಿಸಲು ಸಿಎಂ ಸಿದ್ದರಾಮಯ್ಯ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Karnataka Budget Session 2024: ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿ ಜಾತ್ರೆ! ಪಟ್ಟು, ಮಟ್ಟು ಎಂದು ಕುಟುಕಿದ ಎಚ್‌ಡಿಕೆ
ಅಲ್ಲದೆ, ಜಿಲ್ಲೆಗೊಂದು ಬಂಪರ್ ಕೊಡುವಂತೆ ಶಾಸಕರು ಒತ್ತಾಯ ಮಾಡಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಡಲಿದ್ದು, ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಹಣ ಒದಗಿಸಲಿದ್ದಾರೆ ಎನ್ನಲಾಗಿದೆ.