ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಚುನಾಯಿತ ಪ್ರತಿನಿಧಿ ಮೇಲೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣಗಳು ಚರ್ಚೆಗೆ ಬಂದಿದೆ. ಈ ಸಂಬಂಧ ವಿಧಾನ ಪರಿಷತ್‌ನಲ್ಲಿ (Legislative Council) ಚರ್ಚೆಯನ್ನು ನಡೆಸಲಾಗಿದ್ದು, ಶಾಸಕ ಕೆ. ಗೋಪಾಲಯ್ಯ (K Gopalaiah) ಅವರಿಗೆ ಹಾಕಲಾಗಿರುವ ಕೊಲೆ ಬೆದರಿಕೆ ವಿಷಯ ಮೇಲ್ಮನೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಹೇಳಿದ್ದು, ಕೆಲ ಕಾಲ ವಾಕ್ಸಮರಕ್ಕೆ ಕಾರಣವಾಯಿತು.
ಮಾಜಿ ಸಚಿವ ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ಬಂದಿರುವ ವಿಚಾರವನ್ನು ಪರಿಷತ್‌ನಲ್ಲಿ ಪ್ರಸ್ತಾಪ ಮಾಡಿದ ಕೋಟಾ ಶ್ರೀನಿವಾಸ್ ಪೂಜಾರಿ, ಪದ್ಮರಾಜ್ ಎಂಬುವವರಿಂದ ಕೊಲೆ ಬೆದರಿಕೆ ಬಂದಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ಬೋಸರಾಜು, ಈ ವಿಚಾರವನ್ನು ಪರಿಷತ್‌ನಲ್ಲಿ ಪ್ರಸ್ತಾಪ ಮಾಡಲು ಬರುವುದಿಲ್ಲ. ಮೇಲ್ಮನೆಯಲ್ಲಿ ಇದರ ಬಗ್ಗೆ ಹೇಳಬೇಡಿ ಎಂದು ಹೇಳಿದರು. ಆಗ ಮಧ್ಯ ಪ್ರವೇಶ ಮಾಡಿದ ಸಭಾಪತಿ, ಚುನಾಯಿತ ಸದಸ್ಯರಿಗೆ ಕೊಲೆ ಬೆದರಿಕೆ ಬಂದಾಗ ಇಲ್ಲಿ ಪ್ರಸ್ತಾಪ ಮಾಡಿದರೆ ಯಾವುದೇ ತಪ್ಪು ಆಗುವುದಿಲ್ಲ. ಇಂಥ ಪ್ರಕರಣಗಳಲ್ಲಿ ಕೆಳ ಮನೆ, ಮೇಲ್ಮನೆ ಅಂತ ಬರುವುದಿಲ್ಲ ಎಂದು ಹೇಳಿದರು.
ಆಗ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಗೋಪಾಲಯ್ಯ ಅವರು ಬೆಳಗ್ಗೆ ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ಅದಕ್ಕೆ ಗೃಹ ಸಚಿವರು ಉತ್ತರ ಕೊಟ್ಟಿದ್ದಾರೆ. ಮತ್ತೆ ಇಲ್ಲಿ ಏಕೆ ಈಗ ಚರ್ಚೆ? ಎಂದು ಪ್ರಶ್ನೆ ಮಾಡಿದರು. ಆಗ ಸಚಿವ ಸಂತೋಷ್ ಲಾಡ್, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ನೀಡಿರುವ “ಗುಂಡಿಟ್ಟು ಕೊಲೆ ಮಾಡಿ” ಹೇಳಿಕೆ ಬಗ್ಗೆ ಚರ್ಚಿಸಿ ಎಂದು ಹೇಳಿದರು. ಆಗ ಮಧ್ಯಪ್ರವೇಶ ಮಾಡಿದ ಸಭಾಪತಿ, ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ಹೇಳಿದರು. ಈ ಮಧ್ಯೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ವೇಳೆ ಪುನಃ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಈ ಹಿಂದೆ ನನಗೆ ಕೊಲೆ ಮಾಡಿ ಎಂದು ಬೆದರಿಕೆ ಹಾಕಿದವರಿಗೆ ಬಿಜೆಪಿಯವರು ಟಿಕೆಟ್ ಕೊಟ್ಟಿರಿ. ಆಗ ಏಕೆ ಈ ವಿಚಾರದಲ್ಲಿ ಯಾರೂ ಮಾತನಾಡಿರಲಿಲ್ಲ? ಎಂದು ಪ್ರಶ್ನೆ ಮಾಡಿದರು. ಆಗ ಮಧ್ಯಪ್ರವೇಶ ಮಾಡಿದ ಸಭಾನಾಯಕ ಬೊಸರಾಜು, ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಹೀಗಾಗಿ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಹೇಳಿದರು. ಆಗ ಬಿಜೆಪಿ ಸದಸ್ಯರು ಗೃಹ ಸಚಿವರಿಂದ ಉತ್ತರ ಕೊಡಿಸಿ ಎಂದು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಭಾಪತಿ, ಇದಕ್ಕೆ ಹೆಚ್ಚು ಚರ್ಚೆ ಏಕೆ? ಗೋಪಾಲಯ್ಯ ಅವರ ಜತೆಗೆ ಮೇಲ್ಮನೆ ಇದೆ ಎಂದು ಹೇಳಿದರು. ಆ ವೇಳೆಗೆ ಅಲ್ಲಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆಗಮಿಸಿದರು.
ಈ ವೇಳೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಈಗಾಗಲೇ ಗೋಪಾಲಯ್ಯ ನನಗೆ ಈ ಬಗ್ಗೆ ಹೇಳಿದ್ದಾರೆ. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಶಾಸಕ ಸುರೇಶ್ ಕುಮಾರ್ ಅವರ ಜತೆಗೂ ಹೀಗೆ ನಡೆದುಕೊಂಡಿದ್ದರಂತೆ. ಇದನ್ನು ನಾವು ಹಗುರವಾಗಿ ಪರಿಗಣಿಸಿಲ್ಲ. ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಉತ್ತರಿಸಿದರು.
ವಿಧಾನಸಭೆಯಲ್ಲಿ ಗಮನಕ್ಕೆ ತಂದಿದ್ದ ಗೋಪಾಲಯ್ಯ
ಮಾಜಿ ಕಾರ್ಪೊರೇಟರ್‌ನಿಂದ ಕೊಲೆ ಬೆದರಿಕೆ ಬಂದಿರುವ ಬಗ್ಗೆ ವಿಧಾನಸಭೆಯಲ್ಲಿ ಮಾಜಿ ಸಚಿವ, ಶಾಸಕ ಕೆ. ಗೋಪಾಲಯ್ಯ ಅವರು ಪ್ರಸ್ತಾಪ ಮಾಡಿದ್ದರು. ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ ಗೋಪಾಲಯ್ಯ, ನಾಲ್ಕು ಬಾರಿ ಶಾಸಕನಾಗಿದ್ದೇನೆ, ಮಂಗಳವಾರ ರಾತ್ರಿ ಪದ್ಮರಾಜ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ನನಗೆ ತೀರಾ ಕೆಟ್ಟ ಪದಗಳಿಂದ ನಿಂದನೆ ಮಾಡಿದ್ದಾರೆ. ಜತೆಗೆ ನನ್ನ ಹಾಗೂ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದರು.
ಜನಪ್ರತಿನಿಧಿಗೆ ಹೀಗೆ ಬೆದರಿಕೆ ಹಾಕಿದರೆ ಹೇಗೆ? ಬೇರೆ ಶಾಸಕರಿಗೆ ಹೀಗೆ ಆಗಬಾರದು ಎಂದರೆ ಆತನನ್ನು ಗಡಿಪಾರು ಮಾಡಬೇಕು. ಅಲ್ಲದೆ, ಸರ್ಕಾರ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು. ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಬೇಕು. ನನ್ನ ಕುಟುಂಬದ ಮೇಲೆ ದಾಳಿ ನಡೆಯಬಹುದು. ಹೀಗಾಗಿ ಆತನ ಮೇಲೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ಶಾಸಕರಿಗೆ ರಕ್ಷಣೆ ಕೊಡಲೇಬೇಕು. ಇದರಲ್ಲಿ ರಾಜಕೀಯ ಬೇಡ, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆಗ ಆರಗ ಜ್ಞಾನೇಂದ್ರ ಮಾತನಾಡಿ, ಜನಪ್ರತಿನಿಧಿಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡೀ ಸದನ ಶಾಸಕರ ಬೆಂಬಲಕ್ಕೆ ನಿಲ್ಲಬೇಕು. ಇಂತಹ ದುಷ್ಟ ಶಕ್ತಿ ಮಟ್ಟ ಹಾಕಬೇಕು. ಯಾರೂ ಸಹ ಇದನ್ನು ಬೆಂಬಲಿಸಕೂಡದು ಎಂದು ಹೇಳಿದರು.
ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ಐಆರ್
ಶಾಸಕ ಕೆ. ಗೋಪಾಲಯ್ಯ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಮಾಜಿ ಕಾರ್ಪೊರೇಟರ್ ಪದ್ಮರಾಜು ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಂಗಳವಾರ ರಾತ್ರಿ 11 ಗಂಟೆಗೆ ಗೋಪಾಲಯ್ಯ ಅವರಿಗೆ ಕರೆ ಮಾಡಿದ್ದ ಪದ್ಮರಾಜು, ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾಗಿ ಗೋಪಾಲಯ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ಗೂ ದೂರು ನೀಡಿದ್ದಾರೆ.
ಪದ್ಮರಾಜ್ ಪೊಲೀಸ್ ವಶ, ವಿಚಾರಣೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ಪದ್ಮರಾಜ್ನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಪೊಲೀಸ್ ಆಯುಕ್ತರಿಗೆ ಕೊಟ್ಟ ದೂರಿನಲ್ಲಿ ಏನಿದೆ?
“ಪದ್ಮರಾಜು ಎಸ್. ಮಾಜಿ ಮಹಾನಗರ ಪಾಲಿಕೆ ಸದಸ್ಯರು, ಮಂಗಳವಾರ ರಾತ್ರಿ ಸುಮಾರು 11.00 ಗಂಟೆಗೆ 9632555537 ಮೊಬೈಲ್ ಮುಖಾಂತರ ನನಗೆ ಕರೆ ಮಾಡಿ. ನನಗೆ ಮತ್ತು ನನ್ನ ಕುಟುಂಬಕ್ಕೆ ಅವ್ಯಾಚ್ಯ ಶಬ್ದಗಳಿಂದ ಬೈಯ್ದಿದ್ದಲ್ಲದೆ ನನ್ನನ್ನು ಮತ್ತು ನನ್ನ ಕುಟುಂಬವನ್ನು ನಿರ್ನಾಮ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ.
ಅವರ ಮತ್ತು ನನ್ನ ನಡುವೆ ಯಾವುದೇ ಹಣಕಾಸಿನ ವ್ಯವಹಾರವಿರುವುದಿಲ್ಲ. ಆದರೂ ಸಹ ನನಗೆ ಕರೆ ಮಾಡಿ. ಹಣವನ್ನು ನೀಡುವಂತೆ ಒತ್ತಾಯ ಮಾಡಿದ್ದಲ್ಲದೆ, ಹಣವನ್ನು ನೀಡದೇ ಹೋದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ನನ್ನ ಕಡೆಯ ಹುಡುಗರನ್ನು ಕಳಿಸಿ, ನಿನ್ನ ಇಡೀ ಕುಟುಂಬವನ್ನು ಕೊಲೆ ಮಾಡಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ.
ನನಗೆ ನನ್ನ ಕುಟುಂಬಕ್ಕೆ ಇನ್ನು ಮುಂದೆ ಯಾವುದೇ ರೀತಿಯ ಹಾನಿ ಅಥವಾ ತೊಂದರೆ ಉಂಟಾದರೆ ಸದರಿ ಪದ್ಮರಾಜು. ಎಸ್ ಇವರೇ ಕಾರಣರಾಗಿರುತ್ತಾರೆ. ಈ ಸಂಬಂಧ ನಾನು ದಿನಾಂಕ: 13.02.2024 ರಂದು ರಾತ್ರಿ 11.30 ಗಂಟೆಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತೇನೆ.
ಇದನ್ನೂ ಓದಿ: Karnataka Budget Session 2024: ತಡವಾಗಿ ಬಂದವರ ಮೇಲೆ ಖಾದರ್ ಗರಂ; ಸರ್ಕಾರ ಬೀಳಿಸಲು ನಿಂಬೆ ಹಣ್ಣು ಮಂತ್ರ!
ಈ ನಿಟ್ಟಿನಲ್ಲಿ ಪದ್ಮರಾಜು ಎಸ್. ಇವರನ್ನು ಕೂಡಲೇ ವಿಚಾರಣೆ ನಡೆಸಿ ಅವರನ್ನು ಗಡೀಪಾರು ಮಾಡಬೇಕೆಂದು ಕೋರುತ್ತೇನೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಹಾಗೂ ನನ್ನ ಮತ್ತು ನನ್ನ ಕುಟುಂಬದ ರಕ್ಷಣೆಗೆ ಬೆಂಗಾವಲು ಪಡೆ ಅಗತ್ಯ ಕ್ರಮ ಕೈಗೊಳ್ಳಲು ಕೋರುತ್ತೇನೆ” ಎಂದು ಗೋಪಾಲಯ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ.