Site icon Vistara News

Karnataka Budget Session 2024: ಇನ್ಮುಂದೆ ನಗರಗಳ ಆಸ್ತಿ ನೋಂದಣಿಗೆ ಇ-ಖಾತೆ ಕಡ್ಡಾಯ

Karnataka Budget Session 2024 E khata mandatory for property registration in cities

ಬೆಂಗಳೂರು: ಇನ್ನು ಮುಂದೆ ನಗರ ಪ್ರದೇಶಗಳ ಆಸ್ತಿ ನೋಂದಣಿಗೆ (Property Registration) ಡಿಜಿಟಲ್‌ ಸ್ವರೂಪದ ಇ-ಖಾತಾ (E khata mandatory) ಹಾಜರುಪಡಿಸುವುದನ್ನು ಕಡ್ಡಾಯಗೊಳಿಸುವ ‘ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ-2024’ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಗ್ರಾಮೀಣ ಪ್ರದೇಶಗಳ ಆಸ್ತಿ ನೋಂದಣಿಗೆ ಇ-ಸ್ವತ್ತು ಕಡ್ಡಾಯಗೊಳಿಸಿದ ಮಾದರಿಯಲ್ಲೇ ಇದನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.

ಈ ಮಸೂದೆ ಅನುಸಾರ ಡಿಜಿಟಲ್‌ ಸ್ವರೂಪದಲ್ಲಿ ಹಾಜರುಪಡಿಸುವ ಕೆಲವು ದಾಖಲೆಗಳನ್ನು ಎರಡೂ ಕಡೆಯವರ ಖುದ್ದು ಹಾಜರಿ ಇಲ್ಲದೆ ಕಡ್ಡಾಯವಾಗಿ ನೋಂದಣಿಗೆ ಅವಕಾಶ ಕಲ್ಪಿಸಬಹುದಾಗಿದೆ. ಈ ಸಂಬಂಧ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿತ್ತು. ಅದನ್ನು ಅನುಷ್ಠಾನಕ್ಕೆ ತರಲು ಈ ತಿದ್ದುಪಡಿ ಮಸೂದೆ ರೂಪಿಸಲಾಗಿದೆ. ಇದೇ ಮಸೂದೆಯಲ್ಲಿ ಇ-ಖಾತಾ ಕಡ್ಡಾಯಗೊಳಿಸುವ ಅಂಶವೂ ಇದೆ.

“ವಿದ್ಯುನ್ಮಾನ ಮಾಧ್ಯಮದ ಸಾಧನಗಳ ಮೂಲಕ ಇತರ ಇಲಾಖೆಯ ತಂತ್ರಾಂಶದೊಂದಿಗೆ ಸಂಯೋಜಿಸಿದ ಹೊರತು ಸ್ಥಿರ ಸ್ವತ್ತಿನ ವರ್ಗಾವಣೆ ಅಥವಾ ಪರಭಾರೆ ಮಾಡುವಂತಿಲ್ಲ” ಎಂಬುದನ್ನು ನೋಂದಣಿ ಕಾಯ್ದೆ-1908ರ ಸೆಕ್ಷನ್‌ 71-ಎಗೆ ಸೇರಿಸಲಾಗಿದೆ.

ಪೇಪರ್ ಖಾತಾ ನೋಂದಣಿಗೆ ತಡೆ

ನೋಂದಣಿ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ಹಣ ಸೋರಿಕೆಯನ್ನು ತಡೆಯುವ ಸಲುವಾಗಿ ಪೇಪರ್ ಖಾತಾ ನೋಂದಣಿಗೆ ತಡೆಯೊಡ್ಡಲು ವಿಧೇಯಕದಲ್ಲಿ ತಿದ್ದುಪಡಿ ತರಲಾಗಿದೆ ಎಂದು ಸದನದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಸದನಕ್ಕೆ ಈ ಕುರಿತು ಮಾಹಿತಿ ನೀಡಿದ ಅವರು,“ನಗರ ಭಾಗದಲ್ಲಿ ಪೇಪರ್ ಖಾತಾ ಮೂಲಕವೂ ನೋಂದಣಿ ನಡೆಸಲಾಗುತ್ತಿದೆ. ಅನೇಕ ಪ್ರಕರಣಗಳಲ್ಲಿ ನಕಲಿ ಪೇಪರ್ ಖಾತಾ ಬಳಸಿ ನೋಂದಣಿ ಮಾಡುತ್ತಿರುವುದು ತಿಳಿದುಬಂದಿದೆ. ಅಲ್ಲದೆ, ಈ ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ರೆವೆನ್ಯೂ ಲೇಔಟ್‌ಗಳಲ್ಲಿ ಮೂಲ ಮಾರ್ಗಸೂಚಿ ದರವನ್ನೇ ಇಳಿಸಿ ನೋಂದಣಿ ಮಾಡಲಾಗಿತ್ತು. ಪರಿಣಾಮ ಸರ್ಕಾರಕ್ಕೆ 400 ಕೋಟಿ ರೂ. ನಷ್ಟ ಉಂಟಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸಿದ್ದರಾಮಯ್ಯನವರು 28 ಜನ ಉಪ ನೋಂದಣಾಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶಿಸಿದ್ದರು. ಆದರೆ, ವಿಚಾರಣೆ ನಡೆಸಿದ್ದ ಸಮಿತಿ, ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ನಿಯಮ ಉಲ್ಲಂಘನೆ ನಡೆದಿರುವುದು ಕಂಡುಬಂದಿಲ್ಲ ಎಂದು ವರದಿ ನೀಡಿದ್ದರು. ಪರಿಣಾಮ ಎಲ್ಲಾ 28 ಜನ ಉಪ ನೋಂದಣಾಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಲಾಗಿತ್ತು” ಎಂದು ಅವರು ವಿಷಾದಿಸಿದರು.

“ಇಂತಹ ಪ್ರಕರಣಗಳಲ್ಲಿ ಉಪ ನೋಂದಣಾಧಿಕಾರಿಯನ್ನು ಅಮಾನತು ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಏಕೆಂದರೆ ಅವರು ಒಂದೇ ದಿನದಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ. ಪರಿಣಾಮ ಸರ್ಕಾರದ ಮರ್ಯಾದೆ ಹರಾಜಾಗುತ್ತದೆ. ಹೀಗಾಗಿ ಸಮಸ್ಯೆಯ ಮೂಲವನ್ನು ಹುಡುಕಿ ಅದಕ್ಕೆ ಚಿಕಿತ್ಸೆ ನೀಡಬೇಕಿದೆ. ಇದೇ ಕಾರಣಕ್ಕೆ ವಿಧೇಯಕದಲ್ಲಿ ಮತ್ತೊಂದು ತಿದ್ದುಪಡಿಯನ್ನು ತರಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಇದನ್ನೂ ಓದಿ: Karnataka Budget Session 2024: ಪ್ರೀಮಿಯಂ ಎಫ್ಎಆರ್ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ

ಇನ್ನು ಮುಂದೆ ಇ-ಆಸ್ತಿ ಮೂಲಕ ಖಾತೆ ಆಗಿದ್ದರೆ ಮಾತ್ರ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೌಸಿಂಗ್ ಬೋರ್ಡ್ ಹಾಗೂ ಕಾವೇರಿ ಡೇಟಾಬೇಸ್‌ನಿಂದ ಅಸಲಿ ಖಾತಾ ಪರಿಶೀಲನೆ ನಡೆಸಿದ ನಂತರವೇ ನೋಂದಣಿ ಮುಂದುವರಿಯಲಿದೆ. ಆ ಮೂಲಕ ಇ-ಖಾತಾವನ್ನು ನೀಡಲಾಗುವುದು. ಇಂತಹ ಕ್ರಮಗಳಿಂದ ಅಕ್ರಮಗಳಿಗೂ ತಡೆಯೊಡ್ಡಿದಂತಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಸದನಕ್ಕೆ ಮಾಹಿತಿ ನೀಡಿದರು.

Exit mobile version