Site icon Vistara News

Karnataka Budget Session 2024: ಅಧಿವೇಶನ ಒಂದು ದಿನ ವಿಸ್ತರಣೆ: ಸೋಮವಾರ ಮಧ್ಯಾಹ್ನಕ್ಕೆ ಮೊಟಕು? ಬಳಿಕ ರೆಸಾರ್ಟ್‌ಗೆ ಶಿಫ್ಟ್‌?

Karnataka Budget Session 2024 extended by a day to be curtailed to Monday afternoon

ಬೆಂಗಳೂರು: ಶುಕ್ರವಾರಕ್ಕೆ (ಫೆ. 23) ಮುಕ್ತಾಯವಾಗಬೇಕಿದ್ದ ವಿಧಾನಮಂಡಲ ಅಧಿವೇಶನವು (Karnataka Budget Session 2024) ಒಂದು ದಿನ ವಿಸ್ತರಣೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಬೇಕಾಗಿರುವುದರಿಂದ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್ (UT Khadar) ನೇತೃತ್ವದಲ್ಲಿ ಶುಕ್ರವಾರ ವಿಧಾನಸಭೆ ಕಾರ್ಯ ಕಲಾಪ ಸಲಹಾ ಸಮಿತಿ ಸಭೆ ನಡೆದಿದ್ದು, ಈ ತೀರ್ಮಾನಕ್ಕೆ ಬರಲಾಗಿದೆ. ಆದರೆ, ಮಂಗಳವಾರ ರಾಜ್ಯಸಭಾ ಚುನಾವಣೆ ಇರುವುದರಿಂದ ಸೋಮವಾರ ಮಧ್ಯಾಹ್ನಕ್ಕೇ ಅಧಿವೇಶನವನ್ನು ಪೂರ್ಣಗೊಳಿಸಿ ರೆಸಾರ್ಟ್‌ಗೆ ಶಿಫ್ಟ್‌ ಆಗಲು ಕಾಂಗ್ರೆಸ್‌ ತಯಾರಾಗಿದೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾರೋಗ್ಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಅವರು ಶುಕ್ರವಾರ ಸದನಕ್ಕೆ ಗೈರಾಗಿದ್ದಾರೆ. ಹೀಗಾಗಿ ಸಭಾಪತಿ ಯು.ಟಿ. ಖಾದರ್ ನೇತೃತ್ವದಲ್ಲಿ ಆಡಳಿತ ಮತ್ತು ವಿಪಕ್ಷ ನಾಯಕರೊಂದಿಗೆ ಶುಕ್ರವಾರ ಬೆಳಗ್ಗೆ ವಿಧಾನಸಭೆ ಕಾರ್ಯ ಕಲಾಪ ಸಲಹಾ ಸಮಿತಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಸೋಮವಾರ (ಫೆ.26) ಒಂದು ದಿನಕ್ಕೆ ವಿಧಾನಸಭೆ ಕಲಾಪವನ್ನು ನಡೆಸುವ ತೀರ್ಮಾನಕ್ಕೆ ಬರಲಾಯಿತು. ಅಂದು ಸಿಎಂ ಸಿದ್ದರಾಮಯ್ಯ ಅವರು ಫೆ.26 ರಂದು ಬೆಳಗ್ಗೆ 9.30ಕ್ಕೆ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಸಭೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ‌ ಸಿಎಂ ಬಸವರಾಜ ಬೊಮ್ಮಾಯಿ, ಸಂಸದೀಯ ವ್ಯವಹಾರಗಳ ಸಚಿವ ಎಚ್​.ಕೆ. ಪಾಟೀಲ್ ಸೇರಿದಂತೆ ಇತರೆ ಸದಸ್ಯರು ಭಾಗಿಯಾಗಿದ್ದರು.

ಸಿಎಂಗೆ ಏಕೆ ಅನಾರೋಗ್ಯ?

ಕಳೆದ ಶುಕ್ರವಾರ (ಫೆ. 16) ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್ ಮಂಡಿಸಿದ್ದರು. ಬಳಿಕ ಎರಡು ದಿನ ಜಿಲ್ಲಾ ಪ್ರವಾಸದಲ್ಲಿ ನಿರತರಾಗಿದ್ದರು. ಫೆ. 17ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿದ್ದರು. ಫೆ.18ರಂದು ಮಂಡ್ಯ ಜಿಲ್ಲೆ ಪ್ರವಾಸ ಮಾಡಿದ್ದರು. ಹೀಗೆ ನಿರಂತರ ಪ್ರವಾಸ ಮಾಡಿದ್ದರಿಂದ ಅವರು ಫೆ.19 ರಂದು ಅನಾರೋಗ್ಯಕ್ಕೆ ತುತ್ತಾಗಿದ್ದರು. ಅಂದು ವಿಶ್ರಾಂತಿ ಪಡೆದು ಮರುದಿನ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಆದರೆ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಶುಕ್ರವಾರದ ಕಲಾಪಕ್ಕೆ ಹಾಜರಾಗಲು ಅವರಿಗೆ ಸಾಧ್ಯವಾಗಿಲ್ಲ.

ಅವಧಿ ವಿಸ್ತರಣೆ ಏಕೆ?

ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಅವರು ಗುರುವಾರ ಬಜೆಟ್‌ ಮೇಲಿನ ಭಾಷಣ ಮಾಡಿದ್ದರು. ಇನ್ನೂ ಹಲವು ನಾಯಕರು ಬಜೆಟ್‌ ಮೇಲೆ ಭಾಷಣ ಮಾಡಬೇಕಿದೆ. ಇದಾದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಮೇಲೆ ಚರ್ಚೆಗೆ ಉತ್ತರ ನೀಡಬೇಕಿತ್ತು. ಆದರೆ, ಈಗ ಸಮಯಾವಕಾಶದ ಕೊರತೆ ಇರುವುದರಿಂದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಮಂಗಳವಾರ ಅಧಿವೇಶನ ನಡೆಸಲು ಆಗುವುದಿಲ್ಲ!

ಮಂಗಳವಾರ ರಾಜ್ಯಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸೋಮವಾರವೇ ಅಧಿವೇಶನವನ್ನು ಪೂರ್ಣಗೊಳಿಸಬೇಕಿದೆ. ಹೀಗಾಗಿ ಅಂದು ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಉತ್ತರ ನೀಡಿ ಮಧ್ಯಾಹ್ನದ ಒಳಗೆ ತೆರೆ ಎಳೆಯಲು ಪ್ರಯತ್ನಿಸಲಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಕಾಂಗ್ರೆಸ್‌ ಶಾಸಕರು ಸೇರಿದಂತೆ ಹಲವು ನಾಯಕರು ರೆಸಾರ್ಟ್‌ಗೆ ಶಿಫ್ಟ್‌ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: NIMHANS Hospital: ಉತ್ತರ ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಎರಡನೇ ಹೈಟೆಕ್ ನಿಮ್ಹಾನ್ಸ್ ಆಸ್ಪತ್ರೆ!

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಮೂರೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಸರಳ ಬಹುಮತ ಇದ್ದರೂ ಸಹ ಅಡ್ಡ ಮತದಾನದ ಭೀತಿ ಇರುವುದರಿಂದ ಎಲ್ಲರನ್ನೂ ರೆಸಾರ್ಟ್‌ಗೆ ಶಿಫ್ಟ್‌ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Exit mobile version