Site icon Vistara News

Karnataka Budget Session 2024: ಕೇಂದ್ರದಿಂದ ಅನ್ಯಾಯ ಆಗಿದೆಯೇ? ಬಹಿರಂಗ ಚರ್ಚೆಗೆ ಬನ್ನಿ: ಸಿಎಂಗೆ ಎಚ್‌ಡಿಕೆ ಸವಾಲು

Karnataka Budget Session 2024 HD Kumaraswamy challenges CM to discussion on Centre grant

ಬೆಂಗಳೂರು: ತೆರಿಗೆ, ಅನುದಾನ ತಾರತಮ್ಯದ ಬಗ್ಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಿರಂತರ ಆರೋಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ನೇರ ಸವಾಲು ಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು ಎಚ್.ಡಿ. ಕುಮಾರಸ್ವಾಮಿ, ರಾಷ್ಟ್ರದ ಹಿರಿಯ, ನುರಿತ ಆರ್ಥಿಕ ತಜ್ಞರನ್ನು, ಮಾಧ್ಯಮಗಳನ್ನು ಕರೆಸಿ ಎಲ್ಲರ ಎದುರು ಬಹಿರಂಗ ಚರ್ಚೆ ಮಾಡೋಣ ಬನ್ನಿ. ಕೇಂದ್ರದಿಂದ ಅನ್ಯಾಯ ಆಗುತ್ತಿದೆ ಎಂದು ನೀವು ನಿರೂಪಿಸಿದರೆ ನಿಮ್ಮ ಜತೆ ನಾವೂ ದನಿ ಎತ್ತುತ್ತೇವೆ. ನಿಮ್ಮಲ್ಲಿರುವ ಮಾಹಿತಿಯನ್ನು ನಾಡಿನ ಮುಂದೆ ಇಡಿ. ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಾವೇಷದಿಂದ ಸದನದ ಒಳಗೆ ಭಾಷಣ ಮಾಡುತ್ತಿದ್ದಾರೆ. ಕನ್ನಡಿಗರಿಗೆ ಅನ್ಯಾಯ ಆಯಿತು ಎನ್ನುತ್ತಾರೆ. ಕೇಂದ್ರ ಸರ್ಕಾರದಿಂದ ಹಣ ಬರಲಿಲ್ಲ, ಬರಪೀಡಿತ ರೈತರಿಗೆ ಪರಿಹಾರ ಕೊಡಿ ಎಂದರೆ 2000 ರೂ. ಕೊಡುತ್ತಾರೆ. ಈ 2000 ರೂಪಾಯಿಯಲ್ಲಿ 25% ರಾಜ್ಯದ್ದು, ಉಳಿದ 75% ಕೇಂದ್ರದ್ದು. 2624 ಕೋಟಿ ರೂ. ಎಸ್‌ಡಿಆರ್‌ಎಫ್‌ನಲ್ಲಿ ಬಿಡುಗಡೆ ಮಾಡಿದ್ದೇವೆ ಎಂದು ಹೇಳುತ್ತಾರಲ್ಲಾ, ಈ ಹಣದಲ್ಲಿ 75% ಮೊತ್ತವನ್ನು ಕೇಂದ್ರ ಸರ್ಕಾರವೇ ನೀಡಿದೆ. ನಾವು ಕೊಟ್ಟೆವು ಎಂದು ಇವರು ಹೇಳಿದ್ದೇ ಹೇಳಿದ್ದು. ನಾನು ಹೇಳೋದೇ ಸತ್ಯ, ನಾನು ಹೇಳೋದೇ ಸತ್ಯ ಎಂದು ಹೇಳ್ತಾನೇ ಇದ್ದಾರೆ. ನೂರು ಬಾರಿ ಸುಳ್ಳು ಹೇಳಿ ಅದನ್ನೇ ಸತ್ಯ ಮಾಡು ಎಂದು ನಮ್ಮ ಹಿರಿಯರು ಗಾದೆ ಮಾತು ಹೇಳಿದ್ದಾರೆ. ಅದನ್ನು ನಮ್ಮ ಮುಖ್ಯಮಂತ್ರಿಗಳು ಅಚ್ಚುಕಟ್ಟಾಗಿ ನಿರೂಪಣೆ ಮಾಡುತ್ತಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದರು.

ಕನ್ನಡಿಗರಿಗೆ ಅನ್ಯಾಯ, ಕನ್ನಡಿಗರಿಗೆ ಅನ್ಯಾಯ ಎಂದು ಜಾಗಟೆ ಹೊಡೆಯುತ್ತಿರಲ್ಲ, ಅಲ್ಲಿ ಆನೆ ತುಳಿದು ಸತ್ತರೆ 15 ಲಕ್ಷ ರೂ. ಕೊಡುತ್ತೀರಿ. ಇಲ್ಲಿ ಆನೆ ತುಳಿದು ಸತ್ತರೆ 5 ಲಕ್ಷ ಕೊಡುತ್ತೀರಿ. ಅದನ್ನು ಪಡೆಯುವುದಕ್ಕೆ ಐವತ್ತು ಸಲ ಕಚೇರಿಗಳಿಗೆ ಅಳೆಯಬೇಕು. ನಿಮ್ಮ ನೀತಿ ಹೇಗಿದೆ ಎಂದರೆ; ರಾಜ್ಯಕ್ಕೆ ಅನ್ಯಾಯ! ಕೇರಳಕ್ಕೆ ನ್ಯಾಯ!! ಎನ್ನುವಂತೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಹಣಕಾಸು ಆಯೋಗದ ಮುಂದೆ ಮಾಹಿತಿ ಕೊಡಿ

ರಾಜ್ಯ ಸರ್ಕಾರಕ್ಕೆ ನನ್ನ ಸಲಹೆ ಇಷ್ಟೇ. ಈಗ 16ನೇ ಹಣಕಾಸು ಆಯೋಗ ರಚನೆ ಆಗಿದೆ. ಆಯೋಗ ರಾಜ್ಯಕ್ಕೆ ಬಂದಾಗ ಸರಿಯಾದ ಮಾಹಿತಿ ಕೊಟ್ಟು ಹಕ್ಕು ಮಂಡಿಸಿ.‌ ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟರೆ ಅಥವಾ ದೂರಿದರೆ ಉಪಯೋಗ ಇಲ್ಲ. ತೆರಿಗೆ ಪಾಲು, ಅನುದಾನ ಹಂಚಿಕೆ ಮಾಡುವುದು ಆಯೋಗವೇ ಹೊರತು ಕೇಂದ್ರವಲ್ಲ. ಈಗಾಗಲೇ ಕೇಂದ್ರದಿಂದ ಬಂದಿರುವ ಹಣವನ್ನು ಸರ್ಕಾರ ಸದ್ಬಳಕೆ ಮಾಡಿಲ್ಲ. ಆ ಬಗ್ಗೆ ಇವರು ಚಕಾರ ಎತ್ತುತ್ತಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ದೂರಿದರು.

ಖರ್ಗೆ ಯಾಕೆ ಸುಮ್ಮನೆ ಇದ್ದರು?

ರಾಜ್ಯಕ್ಕೆ ಅನ್ಯಾಯವಾದರೆ ನಾವು ಸುಮ್ಮನೆ ಇರುವ ಪ್ರಶ್ನೆಯೇ ಇಲ್ಲ. ರಾಜ್ಯಸಭೆಯಲ್ಲಿ ಮೇಕೆದಾಟು ವಿಷಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಾತನಾಡಿದಾಗ ರಾಜ್ಯವನ್ನು ಪ್ರತಿನಿಧಿಸುವ ಕಾಂಗ್ರೆಸ್ ಸದಸ್ಯರು ಯಾಕೆ ಬೆಂಬಲ ಕೊಡಲಿಲ್ಲ? ಅವರು ದನಿ ಎತ್ತಿದರೆ ನಿಮ್ಮ ಪಕ್ಷದ ಒಬ್ಬರೂ ಮಾತನಾಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಇದ್ದರಲ್ಲ, ಭಾವಿ ಪ್ರಧಾನಿ ಎಂದು ಹೇಳಿಕೊಂಡು ತಿರುಗುತ್ತಿದ್ದೀರಿ. ಅವರೇಕೆ ಮಾತನಾಡಲಿಲ್ಲ? ಇಲ್ಲಿ ಅನ್ಯಾಯ ಆಗಿದ್ದರೆ ಅವರು ಬಾಯಿ ತೆಗೆಯಬೇಕಿತ್ತಲ್ಲ? ಅವರು ಯಾಕೆ ಮೌನವಾಗಿ ಇದ್ದರು? ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Ramanagara Lawyers: ರಾಮನಗರದಲ್ಲಿ ಬಿಜೆಪಿ ಪ್ರೇರಿತ ಪ್ರತಿಭಟನೆ; ರಾಜಕೀಯ ಬಿಟ್ಟರೆ ವಕೀಲರ ಜತೆ ಚರ್ಚೆ: ಡಿಕೆಶಿ

ಮಾಜಿ ಸಚಿವ ಸಿಸಿ ಪಾಟೀಲ್, ಶಾಸಕರಾದ ಸಮೃದ್ಧಿ ಮಂಜುನಾಥ್, ಕರೆಮ್ಮ ನಾಯಕ್ ಅವರು ಈ ಸಂದರ್ಭದಲ್ಲಿ ಇದ್ದರು.

Exit mobile version