Site icon Vistara News

Karnataka Budget Session 2024: ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿ ಜಾತ್ರೆ! ಪಟ್ಟು, ಮಟ್ಟು ಎಂದು ಕುಟುಕಿದ ಎಚ್‌ಡಿಕೆ

Karnataka Budget Session 2024 Looted by Congress government in the name of guarantees says HD Kumaraswamy

ಬೆಂಗಳೂರು: ಐದು ಗ್ಯಾರಂಟಿಗಳ ಪ್ರಚಾರ ಮತ್ತು ಸಮೀಕ್ಷೆಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ತೆರಿಗೆ ಹಣವನ್ನು ಮನಸೋ ಇಚ್ಛೆ ಪೋಲು ಮಾಡುತ್ತಿದೆ.‌ ಗ್ಯಾರಂಟಿಗಳ ಪ್ರಚಾರಕ್ಕೆ ಕೋಟ್ಯಂತರ ರೂಪಾಯಿ ಸುರಿಯುತ್ತಿರುವ ಸ‌ರ್ಕಾರವು, ಬೇಕು ಬೇಕಾದವರಿಗೆ, ಶಾಸಕರ ಕುಟುಂಬಕ್ಕೆ ಸಮೀಕ್ಷೆಯ ಹೆಸರಿನಲ್ಲಿ ಹಣ ಕೊಟ್ಟಿದೆ ಎಂದು ವಿಧಾನಸಭೆ ಅಧಿವೇಶನದಲ್ಲಿ (Karnataka Budget Session 2024) ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ರಾಜ್ಯಪಾಲರ ಭಾಷಣಾ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ʼದ ಪಾಲಸಿ ಪ್ರಂಟ್‌ʼ ಎನ್ನುವ ದಿಕ್ಕಿಲ್ಲದ ಸಂಸ್ಥೆಗೆ ಸಮೀಕ್ಷೆ ಮಾಡುವುದಕ್ಕೆ 7.20 ಕೋಟಿ ರೂ. ಮೊತ್ತದ ಗುತ್ತಿಗೆ ಕೊಡಲಾಗಿದೆ. ಆದರೆ, ಕಂಪನಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದರ ಹಿಂದೆ ಮುಂದೆ ಯಾರಿದ್ದಾರೆ ಎನ್ನುವುದೂ ತಿಳಿದಿಲ್ಲ. ಆದರೂ, ಸರ್ಕಾರ ಇಷ್ಟು ಪ್ರಮಾಣದಷ್ಟು ಹಣವನ್ನು ಆ ಕಂಪನಿಗೆ ಕೊಟ್ಟಿದೆ. ಹಾಗಾದರೆ, ಆ ಕಂಪನಿ ಯಾರದು? ಎಂದು ಪ್ರಶ್ನಿಸಿದರು.

ಯಾವ ಪಟ್ಟು, ಮಟ್ಟು?

ʼದ ಪಾಲಸಿ ಫ್ರಂಟ್ʼ ಸಲ್ಲಿಸಿದ ಪ್ರಸ್ತಾವನೆಗೆ ಒಂದೇ ದಿನದಲ್ಲಿ ಚಿರತೆ ವೇಗದಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಕಡತಕ್ಕೆ ಬಂದಿರುವ ವೇಗ ನನಗೆ ಅಚ್ಚರಿ ಉಂಟು ಮಾಡಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 1.37 ಲಕ್ಷ ಕಡತಗಳು ಕೊಳೆಯುತ್ತಾ ಬಿದ್ದಿವೆ. ಆದರೆ ʼದ ಪಾಲಸಿ ಫ್ರಂಟ್ʼ ಕಡತಕ್ಕೆ ವೇಗವಾಗಿ ಒಪ್ಪಿಗೆ ಸಿಕ್ಕಿದೆ. ಆ ಕಡತ ವಿಲೇವಾರಿ ಆಗಿದ್ದು ಹೇಗೆ? ಯಾವ ʼಪಟ್ಟು?ʼ ಯಾವ ʼಮಟ್ಟು?ʼ ಹಿಂದೆ ಕೆಲಸ ಮಾಡಿದೆ ಎನ್ನುವ ʼಗುಟ್ಟು?ʼ ಸದನದಲ್ಲಿ ರಟ್ಟಾಗಬೇಕಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಶಾಸಕರ ಪತ್ನಿ ಕಂಪನಿಗೆ ಹಣ

ಇನ್ನೊಂದು ಸಂಸ್ಥೆಗೆ ಒಂದು ಕೋಟಿ ರೂಪಾಯಿ ಕೊಡಲಾಗಿದೆ. m2m ಎನ್ನುವ ಕಂಪನಿ ಅದಾಗಿದ್ದು, ಅದೂ ಗ್ಯಾರಂಟಿಗಳ ಬಗ್ಗೆ ಸಮೀಕ್ಷೆ ಮಾಡುತ್ತಿದೆ. ಮಂಡ್ಯ ಜಿಲ್ಲೆಯ ಶಾಸಕರೊಬ್ಬರ ಪತ್ನಿ ನಿರ್ದೇಶಕಿ ಆಗಿರುವ ಕಂಪನಿಗೆ ಕೂಡ ಗ್ಯಾರಂಟಿಗಳ ಪ್ರಚಾರಕ್ಕಾಗಿ ಕೋಟಿ ರೂಪಾಯಿ ನೀಡಲಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದರು.

ಗ್ಯಾರಂಟಿಗಳ ಹೆಸರಿನಲ್ಲಿ ಹೀಗೆ ಹಣವನ್ನು ಇಷ್ಟ ಬಂದ ಹಾಗೆ ಪೋಲು ಮಾಡಲಾಗುತ್ತಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿಜಾತ್ರೆ ನಡೆಯುತ್ತಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದರು.

ಪ್ರಚಾರಕ್ಕಾಗಿಯೇ ಈವರೆಗೂ 140 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ವೆಚ್ಚ ಮಾಡಿದೆ. ಬೆಳಗ್ಗೆ ಯಾವ ಟಿವಿ ನೋಡಿದರೂ, ಯಾವ ಪೇಪರ್ ನೋಡಿದರೂ ನಿಮ್ಮದೇ (ಸರ್ಕಾರದ್ದು) ದರ್ಶನ ಆಗುತ್ತಿದೆ. ಎದ್ದ ಕೂಡಲೇ ದೇವರ ದರ್ಶನದ ಬದಲು ನಿಮ್ಮದೇ ದರ್ಶನ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಪ್ರಹಾರ ನಡೆಸಿದರು.‌

ಇದನ್ನೂ ಓದಿ: Caste Census: ಜಾತಿ ಗಣತಿ ವರದಿ ಪ್ರಸ್ತಾಪಿಸಿದ ಬಿ.ಕೆ. ಹರಿಪ್ರಸಾದ್;‌ ತಿರುಗಿಸಿ ಕೊಟ್ಟ ಕೋಟ!

ಪರಿಶುದ್ಧ ಆಡಳಿತ ಎನ್ನುತ್ತೀರಿ. ಎಲ್ಲಿ ನೋಡಿದರೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮಧ್ಯವರ್ತಿಗಳ ಉಪಟಳ ವಿಪರೀತವಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

Exit mobile version