Site icon Vistara News

Karnataka Budget Session 2024: ಹೊಸ ಕಾಯಿದೆ; ಪಬ್ಲಿಕ್‌ ಪ್ಲೇಸ್‌ನಲ್ಲಿ ಸಿಗರೇಟ್‌ ಸೇದಿದ್ರೆ ಭಾರೀ ದಂಡ!

Karnataka Budget Session 2024 Rs 1000 fine for smoking in public place

ಬೆಂಗಳೂರು: ಧೂಮಪಾನ ಪ್ರಿಯರಿಗೆ ಸರ್ಕಾರ ಶಾಕ್‌ ಕೊಟ್ಟಿದೆ. ಇನ್ನು ಮುಂದೆ ಕಂಡ ಕಂಡಲ್ಲಿ ಸಿಗರೇಟ್‌ ಸೇದುವಂತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಹೊಗೆ ಬಿಟ್ಟರೆ, ಅಂಥವರ ಜೇಬು ಸುಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದಿದರೆ (Smoking Cigarette) 1 ಸಾವಿರ ರೂಪಾಯಿ ದಂಡ ಪಾವತಿ ಮಾಡಬೇಕಿದೆ. ಅಲ್ಲದೆ, ಹುಕ್ಕಾ ಬಾರ್ (Hookah Bar) ಅನ್ನು ಅನಧಿಕೃತ ನಡೆಸಿದರೆ ಒಂದರಿಂದ ಮೂರು ವರ್ಷ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಇಂಥದ್ದೊಂದು ವಿಧೇಯಕವನ್ನು ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ಈ ವಿಧೇಯಕವನ್ನು ಮಂಡಿಸಿದ್ದು, ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು 2024ರ ಸಿಗರೇಟ್ ಸೇವನೆ ಮತ್ತು ಜಾಹೀರಾತು ನಿಷೇಧ.. ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ ಮತ್ತು ಸರಬರಾಜು ತಿದ್ದುಪಡಿ ವಿಧೇಯಕವನ್ನು ಮಂಡನೆ ಮಾಡಿದರು. ಈ ವೇಳೆ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್, ಹುಕ್ಕಾಬಾರ್‌ಗಳನ್ನು ನಿಷೇಧ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಬಾರದು ಅಂತಿದೆ. ಆದರೆ, ಅನೇಕ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಬಾರ್‌ಗಳನ್ನು ಆರಂಭಿಸಿದ್ದಾರೆ. ಸಿಗರೇಟ್ ಸೇದೋದೇ ತಪ್ಪು ಅಂತ ಹೇಳಿದರೆ, ಮತ್ತೊಂದು ರೂಪದಲ್ಲಿ ತಂದಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಕಾನೂನಿನಲ್ಲಿ 18 ವರ್ಷದೊಳಗಿನವರಿಗೆ ಮಾರಬಾರದು ಎಂದು ಇತ್ತು. ಅದನ್ನು 21 ವರ್ಷಕ್ಕೆ ಅಂತ ಏರಿಸಲಾಗಿದೆ. ಶಾಲಾ – ಕಾಲೇಜುಗಳ ಮೂರು ಮೀಟರ್ ಒಳಗೆ ಮಾರಾಟ ಮಾಡಬಾರದು ಅಂತ ನಿಯಮ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವವರಿಗೆ ಇನ್ನೂರು ದಂಡ ಇತ್ತು. ಈಗ ಸಿಗರೇಟ್ ಸೇದುವವರಿಗೆ 1000 ರೂ. ದಂಡ ಹಾಕಲಾಗುವುದು. ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ. ಯುವಕರು ಹುಕ್ಕಾ ಬಾರ್‌ಗೆ ಹೋಗಿ ಅಡಿಕ್ಟ್ ಆಗುತ್ತಿದ್ದಾರೆ. ಯುವ ಜನತೆ ಇದನ್ನು ಫ್ಯಾಷನ್ ಮಾಡಿಕೊಂಡಿದ್ದಾರೆ. ಇದರಿಂದ ಬೇರೆ ರೀತಿಯ ಅಡ್ಡ ಪರಿಣಾಮ‌ ಆಗುತ್ತಿದೆ ಎಂದು ದಿನೇಶ್‌ ಗುಂಡೂರಾವ್‌ ಕಳವಳ ವ್ಯಕ್ತಪಡಿಸಿದರು.

ವಿಪಕ್ಷ ನಾಯಕ ಅಶೋಕ್ ಮಾತನಾಡಿ, ಇದು ಒಳ್ಳೆಯ ನಿರ್ಧಾರವಾಗಿದೆ. ಇನ್ನೆರಡು ನಿಯಮಗಳನ್ನು ಸೇರಿಸಿ. ಶಾಲಾ – ಕಾಲೇಜುಗಳ ನೂರು ಮೀಟರ್ ಒಳಗೆ ಮಾರಾಟ ಮಾಡಿದರೆ ಸಾವಿರ ಅಲ್ಲ, ಹತ್ತು ಸಾವಿರ ರೂಪಾಯಿ ದಂಡ ಹಾಕಲಾಗುವುದು ಎಂಬುದನ್ನು ಸೇರ್ಪಡೆ ಮಾಡಿ ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಿಗರೇಟ್ ಮಾರಾಟ ಮಾಡುವವರು ಸಣ್ಣ ಪುಟ್ಟ ಅಂಗಡಿಗಳು, ಅವರ ಮೇಲೆ ಮತ್ತೊಂದು ರೀತಿಯ ದೌರ್ಜನ್ಯ ಆಗಬಾರದು. ಹಾಗಾಗಿ ಸಾವಿರ ರೂಪಾಯಿ ದಂಡ ಹಾಕಿದ್ದೇವೆ. ಆದರೆ, ಹುಕ್ಕಾ ಬಾರ್ ನಡೆಸುವವರು ಶ್ರೀಮಂತರು. ಅವರಿಗೆ ಬೇಕಾದರೆ ನೊಡೋಣ ಎಂದು ಹೇಳಿದರು.

ಶಾಸಕ ಸುರೇಶ್ ಕುಮಾರ್ ಮಾತನಾಡಿ, ಅಪರೂಪಕ್ಕೆ ಒಳ್ಳೆಯ ಬಿಲ್ ತಂದಿದ್ದಾರೆ ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಶಾಸಕ ಶಿವಲಿಂಗೇಗೌಡ, ಹುಕ್ಕಾ ಬಾರ್ ಅಂದ್ರೇನು, ಸ್ವಲ್ಪ ವಿವರ ನೀಡಿ ಎಂದು ಕೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್‌ ಯು.ಟಿ. ಖಾದರ್‌, ಗೂಗಲ್ ಮಾಡಿ ಸಿಗುತ್ತದೆ ಎಂದು ಹೇಳಿ ಕೂರಿಸಿದರು.

ಇದನ್ನೂ ಓದಿ: Karnataka Budget Session 2024: ಮೋದಿ ಬಗ್ಗೆ ಸಿದ್ದರಾಮಯ್ಯ ಟೀಕೆ; ಪಲಾಯನವಾದಿ ಸಿಎಂ ಎಂದ ಬಿಜೆಪಿ

ಅನಧಿಕೃತ ಹುಕ್ಕಾಬಾರ್‌ ನಡೆಸಿದರೆ 3 ವರ್ಷ ಜೈಲು

ಅನಧಿಕೃತವಾಗಿ ಹುಕ್ಕಾ ಬಾರ್ ನಡೆಸಿದರೆ ಒಂದರಿಂದ ಮೂರು ವರ್ಷ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಅಲ್ಲದೆ, 50 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ದಂಡವನ್ನು ಹಾಕಬಹುದಾಗಿದೆ. 21 ವರ್ಷ ಒಳಗಿನವರಿಗೆ ಸಿಗರೇಟ್ ಅನ್ನು ಮಾರಾಟ ಮಾಡುವಂತೆ ಇಲ್ಲ. ಅಲ್ಲದೆ, ಶಾಲೆಯಿಂದ ನೂರು ಮೀಟರ್ ಅಂತರದಲ್ಲಿ ವ್ಯಾಪಾರ ಮಾಡುವಂತಿಲ್ಲ. ಅದಕ್ಕೂ ಸಾವಿರ ರೂಪಾಯಿ ದಂಡವನ್ನು ಹಾಕಲಾಗುತ್ತದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಸದನಕ್ಕೆ ಸ್ಪಷ್ಟಪಡಿಸಿದರು.

Exit mobile version