ಬೆಂಗಳೂರು: ರಾಜ್ಯ ವಿಧಾನ ಮಂಡಲ ಜಂಟಿ ಅಧಿವೇಶನವನ್ನು (Karnataka Budget Session 2024) ಉದ್ದೇಶಿಸಿ ರಾಜ್ಯಪಾಲರ ಭಾಷಣ ಅತ್ಯಂತ ಅರ್ಥಗರ್ಭಿತವಾಗಿದೆ. ಸರ್ಕಾರದ ಸಾಧನೆಗಳ ಪ್ರತಿಬಿಂಬವಾಗಿದೆ. ನನ್ನ ಇಲಾಖೆಗೆ ಸಂಬಂಧಿಸಿದಂತೆ ಐದು ಗ್ಯಾರಂಟಿ ಯೋಜನೆಗಳಲ್ಲಿ (Congress Guarantee Scheme) ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ (Gruha lakshmi scheme) ಇದುವರೆಗೂ 17500 ಕೋಟಿ ರೂಪಾಯಿ ಅನುದಾನವನ್ನು ನಿಗದಿಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದ್ದಾರೆ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಭಾಷಣದ ಪ್ರಮುಖ ಹೈಲೈಟ್ಸ್ ಆಗಿತ್ತು. ಸರ್ಕಾರದ ಶಕ್ತಿ, ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಮತ್ತು ಯುವ ನಿಧಿ ಎಂಬ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿ ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಸವಳಿದ ಜನರಿಗೆ ಪಂಚ ಗ್ಯಾರಂಟಿ ಯೋಜನೆಗಳು ನೆಮ್ಮದಿ ನೀಡಿವೆ. ಈ ಯೋಜನೆಗಳಿಗಾಗಿ ಬೃಹತ್ ಸಂಖ್ಯೆಯಲ್ಲಿ ಬಂದ ಅರ್ಜಿಗಳೇ ಸಾಕ್ಷಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆ
ನನ್ನ ಇಲಾಖೆಗೆ ಸಂಬಂಧಿಸಿದಂತೆ ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ 17500 ಕೋಟಿ ರೂಪಾಯಿ ಅನುದಾನವನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯಡಿ ನೋಂದಾಯಿಸಿಕೊಂಡಿರುವ 1.17 ಕೋಟಿ ಮಹಿಳಾ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಜನವರಿ ವರಗೆ 11037 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ಇಂಥ ಯೋಜನೆಯಿಂದ ರಾಜ್ಯದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆಯತ್ತ ಸಾಗಿದೆ ಎಂದು ಸಚಿವರು ಹೇಳಿದರು.
ಇದಕ್ಕಿಂದ ದೊಡ್ಡ ಸಾಧನೆ ಇನ್ನೇನು ಬೇಕು?
ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕತೆಗೆ ಹೊಸ ಉತ್ತೇಜನ ನೀಡಿದೆ. ನಾವು ಅಧಿಕಾರಕ್ಕೆ ಬಂದ ಬಳಿಕ 77 ಸಾವಿರ ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದೆ. ಇದಕ್ಕಿಂದ ದೊಡ್ಡ ಸಾಧನೆ ಇನ್ನೇನು ಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನೆ ಮಾಡಿದರು.
ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಿದ್ದರಾಮಯ್ಯ ಕೊಂಡ್ಯೊಯುತ್ತಿದ್ದಾರೆ
ಬರ ಪರಿಸ್ಥಿತಿಯಲ್ಲೂ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿ, ಅಭಿವೃದ್ಧಿ ಯೋಜನೆಗಳಿಗೂ ಅನುದಾನ ನೀಡುತ್ತಾ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಿದ್ದರಾಮಯ್ಯ ಕೊಂಡ್ಯೊಯುತ್ತಿದ್ದಾರೆ. ಇವನ್ನೆಲ್ಲ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಅತ್ಯಂತ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ದೇಶಕ್ಕೆ ‘ಕರ್ನಾಟಕ ಮಾದರಿ’, ಕೇಸರಿ ಯಾರೊಬ್ಬರ ಸ್ವತ್ತಲ್ಲ: ಡಿ.ಕೆ. ಶಿವಕುಮಾರ್
ನಮ್ಮ ಸರ್ಕಾರ ಇಡೀ ದೇಶಕ್ಕೆ ಕರ್ನಾಟಕ ಮಾದರಿಯನ್ನು ಪರಿಚಯಿಸಿದೆ. ಬಸವಣ್ಣನವರ ನುಡಿದಂತೆ ನಡೆಯಬೇಕು ಎನ್ನುವ ತತ್ವದಂತೆ, ಕಾಂಗ್ರೆಸ್ ಸರ್ಕಾರವು ಕೊಟ್ಟ ಮಾತಿನಂತೆ ನಡೆದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಬಜೆಟ್ (Karnataka Budget Session 2024) ಮೇಲಿನ ಭಾಷಣದ ಬಗ್ಗೆ ಬಿಜೆಪಿಯವರು ಮಾಡಿದ ಟೀಕೆಗೆ ಡಿಕೆಶಿ ಕಿಡಿಕಾರಿದರು.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ನಂತರ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ, ನಾವು ಆರಂಭಿಸಿದ ಗ್ಯಾರಂಟಿಗಳನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ, ಈಗ ಅದನ್ನೇ ಪ್ರಚಾರಕ್ಕೆ ಬಳಸುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಯಾವುದೇ ಸರ್ಕಾರಗಳು ಮಾಡಲಾಗುವುದನ್ನು ನಾವು ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಜಾರಿ ಮಾಡಿದ್ದೇವೆ. ಇದನ್ನು ವಿರೋಧ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Rozgar Mela: ರೋಜಗಾರ್ ಮೇಳದಡಿ 7 ಲಕ್ಷ ಯುವಕರಿಗೆ ಉದ್ಯೋಗ; ಪ್ರಲ್ಹಾದ್ ಜೋಶಿ
ಕೇಸರಿ ಯಾರ ಮನೆಯ ಆಸ್ತಿಯಲ್ಲ
ಬಿಜೆಪಿ ನಾಯಕರು ಕೇಸರಿ ಶಾಲು (saffron shawls) ಧರಿಸಿ ಸದನಕ್ಕೆ ಬಂದ ಬಗ್ಗೆ ಮಾಧ್ಯಮದವರು ಮಾಡಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, “ಅವರು ಏನಾದರೂ ಹಾಕಿಕೊಂಡು ಬರಲಿ. ಕೇಸರಿ ಅವರ ಮನೆ ಆಸ್ತಿಯೇ? ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಅವರು ಧರ್ಮದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮಾಡಿಕೊಳ್ಳಲಿ. ಅವರು ಕೇಸರಿಯಾದರೂ ಧರಿಸಲಿ, ಕಪ್ಪಾದರೂ ಧರಿಸಲಿ. ನಮ್ಮ ರಾಜ್ಯದ ಹಿತಕ್ಕೆ ಬೇಕಾದ ಕೆಲಸ ನಾವು ಮಾಡುತ್ತೇವೆ ಎಂದರು.