ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ 15ನೇ ಬಜೆಟ್ (Karnataka Budget Session 2024) ಅನ್ನು ಮಂಡಿಸಿದ್ದಾರೆ. ಐದು ಗ್ಯಾರಂಟಿ ಯೋಜನೆಗಳಿಗೆ 52,009 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದ್ದಾಗಿ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಡಿ ಹೊಗಳಿದ್ದಾರೆ. ಅಲ್ಲದೆ, ಪ್ರತಿಪಕ್ಷಗಳ ಆರೋಪಗಳಿಗೆ ಈ ಬಜೆಟ್ ಮೂಲಕ ತಕ್ಕ ಉತ್ತರವನ್ನು ನೀಡಿದ್ದಾಗಿ ಹೇಳಿದ್ದಾರೆ. ರಾಜ್ಯ ಹಣಕಾಸಿನ ಪರಿಸ್ಥಿತಿ ಹಾಳಗಲಿದೆ ಎಂದ ವಿರೋಧಿಗಳ ಭವಿಷ್ಯವಾಣಿಗಳನ್ನು ನಾವು ಸುಳ್ಳು ಮಾಡಿದ್ದೇವೆ. 2024-25ರ ಆಯವ್ಯಯದಲ್ಲಿ 5 ಗ್ಯಾರಂಟಿ ಯೋಜನೆಗಳಿಗೆ ಮಾತ್ರವಲ್ಲದೆ ಹಲವಾರು ಹೊಸ ಕಲ್ಯಾಣ ಕಾರ್ಯಕ್ರಮಗಳಿಗೆ ಮತ್ತು ಮೂಲ ಸೌಕರ್ಯ ಕಾರ್ಯಕ್ರಮಗಳಿಗೆ ಅಗತ್ಯ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಯಾವ ಗ್ಯಾರಂಟಿ ಯೋಜನೆಗೆ ಎಷ್ಟು ಅನುದಾನ?
ಗೃಹ ಜ್ಯೋತಿ: 9,657 ಕೋಟಿ ರೂ.
ಅನ್ನ ಭಾಗ್ಯ: 8,079 ಕೋಟಿ ರೂ.
ಶಕ್ತಿ: 5,015 ಕೋಟಿ ರೂ.
ಯುವನಿಧಿ: 650 ಕೋಟಿ ರೂ.
ಗೃಹ ಲಕ್ಷ್ಮಿ :28,608 ಕೋಟಿ ರೂ.
ಒಟ್ಟು: 52,009 ಕೋಟಿ ರೂ.
ಒಟ್ಟಾರೆಯಾಗಿ ಐದೂ ಗ್ಯಾರಂಟಿಗಳಿಗೆ ಸೇರಿ 52,009 ಕೋಟಿ ರೂಪಾಯಿಯನ್ನು ಮೀಸಲಿಟ್ಟಿರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಐದೂ ಗ್ಯಾರಂಟಿ ಯೋಜನೆಯಲ್ಲಿ ಸಿಂಹಪಾಲು ಗೃಹ ಲಕ್ಷ್ಮಿ ಯೋಜನೆಗೆ (28,608 ಕೋಟಿ ರೂ) ಖರ್ಚಾಗುತ್ತಿದ್ದರೆ, ಅತಿ ಕಡಿಮೆ ಅನುದಾನ (650 ಕೋಟಿ ರೂ.) ಯುವ ನಿಧಿಗೆ ಮೀಸಲಿಡಲಾಗಿದೆ.
ಬಜೆಟ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಲವಾರು ಹೊಸ ಕಲ್ಯಾಣ ಕಾರ್ಯಕ್ರಮಗಳಿಗೆ ಮತ್ತು ಮೂಲಸೌಕರ್ಯ ಕಾರ್ಯಕ್ರಮಗಳಿಗೆ ಅಗತ್ಯ ಅನುದಾನ ಹಂಚಿಕೆ ಮಾಡಲಾಗಿದೆ. ಅಲ್ಲದೇ 2024-25 ರ ಆಯವ್ಯಯದಲ್ಲಿ ವಿತ್ತೀಯ ಕೊರತೆಯನ್ನು ಜಿಎಸ್‌ಡಿಪಿ (GSDP) ಯ ಶೇಕಡಾ 3 ರೊಳಗೆ ಮತ್ತು ಒಟ್ಟು ಹೊಣೆಗಾರಿಕೆಗಳನ್ನು ಜಿಎಸ್‌ಡಿಪಿಯ ಶೇಕಡಾ 25 ರೊಳಗೆ ಮಿತಿಗೊಳಿಸುವ ಮೂಲಕ ವಿತ್ತೀಯ ಶಿಸ್ತನ್ನು ಪಾಲಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಈ ಆಯವ್ಯಯದಲ್ಲಿ ಹೆದ್ದಾರಿಗಳು, ಗುಣಮಟ್ಟದ ಗ್ರಾಮೀಣ ರಸ್ತೆಗಳು, ವಿಶ್ವ ದರ್ಜೆಯ ವಿಮಾನ ನಿಲ್ದಾಣಗಳು, ಕೈಗಾರಿಕಾ ಕಾರಿಡಾರ್‌ಗಳು ಮತ್ತು ನಗರ ಸಂಚಾರ ವ್ಯವಸ್ಥೆ ಮೇಲೆ ಹೂಡಿಕೆ ಮಾಡುವ ಮೂಲಕ ಆರ್ಥಿಕ ಬೆಳವಣಿಗೆಯ ವೇಗವನ್ನು ಸಾಧಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಬೆಂಗಳೂರು ನಗರಕ್ಕೆ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸುವುದರ ಮೂಲಕ ಜಾಗತಿಕ ನಗರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದೂ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
2024-25ನೇ ಸಾಲಿನ ಆಯವ್ಯಯ ಗಾತ್ರವು 3,71,383 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. 2023-24ನೇ ಸಾಲಿನ ಆಯವ್ಯಯ ಗಾತ್ರವು 3,27,747 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿತ್ತು. 2023-24ನೇ ಸಾಲಿಗೆ ಹೋಲಿಸಿದರೆ 2024-25ನೇ ಸಾಲಿನ ಆಯವ್ಯಯ ಗಾತ್ರವು ಶೇ.13 ರಷ್ಟು ಬೆಳವಣಿಗೆಯೊಂದಿಗೆ 46,636 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ. ಒಟ್ಟು ವೆಚ್ಚದಲ್ಲಿ 2,90,531 ಕೋಟಿ ರೂ.ಗಳ ರಾಜಸ್ವ ವೆಚ್ಚ ಮತ್ತು 55,877 ಕೋಟಿ ರೂ.ಗಳ ಬಂಡವಾಳ ವೆಚ್ಚ ಸೇರಿದೆ. 2023-24ಕ್ಕೆ ಹೊಲಿಸಿದರೆ ರಾಜಸ್ವ ವೆಚ್ಚವು ಶೇ.16 ರಷ್ಟು ಮತ್ತು ಬಂಡವಾಳ ವೆಚ್ಚವು ಶೇ.3 ರಷ್ಟು ಹೆಚ್ಚಳವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದ ತೆರಿಗೆ ಶೇ. 77 ಇದೆ. ಅವರಿಗೆ ಶೇ. 49ರಷ್ಟು ಕೊಡುತ್ತಿದ್ದೇವೆ. 59785 ಕೋಟಿ ರೂಪಾಯಿಯನ್ನು ನಮಗೆ ಕೊಡುತ್ತಾರೆ. ಆದರೆ, ಉತ್ತರ ಭಾರತದವರಿಗೆ ಹೆಚ್ಚು ಅನುದಾನವನ್ನು ಕೊಡುತ್ತಿದ್ದಾರೆ. ನಮಗೆ ಅನ್ಯಾಯ ಮಾಡಬೇಡಿ ಅನ್ನೋದು ನಮ್ಮ ಮನವಿಯಾಗಿದೆ. ನಮಗೆ ಕೇವಲ ಶೇಕಡಾ 23ರಷ್ಟು ಮಾತ್ರ ಕೊಡುತ್ತಾರೆ. ನನ್ನ ಪ್ರಕಾರ ಇದು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹವಾಗಿದೆ. ಆರು ವರ್ಷಗಳಲ್ಲಿ 64,000 ಕೋಟಿ ರೂಪಾಯಿ ನಮಗೆ ನಷ್ಟವಾಗಿದೆ. ಇಷ್ಟೆಲ್ಲ ಬಂದಿದ್ದರೆ ನಾವು ಯುರೋಪ್ ರೀತಿಯಲ್ಲಿ ಇರುತ್ತಿದ್ದೆವು. ಇಷ್ಟಲ್ಲ ಆದರೂ ನಾವು ಯೋಜನೆಗಳಿಗೆ ಹಣ ನಿಲ್ಲಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಈಗ ನರೇಂದ್ರ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಈ ಗ್ಯಾರಂಟಿ ಯಾರಿಂದ ಬಂದಿದ್ದು? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ವಿವಿಧ ಇಲಾಖೆಗಳಿಗೆ ಅನುದಾನ ಹಂಚಿಕೆ
ಶಿಕ್ಷಣ- 44422 ಕೋಟಿ ರೂ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ- 34406 ಕೋಟಿ ರೂ.
ಇಂಧನ- 23159 ಕೋಟಿ ರೂ.
ಗ್ರಾಮೀಣಾಭಿವೃದ್ಧಿ- 21160 ಕೋಟಿ ರೂ.
ಒಳಾಡಳಿತ ಸಾರಿಗೆ- 19777 ಕೋಟಿ ರೂ.
ನೀರಾವರಿ- 19179 ಕೋಟಿ ರೂ.
ನಗರಾಭಿವೃದ್ಧಿ – 18155 ಕೋಟಿ ರೂ.
ಕಂದಾಯ- 16170 ಕೋಟಿ ರೂ.
ಆರೋಗ್ಯ – 15145 ಕೋಟಿ ರೂ.
ಸಮಾಜ ಕಲ್ಯಾಣ- 13334 ಕೋಟಿ ರೂ.
ಲೋಕೋಪಯೋಗಿ- 10424 ಕೋಟಿ ರೂ.
ಆಹಾರ ಮತ್ತು ನಾಗರಿಕ ಪೂರೈಕೆ- 9963 ಕೋಟಿ ರೂ.
ಕೃಷಿ ತೋಟಗಾರಿಕೆ- 6688 ಕೋಟಿ ರೂ.
ಪಶುಸಂಗೋಪನೆ- 3307 ಕೋಟಿ ರೂ.
ಇತರೆ- 124593 ಕೋಟಿ ರೂಪಾಯಿಯನ್ನು ಹಂಚಿಕೆ ಮಾಡಲಾಗಿದೆ.