ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಕೇಂದ್ರದ ಅನುದಾನದ ಬಗ್ಗೆ ಪ್ರಸ್ತಾಪವಾಗಿದೆ. ಈ ವಿಷಯವನ್ನು ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯ ಎಂದು ಹೇಳಿದ್ದಾರೆ. ಅಲ್ಲದೆ, ಕೇಂದ್ರದಿಂದ ಬರಬೇಕಾದ ಅನುದಾನವನ್ನು ರಾಜ್ಯ ಬಿಜೆಪಿ ನಾಯಕರು ಕೊಡಿಸಿದರೆ ನೂರು ಕೋಟಿ ನಮಸ್ಕಾರ ಹಾಕುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ. ಇದು ಪ್ರತಿಪಕ್ಷ ಬಿಜೆಪಿಯನ್ನು ಕೆರಳಿಸಿದ್ದು, ಸಿಎಂಗೆ ಪಲಾಯನವಾದಿ ಎಂದು ಕಿಡಿಕಾರಿದೆ. ಪಲಾಯನವಾದಿ ಸಿಎಂ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ಸುಳ್ಳು ಭಾಷಣ ಮಾಡಿಸಿದ ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ದಾರೆ. ಅಲ್ಲದೆ, ಸಿಎಂ ತಮ್ಮ ಭಾಷಣವನ್ನು ಅರ್ಧಕ್ಕೇ ಮೊಟಕುಕೊಳಿಸಿದ್ದಾರೆ. ಈ ವೇಳೆ ಸಿಎಂ ನೀಡಿದ ಉತ್ತರವನ್ನು ಸ್ಪೀಕರ್ ಯು.ಟಿ. ಖಾದರ್ ಸದನಕ್ಕೆ ಮತಕ್ಕೆ ಹಾಕಿದ್ದು, ಗದ್ದಲದ ನಡುವೆಯೇ ಅಂಗೀಕಾರವಾಯಿತು.
ವಿಧಾನ ಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುತ್ತಾ, ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ನಡೆದಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಆಗ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿಯವರು ಯುಪಿಎ ಸರ್ಕಾರವು ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಎಂದು ಹೇಳಿದ್ದ ಮಾತನ್ನು ಉಲ್ಲೇಖಿಸಿದರು.
ಮೋದಿ ಅವರು ಪ್ರಧಾನ ಮಂತ್ರಿ ಆಗಿದ್ದಾಗ, ರಾಜ್ಯಗಳು ಕೇಂದ್ರದ ಮುಂದೆ ಭಿಕ್ಷುಕರಲ್ಲ. ಗುಜರಾತ್ ರಾಜ್ಯದಿಂದ ಸಂಗ್ರಹ ಆಗುವ ತೆರಿಗೆಯಲ್ಲಿ ಶೇ50 ರಷ್ಟು ವಾಪಸ್ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದರು. ಗುಜರಾತ್ ರಾಜ್ಯದ ತೆರಿಗೆಯನ್ನು ನಾವು ಕೇಂದ್ರಕ್ಕೆ ಕೊಡುವುದಿಲ್ಲ ಎನ್ನುವ ಮಾತನ್ನೂ ಮೋದಿ ಅವರು ಆಡಿದ್ದರು. ಆದರೆ ಈಗ ಅದೇ ಮೋದಿ ಅವರು ಪ್ರಧಾನಿ ಆಗಿರುವಾಗ ಕರ್ನಾಟಕ ರಾಜ್ಯಕ್ಕೆ ವಾಪಸ್ ಕೊಡುತ್ತಿರುವುದು ಶೇ 12-13 ರಷ್ಟು ಮಾತ್ರ. ಮೋದಿ ಅವರು ಆಗೊಂದು ಮಾತು ಈಗೊಂದು ರೀತಿ ಮಾತನಾಡಿದ್ದಾರೆ. ಇದನ್ನು ಪ್ರಸ್ತಾಪಿಸಿದರೆ ನಿಮಗೇಕೆ ಸಿಟ್ಟು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.
ನಾವು ಕೊಡುವ ಪ್ರತಿ 100 ರೂಪಾಯಿಗೆ ಕೇವಲ 12 ರೂ ವಾಪಸ್ ಕೊಟ್ಟರೆ ರಾಜ್ಯದ ಅಭಿವೃದ್ಧಿ ಆಗಲು ಹೇಗೆ ಸಾಧ್ಯ? ಇಷ್ಟು ಕಡಿಮೆ ಪಾಲು ನಮಗೆ ಕೊಟ್ಟರೆ ರಾಜ್ಯದ ಶೂದ್ರರು, ದಲಿತರು, ಆದಿವಾಸಿಗಳು, ದುಡಿಯುವವರು, ಶ್ರಮಿಕರು, ಯುವಕರ, ಮಹಿಳೆಯರ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಸಿಎಂ ಪ್ರಶ್ನಿಸಿದರು.
ತೆರಿಗೆ ತಾರತಮ್ಯ ಎಂದು ನಾವು ಪ್ರತಿಭಟಿಸಿದರೆ ದೇಶ ವಿಭಜನೆ ಮಾಡುವ ಪ್ರಯತ್ನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕೆ ಮಾಡುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೇಶವ ಪ್ರಸಾದ್, ಇದು ಸುಳ್ಳು ಎಂದು ಹೇಳಿದರು. ಆಗ ಸ್ವಪಕ್ಷ ಸದಸ್ಯರ ಮೇಲೆ ಗರಂ ಆದ ಕೋಟ ಶ್ರೀನಿವಾಸ್ ಪೂಜಾರಿ, ಸಿಎಂ ಮಾತನಾಡಲಿ, ನೀವು ಸುಮ್ಮನೆ ಕುಳಿತುಕೊಳ್ಳಿ ಎಂದು ಗರಂ ಆದರು. ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು, ಇವರ ಆರ್ಭಟಕ್ಕೆ ಹೆದರಲ್ಲ. ಯಾಕೆ ಮಾತನಾಡಬಾರದು. ದೇಶದ ವಿಭಜನೆ ಮಾಡುವ ಮಾತಾಡಿರುವುದು ಕಾಂಗ್ರೆಸ್‌ನ ಏಕೈಕ ಸಂಸದ. ಪ್ರಧಾನಿ ನರೇಂದ್ರ ಮೋದಿ ಅಲ್ಲ ಎಂದು ಹೇಳಿದರು.
ಲೆಕ್ಕಾಚಾರ ಮುಂದಿಟ್ಟ ಸಿಎಂ
ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ಹಣದ ಪಾಲು ಅನ್ಯಾಯವಾದುದು.2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ 24,44,213 ಕೋಟಿ ಇತ್ತು. ಅಂದು ರಾಜ್ಯಕ್ಕೆ 51000 ಕೋಟಿ ಮಾತ್ರ ಬಂತು. 2020-21 ಸಾಲಿನಲ್ಲಿ ಕೇಂದ್ರದ ಬಜೆಟ್ ಗಾತ್ರ 30,42,243 ಕೋಟಿ ಇದ್ದರೆ ನಮಗೆ ಬಂದಿದ್ದು 31734ಕೋಟಿ ರೂ., 2021-22 ರಲ್ಲಿ 34,83,236 ಕೋಟಿ ಗಾತ್ರದ ಬಜೆಟ್‌ಗೆ , ರಾಜ್ಯಕ್ಕೆ 48589 ಕೋಟಿ ಬಂತು. 2022-23ರಲ್ಲಿ ಕೇಂದ್ರದ ಬಜೆಟ್ 4181232 ಕೋಟಿ , ರಾಜ್ಯಕ್ಕೆ 53510 ಕೋಟಿ ಮಾತ್ರ ಬಂತು. 2023-24ರಲ್ಲಿ 45,03007 ಕೋಟಿ ಕೇಂದ್ರದ ಬಜೆಟ್ ಗಾತ್ರ. ರಾಜ್ಯಕ್ಕೆ ಬಂದಿದ್ದು 50257 ಕೋಟಿ ಮಾತ್ರ. 2024-25ರಲ್ಲಿ ರಾಜ್ಯಕ್ಕೆ 59785 ಕೋಟಿ ಬರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಲೆಕ್ಕಾಚಾರವನ್ನು ಬಿಚ್ಚಿಟ್ಟರು.
ಈ ರೀತಿ ಬಜೆಟ್ ಗಾತ್ರ ದೊಡ್ಡದಾದರೂ, ನಮಗೆ ಬರುತ್ತಿರುವ ಪಾಲು ಕಡಿಮೆಯಾಗುತ್ತಿದೆ. ಪ್ರಧಾನಿ ಅವರು ರಾಷ್ಟ್ರಪತಿಗಳ ಭಾಷಣದ ಚರ್ಚೆಗೆ ಉತ್ತರಿಸುತ್ತಾ ರಾಜ್ಯದ ತೆರಿಗೆ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು ‘ದೇಶದ ಐಕ್ಯತೆಗೆ ಅಪಾಯವೊಡ್ಡುತ್ತದೆ’ ಎಂದಿದ್ದರು. ಅದೇ ಪ್ರಧಾನಿ ಮಂತ್ರಿಗಳು ಗುಜರಾತಿನ ಸಿಎಂ ಆಗಿದ್ದಾಗ 2012 ರಲ್ಲಿ ಗುಜರಾತಿಗೆ ಬರುತ್ತಿರುವ ಆರ್ಥಿಕ ಪಾಲನ್ನು ವಿರೋಧಿಸಿದ್ದರು. ಗುಜರಾತ್ ರಾಜ್ಯ ’ನಾವು ಭಿಕ್ಷುಕ ರಾಜ್ಯವೇ, ನಾವು ಭಿಕ್ಷುಕರೆ, ನಾವು ಕೇಂದ್ರದ ಕರುಣೆಯ ಮೇಲೆ ಬದುಕಬೇಕೆ’ ಎಂದಿದ್ದರು. ಅಂದಿನ ಕೇಂದ್ರಕ್ಕೆ ‘ಗುಜರಾತಿನಿಂದ ತೆರಿಗೆ ತೆಗೆದುಕೊಳ್ಳಬೇಡಿ, ಅದನ್ನು ನಾವೇ ಬಳಸಿಕೊಳ್ಳುತ್ತೇವೆ’ ಎಂದು ಮೋದಿ ಅವರು ಅಂದಿದ್ದರು. ಇದು ಸಂವಿಧಾನ, ಒಕ್ಕೂಟ ವ್ಯವಸ್ಥೆಗೆ ವಿರೋಧವಲ್ಲವೇ ಎಂದು ಅಂದಿನ ಮೋದಿಯವರ ಮಾತನ್ನೇ ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯದ ಪಾಲಿನ ನಮ್ಮ ಹಣ ವಾಪಸ್ ಕೊಡಿಸಿ: ನಿಮಗೆ ನೂರು ಕೋಟಿ ನಮಸ್ಕಾರ ಹಾಕ್ತೀನಿ
ನೂತನ ಪಾರ್ಲಿಮೆಂಟಿನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೇ ಇದ್ದದ್ದು ರಾಷ್ಟ್ರಪತಿಗಳಿಗೆ, ರಾಷ್ಟ್ರಪತಿ ಹುದ್ದೆಗೆ ಮಾಡಿದ ಅವಮಾನ ಅಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ರಾಜ್ಯದ ಪಾಲಿನ ನಮ್ಮ ಹಣ ವಾಪಸ್ ಕೊಡಿಸಿ, ನಿಮಗೆ ನೂರು ಕೋಟಿ ನಮಸ್ಕಾರ ಹಾಕುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಂತೆ, ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮಧ್ಯ ಪ್ರವೇಶಿಸಿ, ನಿಮ್ಮ ಕೋಟಿ ನಮಸ್ಕಾರ ನಮಗೆ ಬೇಡ. ಆದರೆ, ಪ್ರಧಾನಿ ನರೇಂದ್ರ ಮತ್ತು ರಾಷ್ಟ್ರಪತಿಯವರನ್ನು ಏಕವಚನದಲ್ಲಿ ಕರೆಯುವುದನ್ನು ನಿಲ್ಲಿಸಿ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಬಿಜೆಪಿ ಮಾಡಿದ ಅವಮಾನವನ್ನು ಪ್ರಸ್ತಾಪಿಸುವಾಗ ಬಾಯಿತಪ್ಪಿ ಏಕ ವಚನ ಬಳಸಿದೆ. ಇದಕ್ಕೆ ತಕ್ಷಣವೇ ವಿಷಾದ ಕೂಡ ವ್ಯಕ್ತಪಡಿಸಿದ್ದೇನೆ. ಆದರೆ, ನೂತನ ಪಾರ್ಲಿಮೆಂಟಿನ ಉದ್ಘಾಟನೆಗೆ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮರ್ಮು ಅವರನ್ನು ಆಹ್ವಾನಿಸದೇ ಇದ್ದದ್ದು ರಾಷ್ಟ್ರಪತಿಗಳಿಗೆ , ರಾಷ್ಟ್ರಪತಿ ಹುದ್ದೆಗೆ ಮಾಡಿದ ಅವಮಾನ ಅಲ್ಲವೇ? ರಾಷ್ಟ್ರಪತಿಗಳಿಗೆ ನೀವು ಮಾಡಿದ ಅವಮಾನ ಸರಿಯೇ ಎಂದು ಪ್ರಶ್ನಿಸಿದರು.
ಸಿಎಂ ಮೇಲೆ ವಿಪಕ್ಷ ಗರಂ
ಈ ವೇಳೆ ಮತ್ತೆ ಅನುದಾನದ ಬಗ್ಗೆ ಪ್ರಸ್ತಾಪವಾಗಿದ್ದು, ಬಿಜೆಪಿ ಆಕ್ರೋಶವನ್ನು ವ್ಯಕ್ತಪಡಿಸಿತು. ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ರಾಜ್ಯಪಾಲರ ಭಾಷಣದಲ್ಲಿ ಹೆಚ್ಚಾಗಿ ಪ್ರಧಾನಿ ನರೇಂದ್ರ ಹಾಗೂ ಕೇಂದ್ರ ಸರ್ಕಾರವನ್ನು ದೂಷಣೆ ಮಾಡೋದೆ ಆಗಿದೆ. 90% ಕೇಂದ್ರ ಸರ್ಕಾರವನ್ನು ಟೀಕಿಸೋದೇ ಆಗಿದೆ. ರಾಜ್ಯಪಾಲರ ಭಾಷಣದ ಮೇಲೆ ಏನೂ ಚರ್ಚೆ ಇಲ್ಲ. ಜಾಣರ ಮನೆಯಲ್ಲಿ ಇವರು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಕೂರೋಕೆ ನಾವೇನು ಬುದ್ದುಗಳಾ..? ಸಿಎಂ ಇದಕ್ಕೆ ಉತ್ತರ ನೀಡಬೇಕು. ಸರಿಯಾದ ಸ್ಪಷ್ಟನೆ ನೀಡಬೇಕು ಎಂದು ಸಿಟ್ಟಾದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಯಾವುದೇ ಸ್ಪಷ್ಟನೆ ಅಗತ್ಯ ಇಲ್ಲ. ಎಲ್ಲ ಹೇಳಿಯಾಗಿದೆ ಎಂದರು. ಇದಕ್ಕೆ ವಿರೋಧ ಪಕ್ಷದವರು ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಸುಳ್ಳು ಭಾಷಣ ಮಾಡಿಸಿದ ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ, ಸುಳ್ಳೇ ಸುಳ್ಳು ಬರೀ ಸುಳ್ಳೇ ಸುಳ್ಳು ಎಂದು ಘೋಷಣೆ ಕೂಗಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಪರಸ್ಪರ ಧಿಕ್ಕಾರ ಕೂಗಿಕೊಂಡರು.
ಇದನ್ನೂ ಓದಿ: Karnataka Budget Session 2024: ಕಾಂಗ್ರೆಸ್ ಅಂಬೇಡ್ಕರ್‌ಗೆ ಆರಡಿ, ಮೂರಡಿ ಜಾಗ ಕೊಡದಿದ್ದನ್ನು ಒಪ್ಪಿಕೊಂಡ ಸಿದ್ದರಾಮಯ್ಯ!
ಬಿಜೆಪಿ ಸಭಾತ್ಯಾಗ
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಗದ್ದಲ, ಕೋಲಾಹಲ ಉಂಟಾಯಿತು. ಕಲಾಪದಲ್ಲಿ ಕಾಂಗ್ರೆಸ್ ಬಿಜೆಪಿ ಸದಸ್ಯರ ವಾಗ್ವಾದ ತೀವ್ರಗೊಂಡಿದೆ. ಈ ವೇಳೆ, ಧಿಕ್ಕಾರ ಕೂಗುತ್ತಲೇ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು. ಭಾರತ್ ಮಾತಾಕಿ, ಜೈ ಶ್ರೀರಾಮ್ ಘೋಷಣೆ ಕೂಗಿ ಹೊರನಡೆದರು. ಪುನಃ ಕಲಾಪ ಆರಂಭವಾದರೂ ವಿಪಕ್ಷಗಳ ಗದ್ದಲ ಮುಂದುವರಿದಿತ್ತು. ವಿರೋಧ ಪಕ್ಷಗಳ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸಿಟ್ಟಾದ ಸಿಎಂ ಸಿದ್ದರಾಮಯ್ಯ, ನಾನು ಉತ್ತರ ಕೊಡಲ್ಲ ಎಂದು ಮೊಟಕುಗೊಳಿಸಿದರು. ಸಿಎಂ ಸ್ಪಷ್ಟನೆ ಕೊಡಲೇಬೇಕು ಎಂದು ಬಿಜೆಪಿ ಸದಸ್ಯರ ಪಟ್ಟು ಹಿಡಿದರು. ಸಿಎಂ ಉತ್ತರ ಕೊಡದ ಬೇಜವಾಬ್ದಾರಿತನ ಮೆರೆದಿದ್ದಾರೆ. ಇದು ಸಿಎಂ ಪಲಾಯನವಾದವಾಗಿದೆ. ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಬಿಜೆಪಿ ಸದಸ್ಯರು ಹೊರನಡೆದರು.