Site icon Vistara News

Karnataka Budget Session 2024: ಕಾಂಗ್ರೆಸ್‌ ಸೇರುವಂತೆ ಜೆಡಿಎಸ್‌ನ ಬೋಜೇಗೌಡರಿಗೆ ಸದನದಲ್ಲೇ ಆಹ್ವಾನ ಕೊಟ್ಟ ಸಿದ್ದರಾಮಯ್ಯ!

Karnataka Budget Session 2024 Siddaramaiah invites JDS member Boje Gowda to join Congress

ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ರಾಷ್ಟ್ರೀಯವಾದ, ಜಾತ್ಯತೀತವಾದದ ಬಗ್ಗೆ ಚರ್ಚೆಗಳು ನಡೆದಿವೆ. ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah), ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಹುತಾತ್ಮರಾಗಿ, ಜೈಲು ಸೇರಿದ ಕಾಂಗ್ರೆಸ್ಸಿನವರೇ ನಿಜವಾದ ರಾಷ್ಟ್ರೀಯವಾದಿಗಳು. ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ಪಿ ತಪ್ಪಿಯೂ ಭಾಗವಹಿಸದ ಜನಸಂಘ ಮತ್ತು ಬಿಜೆಪಿ ಪರಿವಾರದವರು ರಾಷ್ಟ್ರೀಯವಾದಿಗಳಾ ಎಂದು ಬಿಜೆಪಿಯನ್ನು ಕುಟುಕಿದರು. ಅಲ್ಲದೆ, ಪರಿಷತ್‌ನಲ್ಲಿದ್ದ ಜೆಡಿಎಸ್ ಸದಸ್ಯ ಬೋಜೇಗೌಡ (Boje Gowda) ಅವರಿಗೆ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ನೀಡಿದರು.

ವಿಧಾನ ಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ನ ರಾಷ್ಟ್ರೀಯವಾದಿ ಹೋರಾಟ ಮತ್ತು ಚಳವಳಿಯ ಚರಿತ್ರೆ ಬಗ್ಗೆ ವಿವರಣೆ ನೀಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಜೈಲು ಸೇರಿದವರು, ಹುತಾತ್ಮರಾದವರು, ಬ್ರಿಟಿಷರಿಂದ ಹಿಂಸೆ ಅನುಭವಿಸಿದವರು ಕಾಂಗ್ರೆಸ್ಸಿನವರು. ಬಿಜೆಪಿ ಪರಿವಾರದವರಿಗೆ ಸ್ವಾತಂತ್ರ್ಯ ಹೋರಾಟದ ಚರಿತ್ರೆಯೇ ಇಲ್ಲ. ಅವರು ದೇಶಕ್ಕಾಗಿ ಹೋರಾಡಿದ ಚರಿತ್ರೆಯೇ ಇಲ್ಲ. ನಮ್ಮ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಈಗ ಇವರು ರಾಷ್ಟ್ರೀಯವಾದಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಭಾರತದ ಇತಿಹಾಸ ಮತ್ತು ಚರಿತ್ರೆಯಲ್ಲಿ ಯಾರು ನಿಜವಾದ ರಾಷ್ಟ್ರೀಯವಾದಿಗಳು ಎನ್ನುವುದು ದಾಖಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಕಾಂಗ್ರೆಸ್‌ನ ದಾಖಲೆ, ಸಾಧನೆಗಳನ್ನು ಮುಖ್ಯಮಂತ್ರಿಗಳು ಪರಿಷತ್ತಿನಲ್ಲಿ ವಿವರವಾಗಿ ಹೇಳುವಾಗ ಜೆಡಿಎಸ್‌ನ ಸದಸ್ಯ ಬೋಜೇಗೌಡರು ಮಧ್ಯ ಪ್ರವೇಶಿಸಿ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಲು ಮುಂದಾದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಾಮೂಲು ಹಾಸ್ಯದ ಶೈಲಿಯಲ್ಲಿ “ಬೋಜೇಗೌಡರೇ ನೀವು ಸೆಕ್ಯುಲರ್ ಆದ್ರೆ ಈ ಕಡೆ ಬನ್ನಿ. ಕೋಮುವಾದಿಯಾಗಿದ್ದರೆ ಅಲ್ಲೇ ಇರಿ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತನ್ನು ಗೌರವದಿಂದ ಸ್ವೀಕರಿಸಿದ ಬೋಜೇಗೌಡರು ಕೈ ಮುಗಿದು ಕುಳಿತರು.

ಸಂಪಾದಕೀಯಗಳ ಶ್ಲಾಘನೆ

ರಾಜ್ಯಪಾಲರ ಭಾಷಣವನ್ನು ಮೆಚ್ಚಿ ವಿಶ್ಲೇಷಣೆ ಮಾಡಿ ಬರೆದ ನಾಡಿದ ಪ್ರಮುಖ ಪತ್ರಿಕೆಗಳ ಸಂಪಾದಕೀಯಗಳು ಮತ್ತು ವರದಿಗಳನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣವನ್ನು ಸುಳ್ಳು ಎಂದು ಹೇಳುತ್ತೀರಲ್ಲವಾ? ಇದೇನು ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: Ramanagara Lawyers: ರಾಮನಗರ ವಿವಾದ; ಪಿಎಸ್‌ಐ ತನ್ವೀರ್ ಹುಸೇನ್ ಅಮಾನತು, ಚಾಂದ್‌ ಪಾಷಾ ಮೇಲೆ ಕ್ರಮ: ಪರಮೇಶ್ವರ್

ನಿಮ್ಮ ದಾಖಲೆ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ

ಬಿಜೆಪಿ-ಜೆಡಿಎಸ್ ದೋಸ್ತಿಯನ್ನು ಸೋಲಿಸಿ ಭರ್ಜರಿಯಾಗಿ ಜಯಗಳಿಸಿದ ಪುಟ್ಟಣ್ಣ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. 5ನೇ ಬಾರಿಗೆ ಪುಟ್ಟಣ್ಣ ಪರಿಷತ್ ಪ್ರವೇಶಿಸಿದ ಬಗ್ಗೆ ನಡೆದ ಚರ್ಚೆ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸಭಾಧ್ಯಕ್ಷರೇ ನೀವು ಎಂಟು ಬಾರಿ ಗೆಲುವು ಸಾಧಿಸಿದ್ದೀರಿ. ನಿಮ್ಮ ದಾಖಲೆಯನ್ನು ಸದ್ಯಕ್ಕೆ ಯಾರೂ ಸರಿಗಟ್ಟಲು ಸಾಧ್ಯವಿಲ್ಲ” ಎಂದು ಬಸವರಾಜ ಹೊರಟ್ಟಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.

Exit mobile version