Site icon Vistara News

Karnataka Budget Session 2024: ದೇವಸ್ಥಾನಗಳ ಆದಾಯ 1 ಕೋಟಿ ಇದ್ದರೆ ಸರ್ಕಾರಕ್ಕೆ 10 ಲಕ್ಷ ರೂ. ಸಿಗುವಂತೆ ವಿಧೇಯಕ!

Karnataka Budget Session 2024 Temple with revenue of Rs 1 crore to get 10 to govt‌

ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಬುಧವಾರ (ಫೆ. 21) ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, ಪೊಲೀಸ್ (ತಿದ್ದುಪಡಿ) ವಿಧೇಯಕ ಸೇರಿ ಹಲವು ವಿಧೇಯಕಗಳ ಮಂಡನೆಯಾಗಿದ್ದು, ಕೆಲವು ಅಂಗೀಕಾರಗೊಂಡಿವೆ. ವಿಧಾನಪರಿಷತ್‌ನಲ್ಲಿ ಹಲವು ಬಿಲ್‌ಗಳನ್ನು ಮಂಡಿಸಲಾಗಿದ್ದು, ಚರ್ಚೆಗಳ ಬಳಿಕ ಅಂಗೀಕಾರಗೊಂಡಿವೆ. ಇದೇ ವೇಳೆ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕವನ್ನು (Hindu Religious Institutions and Charitable Endowments Bill) ಮಂಡಿಸಿ ಅಂಗೀಕಾರ ಪಡೆಯಲಾಗಿದ್ದು, ಇದರ ಅನುಸಾರ ಇನ್ನು ಮುಂದೆ 1 ಕೋಟಿ ರೂಪಾಯಿಗೂ‌ ಆದಾಯ ಮೀರಿದ ಸರ್ಕಾರಿ ದೇವಸ್ಥಾನಗಳು ಆದಾಯದ ಶೇ.10ರಷ್ಟು ಹಣ ಸಲ್ಲಿಕೆ ಮಾಡಬೇಕು. ಅಂದರೆ, ಒಂದು ದೇವಸ್ಥಾನದ ಆದಾಯ 1 ಕೋಟಿ ರೂ. ಇದ್ದರೆ, ಸರ್ಕಾರಕ್ಕೆ 10 ಲಕ್ಷ ರೂಪಾಯಿ ನೀಡಬೇಕಿದೆ.

ದೇವಸ್ಥಾನಗಳ ಆದಾಯ 1 ಕೋಟಿ ಇದ್ದರೆ ಸರ್ಕಾರಕ್ಕೆ 10 ಲಕ್ಷ!

ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕದ ಮೇಲೆ ಚರ್ಚೆ ನಡೆದಿದ್ದು, ದೇವಸ್ಥಾನಗಳ ಜತೆಗೆ ದೈವಸ್ಥಾನಗಳ ಅಭಿವೃದ್ಧಿ ಮತ್ತು ಪಾತ್ರಿಗಳಿಗೆ ದೇವಸ್ಥಾನಗಳ ಅರ್ಚಕರ ಮಾದರಿಯಲ್ಲಿ ಮಾಸಿಕ ವೇತನದ ಬಗ್ಗೆ ಗಮನ ಹರಿಸುವಂತೆ ಸರ್ಕಾರಕ್ಕೆ ಸ್ಪೀಕರ್ ಸಲಹೆ ನೀಡಿದರು. ಈ ಬಗ್ಗೆ ಏನೇನು ಕ್ರಮವನ್ನು ಸೇರಿಸಬಹುದೋ ಅದನ್ನು ಮಾಡುವುದಾಗಿ ಈ ವೇಳೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ಮುಜರಾಯಿ ಇಲಾಖೆಗೆ ದೇವಸ್ಥಾನಗಳು ಕೊಡುತ್ತಿದ್ದ ಆದಾಯದ ಹಣವನ್ನು ರಾಜ್ಯ ಸರ್ಕಾರ ದ್ವಿಗುಣಗೊಳಸಿದೆ. ಇನ್ನು ಮುಂದೆ 10 ಲಕ್ಷದಿಂದ 1 ಕೋಟಿ ರೂಪಾಯಿ ಆದಾಯದ ದೇವಸ್ಥಾನಗಳು ಆದಾಯದ ಶೇ. 5ರಷ್ಟು ಹಣವನ್ನು ಸರ್ಕಾರಕ್ಕೆ ನೀಡಬೇಕು. 1 ಕೋಟಿ ರೂಪಾಯಿಗೂ‌ ಆದಾಯ ಮೀರಿದ ದೇವಸ್ಥಾನಗಳು ಆದಾಯದ ಶೇ.10ರಷ್ಟು ಹಣ ಸಲ್ಲಿಕೆ ಮಾಡಬೇಕು ಎಂದು ವಿಧೇಯಕದಲ್ಲಿ ಹೇಳಲಾಗಿದೆ.

ಅಲ್ಲದೆ, ಸಿ ಗ್ರೇಡ್ ದೇಗುಲದ ಅರ್ಚಕರು, ಸಿಬ್ಬಂದಿಗೆ ವಿಮೆ ಸೌಕರ್ಯ ಒದಗಿಸಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ಅರ್ಚಕರು, ದೇಗುಲ ಸಿಬ್ಬಂದಿ ಮೃತಪಟ್ಟಾಗ ಅವರ ಕುಟುಂಬದವರಿಗೆ 5 ಲಕ್ಷ ರೂಪಾಯಿ ಪರಿಹಾರ ಕೊಡಲು ಅವಕಾಶ ನೀಡಲಾಗಿದೆ. ಈ ಮುಂಚೆ ಮೃತಪಟ್ಟರೆ ಅವರ ಕುಟುಂಬದವರಿಗೆ 35 ಸಾವಿರ ರೂಪಾಯಿಯನ್ನು ಕೊಡಲಾಗುತ್ತಿತ್ತು. ಜತೆಗೆ ಅರ್ಚಕರು, ದೇಗುಲ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕೆ 5 ಸಾವಿರ ರೂ. ನಿಂದ 5೦ ಸಾವಿರ ರೂ. ವರೆಗೆ ಸ್ಕಾಲರ್ ಶಿಪ್ ಕೊಡಲು ಅವಕಾಶವನ್ನು ಈ ವಿಧೇಯಕದ ಮೂಲಕ ಕಲ್ಪಿಸಲಾಗಿದೆ.

ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 35 ಸಾವಿರ ದೇವಸ್ಥಾನಗಳಿದ್ದು, ಈ ಪೈಕಿ 205 ಎ ಗ್ರೇಡ್, 193 ಬಿ ಗ್ರೇಡ್ ಮತ್ತು 34 ಸಾವಿರ ಸಿ ಗ್ರೇಡ್ ದೇವಸ್ಥಾನಗಳಿವೆ. ಈ ಎಲ್ಲ ದೇಗುಲಗಳು ಈ ನಿಯಮಗಳಿಗೆ ಒಳಪಡುತ್ತವೆ.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಅಂಗೀಕಾರ

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಈ ವರ್ಷ 45 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, 52 ಕೋಟಿ ರೂಪಾಯಿ ಆದಾಯ ಬಂದಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮೂಲಸೌಕರ್ಯಗಳ ಅಭಿವೃದ್ಧಿ ಇನ್ನಷ್ಟು ಆಗಬೇಕಿದೆ. ಇದಕ್ಕಾಗಿ ಚಾಮುಂಡಿ ಬೆಟ್ಟ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಲು ಸರ್ಕಾರ ಮುಂದಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕಾಯ್ದೆ ತರಲು ಮುಂದಾಗಿದ್ದೇವೆ ಎಂದು ಈ ವೇಳೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪ್ರಸ್ತಾಪ ಮಾಡಿದರು. ಇದಕ್ಕೆ ವಿಪಕ್ಷಗಳ ಸದಸ್ಯರು ಮೆಚ್ಚುಗೆ ಸೂಚಿಸಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ, ಈ ವಿಧೇಯಕದಲ್ಲಿ ಮೈಸೂರು ದಸರಾ ಅಭಿವೃದ್ಧಿ ಸಮಿತಿಯನ್ನೂ ಸೇರಿಸಿ ಎಂದು ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ರಾಮಲಿಂಗಾ ರೆಡ್ಡಿ ಒಪ್ಪಿಗೆ ಸೂಚಿಸಿದರು.

30 ಹಳೆಯ ಕಾನೂನು ರದ್ದು

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕವನ್ನು ಇದೇ ವೇಳೆ ಮಂಡನೆ ಮಾಡಲಾಯಿತು. ಅಲ್ಲದೆ, ಕರ್ನಾಟಕ ಕೆಲವು ಅಧಿನಿಯಮಗಳು ಮತ್ತು ಕಾನೂನುಗಳನ್ನು ನಿರಸನಗೊಳಿಸುವ ವಿಧೇಯಕ ಮಂಡನೆ ಮಾಡಲಾಗಿದ್ದು, ಇದರನ್ವಯ 30 ಹಳೆಯ ಕಾನೂನುಗಳನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ.

ಪೊಲೀಸರ ವರ್ಗಾವಣೆ ಅವಧಿ ಕನಿಷ್ಠ 2 ವರ್ಷಕ್ಕೆ ನಿಗದಿ

ಪೊಲೀಸ್ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿ ಅಂಗೀಕಾರವನ್ನು ಪಡೆಯಲಾಗಿದೆ. ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ವರ್ಗಾವಣೆ ಅವಧಿಯು ಕನಿಷ್ಠ ಎರಡು ವರ್ಷಕ್ಕೆ ನಿಗದಿಗೊಳಿಸಲು ಅವಕಾಶ ಮಾಡಿಕೊಡುವ ವಿಧೇಯಕ ಇದಾಗಿದೆ.

ಇದನ್ನೂ ಓದಿ: Karnataka Budget Session 2024: ಅನಧಿಕೃತ ಹುಕ್ಕಾಬಾರ್‌ ತೆರೆದ್ರೆ 3 ವರ್ಷ ಜೈಲು; ಮಸೂದೆ ಪಾಸ್

ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಾಧಿಕಾರ ರಚಿಸಿ; ಸ್ಪೀಕರ್‌ ಸಲಹೆ

ಈ ವೇಳೆ ಮಾತನಾಡಿದ ಸ್ಪೀಕರ್‌ ಯು.ಟಿ. ಖಾದರ್‌, ಕುಕ್ಕೆ ಸುಬ್ರಹ್ಮಣ್ಯ ದೇಗುಲ ಪ್ರಾಧಿಕಾರ ರಚಿಸಲು ಸಲಹೆ ನೀಡಿದರು. ಅದಕ್ಕೆ ಸ್ಪಂದಿಸಿದ ಸಚಿವ ರಾಮಲಿಂಗಾ ರೆಡ್ಡಿ, ಮುಂದಿನ ಅಧಿವೇಶನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಪ್ರಾಧಿಕಾರಕ್ಕೆ ವಿಧೇಯಕ ತರುವುದಾಗಿ ಭರವಸೆ ನೀಡಿದರು. ಈ ವೇಳೆ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಮತ್ತು ಶ್ರೀ ಹುಲಿಗೆಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು.

Exit mobile version