ಬೆಂಗಳೂರು: ವಿಧಾನ ಮಂಡಲ ಅಧಿವೇಶನಕ್ಕೆ (Karnataka Budget Session 2024) ಸಂಬಂಧಪಟ್ಟಂತೆ ಎಲ್ಲ ಶಾಸಕರು ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಬರಬೇಕು ಎಂಬುದಾಗಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಬಿಸಿ ಮುಟ್ಟಿಸುತ್ತಲೇ ಬಂದಿದ್ದಾರೆ. ಅಲ್ಲದೆ, ಬೇಗ ಬಂದ ಮೊದಲ 25 ಮಂದಿಗೆ ಬಹುಮಾನಗಳನ್ನು ನೀಡುವ ಮೂಲಕ ಉತ್ತೇಜನವನ್ನೂ ನೀಡುತ್ತಿದ್ದಾರೆ. ಇಷ್ಟಾದರೂ ಈ ಸದನದಲ್ಲಿ ತಡವಾಗಿ ಬರುವ ಪರಿಪಾಠವು ಶಾಸಕರಿಂದ ಮುಂದುವರಿದಿವೆ. ಹೀಗಾಗಿ ಬುಧವಾರದ (ಫೆ.14) ಸದನದಲ್ಲಿ ಸ್ಪೀಕರ್ ಯು.ಟಿ. ಖಾದರ್ (UT Khader) ಗರಂ ಆಗಿದ್ದು ಕಂಡುಬಂತು. ಇದೇ ವೇಳೆ ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಅವರು ನಿಂಬೆ ಹಣ್ಣಿನ ಮೂಲಕ ಈ ಸರ್ಕಾರವನ್ನು ಬೀಳಿಸುವ ಬಗ್ಗೆಯೂ ಚರ್ಚೆಗಳು ನಡೆದವು.
ಶಾಸಕರು ತಡವಾಗಿ ಸದನಕ್ಕೆ ಆಗಮಿಸುತ್ತಿರುವುದರಿಂದ ಸಿಡಿಮಿಡಿಗೊಂಡ ಸ್ಪೀಕರ್ ಯು.ಟಿ. ಖಾದರ್, ಚುನಾವಣೆಗೆ ಬೆಳಗ್ಗೆ ಐದು ಗಂಟೆಗೆ ಎದ್ದು ಪ್ರಚಾರಕ್ಕೆ ಹೋಗ್ತೀರ. ಅದೇ ರೀತಿ ಬೆಳಗ್ಗೆ ಬೇಗ ಇಲ್ಲಿ ಬರುವುದಕ್ಕೆ ಆಗುವುದಿಲ್ಲವೇ? ಎಂದು ಗುಡುಗಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಶಾಸಕ ಸುನಿಲ್ ಕುಮಾರ್, ನೀವು ಎರಡೂವರೆ ವರ್ಷಗಳ ಬಳಿಕ ಸ್ಪೀಕರ್ ಆಗಿ ಮುಂದುವರಿಯುತ್ತೀರ. ಹಾಗಂತ ನೀವು ಐದು ವರ್ಷಗಳ ಕಾಲ ಸ್ಪೀಕರ್ ಆಗಿ ಮುಂದುವರಿದರೆ ನಮ್ಮ ಕಥೆ ಮುಗಿಯುತ್ತದೆ ಎಂದು ನಕ್ಕರು.
ನಾಲ್ಕು ನಿಂಬೆ ಹಣ್ಣು ಮಂತ್ರಿಸಿ ಸರ್ಕಾರವನ್ನು ಬೀಳಿಸಲು ರೇವಣ್ಣಗೆ ಸಲಹೆ
ಇದಕ್ಕೆ ಧ್ವನಿಗೂಡಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ರೇವಣ್ಣ ಅವರೇ ನಿಂಬೆ ಹಣ್ಣು ಮಂತ್ರಿಸಿ ಸರ್ಕಾರವನ್ನು ಬೀಳಿಸಿ ಎಂದು ಹೇಳಿದರು. ಮಾತು ಮುಂದುವರಿಸಿದ ಆರ್. ಅಶೋಕ್, ಎರಡು ನಿಂಬೆಹಣ್ಣು ಮಂತ್ರಿಸಿದರೆ ಸರ್ಕಾರ ಬೀಳುತ್ತಿಲ್ಲ. ನಾಲ್ಕು ನಿಂಬೆ ಹಣ್ಣು ಮಂತ್ರಿಸಿ ಸರ್ಕಾರವನ್ನು ಬೀಳಿಸಿ. ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆ ನಿಮ್ಮದೇ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ರೇವಣ್ಣ, ನಿಮಗೆ ಬೇಕಿದ್ದರೆ ಸರ್ಕಾರವನ್ನು ಬೀಳಿಸಿಕೊಳ್ಳಿ ಎಂದು ಹೇಳಿದರು.
ಇದನ್ನೂ ಓದಿ: CM Siddaramaiah: ರಾಜ್ಯಕ್ಕೆ 1 ರೂ. GST ಸಹ ಬಾಕಿ ಇಲ್ಲ; ಸುಳ್ಳುರಾಮಯ್ಯರಿಂದ ಆರ್ಥಿಕ ದುಸ್ಥಿತಿ: ಪ್ರಲ್ಹಾದ್ ಜೋಶಿ
ರೇವಣ್ಣ ಹೇಳಿದ ಸಮಯಕ್ಕೆ ಸಚಿವ ಸಂಪುಟ ಸಭೆ ನಡೆಯುತ್ತಿತ್ತು
ಸಮ್ಮಿಶ್ರ ಸರ್ಕಾರದಲ್ಲಿ ನಾವಿದ್ದಾಗ ಕ್ಯಾಬಿನೆಟ್ ಸಭೆ ನಡೆಸುವಾಗ ಸಹ ರೇವಣ್ಣ ಸಮಯವನ್ನು ನಿಗದಿ ಮಾಡುತ್ತಿದ್ದರು. ಅವರು ಹೇಳಿದ ಸಮಯಕ್ಕೆ ಸಚಿವ ಸಂಪುಟ ಸಭೆ ನಡೆಯುತ್ತಿತ್ತು. ಇನ್ನು ನಾನು ವಿಪಕ್ಷ ನಾಯಕನಾಗಿ ನಾನು ಮೊದಲ ಬಾರಿಗೆ ಸದನದ ಒಳಗೆ ಬರುವಾಗ ಎಚ್.ಡಿ. ರೇವಣ್ಣ ಅವರು ನನ್ನ ಕೈ ಹಿಡಿದು ನಿಲ್ಲಿಸಿದ್ದಾರೆ. ರಾಹುಕಾಲ ಇದೆ ಇರಿ ಎಂದು ತಡೆದಿದ್ದರು. ಅಷ್ಟೊತ್ತಿಗೆ ಕಲಾಪ ಆರಂಭ ಆಗಿಬಿಟ್ಟಿತ್ತು ಎಂದು ಹೇಳಿದರು. ಎಲ್ಲರೂ ನಗೆಗಡಲಲ್ಲಿ ತೇಲಿದರು.