ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಅನೇಕ ಬೆಳವಣಿಗೆಗಳು ನಡೆಯುತ್ತಿದ್ದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ಸಮರ ತಾರಕಕ್ಕೇರಿದೆ. ರಾಜ್ಯ ಸರ್ಕಾರದ ವಿರುದ್ಧ ಸವಾರಿ ಮಾಡಲು ಬಿಜೆಪಿ (BJP Karnataka) ಮಾಸ್ಟರ್ ಪ್ಲ್ಯಾನ್ ರೂಪಿಸಿಕೊಂಡಿದೆ. “ಎಟಿಎಂ ಸರ್ಕಾರ” (ATM Sarkar) ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ. ಈ ಮೂಲಕ ರಾಜ್ಯದಲ್ಲಷ್ಟೇ ಅಲ್ಲದೆ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ಗೆ ಇರಿಸುಮುರಿಸು ಮಾಡಲು ನಿರ್ಧರಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿಯು, ಕರ್ನಾಟಕ ಕಾಂಗ್ರೆಸ್ ಎಟಿಎಂ ಸರ್ಕಾರ್ (Karnataka Congress ATM Sarkar) ಎಂಬ ಪೋಸ್ಟರ್ ಅನ್ನು ಪ್ರದರ್ಶನಕ್ಕಿಟ್ಟಿತ್ತು.
ಕರ್ನಾಟಕ ಕಾಂಗ್ರೆಸ್ ಎಟಿಎಂ ಸರ್ಕಾರ್ ಎಂಬ ಒಂದು ಪೋಸ್ಟರ್‌ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ನಗು ನಗುತ್ತಾ ಎಟಿಎಂನಿಂದ ಹಣ ತೆಗೆಯುತ್ತಿರುವಂತೆ ಚಿತ್ರಿಸಲಾಗಿದೆ. ಇನ್ನೊಂದರಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ಸೂಟ್‌ಕೇಸ್ ಹಿಡಿದುಕೊಂಡಿದ್ದರೆ, ಅವರ ಹಿಂದೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಖುಷಿಯಿಂದ ಇರುವ ರೀತಿಯಲ್ಲಿ ಚಿತ್ರಿಸಲಾಗಿದೆ.
ಟಕ್ಕರ್ ಕೊಡಲು ರೆಡಿ ಆದ ಬಿಜೆಪಿ
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ “ಪೇಸಿಎಂ” ಅಭಿಯಾನ ನಡೆಸಿ 40% ಸರ್ಕಾರ ಎಂದು ಸೋಷಿಯಲ್ ಮೀಡಿಯಾ ಸಹಿತ ರಾಜ್ಯದೆಲ್ಲೆಡೆ ಅಭಿಯಾನ ನಡೆಸಿತ್ತು. ಇದನ್ನು ಬಿಜೆಪಿ ಆಗ ಅಷ್ಟು ಗಂಭೀರವಾಗಿ ಪರಿಗಣಿಸದೇ ಇದ್ದರೂ ಚುನಾವಣೆಯಲ್ಲಿ ಸೋಲಿಗೆ ಅದೂ ಒಂದು ಪ್ರಮುಖ ಕಾರಣವಾಗಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದ್ದು, ಆರಂಭದಿಂದಲೇ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದೆ. ಈ ನಡುವೆ ಈ ಹಿಂದೆ ಬಿಜೆಪಿ ಮೇಲೆ ಆರೋಪ ಮಾಡಿದ್ದ ಗುತ್ತಿಗೆದಾರರೇ ಈಗ ತಿರುಗಿಬಿದ್ದಿದ್ದಾರೆ.
ಗುತ್ತಿಗೆದಾರರ ಕಮಿಷನ್ ವಿಚಾರ ಈಗ ಭಾರಿ ಮಹತ್ವವನ್ನು ಪಡೆದುಕೊಂಡಿದೆ. ಬಿಬಿಎಂಪಿ ಗುತ್ತಿಗೆ ಕಾಮಗಾರಿಗಳ ತನಿಖೆ ಬಳಿಕವೇ ಬಿಲ್ ಪಾಸ್ ಮಾಡಲಾಗುವುದು ಎಂದು ಸರ್ಕಾರ ಹೇಳಿದ್ದರೆ, ಬಿಲ್ ಪಾಸ್ ಮಾಡಲು ಡಿಸಿಎಂ ಡಿ.ಕೆ. ಶಿವಕುಮಾರ್ 15% ಕೇಳಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಆರೋಪಿಸಿತ್ತು. ಅಲ್ಲದೆ, ರಾಜ್ಯಪಾಲರಿಗೆ ದೂರು ನೀಡಿತ್ತು. ಅಲ್ಲದೆ, ಬಿಜೆಪಿಯ ಸಹಕಾರವನ್ನೂ ಕೋರಿತ್ತು. ಈಗ ಬಿಜೆಪಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕೊಂಡೊಯ್ದು ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಸಿದ್ಧವಾಗಿದೆ. ಈ ಸಂಬಂಧ ಮಾಜಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕೆ. ಗೋಪಾಲಯ್ಯ, ಶಾಸಕ ಎಸ್.ಆರ್. ವಿಶ್ವನಾಥ್ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಸೋಮವಾರ ರಾಜ್ಯಪಾಲರ ಭೇಟಿ: ಅಶ್ವತ್ಥನಾರಾಯಣ
ಗುತ್ತಿಗೆದಾರರಿಗೆ ಕಮಿಷನ್ ಕೇಳಿದ ಆರೋಪದ ಪ್ರಕರಣದ ಸ್ವತಂತ್ರ ತನಿಖೆ ನಡೆಸಲು ಲೋಕಾಯುಕ್ತಕ್ಕೆ ವಹಿಸಬೇಕು. ಈ ಸಂಬಂಧ ನಾವು ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಲಿದ್ದೇವೆ. ಪ್ರಾಮಾಣಿಕ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಎರಡೂವರೆ ತಿಂಗಳಲ್ಲಿ ಎಲ್ಲಿ ನೋಡಿದರೂ ಪೇ ಪೇ ಪೇ ಪೇ ಎನ್ನುವ ಮಾತು ಕೇಳಿಬರುತ್ತಿದೆ. ಸಚಿವ ಚೆಲುವರಾಯಸ್ವಾಮಿ ವಿಚಾರದಲ್ಲಿ ಪತ್ರವೇ ಫೇಕ್ ಎನ್ನುತ್ತಾರೆ. ಮುಖ್ಯಮಂತ್ರಿಯೇ ಈ ಪತ್ರ ಫೇಕ್ ಎಂದ ಮೇಲೆ ಸಿಐಡಿ ತನಿಖೆಯಲ್ಲಿ ನ್ಯಾಯ ಸಿಗುತ್ತದೆಯೇ? ಬೆಂಗಳೂರು ನಿರ್ನಾಮ ಮಂತ್ರಿ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕು. ಬೆಂಗಳೂರು ಅಭಿವೃದ್ಧಿ ಸಚಿವ ಬದಲು ಹೊಸ ಹೆಸರು ಇಡಲಾಗಿದೆ. ದಯವಿಟ್ಟು ಕೆಂಪೇಗೌಡರ ಹೆಸರು ಹೇಳಬೇಡಪ್ಪ ಇನ್ನೊಂದ್ಸಾರಿ. ಬೆಂಗಳೂರು ಬಗ್ಗೆ ಕಾಳಜಿ ಇಲ್ಲ, ಬೆಂಗಳೂರಿಗೆ ಸಂಬಂಧ ಇಲ್ಲದವರನ್ನೇ ಬೆಂಗಳೂರು ಸಚಿವರಾಗಿಸಿದ್ದೀರ. ಇಂಥ ಇಂಪೋರ್ಟ್ ಪೀಸ್‌ಗಳನ್ನು ಎಕ್ಸ್‌ಪೋರ್ಟ್ ಮಾಡಿಕೊಂಡುಬಿಡಿ ಎಂದು ಅಶ್ವತ್ಥನಾರಾಯಣ ವ್ಯಂಗ್ಯವಾಡಿದರು.
ಕಾಮಗಾರಿ ಮಾಡದೇ ಬಿಲ್ ಆಗಿದೆ ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಸಿ.ಎನ್. ಅಶ್ವತ್ಥನಾರಾಯಣ, ತನಿಖೆ ಮಾಡುವುದಾದರೆ ಎರಡೂವರೆ ತಿಂಗಳು ಏನು ಮಾಡುತ್ತಿದ್ದರು? ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರಾ? ಚೌಕಾಸಿ ಮಾಡುತ್ತಿದ್ದರಾ? ಹಾಗಾದರೆ ಮುಖ್ಯ ಆಯುಕ್ತರಿಂದ ಹಿಡಿದು ಎಲ್ಲರನ್ನೂ ವಜಾ ಮಾಡಿ. ಈಗ ಆರೋಪ ಬಂದಿರುವುದು ಗುತ್ತಿಗೆದಾರರ ಮೇಲೆ ಅಲ್ಲ, ಡಿ.ಕೆ. ಶಿವಕುಮಾರ್ ಮೇಲಾಗಿದೆ. ಪ್ರಾಮಾಣಿಕತೆ ಬಗ್ಗೆ ಮಾತನಾಡುವ ನೀವು ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ನೀಡಿ ಎಂದು ಹೇಳಿದರು.
ಸೇವೆಗೆ ಪೇಮೆಂಟ್
ಈಗಿನ ಡಿಸಿಎಂ ಆಗ ನಮ್ಮ ಸರ್ಕಾರ ಇದ್ದಾಗ ಪೇಸಿಎಂ, 40% ಎಂದು ಕ್ಯಾಂಪೇನ್ ಮಾಡಿದರು. ಡಿ.ಕೆ. ಶಿವಕುಮಾರ್ ಎಂದರೆ ಏನು ವ್ಯಕ್ತಿತ್ವ ಎನ್ನುವುದು ಗೊತ್ತಾಗುತ್ತದೆ. ಸೇವೆಗೆ ಪೇಮೆಂಟ್ ಪಡೆಯುವವರು, ಆದಾಯ ಮೀರಿದ ಆಸ್ತಿ ಆರೋಪ ಹೊಂದಿರುವವರು ಇವರು. ಇಂಥವರು ಸರ್ಟಿಫೈಡ್ ಕಾಂಟ್ರ್ಯಾಕ್ಟರ್ ಬಿಲ್ ಅನ್ನು ತಡೆ ಹಿಡಿಯುತ್ತಾರೆ. 22-05-2023ರಲ್ಲಿ ಸಿಎಂ ಸುತ್ತೋಲೆ ಹೊರಡಿಸಿ, ಬಿಲ್ ಪರಿಶೀಲಿಸಲು ಸಚಿವರಿಗೆ ಲೈಸೆನ್ಸ್ ನೀಡಿದ್ದಾರೆ. ಇತಿಹಾಸದಲ್ಲಿ ಇಂತಹ ಘಟನೆ ನಡೆದಿಲ್ಲ. 30-07-2023ರಲ್ಲಿ ಎಲ್ಲ ಕಂಡಿಷನ್ ತೆಗೆದು, ಹಣ ಬಿಡುಗಡೆಗೆ ತಿಳಿಸಲಾಯಿತು. ಹಣ ಕಲೆಕ್ಷನ್ ಮಾಡಲು ಈ ರೀತಿ ಮಾಡಲಾಯಿತು ಎಂಬ ಆರೋಪ ಇದೆ. ತಡೆ ಆದೇಶವನ್ನು ಸಿಎಂ ಹಿಂಪಡೆದರೂ, ಡಿಸಿಎಂ ಬಿಟ್ಟಿಲ್ಲ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಆರೋಪಿಸಿದರು.
ಇದನ್ನೂ ಓದಿ: Weather report : ಚುಮು ಚುಮು ಚಳಿ ಜತೆಗೆ ಜಿಟಿಜಿಟಿ ಮಳೆ ಸಾಥ್
ಕೆ. ಗೋಪಾಲಯ್ಯ ಗುಡುಗು
- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದಲ್ಲ ಒಂದು ದುರ್ಘಟನೆ ನಡೆಯುತ್ತಿದೆ. ಇದಕ್ಕೆ ನೇರವಾಗಿ ಕಾಂಗ್ರೆಸ್ ಸರ್ಕಾರ ಕಾರಣ
- ರಾಜ್ಯದ ಇತಿಹಾಸದಲ್ಲಿ ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ನೀಡಿದ ಉದಾಹರಣೆ ಇಲ್ಲ
- ಸಿಎಂ ಸಿದ್ದರಾಮಯ್ಯ ದುರ್ಬಲರಾಗಿದ್ದಾರೆ ಅಥವಾ ಅವರೂ ಶಾಮೀಲಾಗಿದ್ದಾರೆ
- ಡಿಸಿಎಂ ನಂಬಿರುವ ಅಜ್ಜಯ್ಯ ದೇವರ ಮೇಲೆ ಪ್ರಮಾಣ ಮಾಡಿ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಆದರೆ, ಅವರೇಕೆ ಇದಕ್ಕೆ ಸಿದ್ಧರಿಲ್ಲ?
- ಲೋಕಸಭೆ ಚುನಾವಣೆಗಾಗಿ ಕೇಂದ್ರದ ನಾಯಕರಿಗೆ ಹಣ ನೀಡಲು ಕಾಂಗ್ರೆಸ್ನವರು ಹೀಗೆ ಮಾಡುತ್ತಿದ್ದಾರೆ
- 300ಕ್ಕೂ ಹೆಚ್ಚು ಗುತ್ತಿಗೆದಾರರು ದಯಾಮರಣ ಕೋರಿ ಪತ್ರ ಬರೆಯುವುದು ರಾಜ್ಯಕ್ಕೆ ನಾಚಿಕೆಗೇಡಿನ ಸಂಗತಿ
- ಕಾಂಟ್ರ್ಯಾಕ್ಟರ್ಗಳು ಕೆಲಸ ನಿಲ್ಲಿಸಿದರೆ ಲಕ್ಷಾಂತರ ಜನರಿಗೆ ನಿರುದ್ಯೋಗ ಸೃಷ್ಟಿ ಆಗುತ್ತದೆ ಎನ್ನುವುದು ಸಿಎಂ ಗಮನಕ್ಕೆ ಬಂದಿಲ್ಲವೇ?
- ಈ ರಾಜ್ಯದಲ್ಲಿ ಒಂದು ಸರ್ಕಾರ ಇದೆಯೇ ಎರಡು ಸರ್ಕಾರ ಇದೆಯೇ?
- ಕಾಂಟ್ರ್ಯಾಕ್ಟರ್ ಸಂಘದ ಕೆಂಪಣ್ಣ ಅವರು ದೇಶಾದ್ಯಂತ ನಮ್ಮ ಮೇಲೆ 40% ಆರೋಪ ಮಾಡಿದರು. ಕೆಂಪಣ್ಣನವರೇ ನೀವು ಈಗ ಯಾರ ಪರ ನಿಲ್ಲುತ್ತೀರ? ನೀವು ಹಿಂದಿನ 224 ಶಾಸಕರಲ್ಲಿ ಯಾರಿಗೆ ಹಣ ನೀಡಿದ್ದೀರಿ ಎಂದು ತಾಕತ್ತಿದ್ದರೆ ಹೇಳಿ
- ಕೆಂಪಣ್ಣನವರೇ, ನೀವು ಕಳೆದ ಬಾರಿ ಹಣ ಕೊಟ್ಟ ಶಾಸಕರು ಯಾರು ಎಂದು 24 ಗಂಟೆಯಲ್ಲಿ ಉತ್ತರಿಸಿ. ಹಿಂದೆ ಕಾಂಗ್ರೆಸ್ನಿಂದ ಕೆಂಪಣ್ಣ ಕಿಕ್ಬ್ಯಾಕ್ ತೆಗೆದುಕೊಂಡು ಹೀಗೆ ಆರೋಪ ಮಾಡಿದ್ದರು
- ಮುಖ್ಯಮಂತ್ರಿಯವರೇ, ಕಾಂಟ್ರ್ಯಾಕ್ಟರ್ಗಳು ನೇಣು ಹಾಕಿಕೊಳ್ಳಲು ಅವಕಾಶ ಕೊಡಬೇಡಿ, ತಕ್ಷಣ ಹಣ ಬಿಡುಗಡೆ ಮಾಡಿ