ಬೆಂಗಳೂರು: ಕೇಂದ್ರ ಸರಕಾರದ ಬಜೆಟ್ “ಸೀಡ್‌ಲೆಸ್ ಕಡಲೆಕಾಯಿ” ಇದ್ದಂತಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ’20 ಲಕ್ಷ ಕೋಟಿ ಪ್ಯಾಕೇಜ್’ ಎಂಬ ಬಿಳಿಕಾಗೆ ತೋರಿಸಿದಂತೆಯೇ ಈ ಬಜೆಟ್ ಕೂಡ! ಉದ್ಯೋಗಕ್ಕಾಗಿ ಪರಿತಪಿಸುತ್ತಿರುವ ಯುವಸಮುದಾಯಕ್ಕೆ ಯಾವುದೇ ಭರವಸೆ ಇಲ್ಲ. ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮವಿಲ್ಲ. ಜನರ ಸಂಕಷ್ಟ ಕಡಿಮೆಯಾಗಬಹುದೆಂಬ ನಿರೀಕ್ಷೆ ಹುಸಿ ಮಾಡಿದೆ ಕೇಂದ್ರ ಸರ್ಕಾರ ಎಂದಿದೆ.
ಡಬಲ್ ಇಂಜಿನ್ ಸರ್ಕಾರ ಎಂದುಕೊಳ್ಳುವ ಬಿಜೆಪಿ ಉತ್ತರಿಸಬೇಕು. ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೂ ಸಿಗದಿರುವುದೇಕೆ? 23 ಸಾವಿರ ಕೋಟಿ ಅಗತ್ಯವಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇವಲ 5,300 ಕೋಟಿ ನೀಡಿ ಮೂಗಿಗೆ ತುಪ್ಪ ಸವರಿದ್ದೇಕೆ? ಮೇಕೆದಾಟು, ಮಹದಾಯಿ ಯೋಜನೆಗಳ ಬಗ್ಗೆ ಚಕಾರ ಎತ್ತದಿರುವುದೇಕೆ?
ಇದನ್ನೂ ಓದಿ : Budget 2023 : ಇದು ಬಾಂಬೆ ಪಿಕ್ಚರ್ ಎಂದ ಕಾಂಗ್ರೆಸ್, ಅಮೃತ ಬಜೆಟ್ ಎಂದ ಬಿಜೆಪಿ: ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯೆಗಳು ಇಲ್ಲಿವೆ
ಸಬ್ ಅರ್ಬನ್ ರೈಲು ಕಾಮಗಾರಿಗೆ ನಿಗದಿಪಡಿಸಿದ್ದ ಕಾಲಮಿತಿ ಮುಗಿಯುತ್ತಿದೆ, 18 ಸಾವಿರ ಕೋಟಿಯ ಯೋಜನೆಗೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಹಣ ನೀಡಿದ್ದು ಕರ್ನಾಟಕದೆಡೆಗೆ ಕೇಂದ್ರ ಸರ್ಕಾರಕ್ಕಿರುವ ತಾತ್ಸಾರ ಮನೋಭಾವಕ್ಕೆ ನಿದರ್ಶನ. ನಿಗದಿತ ಕಾಲಮಿತಿಯಲ್ಲಿ ಖಂಡಿತವಾಗಿಯೂ ಪೂರ್ಣಗೊಳಿಸುವ ಇರಾದೆ ಬಿಜೆಪಿಗಿಲ್ಲ ಎಂದು ಟೀಕಿಸಿದೆ.