ಬೆಂಗಳೂರು: ವಿಧಾನಸಭೆ ಚುನಾವಣೆ ನಂತರ ತಮ್ಮದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ನಿರೀಕ್ಷೆ ಹೆಚ್ಚಿದ ಪರಿಣಾಮ ಇದೀಗ ಕಾಂಗ್ರೆಸ್ (Karnataka Congress) ಟಿಕೆಟ್ ಆಯ್ಕೆಯಲ್ಲಿ ಸಂಕಷ್ಟ ಎದುರಾಗಿದೆ. ಹೆಚ್ಚೆಚ್ಚು ಆಕಾಂಕ್ಷಿಗಳು ಒಂದೇ ಕ್ಷೇತ್ರಕ್ಕೆ ಇರುವುದು, ವಿವಿಧ ಸಾಮಾಜಿಕ ಹಿನ್ನೆಲೆಗಳಿಂದ ಟಿಕೆಟ್ ಕೇಳುತ್ತಿರುವುದು ನುಂಗಲಾರದ ತುತ್ತಾಗಿದೆ. ಒಟ್ಟಾರೆ ಪ್ರಕ್ರಿಯೆಗೆ ಸ್ವತಃ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ಅವರೇ ಹೈಕಮಾಂಡ್ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೆ ಕರ್ನಾಟಕ ಸ್ಕರೀನಿಂಗ್ ಸಮಿತಿಯು ಬೆಂಗಳೂರಿನ ರೆಸಾರ್ಟ್‌ನಲ್ಲಿ ಸಭೆ ನಡೆಸಿದೆ. ಸುಮಾರು 120 ಕ್ಷೇತ್ರಗಳಿಗೆ ಒಬ್ಬರೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ ಎನ್ನಲಾಗುತ್ತಿದೆ. ಇನ್ನೂ 70 ಕ್ಷೇತ್ರಗಳಿಗೆ ಎರಡು ಅಥವಾ ಮೂರು ಸಂಭವನೀಯರ ಹೆಸರುಗಳಿವೆ. ಎರಡೂ ಪಟ್ಟಿಗಳು ಈಗಾಗಲೆ ವರಿಷ್ಠರ ಕೈ ಸೇರಿವೆ. ಮೊದಲ ಹಂತದಲ್ಲಿ 120 ಕ್ಷೇತ್ರಗಳ ಟಿಕೆಟ್ ಘೋಷಣೆಯನ್ನು ವರಿಷ್ಠರು ಮಾಡಲಿದ್ದಾರೆ. ಮಾರ್ಚ್ 20ರೊಳಗೆ ಮೊದಲ ಪಟ್ಟಿ ಬಿಡುಗೆ ಆಗಬೇಕೆಂಬ ಗುರಿ ಹೊಂದಲಾಗಿದೆ.
ಟಿಕೆಟ್ ಅಂತಿಮಗೊಳಿಸಲು ಮಾರ್ಚ್ 17ರಂದು ನವದೆಹಲಿಯಲ್ಲಿ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜತೆಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಮಾರ್ಚ್ 17ರ ಸಭೆಗೂ ಮೊದಲು ತಮಗೆ ಹಾಗೂ ತಮ್ಮ ಬೆಂಬಲಿಗರಿಗೆ ಟಿಕೆಟ್ ಖಚಿತಪಡಿಸಿಕೊಳ್ಳಲು ಅನೇಕ ಕಾಂಗ್ರೆಸ್ ನಾಯಕರು ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.
ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ರಿಜ್ವಾನ್ ಅರ್ಷದ್ ಸೇರಿದಂತೆ ಕೆಲ ನಾಯಕರ ದಂಡು ನವದೆಹಲಿಯಲ್ಲಿದೆ. ತಮಗೆ ಟಿಕೆಟ್ ಜತೆಗೆ ರವಿ ಬೋಸರಾಜ್, ವಿಜಯಸಿಂಗ್ ಪರ ಈ ನಾಯಕರು ಬ್ಯಾಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ರಾಯಚೂರು ನಗರ ಟಿಕೆಟ್ ಆಕಾಂಕ್ಷಿ ಆಗಿರುವ ರವಿ ಬೋಸರಾಜು ಹಾಗೂ ಬಸವಕಲ್ಯಾಣ ಟಿಕೆಟ್ ಆಕಾಂಕ್ಷಿಯಾಗಿರುವ ವಿಜಯ್ ಸಿಂಗ್ ಅವರಿಗೆ ಟಿಕೆಟ್ ತಪ್ಪುವ ಆತಂಕವಿದ್ದು, ಈ ನಾಯಕರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಸ್ವತಃ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ. ಬಿ. ಪಾಟೀಲ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಾರಿ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಸಂದೇಶವನ್ನು ಕಾಂಗ್ರೆಸ್ ಎಲ್ಲ ಕಡೆ ಪ್ರಸಾರ ಮಾಡುತ್ತಿದೆ. ಜತೆಗೆ ಮೀಸಲಾತಿ ಕುರಿತಂತೆ ಪಂಚಮಸಾಲಿ ಸಮುದಾಯವು ಬಿಜೆಪಿ ಮೇಲೆ ಮುನಿಸಿಕೊಂಡಿದೆ. ಇದೇ ಅವಕಾಶವನ್ನು ಬಳಸಿಕೊಂಡು ಲಿಂಗಾಯತ ಮತಗಳನ್ನು ತಮ್ಮ ಕಡೆಗೆ ಸೆಳೆಯಬೇಕು ಎನ್ನುವುದು ಎಂ.ಬಿ. ಪಾಟೀಲ್ ಲೆಕ್ಕಾಚಾರ.
ಇದಕ್ಕಾಗಿ ಹೆಚ್ಚೆಚ್ಚು ಲಿಂಗಾಯತರಿಗೆ ಟಿಕೆಟ್ ನೀಡಬೇಕು. ಈಗಾಗಲೆ ಎರಡು ಬಾರಿ ಸಮುದಾಯದ ಮುಖಂಡರು ಸಭೆ ನಡೆಸಿ ಹೆಚ್ಚಿನ ಟಿಕೆಟ್‌ಗೆ ಒತ್ತಾಯಿಸಿದ್ದಾರೆ. ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿ ತಮ್ಮ ಬೇಡಿಕೆಗಳಿಗೆ ಆದ್ಯತೆ ನೀಡಲಾಗಿಲ್ಲ ಎಂದು ಪಾಟೀಲ್ ಬೇಸರಪಟ್ಟುಕೊಂಡಿದ್ದಾರೆ. ಈ ಬಗ್ಗೆ ನವದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.
ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿರುವುದು ಕಾಂಗ್ರೆಸ್ ಎದುರು ಹೆಚ್ಚಿನ ಆಯ್ಕೆಗಳನ್ನು ನೀಡಿದೆ. ಅದೇ ರೀತಿ ಈ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದೇ ಹೋದರೆ ಅದೇ ಆಕಾಂಕ್ಷಿಗಳು ಬಂಡಾಯವೆದ್ದು ಪಕ್ಷವನ್ನೇ ಸೋಲಿಸುವ ಅಪಾಯವೂ ಇದೆ. ಮೊದಲ ಪಟ್ಟಿಯನ್ನು ಬಿಡುಗಡೆಗೂ ಮುನ್ನವೇ ಕಾಂಗ್ರೆಸ್ ಈ ಸಂಕಷ್ಟವನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದು ಕುತೂಹಲದ ವಿಚಾರವಾಗಿದೆ.