Site icon Vistara News

Mekedatu Project : I.N.D.I.A ಕೂಟ ಗೆದ್ರೆ ಮೇಕೆದಾಟು ಬಂದ್‌; ಡಿಎಂಕೆ ಪ್ರಣಾಳಿಕೆ ಯಿಂದ ಕಾಂಗ್ರೆಸ್‌ಗೆ ಮುಖಭಂಗ

Mekedatu Project DKS Stalin

ಬೆಂಗಳೂರು: ಕೇಂದ್ರದಲ್ಲಿ I.N.D.I.A ಕೂಟ (INDIA Bloc) ಅಧಿಕಾರಕ್ಕೇರಿದರೆ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ (Mekedatu Project) ತಡೆಯೊಡ್ಡುವುದಾಗಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ (DMK Party) ತನ್ನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ (DMK Manifesto) ಘೋಷಣೆ ಮಾಡಿದೆ. ಇದು INDIA ಒಕ್ಕೂಟದಲ್ಲೇ ಇರುವ ರಾಜ್ಯದ ಕಾಂಗ್ರೆಸ್‌ಗೆ ಭಾರಿ ಮುಖಭಂಗ (Shame to Congress Karnataka) ಉಂಟು ಮಾಡಿದೆ.

ಕರ್ನಾಟಕದ ಕಾಂಗ್ರೆಸ್‌ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಪಣ ತೊಟ್ಟಿದ್ದು, ಅದಕ್ಕಾಗಿ ದೊಡ್ಡ ಮಟ್ಟದ ಹೋರಾಟವನ್ನೇ ರೂಪಿಸಿದೆ. ಐಎನ್‌ಡಿಐಎ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ ಪ್ರಮುಖ ಪಕ್ಷವಾಗಿದ್ದು, ಡಿಎಂಕೆ ಪ್ರಣಾಳಿಕೆಯಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಇದು ರಾಜ್ಯದಲ್ಲಿ ಬಿಜೆಪಿಗೆ ಒಂದು ಅಸ್ತ್ರವಾಗುವ ಸಾಧ್ಯತೆ ಇದೆ.

ಕಳೆದ ಚುನಾವಣೆಯ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್‌ (DK Shivakumar) ನೇತೃತ್ವದಲ್ಲಿ ʻನಮ್ಮ ನೀರು ನಮ್ಮ ಹಕ್ಕುʼ ಹೆಸರಿನಲ್ಲಿ ದೊಡ್ಡ ಪಾದ ಯಾತ್ರೆ ನಡೆಸಿತ್ತು. ಆಗ ಅದು ಕೇಂದ್ರದ ಬಿಜೆಪಿ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ದೋಷಾರೋಪ ಮಾಡಿತ್ತು. ಇದೀಗ ಕಾಂಗ್ರೆಸ್‌ನ ಮಿತ್ರಪಕ್ಷವೇ ಮೇಕೆದಾಟು ಡ್ಯಾಂಗೆ ತಡೆ ತರುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದು ಬಿಜೆಪಿಗೆ ಅಸ್ತ್ರವಾಗಿದೆ.

Mekedatu project ಮೇಕೆದಾಟು ಯೋಜನೆ ಏನು? ಯಾಕೆ ಇದು ಅಗತ್ಯ?

ಬೆಂಗಳೂರಿನಿಂದ 90 ಕಿ.ಮೀ. ದೂರದಲ್ಲಿರುವ ಮೇಕೆದಾಟುವಿನಲ್ಲಿ ಜಲಾಶಯ ನಿರ್ಮಿಸಿ ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ಸಂರಕ್ಷಿಸಿ ಕುಡಿಯುವ ನೀರಿಗೆ ಬಳಸುವ ಯೋಜನೆ ಇದಾಗಿದೆ. 9,000 ಕೋಟಿಯ ಈ ಯೋಜನೆಯಿಂದ ಬೆಂಗಳೂರು ಹಾಗೂ ರಾಜ್ಯದ ಕೆಲವೊಂದು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಬಹುದು. ಜತೆಗೆ ತಮಿಳುನಾಡಿಗೂ ಇಲ್ಲಿಂದ ಅಗತ್ಯವಿರುವ ನೀರು ಬಿಡುಗಡೆ ಮಾಡಬಹುದು ಎನ್ನುವುದು ಕರ್ನಾಟಕ ಸರ್ಕಾರದ ಲೆಕ್ಕಾಚಾರ. ಆದರೆ, ಇದು ತಮಿಳುನಾಡಿಗೆ ಹರಿದು ಹೋಗುತ್ತಿರುವ ನೀರನ್ನು ತಡೆ ಹಿಡಿಯುವ ಯೋಜನೆ ಎಂಬ ಕಾರಣಕ್ಕಾಗಿ ತಮಿಳುನಾಡು ವಿರೋಧಿಸುತ್ತಿದೆ. ಸುಪ್ರೀಂಕೋರ್ಟ್‌ನಲ್ಲಿ ಈ ಯೋಜನೆಗೆ ಅನುಮತಿ ಕೊಡುವ ವಿಚಾರದಲ್ಲಿ ವಿವಾದ ಜಾರಿಯಲ್ಲಿದೆ. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಡಿಎಂಕೆ ಪ್ರಣಾಳಿಕೆ ಇದಕ್ಕೆ ತಣ್ಣೀರು ಎರಚಿದೆ.

ಇದನ್ನೂ ಓದಿ Mekedatu project: ನಾನು ಜಲ ಸಂಪನ್ಮೂಲ ಖಾತೆ ಪಡೆದಿದ್ದು ಏಕೆ? ಸಕಾರಣ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್

ಡಿ.ಎಂಕೆ ಪ್ರಣಾಳಿಕೆಯ ಇತರ ಪ್ರಮುಖಾಂಶಗಳು ಇವು

  1. ಪೌರತ್ವ ತಿದ್ದುಪಡಿ ಕಾಯಿದೆ (CAA-2019) ರದ್ದು, ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ತಡೆ
  1. ರಾಷ್ಟ್ರೀಕೃತ ಮತ್ತು ಶೆಡ್ಯೂಲ್ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮತ್ತು ಬಡ್ಡಿ ಮನ್ನಾ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ
  2. ರಾಜ್ಯ ಪ್ರತಿ ಮಹಿಳೆಗೂ ತಿಂಗಳಿಗೆ 1000 ರೂಪಾಯಿ ಆರ್ಥಿಕ ನೆರವು
  3. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಕ್ರಮವಾಗಿ ರೂ 75, ರೂ. 65 ಮತ್ತು ರೂ 500ಕ್ಕೆ ನಿಗದಿ
  4. ನೀಟ್ ಪರೀಕ್ಷೆಯಿಂದ ತಮಿಳುನಾಡಿಗೆ ವಿನಾಯಿತಿ
  5. ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಬೂತ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು
Exit mobile version