ಬೆಂಗಳೂರು: ಕೇಂದ್ರ ಸರ್ಕಾರವು (Central Government) ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನದಲ್ಲಿ ಅನ್ಯಾಯ ಮಾಡಿದೆ ಎಂದು ಆರೋಪಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar protest) ಫೆಬ್ರವರಿ 7ರಂದು (ಬುಧವಾರ) ರಾಜ್ಯ ಸರ್ಕಾರದ ವತಿಯಿಂದ ಪ್ರತಿಭಟನೆಯನ್ನು (Congress Protest) ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಈ ವೇಳೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಪ್ರತಿಭಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಈಗಾಗಲೇ ರಾಜ್ಯ ಕಾಂಗ್ರೆಸ್‌ನ ಬಹುತೇಕ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ನವ ದೆಹಲಿಗೆ ಹಾರಿದ್ದಾರೆ. ಬುಧವಾರ ಕೇಂದ್ರದ ವಿರುದ್ಧ ಗುಡುಗಲು ಕೈಪಡೆ ಸಜ್ಜಾಗಿ ನಿಂತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 136+2 ಸೇರಿ ಒಟ್ಟು 138 ಶಾಸಕರು, ಎಲ್ಲ ಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಈಗಾಗಲೇ ಸಿಎಂ ಹಾಗೂ ಡಿಸಿಎಂ ನವ ದೆಹಲಿ ತಲುಪಿದ್ದಾರೆ. ಬೃಹತ್ ಮಟ್ಟದ ಪ್ರತಿಭಟನೆಗೆ ಸಜ್ಜುಗೊಂಡಿದ್ದಾರೆ. ಅಲ್ಲದೆ, ಕಾಂಗ್ರೆಸ್ ಹೈಕಮಾಂಡ್ ಸಹ ಸಾಥ್ ನೀಡಲಿದೆ.
ಇನ್ನು ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲ ಸಂಸದರಿಗೆ ವೈಯಕ್ತಿಕವಾಗಿ ಪತ್ರ (Letter to MPs) ಬರೆದು ಮನವಿ ಮಾಡಿದ್ದಾರೆ. “ಕರ್ನಾಟಕಕ್ಕೆ ತೆರಿಗೆ ಪಾಲಿನ ಹಂಚಿಕೆಯಲ್ಲಿ ಆಗುತ್ತಿರುವ ಭಾರೀ ಅನ್ಯಾಯ, ಬರಪರಿಹಾರ ನೀಡದಿರುವುದು, ವಿವಿಧ ಯೋಜನೆಗಳಿಗೆ ಅನುಮತಿ ಮತ್ತು ನೆರವು ನೀಡುವಲ್ಲಿ ತೋರುತ್ತಿರುವ ನಿರ್ಲಕ್ಷ್ಯ ಮತ್ತು ವಿಳಂಬ ಇತ್ಯಾದಿಗಳು ರಾಜ್ಯದಲ್ಲಿ ಜನಜೀವನವನ್ನು ವಿಪರೀತವಾಗಿ ಬಾಧಿಸುತ್ತಿವೆ. ಈ ವಿಚಾರವನ್ನು ಜವಾಬ್ದಾರಿಯುತ ಚುನಾಯಿತ ಪ್ರತಿನಿಧಿಗಳಾದ ತಾವು ಅರಿತೇ ಇರುತ್ತೀರಿ. ಆದುದರಿಂದ, ಈ ಧರಣಿ ಸತ್ಯಾಗ್ರಹದಲ್ಲಿ ತಾವು ಕೂಡಾ ಪಾಲ್ಗೊಂಡು ಅದರ ಯಶಸ್ಸಿಗೆ ನೆರವಾಗಬೇಕು ಎಂದು ತಮ್ಮಲ್ಲಿ ಕರ್ನಾಟಕದ ಸಮಸ್ತ ಜನತೆಯ ಪರವಾಗಿ ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.
ಎಲ್ಲ 28 ಲೋಕಸಭಾ ಸದಸ್ಯರಿಗೆ ಪತ್ರ
ಪ್ರಹ್ಲಾದ್ ಜೋಶಿ, ಜಿಎಂ ಸಿದ್ದೇಶ್ವರ್, ಶಿವಕುಮಾರ್ ಉದಾಸಿ, ಅಣ್ಣಾ ಸಾಹೇಬ ಜೊಲ್ಲೆ, ರಮೇಶ್ ಜಿಗಜಿಣಗಿ, ಬಿ.ಎನ್. ಬಚ್ಚೇಗೌಡ, ನಳಿನ್ ಕುಮಾರ್ ಕಟೀಲ್, ಪ್ರಜ್ವಲ್ ರೇವಣ್ಣ, ಬಿ.ವೈ ರಾಘವೇಂದ್ರ, ಶ್ರೀನಿವಾಸ್ ಪ್ರಸಾದ್, ಡಾ. ಉಮೇಶ್ ಜಾಧವ್, ಎಸ್. ಮುನಿಸ್ವಾಮಿ, ಕರಡಿ ಸಂಗಣ್ಣ, ಸುಮಲತಾ ಅಂಬರೀಷ್, ಪ್ರತಾಪ್ ಸಿಂಹ, ರಾಜಾ ಅಮರೇಶ್ವರ್ ನಾಯಕ್, ಅನಂತ ಕುಮಾರ್ ಹೆಗಡೆ, ಜಿ.ಎಸ್. ಬಸವರಾಜ್, ಎ. ನಾರಾಯಣ ಸ್ವಾಮಿ, ಭಗವಂತ್ ಖೂಬಾ, ಶೋಭಾ ಕರಂದ್ಲಾಜೆ, ಡಿ.ಕೆ. ಸುರೇಶ್, ಡಿ.ವಿ ಸದಾನಂದ ಗೌಡ, ಪಿ.ಸಿ. ಮೋಹನ್, ಪಿ.ಸಿ. ಗದ್ದಿಗೌಡರ್, ತೇಜಸ್ವಿ ಸೂರ್ಯ, ಮಂಗಲಾ ಸುರೇಶ್ ಅಂಗಡಿ, ವೈ ದೇವೇಂದ್ರಪ್ಪ ಅವರಿಗೆ ಪತ್ರ ಬರೆಯಲಾಗಿದೆ.
ಇದನ್ನೂ ಓದಿ: Congress Protest : ಸತ್ಯ ಮುಚ್ಚಿಟ್ಟು ಸುಳ್ಳು ಹೇಳುತ್ತಿರುವ ಸಿದ್ದರಾಮಯ್ಯ; ಬೊಮ್ಮಾಯಿ ಆಕ್ರೋಶ
ಪತ್ರ ಬರೆಯಲಾದ ರಾಜ್ಯಸಭಾ ಸದಸ್ಯರು
ಎಚ್.ಡಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಡಾ. ವೀರೇಂದ್ರ ಹೆಗ್ಗಡೆ, ನಾಸಿರ್ ಹುಸೇನ್, ರಾಜೀವ್ ಚಂದ್ರಶೇಖರ್, ನಿರ್ಮಲಾ ಸೀತಾರಾಮನ್, ಎಲ್. ಹನುಮಂತಯ್ಯ, ಜಗ್ಗೇಶ್, ಜೈರಾಮ್ ರಮೇಶ್, ಈರಣ್ಣ ಕಡಾಡಿ, ಕೆ. ನಾರಾಯಣ್, ಲೆಹರ್ ಸಿಂಗ್, ಜಿ.ಸಿ. ಚಂದ್ರಶೇಖರ್.
ದೆಹಲಿಯತ್ತ ಕಾಂಗ್ರೆಸ್ ಟೀಂ
ಈಗಾಗಲೇ ಬಹುತೇಕ ಕಾಂಗ್ರೆಸ್‌ನ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ-ಮಂಡಳಿಗಳ ಅಧ್ಯಕ್ಷರು ನವ ದೆಹಲಿಯನ್ನು ತಲುಪಿದ್ದಾರೆ. ಬುಧವಾರದ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ದೇವನಹಳ್ಳಿ ಏರ್ಪೋರ್ಟ್ ಮಾರ್ಗವಾಗಿ ತೆರಳಿರುವ ಕಾಂಗ್ರೆಸ್ ನಾಯಕರು ವಿಸ್ತಾರ ನ್ಯೂಸ್ ಜತೆ ಮಾತನಾಡಿದ್ದಾರೆ. ನಾಳೆ ನವ ದೆಹಲಿಯಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ
ಕುಣಿಗಲ್ ಶಾಸಕ ರಂಗನಾಥ್
ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಿರುವ ತೆರಿಗೆ ಹಣದಲ್ಲಿ ತಾರತಮ್ಯ ಮಾಡುತ್ತಿದೆ. ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಿ ಕರ್ನಾಟಕಕ್ಕೆ ಮೋಸ ಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.
ಆನೇಕಲ್ ಶಾಸಕ ಶಿವಣ್ಣ, ಎಂಎಲ್‌ಸಿ ಸುಧಮ್ ದಾಸ್
ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಆನೇಕಲ್ ಶಾಸಕ ಶಿವಣ್ಣ ಹಾಗೂ ಎಂಎಲ್‌ಸಿ ಸುಧಮ್ ದಾಸ್, ಕೇಂದ್ರ ನಮ್ಮ ತೆರಿಗೆ ಹಣವನ್ನು ನಮಗೇ ಕೊಡುತ್ತಿಲ್ಲ. ಇದರಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಈ ತಾರತಮ್ಯವನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್
ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಪ್ರದೀಪ್ ಈಶ್ವರ್, ಕೇಂದ್ರ ಸರ್ಕಾರ ಅನುದಾನ ಹಂಚಿಕೆ ವಿಚಾರವಾಗಿ ಕರ್ನಾಟಕಕ್ಕೆ ದ್ರೋಹ ಮಾಡಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಭದ್ರಾ ಮೇಲ್ಡಂಡೆ ಯೋಜನೆಗಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ಕೊಟ್ಟಿಲ್ಲ. ಎಷ್ಟು ದಿನ ಅಂತ ಆಗಿರುವ ಅನ್ಯಾಯವನ್ನು ಸಹಿಸಿಕೊಂಡು ಇರುವುದು? ಹಾಗಾಗಿ ದೆಹಲಿಯ ಪ್ರತಿಭಟನೆಗೆ ತೆರಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಚಿವ ನಾಗೇಂದ್ರ
ಸಚಿವ ನಾಗೇಂದ್ರ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರದಿಂದ ಬಾರದ ಬರ ಪರಿಹಾರದಿಂದ ಸಾಕಷ್ಟು ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರ ನಮ್ಮ ಸರ್ಕಾರ ಇದೆ ಅಂತ ನಮ್ಮ ಮೇಲೆ ಮಲತಾಯಿ ದೋರಣೆ ಮಾಡುತ್ತಿದ್ದಾರೆ. ಇದರ ಬಗ್ಗೆ ಬೆಳಕು ಚೆಲ್ಲಲು ನಾವು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಕಳೆದ ಭಾರಿ 25 ಜನ ಎಂಪಿಗಳನ್ನು ಗೆಲ್ಲಿಸಿದ್ದರೂ ಯಾರೊಬ್ಬರು ಕೂಡಾ ಬರ ಪರಿಹಾರದ ಬಗ್ಗೆ ಕೇಳಲಿಲ್ಲ ಎಂದು ಕಿಡಿಕಾರಿದ್ದಾರೆ.
ಸಚಿವ ಜಮೀರ್ ಅಹ್ಮದ್ ಖಾನ್
ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್, ಕೇಂದ್ರ ಸರ್ಕಾರದಿಂದ ನಮಗೆ 1 ಕೋಟಿ 80 ಲಕ್ಷ ಬರಬೇಕು. ಈ ಕಾರಣಕ್ಕಾಗಿ ನಾವು ದೆಹಲಿಯಲ್ಲಿ ಪ್ರತಿಭಟನೆ ಮಾಡಲಿದ್ದೇವೆ. ನಾವು ರಾಜ್ಯಕ್ಕಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ಬಿಜೆಪಿ ಸಂಸದರು ಸಹ ನಮ್ಮ ಜತೆ ಬಂದು ಪ್ರತಿಭಟನೆ ಮಾಡಲಿ ಎಂದು ಹೇಳಿದ್ದಾರೆ.
ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್
ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ನಾವು ನಮ್ಮ ಪಾಲನ್ನು ಕೇಳಲು ನವ ದೆಹಲಿಗೆ ಹೋಗುತ್ತಿದ್ದೇವೆ. ನಮಗೆ ಬರಬೇಕಿರುವುದು ನಮ್ಮ ರಾಜ್ಯದ ಪಾಲಿನ ತೆರಿಗೆ ದುಡ್ಡು. ಡೈಲಾಗ್ ಹೊಡೆಯುತ್ತಿರುವ ಬಿಜೆಪಿಯವರು ನಮ್ಮ ಜತೆ ಬಂದು ಹೋರಾಟ ಮಾಡಲಿ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಫೈಟ್ ಅಲ್ಲ. ಇದು ಕರ್ನಾಟಕ್ಕಾಗಿ ಮಾಡುತ್ತಿರುವ ಹೋರಾಟವಾಗಿದೆ ಎಂದು ಹೇಳಿದ್ದಾರೆ.
ಸಚಿವ ರಾಮಲಿಂಗಾರೆಡ್ಡಿ
ವಿಸ್ತಾರ ನ್ಯೂಸ್‌ಗೆ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಿವಿ ಕೇಳಿಸಲ್ಲ. ರಾಜ್ಯದಿಂದ ಎಷ್ಟೇ ಕೂಗಿದರೂ ಅವರಿಗೆ ಕಿವಿ ಕೇಳಿಸುತ್ತಿಲ್ಲ. ನಿರ್ಮಲಾ ಸೀತಾರಾಮನ್ ಅವರಿಗೆ ಕಿವಿ ಕೇಳಿಸುತ್ತಿಲ್ಲ. ಜತೆಗೆ ಕಣ್ಣು ಸಹ ಕಾಣುತ್ತಿಲ್ಲ. ಹಾಗಾಗಿ ದೆಹಲಿಗೆ ಹೋಗಿ ನಾವು ಪ್ರತಿಭಟನೆ ಮಾಡುತ್ತೇವೆ. ಕರ್ನಾಟಕದ ಜನತೆ 224 ಬರ ಘೋಷಣೆಯಾಗಿದೆ. ಹಣ ಬಿಡುಗಡೆ ಮಾಡಲು ವ್ಯವಧಾನ ಇಲ್ಲ. ಕೇಂದ್ರದವರೇನು ನಮಗೆ ಪುಗ್ಸಟ್ಟೆ ದುಡ್ಡು ಕೊಡಬೇಕಾಗಿಲ್ಲ. ನಮ್ಮ ದುಡ್ಡನ್ನು ನಮಗೆ ಕೊಡಲಿ ಎಂದು ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಚಿವ ಶಿವರಾಜ್ ತಂಗಡಗಿ
ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಸಚಿವ ಶಿವರಾಜ್ ತಂಗಡಗಿ, ಪೌರುಷದ ಬಗ್ಗೆ ಹೇಳುವ ಬಿಜೆಪಿ ನಾಯಕರು ಈಗ ನಮ್ಮ ಜತೆ ಹೋರಾಟಕ್ಕೆ ಬರಲಿ. ಬರ ಅಧ್ಯಯನಕ್ಕೆ ಕೇಂದ್ರ ತಂಡ ಬಂದಿತ್ತು. ನೋಡಿಕೊಂಡು ಹೋಯ್ತು. ಅದು ಏನಾಯ್ತು? ನೀವು ಆಡುತ್ತಿರುವ ರಾಜಕೀಯ ನಾಟಕ ಜನರಿಗೆ ಗೊತ್ತಿದೆ. ಕರ್ನಾಟಕ ರಾಜ್ಯದ ಪಾಲನ್ನು ಕೇಳುವುದು ಸಂಸದರ ಕರ್ತವ್ಯ. ಎಲ್ಲರೂ ಒಟ್ಟಾಗಿ ಹೋಗಿ ಮೋದಿಯನ್ನು ಕೇಳಲು ಆಗಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಸಚಿವ ಕೆ.ಎಚ್. ಮುನಿಯಪ್ಪ
ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆ.ಎಚ್. ಮುನಿಯಪ್ಪ, ಯಾವುದೇ ಕೇಂದ್ರ ಸರ್ಕಾರವಿದ್ದರೂ ಪ್ರವಾಹ, ಅನಾವೃಷ್ಟಿಯ ಸಂದರ್ಭದಲ್ಲಿ ಸ್ಪಂದಿಸಬೇಕು. ಆದರೆ, ಈಗ ಕೇಂದ್ರದಿಂದ ಸ್ಪಂದನೆ ಇಲ್ಲ. ಹೋಗಲಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣವನ್ನು ಕೊಡಿ ಎಂದು ಕೇಳಿ ಮೂರು ತಿಂಗಳಾಗಿದೆ. ಇನ್ನೂ ಬಿಡಿಗಾಸನ್ನೂ ಕೊಟ್ಟಿಲ್ಲ. ಇದು ಸಂವಿಧಾನಬದ್ಧ ಕ್ರಮ ಅಲ್ಲ. ಹೀಗಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಚಿವ ಎಂ.ಬಿ. ಪಾಟೀಲ್
ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ. ಪಾಟೀಲ್, ಯಾವ ರಾಜ್ಯಗಳು ಶಿಸ್ತಿನಿಂದ ತೆರಿಗೆ ಕಟ್ಟಿದೆಯೋ ಆ ರಾಜ್ಯಗಳಿಗೆ ಉತ್ತಮ ಅನುದಾನವನ್ನು ನೀಡಬೇಕು. ನೀವು ಅದನ್ನು ಮಾನದಂಡವಾಗಿ ಇಟ್ಟುಕೊಳ್ಳಬೇಕು. ಹೆಚ್ಚು ತೆರಿಗೆ ಕಟ್ಟಿದವರಿಗೆ ಅನ್ಯಾಯ ಮಾಡಿ ಉಳಿದ ರಾಜ್ಯಗಳಿಗೆ ನೀಡಿದರೆ ಇದು ರಾಜಕೀಯವಾಗುತ್ತದೆ. ನಮಗೆ ಬರಬೇಕಾದ ಅನುದಾನದ ಬಗ್ಗೆ ಜನರಿಗೆ ತಿಳಿಸಬೇಕು ಅಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Congress Protest: ರಾವಣ ತಲೆಗಳ ಕಾಂಗ್ರೆಸ್‌ಗೆ ಮೈಯೆಲ್ಲ ರಾಜಕೀಯ: ಕೈ ಪ್ರತಿಭಟನೆಗೆ ಎಚ್‌ಡಿಕೆ ಕಿಡಿ
ಡಿಕೆಶಿಯಿಂದ ಸ್ಥಳ ಪರಿಶೀಲನೆ
ಈಗಾಗಲೇ ನವ ದೆಹಲಿಯಲ್ಲಿ ಬೀಡುನಿಟ್ಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ದೆಹಲಿಯ ಜಂತರ್ ಮಂತರ್ ಆವರಣಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿದ್ಧತೆಗಳು ಹೇಗಿವೆ? ಎಂಬುದನ್ನು ಈ ವೇಳೆ ವೀಕ್ಷಣೆ ನಡೆಸಿದರು.