ಬೆಂಗಳೂರು: ತಮ್ಮ ಸರ್ಕಾರದ ಅವಧಿಯಲ್ಲಿ 35 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಆರೋಗ್ಯ ಸಚಿವಡಾ. ಕೆ. ಸುಧಾಕರ್ ಒಬ್ಬ ಪೆದ್ದ ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ (Karnataka Congress), ಸಿಎಜಿ ರಿಪೋರ್ಟ್ ಓದೋಕೆ, ಅರ್ಥ ಮಾಡಿಕೊಳ್ಳೋಕೆ ಬರೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ನೆನ್ನೆ ಮೊನ್ನೆ ಬಿಜೆಪಿಗೆ ಹೋದ ಈ ಮನುಷ್ಯ ಅರ್ಜೆಂಟಾಗಿ ಆರ್‌ಎಸ್‌ಎಸ್‌ನವರ ಪ್ರೀತಿ ಗಳಿಸಲು ಆರ್‌ಎಸ್‌ಎಸ್‌ನವರಿಗಿಂತ, ಮೂಲ ಬಿಜೆಪಿಯವರಿಗಿಂತ ಭಯಾನಕ ಸುಳ್ಳು ಹೇಳುತ್ತಿದ್ದಾರೆ ಎಂದರು.
ಎಜಿಯವರು ಪ್ರತಿ ವರ್ಷ ರಾಜ್ಯದ ಹಣಕಾಸು ಸ್ಥಿತಿಗತಿಯ ಕುರಿತು ವರದಿಯನ್ನು ಸಿದ್ಧಪಡಿಸಿ ಕೊಡುತ್ತಾರೆ. 2016-17 ಸಾಲಿನ ವರದಿಯನ್ನು 2018 ರಲ್ಲಿ ಸಲ್ಲಿಸಿದ್ದಾರೆ. ಅದರ ಪುಟ ಸಂಖ್ಯೆ XV ರಲ್ಲಿ ಹೀಗೆ ಹೇಳಿದ್ದಾರೆ. “Non reconciliation of expenditure was to the extent of 19 percent of total expenditure” ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಆಧರಿಸಿ “2016-17ನೆ ಸಾಲಿನ ಆರ್ಥಿಕ ವರ್ಷದ ಆಯವ್ಯಯದಲ್ಲಿ 1,86,052 ಕೋಟಿ ರೂಗಳಲ್ಲಿ 19% [35 ಸಾವಿರ ಕೋಟಿ} ತಾಳೆಯಾಗುತ್ತಿಲ್ಲವೆಂದು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಸರ್ಕಾರ ನಡೆಸಿರುವ ಅವ್ಯವಹಾರ, ಭ್ರಷ್ಟಾಚಾರಗಳನ್ನು ದೃಢೀಕರಿಸಿದಂತಾಗುತ್ತದೆ”ಎಂದು ಪೆದ್ದ ಸುಧಾಕರ್ ಆರೋಪಿಸಿದ್ದಾರೆ. ಸುಧಾಕರ್ ಎಂಬಿಬಿಎಸ್ ಡಾಕ್ಟರ್ ಅಂತ ಅಂದುಕೊಂಡಿದ್ದೀನಿ ನಾನು. ಅವರಿಗೆ ಎಜಿ ರಿಪೋರ್ಟ್ ಅರ್ಥ ಆಗಲ್ಲ. ರೀಕನ್ಸಿಲಿಯೇಷನ್ ರಿಪೋರ್ಟ್ ಅಂತ ಎಜಿ ರಿಪೋರ್ಟ್ಗೆ ಕರಿತಾರೆ. ಅನುದಾನ ಖರ್ಚು ತಾಳೆ ಆಗ್ತಿದಾವಾ ಇಲ್ವಾ ನೋಡೋದು ಎಜಿ ರಿಪೋರ್ಟ್. ರೀಕನ್ಸಿಲಿಯೇಷನ್ ರಿಪೋರ್ಟ್ನಲ್ಲಿ ಎಲ್ಲ ಕಾಲದಲ್ಲೂ ಕೂಡ ಕೆಲವು ಪರ್ಸೆಂಟೇಜ್ ತಾಳೆ ಆಗೋದಿಲ್ಲ.
2008-09 ರಲ್ಲಿ ತಾಳೆಯಾಗದ ಅನುದಾನ 49% ಇತ್ತು ಯಾವ ಸರ್ಕಾರ ಇತ್ತು ಗೊತ್ತೇನಪ್ಪಾ ಸುಧಾಕರ? 2015-16 ರಲ್ಲಿ 16% ಮಾತ್ರ ತಾಳೆಯಾಗದ ಅನುದಾನ ಆಗಿತ್ತು. ಆಗ ನಮ್ಮ ಸರ್ಕಾರ ಇತ್ತು. ಈ ಮೂರ್ಖರಿಗೆ ಇದು ಅರ್ಥ ಆಗಬೇಕಾ ಬೇಡವಾ? ಬಿಜೆಪಿಯಲ್ಲಿ ಅತಿ ಹೆಚ್ಚು ಸುಳ್ಳು ಹೇಳಿದರೆ ಅತಿ ದೊಡ್ಡ ಲೀಡರ್ ಆಗಬಹುದು ಎನ್ನುವುದು ಸುಧಾಕರ್‌ಗೆ ಬಹಳ ಬೇಗ ಅರ್ಥ ಆಗಿದೆ. ನಾನು ಎಜಿಯವರಿಂದ ಮಾಹಿತಿ ತರಿಸಿಕೊಂಡು ಮತ್ತೆ ಓದಿದೆ. ಈ ರೀಕನ್ಸಿಲೆಶನ್ ವಿಚಾರದಲ್ಲಿ ನಮ್ಮ ಸರ್ಕಾರವೆ ಸಾಕಷ್ಟು ಸುಧಾರಣೆಗಳನ್ನು ಸಾಧಿಸಿದೆ ಎಂದು ವರದಿ ಹೇಳುತ್ತಿದೆ ಎಂದರು.
ಭಷ್ಟಾಚಾರ ಎಂದರೆ ಯಾವುದು ಗೊತ್ತಾ ಸುಧಾಕರ್? ಕೊರೋನಾ ಸಮಯದಲ್ಲಿ ಹೆಣಗಳ ವಿಚಾರದಲ್ಲೂ ಲಂಚ ಹೊಡೆಯುವುದು ಭ್ರಷ್ಟಾಚಾರ. 2020-21ರಲ್ಲೆ ಸುಮಾರು 3000 ಕೋಟಿ ರೂಗಳಷ್ಟು ಕೊರೋನ ಭ್ರಷ್ಟಾಚಾರ ನಡೆದಿದೆಯೆಂದು ಆಗಿನ ಪಬ್ಲಿಕ್ ಅಕೌಂಟ್ಸ್ ಕಮಿಟಿಯ ಅಧ್ಯಕ್ಷರಾದ ಎಚ್. ಕೆ. ಪಾಟೀಲರು ಸ್ಪೀಕರ್‌ಗೆ ವರದಿ ಕೊಟ್ಟಿದ್ದಾರೆ. ಇದು ಭ್ರಷ್ಟಾಚಾರ.
ಆದರೆ ಈ ಸ್ಪೀಕರ್ ಮಹಾಶಯರು ಎಚ್.ಕೆ.ಪಾಟೀಲರು ಕೊಟ್ಟ ವರದಿಯನ್ನು ಸದನದಲ್ಲಿ ಮಂಡಿಸದೆ ತಾನು ವಿಧಾನಸಭಾಧ್ಯಕ್ಷ್ಷ ಎನ್ನುವುದನ್ನು ಮರೆತು ಆರೆಸ್ಸೆಸ್ಸಿನ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. 2021-22 ರ ಕೊರೋನಾದಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಈ ಕುರಿತು ಆಡಿಟ್ ತನಿಖೆ ಮಾಡಲು ಪಬ್ಲಿಕ್ ಅಕೌಂಟ್ಸ್ ಕಮಿಟಿಯು ಎಜಿಯವರಿಗೆ ಪತ್ರ ಬರೆದು ಕೋರಿದ್ದರು. ಆದರೆ ಎಜಿಯವರು ಆಡಳಿತ ಇಲಾಖೆಯು ಪತ್ರ ಬರೆಯಬೇಕು ಎಂದು ತಿಳಿಸಿದ್ದರು ಎಂದರು.
ಇವರು ಶತಮೂರ್ಖರು ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇದೆ. “ಕೃಷಿ, ತೋಟಗಾರಿಕೆ, ಗೃಹ ಮತ್ತು ಸಾರಿಗೆ, ಲೋಕೋಪಯೋಗಿ ಇಲಾಖೆಗಳಲ್ಲಿ 1085 ಕೋಟಿ ಅವ್ಯವಹಾರವಾಗಿದೆ” ಎಂದು ಆರೋಪಿಸಿದ್ದಾರೆ. ಆದರೆ, ಎಜಿಯವರು ಇದನ್ನು ಅವ್ಯವಹಾರ ಎಂದಾಗಲಿ, ಭ್ರಷ್ಟಾಚಾರ ಎಂದಾಗಲಿ ಹೇಳಿಲ್ಲ. ಬಜೆಟ್ನಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಖರ್ಚಾಗಿದೆ ಎಂದಷ್ಟೆ ಎಜಿ ವರದಿ ಹೇಳುತ್ತಿದೆ. “ಇದಕ್ಕೆ ಕಾರಣವನ್ನೂ ಹೇಳಿದ್ದಾರೆ, “Revenue was due to release of Government of india’s contribution of 1235 crore towards NDRF funds on the last day of financial year 2016-17” ಎಂದಿದ್ದಾರೆ. ಇದು ಭ್ರಷ್ಟಾಚಾರನಾ?
ಇದನ್ನೂ ಓದಿ : Karnataka Congress : ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಇಡಿಗೆ ದೂರು ನೀಡಲು ಕಾಂಗ್ರೆಸ್ ನಿರ್ಧಾರ
ಬಿಜೆಪಿಯ ಆಲಿಬಾಬಾ ಮತ್ತು ಚಾಲಿಸ್ ಚೋರ್‌ಗಳ ದಂಡನಾಯಕ ಆಗುವ ಹಠಕ್ಕೆ ಬಿದ್ದ ಸುಧಾಕರ್‌ರನ್ನು ಸಿಎಂ ಬೊಮ್ಮಾಯಿ ಬಫೂನ್ ಮಾಡುತ್ತಿದ್ದಾರೆ. ಬೇಕಂತಲೇ ಸುಧಾಕರ್ ಬಾಯಲ್ಲಿ ಸುಳ್ಲು ಹೇಳಿಸುತ್ತಿದ್ದಾರೆ. ಸುಧಾಕರ್ ಬಫೂನ್ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.