ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲದಲ್ಲೂ (Karnataka Drought) ರಾಜಕಾರಣಿಗಳ ಮೋಜು ಮಸ್ತಿ ಪ್ರವಾಸ ಬೇಕಿತ್ತಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ರಾಜ್ಯ ಲೆಕ್ಕ ಪತ್ರ ಸಮಿತಿಯ (State Accounts Committee) 20 ಸದಸ್ಯರಿಂದ ದೆಹಲಿ ಯಾತ್ರೆ ಶುರುವಾಗಿದ್ದು, ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಧ್ಯಯನದ ಹೆಸರಿನಲ್ಲಿ 3 ಕೋಟಿ ರೂಪಾಯಿ ವೆಚ್ಚದ ಪ್ರವಾಸ ಬೇಕಿತ್ತಾ? ಆ ಹಣವನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ವಿನಿಯೋಗ ಮಾಡಬಹುದಿತ್ತಲ್ಲವೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಒಂದು ಕಡೆ ರಾಜ್ಯದಲ್ಲಿ ಭೀಕರ ಬರಗಾಲಕ್ಕೆ ರೈತ ಕಂಗಾಲಾಗಿದ್ದಾನೆ. ಆದರೆ, ಜನಪ್ರತಿನಿಧಿಗಳಿಗೆ ಇದರ ಗೊಡವೆಯೇ ಇಲ್ಲವೆಂಬಂತೆ ಬೆಳವಣಿಗೆಗಳು ನಡೆಯುತ್ತಿವೆ. ಇನ್ನು ಬರ ಪಾಲಿಟಿಕ್ಸ್ ಆರೋಪ ಪ್ರತ್ಯಾರೋಪಕ್ಕೆ ಮಾತ್ರ ಸಿಮೀತವಾಯಿತು ಎಂಬಂತಾಗಿದೆ.
ರಾಜ್ಯದಲ್ಲಿ ಹಲವು ತಾಲೂಕುಗಳಲ್ಲಿ ಭೀಕರ ಬರಗಾಲ ಶುರುವಾಗಿದೆ. ಕೆಲವು ಕಡೆ ಕುಡಿಯಲು ಸಿಗುತ್ತಿಲ್ಲ. ನೀರನ್ನು ಖಾಸಗಿ ಬೋರ್ವೆಲ್‌ಗಳಿಂದ ಪೂರೈಕೆ ಮಾಡಲಾಗುತ್ತಿದೆ. ರೈತನಿಗೆ ಇಂದಿಗೂ ಬಿಡಿಗಾಸಿನ ಪರಿಹಾರ ಸಿಕ್ಕಿಲ್ಲ. ಜಾನುವಾರುಗಳಿಗೆ ಮೇವು ಇಲ್ಲ. ರಾಜ್ಯದ ಜನರಿಗೆ ಕುಡಿಯಲು ನೀರಿನ ಸಮಸ್ಯೆ ಗ್ಯಾರಂಟಿ ಎಂದು ಎಲ್ಲರೂ ಮಾತನಾಡಿಕೊಳ್ಳುವಂತೆ ಪರಿಸ್ಥಿತಿ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೋಜು ಮಸ್ತಿ ಪ್ರವಾಸ ಬೇಕಾ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಒಂದು ಕಡೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಅನುದಾನ ಕೊಡುತ್ತಿಲ್ಲ ಎಂದು ಬೊಟ್ಟು ಮಾಡುತ್ತಿದೆ. ಇನ್ನೊಂದು ಕಡೆ ಬರಗಾಲದ ಬಗ್ಗೆ ಬಿಜೆಪಿ, ಜೆಡಿಎಸ್ ಟೀಕೆ ಮಾಡಿದೆ. ಬರಗಾಲ ನಿರ್ವಹಿಸುವಲ್ಲೂ ವಿಫಲ ಎಂದು ಬಿಜೆಪಿ ಟೀಕಿಸುತ್ತಿದೆ. ಪಕ್ಷದ ವೇದಿಕೆಯಲ್ಲಿ ಟೀಕಿಸಿ ಬಳಿಕ ತದ್ವಿರುದ್ಧ ನಡವಳಿಕೆಯನ್ನು ಬಿಜೆಪಿ ನಾಯಕರು ತೋರಿದ್ದಾರೆ.
ಅಧ್ಯಾಯನದ ನೆಪದಲ್ಲಿ ಜನ ಪ್ರತಿನಿಧಿಗಳು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. 20 ಜನರ ತಂಡದ ಸಮಿತಿ ಸದಸ್ಯರು ಗುರುವಾರದಿಂದ (ನ. 2) ಪ್ರವಾಸ ಶುರು ಮಾಡಿದ್ದಾರೆ. ಒಂದೊಂದು ಸಮಿತಿಯಲ್ಲಿ 20 ಸದಸ್ಯರು ಇದ್ದಾರೆ. 20 ಸದಸ್ಯರ ಜತೆಗೆ ವಿಧಾನ ಸಭೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇವರು ಮಾಡಿದ ಅಧ್ಯಯನ ದಾಖಲಿಸಲು ಅಧಿಕಾರಿಗಳಿಗೂ ಪ್ರವಾಸ ಭಾಗ್ಯ ದೊರೆತಂತಾಗಿದೆ.
ದೆಹಲಿ ಪ್ರವಾಸ ಭಾಗ್ಯದಲ್ಲಿ ಒಂದು ಸಮಿತಿಗೆ ಖರ್ಚು ಎಷ್ಟು?
ದೆಹಲಿ ಪ್ರವಾಸ ಭಾಗ್ಯದಲ್ಲಿ ಒಂದು ಸಮಿತಿಗೆ ಕೋಟಿಗಟ್ಟಲೆ ಖರ್ಚು ಬರುತ್ತದೆ. ಈ ರೀತಿಯಾಗಿ ಅದೆಷ್ಟೋ ಬಾರಿ ಜನಪ್ರತಿನಿಧಿಗಳು ಅಧ್ಯಯನ ನೆಪದಲ್ಲಿ ಪ್ರವಾಸ ಮಾಡಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವೊಬ್ಬರೂ ಒಂದು ವರದಿಯನ್ನೂ ಮಂಡಿಸಿಲ್ಲ ಎಂಬುದು ವಿಪರ್ಯಾಸ.
ಸಮಿತಿಯ ಪ್ರತಿ ಸದಸ್ಯನಿಗೆ 10-15 ಲಕ್ಷ ರೂಪಾಯಿ ಖರ್ಚು ಮಾಡುವ ಅಧಿಕಾರವನ್ನು ನೀಡಲಾಗಿದೆ. ಅದಕ್ಕೂ ಮೇಲೆ ಖರ್ಚು ಮಾಡಿದರೆ ಅವರು ವೈಯುಕ್ತಿಕವಾಗಿ ಭರಿಸಬೇಕು. ಒಂದು ಸಮಿತಿಗೆ ಸರಾಸರಿ ಒಟ್ಟು ಖರ್ಚು 3 ಕೋಟಿ ರೂಪಾಯಿಯಾಗಿದೆ. 3 ಕೋಟಿ ಖರ್ಚು ಮಾಡಿ ತರುವ ವರದಿಗಳೆಷ್ಟು ಎಂಬುದು ಇನ್ನೂ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಇಲ್ಲಿಯವರೆಗೂ ಒಂದೇ ಒಂದು ಅಧ್ಯಯನ ರಿಪೋರ್ಟ್ ಸಹ ವಿಧಾನಸಭೆ-ಪರಿಷತ್‌ನಲ್ಲಿ ಮಂಡಿಸಿಲ್ಲ.
ಲೆಕ್ಕಪತ್ರ ಸಮಿತಿ ಸದಸ್ಯರು ಈಗ ಪ್ರವಾಸ ಹೊರಟಿದ್ದಾರೆ
ಆರ್. ಅಶೋಕ್ ನೇತೃತ್ವದ ಸಮಿತಿ: ಆರ್.ವಿ. ದೇಶಪಾಂಡೆ, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಎನ್. ವೈ. ಗೋಪಾಲಕೃಷ್ಣ, ಬಸವರಾಜ ರಾಯರೆಡ್ಡಿ, ಎಚ್.ವೈ. ಮೇಟಿ, ಎಸ್. ಸಿ. ಬಾಲಕೃಷ್ಣ, ಎಸ್. ಆರ್. ಶ್ರೀನಿವಾಸ, ಎನ್. ಎ. ಹ್ಯಾರಿಸ್, ರಿಜ್ವಾನ್ ಅರ್ಷಾದ್, ರಾಘವೇಂದ್ರ ಹಿಟ್ನಾಲ್, ಜಿ.ಟಿ. ದೇವೇಗೌಡ, ಸುನಿಲ್ ಕುಮಾರ್, ಸಿ.ಸಿ. ಪಾಟೀಲ್, ಎಸ್.ಆರ್. ವಿಶ್ವನಾಥ್, ಬಿ.ಕೆ. ಹರಿಪ್ರಸಾದ್, ಶಶಿಲ್ ನಮೋಶಿ, ಟಿ.ಎ. ಶರವಣ, ಪ್ರತಾಪ ಸಿಂಹ ನಾಯಕ್ ಸಮಿತಿ ತಂಡದ ಸದಸ್ಯರಾಗಿದ್ದಾರೆ. ಆದರೆ, ಜಿ.ಟಿ. ದೇವೇಗೌಡ ಮಾತ್ರ ಪ್ರವಾಸದಿಂದ ದೂರ ಉಳಿದಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳ ಸದಸ್ಯರು ಈ ಸಮಿತಿಯಲ್ಲಿದ್ದಾರೆ.
ಇದನ್ನೂ ಓದಿ: Karnataka Politics : ಮುಂದಿನ 5 ವರ್ಷವೂ ನಾನೇ ಸಿಎಂ ಎಂದ ಸಿದ್ದರಾಮಯ್ಯ!
ಸಮಿತಿ ಏನು ಮಾಡಲಿದೆ?
ಪ್ರವಾಸಕ್ಕೆ ಹೋಗುತ್ತಿರುವ ರಾಜ್ಯಗಳಲ್ಲಿ ಲೆಕ್ಕಪತ್ರ ಸಮಿತಿಯು ಅಧ್ಯಯನವನ್ನು ನಡೆಸುತ್ತದೆ. ಅಲ್ಲಿನ ನಡವಳಿಕೆಗಳ ಬಗ್ಗೆ ಸಮಿತಿಯು ಮಾಹಿತಿ ಪಡೆಯಲಿದೆ. ಈ ಮಾಹಿತಿಯನ್ನು ವರದಿ ರೂಪದಲ್ಲಿ ಮಾಡಿ ವಿಧಾನಸಭೆ ಮತ್ತು ಪರಿಷತ್‌ನಲ್ಲಿ ಸಮಿತಿಯು ಮಂಡಿಸಬೆಕು. ಆದರೆ, ಇಲ್ಲಿಯವರೆಗೂ ಒಂದೇ ಒಂದು ವರದಿಯೂ ಮಂಡನೆ ಆಗಿಲ್ಲ. ಒಂದು ದಿನದ ಕೆಲಸಕ್ಕೆ ಹತ್ತು ದಿನ ಈ ತಂಡದ ಸದಸ್ಯರಯ ಪ್ರವಾಸ ಮಾಡುತ್ತಾರೆ ಎಂಬುದು ಪ್ರಶ್ನಾರ್ಹವಾಗಿದೆ.